ಭಾರತ ತೊರೆದು ಶೀಘ್ರದಲ್ಲೇ ಲಂಡನ್‌ಗೆ ಶಿಫ್ಟ್ ಆಗ್ತಾರಂತೆ ವಿರುಷ್ಕಾ ದಂಪತಿ; ವಿರಾಟ್ ಕೊಹ್ಲಿ ಬಾಲ್ಯದ ಕೋಚ್ ಸ್ಪಷ್ಟನೆ
ವಿರಾಟ್ ಕೊಹ್ಲಿ ಭಾರತವನ್ನು ತೊರೆದು ಲಂಡನ್‌ಗೆ ತೆರಳಲಿದ್ದಾರೆ ಅವರ ಬಾಲ್ಯದ ತರಬೇತುದಾರ ರಾಜ್‌ಕುಮಾರ್ ಶರ್ಮಾ ಖಚಿತಪಡಿಸಿದ್ದಾರೆ. ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಮತ್ತು ಮಕ್ಕಳಾದ ವಮಿಕಾ ಹಾಗೂ ಅಕಾಯ್ ಜೊತೆಗೆ ಇಂಗ್ಲೆಂಡ್‌ನಲ್ಲಿ ನೆಲೆಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ವಿರಾಟ್ ಕೊಹ್ಲಿ ಶೀಘ್ರದಲ್ಲೇ ಭಾರತವನ್ನು ತೊರೆದು ಇಂಗ್ಲೆಂಡ್‌ನ ರಾಜಧಾನಿ ಲಂಡನ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ಅವರ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ಖಚಿತಪಡಿಸಿದ್ದಾರೆ. ತಮ್ಮ ಪತ್ನಿ ಅನುಷ್ಕಾ ಶರ್ಮಾ ಮತ್ತು ಇಬ್ಬರು ಮಕ್ಕಳಾದ ವಮಿಕಾ ಮತ್ತು ಅಕಾಯ್ ಜೊತೆಗೆ ಕುಟುಂಬ ಸಮೇತ ಶೀಘ್ರದಲ್ಲೇ ಲಂಡನ್‌ಗೆ ತೆರಳಲಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಕುರಿತು ಹೆಚ್ಚು ವಿವರಗಳನ್ನು ನೀಡಿಲ್ಲ. ಆದರೆ ಕೊಹ್ಲಿ ಭಾರತವನ್ನು ತೊರೆದು ಯುಕೆಯಲ್ಲಿ ನೆಲೆಸಲಿದ್ದಾರೆ ಎಂಬ ಸುಳಿವು ನೀಡಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಕೊಹ್ಲಿ ಆಗಾಗ ಲಂಡನ್‌ಗೆ ತೆರಳುತ್ತಿದ್ದಾರೆ. ಪಂದ್ಯಗಳಿಂದ ಆಗಾಗ್ಗೆ ಬಿಡುವಿನ ಸಮಯದಲ್ಲಿ ಇಂಗ್ಲೆಂಡ್‌ಗೆ ಹಾರುವ ಅವರು, ಅಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಅವರ ಕಿರಿಯ ಮಗ ಅಕಾಯ್ ಕೂಡಾ ಈ ವರ್ಷದ ಆರಂಭದಲ್ಲಿ ಫೆಬ್ರವರಿ 15ರಂದು ಲಂಡನ್‌ನಲ್ಲೀ ಜನಿಸಿದರು. ಭಾರತೀಯ ದಂಪತಿಗೆ ಲಂಡನ್‌ಲ್ಲಿ ಆಸ್ತಿ ಕೂಡಾ ಇದ್ದು, ಅಲ್ಲೇ ಮನೆ ಹೊಂದಿದ್ದಾರೆ. ಹೀಗಾಗಿ ಸ್ಥಳಾಂತರ ಪೂರ್ಣಗೊಂಡ ನಂತರ ಅಲ್ಲಿಯೇ ವಾಸಿಸುತ್ತಾರೆ ಎಂದು ತಿಳಿದುಬಂದಿದೆ. ಮುಂದೆ ನಿವೃತ್ತಿಯ ನಂತರ ತಮ್ಮ ಜೀವನದ ಮುಂದಿನ ದಿನಗಳನ್ನು ಬ್ರಿಟನ್‌ನಲ್ಲಿ ಕಳೆಯಲು ಯೋಜಿಸಿದ್ದಾರೆ.
“ಹೌದು, ವಿರಾಟ್ ತಮ್ಮ ಪತ್ನಿ ಅನುಷ್ಕಾ ಶರ್ಮಾ ಮತ್ತು ಮಕ್ಕಳೊಂದಿಗೆ ಲಂಡನ್‌ಗೆ ಹೋಗಲು ಯೋಜಿಸಿದ್ದಾರೆ. ಅವರು ಶೀಘ್ರದಲ್ಲೇ ಭಾರತವನ್ನು ತೊರೆದು ಸ್ಥಳಾಂತರಗೊಳ್ಳಲಿದ್ದಾರೆ. ಈಗೀಗ ಕೊಹ್ಲಿ ಕ್ರಿಕೆಟ್ ಹೊರತುಪಡಿಸಿ ತಮ್ಮ ಹೆಚ್ಚಿನ ಸಮಯವನ್ನು ತಮ್ಮ ಕುಟುಂಬದೊಂದಿಗೆ ಕಳೆಯುತ್ತಿದ್ದಾರೆ” ಎಂದು ಶರ್ಮಾ ದೈನಿಕ್ ಜಾಗರಣ್‌ಗೆ ತಿಳಿಸಿದ್ದಾರೆ.
ಹೆಚ್ಚಿನ ಸಮಯ ಲಂಡನ್‌ನಲ್ಲೇ ಕಳೆದ ವಿರುಷ್ಕಾ ದಂಪತಿ
ಕೊಹ್ಲಿ ಈ ವರ್ಷದ ಹೆಚ್ಚಿನ ಸಮಯ ಲಂಡನ್‌ನಲ್ಲೇ ಕಳೆದಿದ್ದರು. ತಮ್ಮ ಮಗನ ಜನನದ ನಂತರ, ಐಪಿಎಲ್ ಸಮಯದಲ್ಲಿ ಭಾರತಕ್ಕೆ ಬಂದ ಅವರು, ಆ ನಂತರ ಜೂನ್ ತಿಂಗಳಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದ ನಂತರ ಭಾರತಕ್ಕೆ ಮರಳಿದರು. ಜುಲೈನಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಮರಳಿದರೂ, ಅಲ್ಲಿಂದ ಯುಕೆ ವಿಮಾನ ಹತ್ತಿದರು. ಆ ನಂತರ ಆಗಸ್ಟ್ ತಿಂಗಳವರೆಗೆ ಮತ್ತೆ ಅಲ್ಲಿಯೇ ಇದ್ದರು. ಆ ನಂತರ ತವರು ಋತುವಿನ ಆರಂಭದಲ್ಲಿ ಭಾರತಕ್ಕೆ ಮರಳಿದರು. ಬಾಂಗ್ಲಾದೇಶದ ವಿರುದ್ಧ ಎರಡು ಟೆಸ್ಟ್, ನಂತರ ನ್ಯೂಜಿಲೆಂಡ್ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ನಂತರ ಕೊಹ್ಲಿ ಮತ್ತು ಅವರ ಕುಟುಂಬವು ಭಾರತದಲ್ಲಿಯೇ ನೆಲೆಸಿದೆ.
ಪ್ರಸ್ತುತ ವಿರಾಟ್ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಡುತ್ತಿದ್ದಾರೆ. ಅಲ್ಲಿಂದ ಕೊಹ್ಲಿ ಮತ್ತೆ ಲಂಡನ್‌ಗೆ ಹಾರುವ ಸಾಧ್ಯತೆ ಇದೆ.
ವಿರಾಟ್ ಕೊಹ್ಲಿ ನಿವೃತ್ತಿ ಸದ್ಯಕ್ಕಿಲ್ಲ
ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದ ಅತ್ಯುತ್ತಮ ಕ್ರಿಕೆಟ್ ಆಡುತ್ತಿದ್ದಾರೆ. ಅವರು ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಶತಕ ಸಿಡಿಸಿದರು. ಮುಂದಿನ ಎರಡು ಪಂದ್ಯಗಳಲ್ಲಿ ಅವರ ಬ್ಯಾಟ್‌ನಿಂದ ಇನ್ನೂ ಎರಡು ಶತಕಗಳು ಬರಲಿವೆ. ಅವರು ಯಾವಾಗಲೂ ತನ್ನ ಆಟವನ್ನು ಆನಂದಿಸುತ್ತಾನೆ. ಒಬ್ಬ ಆಟಗಾರನು ತನ್ನ ಆಟವನ್ನು ಆನಂದಿಸಿದಾಗ, ಆತ ತನ್ನಿಂದ ಸಾಧ್ಯವಾಗುವ ಅತ್ಯುತ್ತಮ ಪ್ರದರ್ಶನ ನೀಡುತ್ತಾನೆ. ವಿರಾಟ್ ಅವರ ಫಾರ್ಮ್ ಬಗ್ಗೆ ಯಾವುದೇ ಕಾಳಜಿ ಇಲ್ಲ. ಕಠಿಣ ಸಂದರ್ಭಗಳಲ್ಲಿ ಹೇಗೆ ಬ್ಯಾಟಿಂಗ್ ಮಾಡಬೇಕು ಮತ್ತು ತಂಡವನ್ನು ಗೆಲ್ಲುವಂತೆ ಮಾಡುವುದು ಹೇಗೆ ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ," ಎಂದು ಶರ್ಮಾ ಹೇಳಿದ್ದಾರೆ.