ಇದು ಅರ್ಷದ್ ನದೀಮ್‌ಗೆ ಅವಮಾನ, ಮೊದಲು ಫೋಟೋ ಡಿಲೀಟ್ ಮಾಡಿ; ಪಾಕಿಸ್ತಾನ ಪ್ರಧಾನಿ ನಡೆಗೆ ಮಾಜಿ ಕ್ರಿಕೆಟಿಗ ಕಿಡಿ
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ, ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಒಲಿಂಪಿಕ್ ಪದಕ ಗೆದ್ದ ಅರ್ಷದ್ ನದೀಮ್ ಅವರಿಗೆ ಚೆಕ್ ನೀಡುವ ಚಿತ್ರವನ್ನು ಪೋಸ್ಟ್ ಮಾಡುವ ಮೂಲಕ ಪ್ರಧಾನಿಯು ನದೀಮ್‌ಗೆ ಅವಮಾನಿಸಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಪಾಕಿಸ್ತಾನಕ್ಕೆ ಒಲಿಂಪಿಕ್ ಚಿನ್ನದ ಪದಕ ಗೆದ್ದುಕೊಟ್ಟ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್‌ಗೆ, ದೇಶದಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ. ಈ ನಡುವೆ ಹಲವು ನಗದು ಬಹುಮಾನಗಳನ್ನು ಕೂಡಾ ನೀಡಲಾಗಿದೆ. ಇದೇ ವೇಳೆ, ದೇಶದ ಚಿನ್ನದ ಹುಡುಗನಿಗೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಹತ್ತು ಲಕ್ಷ ಪಾಕಿಸ್ತಾನ ರೂಪಾಯಿಯ ಚೆಕ್ ನೀಡುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಆದರೆ, ಫೋಟೋ ನೋಡಿದ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ ಕಿಡಿಕಾರಿದ್ದಾರೆ. ಪಾಕ್ ಪ್ರಧಾನಿ ದೇಶದ ಅಗ್ರ ಅಥ್ಲೀಟ್‌ಗೆ ಅವಮಾನಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಒಲಿಂಪಿಕ್ ಪದಕ ವಿಜೇತ ನದೀಮ್‌ಗೆ ಇದರಿಂದ ವಿಮಾನ ಟಿಕೆಟ್ ಖರೀದಿಸಲು ಕೂಡಾ ಸಾಧ್ಯವಿಲ್ಲ. ಅದರ ನಡುವೆ ಈ ಪುಡಿಗಾಸು ನದೀಮ್ ಅವರ ಅಗತ್ಯಗಳನ್ನು ಪೂರೈಸಲ್ಲ ಎಂದು ಕನೇರಿಯಾ ಹೇಳಿದ್ದಾರೆ.
ಪುರುಷರ ಜಾವೆಲಿನ್ ಎಸೆತದಲ್ಲಿ ನದೀಮ್ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಕಳೆದ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಭಾರತದ ನೀರಜ್ ಚೋಪ್ರಾ ಅವರನ್ನೇ ಹಿಂದಿಕ್ಕಿದ ನದೀಮ್ ಒಲಿಂಪಿಕ್ ದಾಖಲೆ ನಿರ್ಮಿಸಿದರು. ಅವರಿಗೆ ಪಾಕಿಸ್ತಾನ ಪ್ರಧಾನಿ 10 ಲಕ್ಷ ರೂಪಾಯಿಗಳ ಚೆಕ್ ನೀಡಿದ್ದಾರೆ. ಅಲ್ಲದೆ ಇದನ್ನು ಪೋಸ್ಟ್ ಮಾಡಿದ್ದಾರೆ. ಅಪ್ರತಿಮ ಸಾಧನೆ ಮಾಡಿದ ಸಾಧಕನಿಗೆ ಅಲ್ಪ ಮೊತ್ತ ನೀಡಿರುವುದು ಅವಮಾನ ಎಂದು ಅವರು ಹೇಳಿದ್ದಾರೆ.
ನದೀಮ್‌ಗೆ 10 ಲಕ್ಷ ರೂಪಾಯಿ ಚೆಕ್ ನೀಡುವ ಫೋಟೋವನ್ನು ಡಿಲೀಟ್ ಮಾಡುವಂತೆ ಪಾಕಿಸ್ತಾನ ಪ್ರಧಾನಿಯನ್ನು ಗುರಿಯಾಗಿಸಿಕೊಂಡ ಕನೇರಿಯಾ ಪೋಸ್ಟ್ ಮಾಡಿದ್ದಾರೆ. “ಮಾನ್ಯ ಪ್ರಧಾನ ಮಂತ್ರಿಗಳೇ, ನದೀಮ್‌ಗೆ ನೀವು ಅಭಿನಂದನೆ ಸಲ್ಲಿಸಿದರೆ ಸಾಕು. ನೀವು ನೀಡಿದ ಮಿಲಿಯನ್ ರೂಪಾಯಿಗಳ ಫೋಟೋವನ್ನು ದಯವಿಟ್ಟು ಡಿಲೀಟ್ ಮಾಡಿ. ಅದು ಅವರ ಅಗತ್ಯಗಳನ್ನು ಎಳ್ಳಷ್ಟೂ ಪೂರೈಸುವುದಿಲ್ಲ. ಈ ಮೊತ್ತ ಅವರ ಪಾಲಿಗೆ ತುಂಬಾ ಚಿಕ್ಕದಾಯ್ತು. ಈ ಮೊತ್ತದಿಂದ ಅವರಿಗೆ ವಿಮಾನ ಟಿಕೆಟ್ ಸಹ ಖರೀದಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಚಿನ್ನದ ಹುಡುಗನಿಗೆ ಬಹುಮಾನಗಳ ಸುರಿಮಳೆ
ಅರ್ಷದ್ ನದೀಮ್ ಐತಿಹಾಸಿಕ ಗೆಲುವು ಸಾಧಿಸಿದ ನಂತರ, ತಮ್ಮ ದೇಶದಿಂದ ಚಿನ್ನದ ಹುಡುಗನಿಗೆ ಹಲವಾರು ನಗದು ಬಹುಮಾನಗಳು ಸಿಗುತ್ತಿವೆ. ಪಾಕಿಸ್ತಾನ ಸರ್ಕಾರದಿಂದ 150 ಮಿಲಿಯನ್ ಪಾಕಿಸ್ತಾನ ರೂಪಾಯಿ ಬಹುಮಾನ ಸಿಗಲಿದೆ. ಭಾರತೀಯ ರೂಪಾಯಿ ಮೌಲ್ಯದಲ್ಲಿ ಇದು 4.5 ಕೋಟಿ ರೂಪಾಯಿಗಿಂತ ಹೆಚ್ಚು.
ಪಾಕಿಸ್ತಾನದ ಪಂಜಾಬ್ ರಾಜ್ಯಪಾಲ ಸರ್ದಾರ್ ಸಲೀಮ್ ಹೈದರ್ ಖಾನ್ ಅವರು, ನದೀಮ್‌ಗೆ 2 ಮಿಲಿಯನ್ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಸಿಂಧ್ ಸಿಎಂ 50 ಮಿಲಿಯನ್ ನಗದು ಘೋಷಿಸಿದರೆ, ಪಾಕಿಸ್ತಾನದ ಗಾಯಕ ಅಲಿ ಜಾಫರ್ 1 ಮಿಲಿಯನ್ ನಗದು ನೀಡುವುದಾಗಿ ಹೇಳಿದ್ದಾರೆ. ಕ್ರಿಕೆಟಿಗ ಅಹ್ಮದ್ ಶಹಜಾದ್ ಇಷ್ಟೇ ಮೊತ್ತವನ್ನು ನೀಡುವುದಾಗಿ ಹೇಳಿಕೊಂಡಿದ್ದಾರೆ.
ಇನ್ನಷ್ಟು ಒಲಿಂಪಿಕ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಚಿನ್ನದ ಹುಡುಗ ಅರ್ಷದ್ ನದೀಮ್‌ಗೆ ಕೋಟಿ ಕೋಟಿ ಬಹುಮಾನ; ಪಾಕಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿ ಸೇರಿ ಮತ್ತಷ್ಟು ಗೌರವ