ಏಷ್ಯನ್ ಪ್ಯಾರಾಗೇಮ್ಸ್; ತಮ್ಮದೇ ವಿಶ್ವದಾಖಲೆ ಬ್ರೇಕ್ ಮಾಡಿ ಬಂಗಾರ ಗೆದ್ದ ಸುಮಿತ್ ಆಂಟಿಲ್
Sumit Antil World Record: ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಎಸೆದಿದ್ದ 70.83 ಮೀಟರ್‌ಗಳ ತಮ್ಮದೇ ವಿಶ್ವ ದಾಖಲೆಯನ್ನು ಮುರಿದು ಸುಮಿತ್ ಆಂಟಿಲ್ ನೂತನ ರೆಕಾರ್ಡ್ ಮಾಡಿದ್ದಾರೆ.
ಹಾಲಿ ಪ್ಯಾರಾಲಿಂಪಿಕ್ಸ್ ಚಾಂಪಿಯನ್ ಸುಮಿತ್ ಆಂಟಿಲ್ (Sumit Antil) ವಿಶ್ವದಾಖಲೆಯೊಂದಿಗೆ ಬಂಗಾರ ಗೆದ್ದಿದ್ದಾರೆ. ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್ (Asian Para Games) ಜಾವೆಲಿನ್ ಥ್ರೋ F64 ಸ್ಪರ್ಧೆಯಲ್ಲಿ ಅಕ್ಟೋಬರ್ 25ರ ಬುಧವಾರ ನಡೆದ ಮೂರನೇ ದಿನದ ಸ್ಪರ್ಧೆಯಲ್ಲಿ 73.29 ಮೀಟರ್‌ಗಳ ವಿಶ್ವ ದಾಖಲೆಯ ಎಸೆತದೊಂದಿಗೆ ಸುಮಿತ್ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
25 ವರ್ಷ ವಯಸ್ಸಿನ ಅಥ್ಲೀಟ್, ಈ ವರ್ಷದ ಆರಂಭದಲ್ಲಿ ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿದ್ದರು. 70.83 ಮೀಟರ್ ಎಸೆತದೊದಿಗೆ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ತಮ್ಮದೇ ದಾಖಲೆಯನ್ನು ಮುರಿದ ಅವರು, 73.29 ಮೀಟರ್ ಎಸೆತದೊಂದಿಗೆ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ.
ಅತ್ತ ಭಾರತದ ಮತ್ತೊಬ್ಬ ಆಟಗಾರ ಪುಷ್ಪೇಂದ್ರ ಸಿಂಗ್ 62.06 ಮೀಟರ್ ದೂರ ಎಸೆದು ಕಂಚಿನ ಪದಕ ಗೆದ್ದಿದ್ದಾರೆ.
ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಪುರುಷರ ಜಾವೆಲಿನ್ ಎಫ್ 64 ಸ್ಪರ್ಧೆಯಲ್ಲಿಯೂ ಸುಮಿತ್ ವಿಶ್ವ ದಾಖಲೆ ಬರೆದಿದ್ದರು. 68.55 ಮೀಟರ್ ಎಸೆಯುವ ಮೂಲಕ ಚಿನ್ನ ಗೆದ್ದಿದ್ದರು.
ಪ್ಯಾರಾ ಗೇಮ್ಸ್‌ನಲ್ಲಿ ಭಾರತ ಇಂದು ಪದಕಗಳ ಬೇಟೆ ಮಾಡಿದೆ. ಒಟ್ಟು 24 ಪದಕಗಳನ್ನು ಗೆಲ್ಲುವ ಮೂಲಕ ಭಾರತೀಯರು ಸಾಧನೆ ಮಾಡಿದರು. ಅದರಲ್ಲಿ 17 ಪದಕಗಳು ಅಥ್ಲೆಟಿಕ್ಸ್‌ನಲ್ಲೇ ಬಂದಿವೆ. ಇದರಲ್ಲಿ ಆರು ಚಿನ್ನ ಸೇರಿದೆ. ಸದ್ಯ ಈವರೆಗೆ ಭಾರತ ಗೆದ್ದಿರುವ ಪದಕಗಳ ಸಂಖ್ಯೆ 58ಕ್ಕೇರಿದೆ. ಇದರಲ್ಲಿ 15 ಚಿನ್ನ, 20 ಬೆಳ್ಳಿ ಮತ್ತು 23 ಕಂಚಿನ ಪದಕಗಳು.