ಕೂದಲೆಳೆ ಅಂತರದಲ್ಲಿ ಪದಕ ಕಳೆದುಕೊಂಡ ಅರ್ಜುನ್ ಬಾಬುತಾ; 10 ಮೀ ಏರ್‌ ರೈಫಲ್‌ನಲ್ಲಿ 4ನೇ ಸ್ಥಾನ ಪಡೆದ ಭಾರತೀಯ
ಕನ್ನಡ ಸುದ್ದಿ  /  ಕ್ರೀಡೆ  /  ಕೂದಲೆಳೆ ಅಂತರದಲ್ಲಿ ಪದಕ ಕಳೆದುಕೊಂಡ ಅರ್ಜುನ್ ಬಾಬುತಾ; 10 ಮೀ ಏರ್‌ ರೈಫಲ್‌ನಲ್ಲಿ 4ನೇ ಸ್ಥಾನ ಪಡೆದ ಭಾರತೀಯ

ಕೂದಲೆಳೆ ಅಂತರದಲ್ಲಿ ಪದಕ ಕಳೆದುಕೊಂಡ ಅರ್ಜುನ್ ಬಾಬುತಾ; 10 ಮೀ ಏರ್‌ ರೈಫಲ್‌ನಲ್ಲಿ 4ನೇ ಸ್ಥಾನ ಪಡೆದ ಭಾರತೀಯ

ಪುರುಷರ 10 ಮೀಟರ್‌ ಏರ್‌ ರೈಫಲ್‌ ಫೈನಲ್‌ನಲ್ಲಿ ಭಾರತದ ಅರ್ಜುನ್ ಬಾಬುತಾ ಕೇವಲ ಒಂದು ಸ್ಥಾನದಿಂದ ಕಂಚಿನ ಪದಕ ಕಳೆದುಕೊಂಡಿದ್ದಾರೆ. ಇದರೊಂದಿಗೆ ಪ್ಯಾರಿಸ್‌ ಒಲಿಂಪಿಕ್ಸ್‌ನ ಮೂರನೇ ದಿನದಾಟದಲ್ಲಿ ಭಾರತ ಪದಕ ಗೆಲ್ಲುವ ಅವಕಾಶ ಕಳೆದುಕೊಂಡಿದೆ.

ಕೂದಲೆಳೆ ಅಂತರದಲ್ಲಿ ಪದಕ ಕಳೆದುಕೊಂಡ ಅರ್ಜುನ್ ಬಾಬುತಾ
ಕೂದಲೆಳೆ ಅಂತರದಲ್ಲಿ ಪದಕ ಕಳೆದುಕೊಂಡ ಅರ್ಜುನ್ ಬಾಬುತಾ (ANI)

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತ ಎರಡನೇ ಪದಕ ಗೆಲ್ಲುವ ಅವಕಾಶ ಕಳೆದುಕೊಂಡಿದೆ. ಕ್ರೀಡಾಕೂಟದ ಮೂರನೇ ದಿನದಾಟವಾದ ಇಂದು, ಪುರುಷರ 10 ಮೀಟರ್‌ ಏರ್‌ ರೈಫಲ್‌ ಫೈನಲ್‌ನಲ್ಲಿ ಭಾರತದ ಅರ್ಜುನ್ ಬಾಬುತಾ ಕೇವಲ ಒಂದು ಸ್ಥಾನದಿಂದ ಕಂಚಿನ ಪದಕ ಕಳೆದುಕೊಂಡಿದ್ದಾರೆ. ಅಂತಿಮ ಸುತ್ತಿನಲ್ಲಿ ಗುರಿಯಿಟ್ಟು ಶೂಟ್‌ ಮಾಡುತ್ತಿದ್ದ ಅರ್ಜುನ್ ಅಂತಿಮ ಕ್ಷಣಗಳಲ್ಲಿ ಎಡವಿದ್ದಾರೆ. ಪುರುಷರ ವಿಭಾಗದಲ್ಲಿ ಆರಂಭದಿಂದಲೂ ಅಗ್ರ ಮೂರರೊಳಗೆ ಸ್ಥಾನ ಪಡೆದಿದ್ದ ಅರ್ಜುನ್ ಕೊನೆಯ ಕ್ಷಣದಲ್ಲಿ ಕ್ರೊಯೇಷಿಯಾ ಎದುರಾಳಿಗೆ ಕಂಚಿನ ಪದಕ ಬಿಟ್ಟುಕೊಟ್ಟಿದ್ದಾರೆ.

ಚೀನಾದ 19 ವರ್ಷದ ಶೂಟರ್‌ ಶೆಂಗ್ ಲಿಹಾವೊ ಬಂಗಾರ ಗೆದ್ದರೆ, ಸ್ವೀಡನ್‌ನ ವಿಕ್ಟರ್ ಲಿಂಡ್ಗ್ರೆನ್ ಬೆಳ್ಳಿ ಗೆದ್ದರು.

ಒಂದು ಹಂತದಲ್ಲಿ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕದ ನಿರೀಕ್ಷೆಯಲ್ಲಿದ್ದ ಅರ್ಜುನ್‌, ಕೊನೆಗೆ ಕಂಚಿನ ಪದಕ ಗೆಲ್ಲುವುದು ಕೂಡಾ ಸಾಧ್ಯವಾಗಲಿಲ್ಲ. ಅರ್ಜುನ್ ಬಾಬುತಾ ಕೇವಲ ಒಂದು ಸ್ಥಾನದಿಂದ ಪದಕ ವಂಚಿತರಾದರು. 208.4 ಅಂಕಗಳೊಂದಿಗೆ, ಬಾಬುತಾ ಫೈನಲ್‌ನಲ್ಲಿ ನಾಲ್ಕನೇ ಸ್ಥಾನ ಪಡೆದರು. ಇದರೊಂದಿಗೆ ಮೂರನೇ ದಿನದಾಟದಲ್ಲಿ ಭಾರತದ ಪದಕದ ನಿರೀಕ್ಷೆ ಕಮರಿದೆ.

ಒಂದು ವೇಳೆ ಇಂದು ಅರ್ಜುನ್‌ ಪದಕ ಗೆಲ್ಲುತ್ತಿದ್ದರೆ, ಒಲಿಂಪಿಕ್ಸ್‌ ಇತಿಹಾಸದಲ್ಲಿ ಪದಕ ಗೆದ್ದ ಭಾರತದ ಆರನೇ ಶೂಟರ್‌ ಎಂಬ ಖ್ಯಾತಿಗೆ ಪಾತ್ರರಾಗುತ್ತಿದ್ದರು. ಈ ದಿನ ಮಧ್ಯಾಹ್ನ ನಡೆದ ವನಿತೆಯರ 10 ಮೀಟರ್‌ ಏರ್‌ ರೈಫಲ್‌ ಫೈನಲ್‌ನಲ್ಲಿ ರಮಿತಾ ಜಿಂದಾಲ್‌ ಏಳನೇ ಸ್ಥಾನಕ್ಕೆ ತೃಪ್ತಿಟ್ಟಿದ್ದರು.

ಕಂಚಿನ ಪದಕ ಸುತ್ತಿಗೆ ಮಿಶ್ರತಂಡ

ಅತ್ತ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡದ ಅರ್ಹತಾ ಸುತ್ತಿನಲ್ಲಿ ಭಾರತದ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಜೋಡಿಯು ಮೂರನೇ ಸ್ಥಾನ ಪಡೆಯುವ ಮೂಲಕ ಕಂಚಿನ ಪದಕ ಸುತ್ತಿಗೆ ಅರ್ಹತೆ ಪಡೆದಿದ್ದಾರೆ. ಮಂಗಳವಾರ ಕಂಚಿನ ಪದಕ ಸುತ್ತು ನಡೆಯಲಿದೆ.

ಅತ್ತ ಹಿಳೆಯರ ಡಬಲ್ಸ್ ಗುಂಪು ಹಂತದ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಭಾರತದ ಅಶ್ವಿನಿ ಪೊನ್ನಪ್ಪ ಹಾಗೂ ತನಿಶಾ ಕ್ರಾಸ್ಟೊ ಜೋಡಿ ಜಪಾನ್‌ನ ನಮಿ ಮತ್ಸುಯಾಮಾ ಹಾಗೈ ಚಿಹಾರು ಶಿದಾ ಜೋಡಿ ವಿರುದ್ಧ ಮುಗ್ಗರಿಸಿದ್ದಾರೆ. ಟೆನಿಸ್‌ನಲ್ಲಿ ಮೊದಲ ದಿನದಾಟದಲ್ಲೇ ಭಾರತದ ಪುರುಷರ ಅಭಿಯಾನ ಅಂತ್ಯವಾಗಿದೆ. ಸಿಂಗಲ್ಸ್‌ನಲ್ಲಿ ಸುಮಿತ್ ನಗಾಲ್ ಹಾಗೂ ಪುರುಷರ ಡಬಲ್ಸ್ ಜೋಡಿಯಾದ ಅನುಭವಿ ಆಟಗಾರ ರೋಹನ್ ಬೋಪಣ್ಣ ಮತ್ತು ಎನ್ ಶ್ರೀರಾಮ್ ಬಾಲಾಜಿ ಅವರು ತಮ್ಮ ಆರಂಭಿಕ ಪಂದ್ಯಗಳಲ್ಲಿ ಸೋತಿದ್ದಾರೆ. ಬ್ಯಾಡ್ಮಿಂಟನ್‌ ಪುರುಷರ ಡಬಲ್ಸ್‌ನಲ್ಲಿ ಭಾರತದ ಸ್ಟಾರ್‌ ಜೋಡಿಯಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಪಂದ್ಯ ರದ್ದಾಗಿದೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.