ಗಾಯದ ನಡುವೆಯೂ ಹೋರಾಡಿ ಕಂಚು ಸೋತ ಲಕ್ಷ್ಯ ಸೇನ್; 22 ವರ್ಷದ ಆಟಗಾರನ ಚೊಚ್ಚಲ ಒಲಿಂಪಿಕ್ಸ್ ಪದಕದ ಕನಸು ಭಗ್ನ
ಕನ್ನಡ ಸುದ್ದಿ  /  ಕ್ರೀಡೆ  /  ಗಾಯದ ನಡುವೆಯೂ ಹೋರಾಡಿ ಕಂಚು ಸೋತ ಲಕ್ಷ್ಯ ಸೇನ್; 22 ವರ್ಷದ ಆಟಗಾರನ ಚೊಚ್ಚಲ ಒಲಿಂಪಿಕ್ಸ್ ಪದಕದ ಕನಸು ಭಗ್ನ

ಗಾಯದ ನಡುವೆಯೂ ಹೋರಾಡಿ ಕಂಚು ಸೋತ ಲಕ್ಷ್ಯ ಸೇನ್; 22 ವರ್ಷದ ಆಟಗಾರನ ಚೊಚ್ಚಲ ಒಲಿಂಪಿಕ್ಸ್ ಪದಕದ ಕನಸು ಭಗ್ನ

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್ 2024ರ ಕ್ರೀಡಾಕೂಟದಲ್ಲಿ ಲಕ್ಷ್ಯ ಸೇನ್​ ಚೊಚ್ಚಲ ಪದಕ ಗೆಲ್ಲುವ ಕನಸು ಭಗ್ನಗೊಂಡಿದೆ. ಇದರೊಂದಿಗೆ ಭಾರತದ ಬ್ಯಾಡ್ಮಿಂಟನ್​ ವಿಭಾಗ ಪದಕ ಇಲ್ಲದೆ ಬರಿಗೈಲಿ ವಾಪಾಸ್ ಆಗಿದೆ.

ಲಕ್ಷ್ಯ ಸೇನ್​
ಲಕ್ಷ್ಯ ಸೇನ್​ (PTI)

ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟದ ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್​​​​ನಲ್ಲಿ ಐತಿಹಾಸಿಕ ಚಿನ್ನದ ಪದಕ ಮೇಲೆ ಲಕ್ಷ್ಯ ಇಡಲು ವಿಫಲವಾಗಿದ್ದ ಭಾರತದ ಲಕ್ಷ್ಯ ಸೇನ್​, ಕಂಚಿನ ಪದಕದ ಪಂದ್ಯದಲ್ಲೂ ವಿರೋಚಿತ ಸೋಲುಂಡರು. ಇದರೊಂದಿಗೆ ಚೊಚ್ಚಲ ಒಲಿಂಪಿಕ್ಸ್ ಪದಕ ಕನಸು ಭಗ್ನಗೊಂಡಿತು. ಒಲಿಂಪಿಕ್ಸ್​​​ನಲ್ಲಿ ಪದಕ ಗೆದ್ದ ಮೊದಲ ಪುರುಷ ಬ್ಯಾಡ್ಮಿಂಟನ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ವಿಫಲರಾದರು.

ಮಲೇಷ್ಯಾದ ಲೀ ಝಿ ಜಿಯಾ ವಿರುದ್ಧ ಮೂರನೇ ಸ್ಥಾನಕ್ಕೆ ಹೋರಾಡಿದ ಲಕ್ಷ್ಯ 21-13, 16-21, 11-21 ಅಂತರಿಂದ ಸೋಲೊಪ್ಪಿಕೊಂಡರು. ಗಾಯದ ನಡುವೆ ಹೋರಾಡಿದ ಸೇನ್, ಕೊನೆ ಸೆಟ್​​ನಲ್ಲಿ ತೀವ್ರ ಹಿನ್ನಡೆ ಅನುಭವಿಸಿ ಪರಾಭವಗೊಂಡರು. ಮುನ್ನಡೆ ಕಾಯ್ದುಕೊಂಡಿದ್ದ ಜಿಯಾ, ಸೇನ್​ಗೆ ಒತ್ತಡ ಹೇರುವ ಮೂಲಕ ಸತತ ಎರಡು ಸೆಟ್​​ಗಳನ್ನು ವಶಪಡಿಸಿಕೊಳ್ಳುವ ಮೂಲಕ ಕಂಚಿನ ಪದಕಕ್ಕೆ ಮುತ್ತಿಕ್ಕಿದರು. 

ಲಕ್ಷ್ಯ ಸೇನ್‌ ಒಂದು ಗಂಟೆ, 10 ನಿಮಿಷಗಳ ಸುದೀರ್ಘ ಹೋರಾಟದಲ್ಲಿ ಕಂಚಿನ ಪದಕದ ಪಂದ್ಯದಲ್ಲಿ ಸೋತಿದ್ದಾರೆ. ಭಾರತದ ಬ್ಯಾಡ್ಮಿಂಟನ್ ವಿಭಾಗದಲ್ಲಿ ಲಕ್ಷ್ಯ ಜೊತೆಗೆ ಪಿವಿ ಸಿಂಧು, ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ, ಅಶ್ವಿನಿ ಪೊನ್ನಪ್ಪ, ಎಚ್‌ಎಸ್‌ ಪ್ರಣೋಯ್‌ ಎಲ್ಲರೂ ಸಹ ಬರಿಗೈಲಿ ವಾಪಾಸ್ ಆಗಿದ್ದಾರೆ. ಕಳೆದ ಮೂರು ಒಲಿಂಪಿಕ್ಸ್​​ಗಳಲ್ಲಿ ಭಾರತ ಪದಕ ಗೆದ್ದಿತ್ತು. ಸಿಂಧು (2016 ಬೆಳ್ಳಿ, 2020 ಕಂಚು), ಸೈನಾ (2012 ಕಂಚು) ಈ ಹಿಂದೆ ಪದಕ ಗೆದ್ದ ಸಾಧಕರು.

ಮೊದಲ ಸೆಟ್​​ನಲ್ಲಿ ಸುಲಭ ಗೆಲುವು

ಕಂಚಿನ ಪದಕದ ಪಂದ್ಯದ ಮೊದಲ ಸೆಟ್​​ನಲ್ಲಿ ಜಿಯಾ ವಿರುದ್ಧ ಭರ್ಜರಿ ಪ್ರದರ್ಶನ ನೀಡಿ ಸುಲಭ ಗೆಲುವು ದಾಖಲಿಸಿದರು. ವಿರಾಮದ ವೇಳೆಗೆ 6 ಅಂಕ ಮುಂದಿದ್ದ ಸೇನ್​, ಎದುರಾಳಿ ಮೇಲೆ ಒತ್ತಡ ಹೇರಿದರು. ಆದರೂ ಜಿಯಾ ಸತತ 5 ಅಂಕ ಗಳಿಸಿ ಕಂಬ್ಯಾಕ್ ಮಾಡಿದರು. ಅಷ್ಟರೊಳಗೆ ಮೊದಲ ಸೆಟ್​ನಲ್ಲಿ 21-13 ಅಂತರದಲ್ಲಿ ಲಕ್ಷ್ಯ ಗೆದ್ದರು.

 ಎರಡನೇ ಸೆಟ್​​ನಲ್ಲಿ ಜಿಯಾ ಅದ್ಭುತ ಕಂಬ್ಯಾಕ್

ಎರಡನೇ ಸೆಟ್​​ನಲ್ಲಿ ಜಿಯಾ ರೋಚಕ ಕಂಬ್ಯಾಕ್ ಮಾಡಿದರು. ಆರಂಭದಲ್ಲಿ ಲಕ್ಷ್ಯ ಮುನ್ನಡೆ ಪಡೆಯುತ್ತಿದ್ದರು. 5 ಪಾಯಿಂಟ್​ಗಳ ಅಂತರ ಕಾಯ್ದುಕೊಂಡಿದ್ದರು. ಆದರೆ ಜಿಯಾ ಅದ್ಭುತ ಪುನರಾಗಮನದ ಮೂಲಕ ವಿರಾಮದ ವೇಳೆ ಸೇನ್​ರನ್ನು 8-11 ರಿಂದ ಹಿನ್ನಡೆ ತಂದುಕೊಟ್ಟರು.

ರೋಚಕ ಮೂರನೇ ಸೆಟ್​

ಮೂರನೇ ಸೆಟ್​​ನಲ್ಲಿ ಆರಂಭದಿಂದಲೂ ಹಿನ್ನಡೆ ಅನುಭವಿಸಿದ ಲಕ್ಷ್ಯ, ವಿರಾಮದ ಅಂತ್ಯಕ್ಕೆ ಕಂಬ್ಯಾಕ್ ಮಾಡಲು ಪ್ರಯತ್ನಿಸಿದರು. ಆದರೆ, 6-11ರಿಂದ ಹಿನ್ನಡೆಯಾದರು. ಆದರೆ ಬ್ರೇಕ್ ಬಳಿಕವೂ ಸೇನ್​ ಕಂಬ್ಯಾಕ್ ಮಾಡಲು ಸಾಧ್ಯವಾಗಲಿಲ್ಲ. 11-21ರ ಅಂತರದಿಂದ ಶರಣಾದರು.

ಗಾಯದ ನಡುವೆಯೂ ಹೋರಾಟ

ಭಾರತದ 22 ವರ್ಷದ ಆಟಗಾರ ಗಾಯದ ನಡುವೆಯೂ ಹೋರಾಟ ನಡೆಸಿದರು. ಬಲಗೈ ಇಂಜುರಿ ಆಗಿದ್ದ ಕಾರಣ ಆಗಾಗ್ಗೆ ಚಿಕಿತ್ಸೆ ಪಡೆದುಕೊಂಡರು. ನೋವು ಹೆಚ್ಚಾದರೂ ಕೋರ್ಟ್​ನಲ್ಲಿ ಎದುರಾಳಿಗೆ ತೀವ್ರ ಪ್ರತಿರೋಧ ತೋರಿದರು.

ಮೊದಲ ಮೂರು ಪದಕ ಗೆದ್ದವರು

ಹಾಲಿ ಒಲಿಂಪಿಕ್ಸ್​ನಲ್ಲಿ ಮನು ಭಾಕರ್ ಅವರು ಚೊಚ್ಚಲ ಪದಕವನ್ನು ಗೆದ್ದರು. ಆ ಮೂಲಕ ಭಾರತ ಪದಕದ ಖಾತೆ ತೆರೆಯಿತು. ಮಹಿಳೆಯರ 10 ಮೀಟರ್ ಏರ್​ ಪಿಸ್ತೂಲ್​ನಲ್ಲಿ 221.7 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆಯುವ ಮೂಲಕ ಮನು ಕಂಚಿನ ಪದಕಕ್ಕೆ ಮುತ್ತಿಕ್ಕಿ ಐತಿಹಾಸಿಕ ದಾಖಲೆ ಬರೆದರು.

ಭಾರತಕ್ಕೆ ಎರಡನೇ ಪದಕವನ್ನೂ ಮನು ಭಾಕರ್ ಅವರಿಂದಲೇ ಬಂತು. 10 ಮೀಟರ್​ ಏರ್​ ಪಿಸ್ತೂಲ್ ಮಿಶ್ರ ತಂಡದ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಅವರೊಂದಿಗೆ ಸೇರಿ ಮನು ಭಾಕರ್ 580 ಅಂಕ ಪಡೆಯುವ ಮೂಲಕ ಎರಡನೇ ಕಂಚು ಗೆದ್ದರು. ಆ ಮೂಲಕ ಮತ್ತೊಂದು ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಇನ್ನು ಭಾರತಕ್ಕೆ ಮೂರನೇ ಪದಕವಾಗಿ ಸ್ವಪ್ಲಿಕ್ ಕುಸಾಲೆ ಅವರಿಂದ ಬಂತು. ಪುರುಷರ 50 ಮೀಟರ್​ ರೈಫಲ್ ಸ್ಪರ್ಧೆಯಲ್ಲಿ 451.3 ಅಂಕಗಳೊಂದಿಗೆ 3ನೇ ಸ್ಥಾನ ಪಡೆಯುವ ಮೂಲಕ ಕಂಚಿಗೆ ಮುತ್ತಿಕ್ಕಿದರು. ಇದೀಗ ನಾಲ್ಕನೇ ಒಲಿಂಪಿಕ್ಸ್ ಪದಕದ ಭರವಸೆ ಮೂಡಿಸಿದ್ದ ಲಕ್ಷ್ಯ ಸೇನ್ ನಿರಾಸೆ ಮೂಡಿಸಿದ್ದಾರೆ.

 

 

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.