ಪ್ಯಾರಿಸ್ ಒಲಿಂಪಿಕ್ಸ್ ಚಿನ್ನದ ಪದಕದ ನಿಜವಾದ ಮೌಲ್ಯ ಎಷ್ಟು; ಸಂಪೂರ್ಣ ಬಂಗಾರವಾಗಿದ್ದರೆ ಎಷ್ಟಿರುತ್ತಿತ್ತು?-paris olympics 2024 gold medal actual value silver with six grams of gold chaumet eiffel tower iron jra ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  ಪ್ಯಾರಿಸ್ ಒಲಿಂಪಿಕ್ಸ್ ಚಿನ್ನದ ಪದಕದ ನಿಜವಾದ ಮೌಲ್ಯ ಎಷ್ಟು; ಸಂಪೂರ್ಣ ಬಂಗಾರವಾಗಿದ್ದರೆ ಎಷ್ಟಿರುತ್ತಿತ್ತು?

ಪ್ಯಾರಿಸ್ ಒಲಿಂಪಿಕ್ಸ್ ಚಿನ್ನದ ಪದಕದ ನಿಜವಾದ ಮೌಲ್ಯ ಎಷ್ಟು; ಸಂಪೂರ್ಣ ಬಂಗಾರವಾಗಿದ್ದರೆ ಎಷ್ಟಿರುತ್ತಿತ್ತು?

ಪ್ರೇಮನಗರಿ ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ತೆರೆ ಬಿದ್ದಿದೆ. ಹಲವು ಅಥ್ಲೀಟ್‌ಗಳು ಪ್ರತಿಷ್ಠಿತ ಪದಕವನ್ನು ಕೊರಳಿಗೇರಿಸಿಕೊಂಡಿದ್ದಾರೆ. ಇವರಲ್ಲಿ ಚಿನ್ನ ಗೆದ್ದ ಅಥ್ಲೀಟ್‌ಗಳ ಸಂಭ್ರಮ ದುಪ್ಪಟ್ಟು. ಹಾಗಿದ್ದರೆ ಪ್ಯಾರಿಸ್‌ನಲ್ಲಿ ಆಟಗಾರರು ಗೆದ್ದ ಚಿನ್ನದ ಪದಕ ಎಷ್ಟು ಬೆಲೆಬಾಳುತ್ತದೆ ಎಂಬುದನ್ನು ನೋಡೋಣ.

ಪ್ಯಾರಿಸ್ ಒಲಿಂಪಿಕ್ಸ್ ಚಿನ್ನದ ಪದಕದ ನಿಜವಾದ ಮೌಲ್ಯ ಎಷ್ಟು
ಪ್ಯಾರಿಸ್ ಒಲಿಂಪಿಕ್ಸ್ ಚಿನ್ನದ ಪದಕದ ನಿಜವಾದ ಮೌಲ್ಯ ಎಷ್ಟು (REUTERS)

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅದ್ಧೂರಿ ತೆರೆ ಬಿದ್ದಿದೆ. ಪದಕ ಪಟ್ಟಿಯಲ್ಲಿ ಯುಎಸ್‌ಎ ಅಗ್ರಸ್ಥಾನದೊಂದಿಗೆ ಕ್ರೀಡಾಕೂಟಕ್ಕೆ ವಿದಾಯ ಹೇಳಿದೆ. ಚೀನಾ ಎರಡನೇ ಸ್ಥಾನ ಪಡೆದರೆ, ಭಾರತವು ಒಟ್ಟು ಆರು ಪದಕಗಳೊಂದಿಗೆ ತವರಿಗೆ ಮರಳಿದೆ. ಆದರೆ, ಭಾರತವು ಈ ಬಾರಿ ಚಿನ್ನದ ಪದಕ ಗೆಲ್ಲಲು ವಿಫಲವಾಗಿದೆ. ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದೇ ಒಂದು ಸಾಧನೆ. ಇದರ ನಡುವೆ ಪದಕಗಳನ್ನು ಗೆಲ್ಲುವುದು, ಅದರಲ್ಲೂ ಬಂಗಾರದ ಸಾಧನೆ ಮಾಡುವುದೆಂದರೆ ಅದು ನಿಜಕ್ಕೂ ದೊಡ್ಡ ಸಾಧನೆ. ಹಾಗಿದ್ದರೆ, ಈ ಬಾರಿಯ ಒಲಿಂಪಿಕ್ಸ್‌ ಪದಕದ ನಿಜವಾದ ಮೌಲ್ಯ ಎಷ್ಟಿತ್ತು ಎಂಬುದನ್ನು ನೋಡೋಣ.

ಒಲಿಂಪಿಕ್ಸ್‌ ಪದಕ ಗೆಲ್ಲುವುದು ಆಟಗಾರರ ಕನಸಾಗಿರುತ್ತದೆ. ಹಾಗಂತಾ ಆ ಪದಕದ ವಿತ್ತೀಯ ಮೌಲ್ಯ ಹೆಚ್ಚಿರುತ್ತದೆ ಎಂಬ ಕಾರಣದಿಂದ ಅಲ್ಲ. ಒಲಿಂಪಿಕ್ಸ್‌ ಎಂಬುದು ಜಾತಿಕ ಅಥ್ಲೀಟ್‌ಗಳು ಪಾಲ್ಗೊಳ್ಳುವ ಪ್ರತಿಷ್ಠಿತ ಕ್ರೀಡಾಕೂಟವಾಗಿದ್ದು, ಅದರಲ್ಲಿ ಪದಕ ಸಾಧನೆ ಮಾಡುವುದು ಆಟಗಾರರಿಗೂ ಒಂದು ಪ್ರತಿಷ್ಠೆ. ಅಲ್ಲದೆ ನಿರಂತರ ಅಭ್ಯಾಸ, ಶ್ರಮಕ್ಕೆ ಪದಕದ ಪ್ರತಿಫಲದ ನಿರೀಕ್ಷೆ ಆಟಗಾರರದ್ದು.

ವರದಿಗಳ ಪ್ರಕಾರ ಪ್ಯಾರಿಸ್‌ ಒಲಂಪಿಕ್ಸ್‌ನಲ್ಲಿ ಕೊಡಲಾದ ಚಿನ್ನದ ಪದಕದ ಬೆಲೆ ಅಂದಾಜು 950 ಯುಎಸ್‌ ಡಾಲರ್‌. ಅಂದರೆ, ರೂಪಾಯಿ ಮೌಲ್ಯದಲ್ಲಿ ಸರಿಸುಮಾರು 80 ಸಾವಿರ ರೂಪಾಯಿ. ಹಾಗಂತಾ ಚಿನ್ನದ ಪದಕವು ಸಂಪೂರ್ಣವಾಗಿ ಚಿನ್ನದಿಂದ ಮಾಡಿದ್ದಲ್ಲ. ಪ್ರತಿ ಚಿನ್ನದ ಪದಕವನ್ನು ಮುಖ್ಯವಾಗಿ 500 ಗ್ರಾಂ ಬೆಳ್ಳಿಯಿಂದ ಮಾಡಲಾಗಿದೆ. ಇದಕ್ಕೆ ಮೇಲಿನಿಂದ ಕೇವಲ ಆರು ಗ್ರಾಂನಷ್ಟು ಚಿನ್ನದ ಲೇಪನ ಮಾಡಲಾಗಿದೆ. ಫ್ರಾನ್ಸ್‌ನ ಪ್ರಸಿದ್ಧ ಆಭರಣ ವ್ಯಾಪಾರ ಸಂಸ್ಥೆಯಾದ ಚೌಮೆಟ್, ಈ ಬಾರಿಯ ಒಲಿಂಪಿಕ್ಸ್‌ ಮೆಡಲ್ ವಿನ್ಯಾಸ ಮಾಡಿದೆ.

ಚಿನ್ನದ ಪದಕವನ್ನು 95.4 ಪ್ರತಿಶತ ಬೆಳ್ಳಿಯಿಂದ ಮಾಡಲಾಗಿದ್ದು, ಪದಕದ ಒಟ್ಟು ತೂಕ 529 ಗ್ರಾಂ ಎಂದು ವೆಲ್ತ್‌ ವರದಿ ಹೇಳಿದೆ. ಒಂದು ವೇಳೆ ಇದೇ ತೂಕದ ಪದಕವನ್ನು ಸಂಪೂರ್ಣವಾಗಿ ಶುದ್ಧ ಚಿನ್ನದಿಂದ ಮಾಡಿದ್ದರೆ, ಅದರ ಮೌಲ್ಯವು ಬರೋಬ್ಬರಿ 41,161.50 ಡಾಲರ್‌ ಆಗುತ್ತಿತ್ತು. ಅಂದರೆ ಹೆಚ್ಚು ಕಡಿಮೆ 34 ಲಕ್ಷ ರೂಪಾಯಿ.

ಒಲಿಂಪಿಕ್ಸ್‌ನಲ್ಲಿ ಹಿಂದೆ ಸಂಪೂರ್ಣ ಶುದ್ಧಚಿನ್ನದಿಂದ ಮಾಡಿದ ಪದಕಗಳನ್ನೇ ಕೊಡಲಾಗುತ್ತಿತ್ತು. ದಿನಕಳೆದಂತೆ ಚಿನ್ನದ ಮೌಲ್ಯ ಗಗನಕ್ಕೇರುತ್ತಿದೆ. ಹೀಗಾಗಿ 1912ರಲ್ಲಿ ಕೊನೆಯ ಬಾರಿಗೆ ಶುದ್ಧ ಚಿನ್ನದ ಪದಕಗಳನ್ನು ನೀಡಲಾಗಿತ್ತು.

ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ನಿಯಮಗಳ ಪ್ರಕಾರ, ಚಿನ್ನದ ಪದಕಗಳು ಕನಿಷ್ಟ 95.4 ಶೇಕಡಾ ಬೆಳ್ಳಿ (505 ಗ್ರಾಂ) ಹೊಂದಿರಬೇಕು. ಇದೇ ವೇಳೆ ಕನಿಷ್ಠ ಆರು ಗ್ರಾಂ ಶುದ್ಧ ಚಿನ್ನದಿಂದ ಲೇಪಿತವಾಗಿರಬೇಕು.

ಕಬ್ಬಿಣವೂ ಸೇರಿದೆ

ಈ ಬಾರಿಯ ಪ್ಯಾರಿಸ್‌ ಒಲಿಂಪಿಕ್ಸ್‌ ಪದಕಗಳಲ್ಲಿ ಐಫೆಲ್ ಟವರ್‌ನ ಕಬ್ಬಿಣವನ್ನು ಕೂಡಾ ಬಳಸಲಾಗಿದೆ. ಹೀಗಾಗಿ ಪದಕಗಳಲ್ಲಿ ಬಳಸಲಾದ ಚಿನ್ನ, ಬೆಳ್ಳಿ ಮತ್ತು ಕಬ್ಬಿಣದ ಪ್ರಮಾಣವನ್ನು ಲೆಕ್ಕ ಹಾಕಿದರೆ, ಪದಕದ ಮೌಲ್ಯವು 1,027 ಡಾಲರ್‌ ಎಂದು ಅಂದಾಜಿಸಲಾಗಿದೆ. ಅಂದರೆ 86 ಸಾವಿರ ರೂಪಾಯಿ. ಬೆಳ್ಳಿಯ ಪದಕದ ಮೌಲ್ಯವು ಸುಮಾರು 535 ಡಾಲರ್‌ (45 ಸಾವಿರ ರೂಪಾಯಿ) ಆಗಿದ್ದು, ಕಂಚಿನ ಪದಕವು ಸುಮಾರು 12 ಡಾಲರ್ ಮೌಲ್ಯದ್ದಾಗಿದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.