ಕನ್ನಡ ಸುದ್ದಿ  /  ಕ್ರೀಡೆ  /  Harshal Patel: ನಾನು 6ರಿಂದ 7 ಕೋಟಿ ನಿರೀಕ್ಷಿಸಿದ್ದೆ; ಹರಾಜಿನಲ್ಲಿ 10 ಕೋಟಿಗೆ ಆರ್‌ಸಿಬಿ ಉಳಿಸಿಕೊಂಡ ಬಗ್ಗೆ ಹರ್ಷಲ್ ಮಾತು

Harshal Patel: ನಾನು 6ರಿಂದ 7 ಕೋಟಿ ನಿರೀಕ್ಷಿಸಿದ್ದೆ; ಹರಾಜಿನಲ್ಲಿ 10 ಕೋಟಿಗೆ ಆರ್‌ಸಿಬಿ ಉಳಿಸಿಕೊಂಡ ಬಗ್ಗೆ ಹರ್ಷಲ್ ಮಾತು

ಹರ್ಷಲ್ ಐಪಿಎಲ್ 2021ರ ಆವೃತ್ತಿಯ ಪರ್ಪಲ್ ಕ್ಯಾಪ್ ಹೋಲ್ಡರ್ ಆಗಿದ್ದು, RCB ಪರ ಅವರು 32 ವಿಕೆಟ್ ಕಬಳಿಸಿದ್ದರು. ಮುಂದಿನ ಸೀಸನ್‌ಗೆ ಅವರನ್ನು ಫ್ರಾಂಚೈಸಿಯು ಬಿಡುಗಡೆ ಮಾಡಿತ್ತು. ಆದರೆ, ಹರಾಜಿನ ವೇಳೆ ಅವರನ್ನು ತಂಡವು ಮತ್ತೆ ಖರೀದಿಸಿತು. ಹರಾಜಿನಿಂದ ಅವರನ್ನು ಮರಳಿ ಪಡೆಯಲು ಆರ್‌ಸಿಬಿಯು ಬರೋಬ್ಬರಿ 10.75 ಕೋಟಿ ರೂಪಾಯಿಯನ್ನು ಖರ್ಚು ಮಾಡಿತು. ಆ ಮೊತ್ತವನ್ನು ನೋಡಿ ಹರ್ಷಲ್‌ಗೆ ಸಂತೋಷದಿಂದ ಆಘಾತವಾಗಿತ್ತಂತೆ.

ಹರ್ಷಲ್‌ ಪಟೇಲ್
ಹರ್ಷಲ್‌ ಪಟೇಲ್

ಭಾರತೀಯ ವೇಗಿ ಹರ್ಷಲ್ ಪಟೇಲ್, ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಅಮೋಘ ಆಟ ಪ್ರದರ್ಶಿಸಿದ್ದಾರೆ. 2021ರ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದು ಪರ್ಪಲ್‌ ಕ್ಯಾಪ್‌ ಗೆದ್ದಿದ್ದ ಅವರು, 2022ರ ಆವೃತ್ತಿಗೆ ಮತ್ತೆ ಅದೇ ತಂಡ ಸೇರಿಕೊಂಡರು. ಆರ್‌ಸಿಬಿ ತಂಡದೊಂದಿಗಿನ ತಮ್ಮ ನಂಟು ಹಾಗೂ ಕ್ರಿಕೆಟ್‌ ಬಗ್ಗೆ RCB ಪೋಡ್‌ಕ್ಯಾಸ್ಸ್ಟ್‌ನಲ್ಲಿ ಮಾತನಾಡಿದ ಅವರು, ತಮ್ಮ ವೈಯಕ್ತಿಕ ಜೀವನ ಮತ್ತು ವೃತ್ತಿಜೀವನದಲ್ಲಿ ಏಳುಬೀಳುಗಳನ್ನು ಎದುರಿಸಿದ ಬಗ್ಗೆ ಮಾತನಾಡಿದರು.

ಟ್ರೆಂಡಿಂಗ್​ ಸುದ್ದಿ

“ನನ್ನ ತಂಗಿ ತೀರಿಕೊಂಡ ಒಂದು ವಾರದವರೆಗೂ ನಾನು ದುಃಖದಲ್ಲಿ ಮುಳುಗಿದ್ದೆ. ಅವರು ಏಪ್ರಿಲ್ 9 (2022)ರಂದು ನಿಧನರಾದರು. ಆ ವೇಳೆ ನಾನು ಕ್ವಾರಂಟೈನ್‌ನಲ್ಲಿದ್ದೆ. ನಾನು ನನ್ನ ಸೊಸೆ, ಸೋದರಳಿಯ ಮತ್ತು ಮನೆಯ ಎಲ್ಲರೊಂದಿಗೆ ಮಾತನಾಡಬೇಕಿತ್ತು. ನಾನು ಹೋಗಿ ಅವರನ್ನು ಗಟ್ಟಿಯಾಗಿ ತಬ್ಬಿಕೊಂಡು ಅಳಬೇಕು ಎಂದು ಮನಸ್ಸು ಹೇಳುತ್ತಿತ್ತು. ಆದರೆ ಅದಕ್ಕೆ ಅವಕಾಶ ಇರಲಿಲ್ಲ. ನಾವು ಅದನ್ನೆಲ್ಲಾ ಫೋನ್‌ನಲ್ಲಿ ಮಾಡುತ್ತಿದ್ದೆವು. ಏಕೆಂದರೆ ನಮ್ಮೆದುರಿಗಿದ್ದ ಏಕೈಕ ಆಯ್ಕೆ ಅದಾಗಿತ್ತು. ಅದಾದ ಏಳು ದಿನಗಳಲ್ಲಿ ನನ್ನ ಮಗ ಜನಿಸಿದ. ಹಾಗಾಗಿ ನಾನು ಒಂದು ವಾರ, 10 ದಿನಗಳವರೆಗೆ ನಿಶ್ಚೇಷ್ಟಿತನಾಗಿದ್ದೆ. ನನಗೆ ನಗಬೇಕೋ ಅಳಬೇಕೋ ಎಂದು ಗೊತ್ತಾಗುತ್ತಿರಲಿಲ್ಲ. ಕಷ್ಟ ಸುಖಗಳು ಕಡಲಿನ ಅಲೆಗಳಂತೆ ಒಂದರ ಮೇಲೊಂದರಂತೆ ಬರುತ್ತವೆ” ಎಂದು ಹರ್ಷಲ್ ಪಟೇಲ್‌ ಹೇಳಿದ್ದಾರೆ.

“ನಾನು ಪ್ರತಿದಿನ ನನ್ನ ಕೋಣೆಯಲ್ಲಿ ಮೂರು ನಾಲ್ಕು ಬಾರಿ ಅತ್ತ ಸಂದರ್ಭಗಳಿವೆ. ತದನಂತರ ನಾನು ನನ್ನ ಮಗನನ್ನು ನೋಡುತ್ತಾ ಸಂತೋಷಪಡುತ್ತೇನೆ,” ಎಂದು ಹರ್ಷಲ್ ಹೇಳಿದರು.

“ಒಳ್ಳೆಯದು ಸಂಭವಿಸಿದಾಗ ಅಥವಾ ಕೆಟ್ಟದ್ದೇನಾದರೂ ಸಂಭವಿಸಿದಾಗಲೂ ನಾನು ಸ್ಥಿರವಾಗಿರಲು ಬಯಸುತ್ತೇನೆ. ಹಾಗಾಗಿ ಆ ಎರಡು ವಾರಗಳು ನಾನು ಎಲ್ಲವನ್ನೂ ಚೆನ್ನಾಗಿ ನಿಭಾಯಿಸಬಲ್ಲೆ ಎಂಬುದನ್ನು ನೋಡಲು ನನಗೆ ಉತ್ತಮ ಅವಕಾಶವಾಯ್ತು. ಆದ್ದರಿಂದ, ನಾನು ನನ್ನ ಕುಟುಂಬಕ್ಕೆ ಸಾಧ್ಯವಾದಷ್ಟು ಉತ್ತಮವಾಗಿ ಸಾಂತ್ವನ ಹೇಳಲು ಪ್ರಯತ್ನಿಸಿದೆ. ಅವರು ನನ್ನನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಕಡೆಗೂ ನಾವದರಲ್ಲಿ ಯಶಸ್ವಿಯಾದೆವು,” ಎಂದು ಹರ್ಷಲ್ ಹೇಳಿದರು.

ಹರ್ಷಲ್ ಐಪಿಎಲ್ 2021ರ ಆವೃತ್ತಿಯ ಪರ್ಪಲ್ ಕ್ಯಾಪ್ ಹೋಲ್ಡರ್ ಆಗಿದ್ದು, RCB ಪರ ಅವರು 32 ವಿಕೆಟ್ ಕಬಳಿಸಿದ್ದರು. ಮುಂದಿನ ಸೀಸನ್‌ಗೆ ಅವರನ್ನು ಫ್ರಾಂಚೈಸಿಯು ಬಿಡುಗಡೆ ಮಾಡಿತ್ತು. ಆದರೆ, ಹರಾಜಿನ ವೇಳೆ ಅವರನ್ನು ತಂಡವು ಮತ್ತೆ ಖರೀದಿಸಿತು. ಹರಾಜಿನಿಂದ ಅವರನ್ನು ಮರಳಿ ಪಡೆಯಲು ಆರ್‌ಸಿಬಿಯು ಬರೋಬ್ಬರಿ 10.75 ಕೋಟಿ ರೂಪಾಯಿಯನ್ನು ಖರ್ಚು ಮಾಡಿತು. ಆ ಮೊತ್ತವನ್ನು ನೋಡಿ ಹರ್ಷಲ್‌ಗೆ ಸಂತೋಷದಿಂದ ಆಘಾತವಾಗಿತ್ತಂತೆ.

"ಹರಾಜಿನ ಬಗ್ಗೆ ನನ್ನ ನಿರೀಕ್ಷೆಗಳೇನು ಎಂದು ಬಹಳಷ್ಟು ಜನರು ನನ್ನನ್ನು ಕೇಳಿದರು. ನಾನು ಬಹುಶಃ 6 ಅಥವಾ 7 ಕೋಟಿ ಬಿಡ್ ನಿರೀಕ್ಷಿಸುತ್ತಿದ್ದೇನೆ ಎಂದು ನಾನು ಹೇಳಿದೆ. ನಾನು ಕಳೆದ ಮೂರ್ನಾಲ್ಕು ಸೀಸನ್‌ಗಳಲ್ಲಿ ನನ್ನದೇ ವರ್ಗದ ಜನರನ್ನು ನೋಡಿದ್ದೇನೆ. ಮೆಗಾ ಹರಾಜಿನಲ್ಲಿ ಅವರ್ಯಾರೂ ಅದಕ್ಕಿಂತ ಹೆಚ್ಚಿನ ಮೊತ್ತ ಗಳಿಸಿರಲಿಲ್ಲ. ಹಾಗಾಗಿ ನಾನು 5-6-7 ಕೋಟಿ ಗಳಿಸಬಹುದು ಎಂದು ಲೆಕ್ಕ ಹಾಕಿದ್ದೆ. ಆದರೆ ಬಹಳಷ್ಟು ನನ್ನ ಸುತ್ತಲಿರುವ ಜನರು ಇದು ಎರಡಂಕಿಗೆ ಹೋಗಬಹುದು ಎಂದು ನನಗೆ ಹೇಳಿದ್ದರು. ನಾನು ಎಚ್ಚರಿಕೆಯ ಆಶಾವಾದಿಯಾಗಿರುವುದರಿಂದ ನಾನು ಅವರನ್ನು ನಂಬಲಿಲ್ಲ. ಹಾಗಾಗಿ,‌ ನಾನು ಅಂದುಕೊಂಡಿರದ್ದು ಸಂಭವಿಸಿದಾಗ, ಸಂತೋಷದಿಂದಲೇ ಆಘಾತವಾಗಿತ್ತು. ನನಗೆ ಇನ್ನೂ ನೆನಪಿದೆ SRH ಮತ್ತು RCB ನಡುವೆ ನನ್ನ ಖರೀದಿಸಲು ಯುದ್ಧವೇ ನಡೆಯಿತು. ಕೊನೆಗೆ ಅದು 10 ಕೋಟಿಯನ್ನು ಮೀರಿತು. ನಾನು ನಿಜವಾಗಿಯೂ ಮತ್ತೆ RCB ತಂಡದ ಪರ ಆಡಲು ಬಯಸಿದ್ದೆ. ಹಾಗಾಗಿ ನನಗೆ ಹೆಚ್ಚು ಹಣ ಬೇಕಿರಲಿಲ್ಲ. ನನಗೆ ಸಿಕ್ಕ ಮೊತ್ತ ನನಗೆ ಸಾಕಿತ್ತು. ನಾನು ಆರ್‌ಸಿಬಿಗೆ ಹಿಂತಿರುಗಲು ಬಯಸಿದ್ದೆ," ಎಂದು ಹರ್ಷಲ್ ಹೇಳಿದ್ದರು.

ಹರ್ಷಲ್ 2021ರ ಐಪಿಎಲ್‌ನಲ್ಲಿ ಆರ್‌ಸಿಬಿಗೆ ಸೇರುವುದಕ್ಕೂ ಮುನ್ನ 2018ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ 20 ಲಕ್ಷಕ್ಕೆ ಸೇರಿದ್ದರು.