KKR vs PBKS: ಪಂಜಾಬ್ ವಿರುದ್ಧ ಟಾಸ್ ಗೆದ್ದ ಕೆಕೆಆರ್ ಬೌಲಿಂಗ್ ಆಯ್ಕೆ; ತಂಡಗಳ ಆಡುವ ಬಳಗ ಹೀಗಿದೆ
ಈ ಬಾರಿಯ ಐಪಿಎಲ್‌ನಲ್ಲಿ ಇಂದು ಮೊದಲ ಡಬಲ್ ಹೆಡರ್ ನಡೆಯುತ್ತಿದೆ. ಮೊದಲ ಪಂದ್ಯವು ಪಂಜಾಬ್ ತಂಡದ ತವರು ಮೊಹಾಲಿಯಲ್ಲಿ ನಡೆಯುತ್ತಿದೆ.
ಐಪಿಎಲ್ 16ನೇ ಆವೃತ್ತಿಯ ಎರಡನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ಮತ್ತು ಪಂಜಾಬ್ ಕಿಂಗ್ಸ್ (Punjab Kings) ತಂಡಗಳು ಮುಖಾಮುಖಿಯಾಗುತ್ತಿವೆ. ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ನಾಯಕ ನಿತೀಶ್ ರಾಣಾ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಈ ಬಾರಿಯ ಐಪಿಎಲ್‌ನಲ್ಲಿ ಇಂದು ಮೊದಲ ಡಬಲ್ ಹೆಡರ್ ನಡೆಯುತ್ತಿದೆ. ಮೊದಲ ಪಂದ್ಯವು ಪಂಜಾಬ್ ತಂಡದ ತವರು ಮೊಹಾಲಿಯಲ್ಲಿ ನಡೆಯುತ್ತಿದೆ.
ಉಭಯ ತಂಡಗಳು ಕೂಡಾ ಈ ಬಾರಿ ನೂತನ ನಾಯಕನೊಂದಿಗೆ ಕಣಕ್ಕಿಳಿಯಲು ಸಜ್ಜಾಗಿವೆ. ಪಂಜಾಬ್ ತಂಡಕ್ಕೆ ಅನುಭವಿ ಎಡಗೈ ಆರಂಭಿಕ ಆಟಗಾರ ಶಿಖರ್ ಧವನ್ ಸಾರಥ್ಯ ವಹಿಸಿದ್ದಾರೆ. ಕಳೆದ ಬಾರಿ ಮಯಾಂಕ್ ಅಗರ್ವಾಲ್ ಕ್ಯಾಪ್ಟನ್ ಆಗಿದ್ದರು. ಇದೇ ವೇಳೆ ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ, ಕೆಕೆಆರ್ ತಂಡವನ್ನು ನಿತೀಶ್ ರಾಣಾ ಮುನ್ನಡೆಸಲಿದ್ದಾರೆ.
ತಂಡಗಳ ಬಲಾಬಲ
ಐಪಿಎಲ್‌ನಲ್ಲಿ ಈವರೆಗೂ ಉಭಯ ತಂಡಗಳು 30 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಕೆಕೆಆರ್ ತಂಡವೇ ಮೇಲುಗೈ ಸಾಧಿಸಿದೆ. ಅಂಕಿ-ಅಂಶಗಳ ಪ್ರಕಾರ ಕೆಕೆಆರ್ ಮುಂದಿದ್ದರೂ, ಆಟಗಾರರ ಲೆಕ್ಕಾಚಾರದಲ್ಲಿ ಪಂಜಾಬ್ ಅತ್ಯಂತ ಬಲಿಷ್ಠ ತಂಡವೆನಿಸಿದೆ. 30 ಬಾರಿ ಮುಖಾಮುಖಿಯಲ್ಲಿ ಕೆಕೆಆರ್ 20 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದ್ದರೆ, ಪಂಜಾಬ್ 10 ಬಾರಿ ಜಯ ಸಾಧಿಸಿದೆ.
ಐಪಿಎಲ್‌ನ ಕಳೆದ ಆವೃತ್ತಿಯಲ್ಲಿ ಪಂಜಾಬ್ ಮತ್ತು ಕೆಕೆಆರ್ ತಂಡಗಳು ಸಾಧಾರಣ ಪ್ರದರ್ಶನ ತೋರಿದ್ದವು. ಹಾಗಾಗಿ ಪ್ಲೇ ಆಫ್ ಪ್ರವೇಶಿಸುವಲ್ಲಿ ಉಭಯ ತಂಡಗಳು ಕೂಡಾ ವಿಫಲವಾಗಿದ್ದವು. ಪಂಜಾಜ್ ತಂಡವು ಆಡಿದ 14 ಪಂದ್ಯಗಳಲ್ಲಿ 7ರಲ್ಲಿ ಸೋತಿತ್ತು. ಉಳಿದ ಏಳು ಪಂದ್ಯಗಳಲ್ಲಿ ಗೆದ್ದು 14 ಅಂಕಗಳೊಂದಿಗೆ 6ನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿತ್ತು. ಇದೇ ವೇಳೆ ಕೋಲ್ಕತ್ತಾ 6ರಲ್ಲಿ ಗೆದ್ದು 8 ಪಂದ್ಯಗಳಲ್ಲಿ ಸೋತು 7ನೇ ಸ್ಥಾನಿಯಾಗಿ ಅಭಿಯಾನಕ್ಕೆ ವಿದಾಯ ಹೇಳಿತ್ತು.
ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ತಂಡದ ನಾಯಕತ್ವ ವಹಿಸಿರುವ ಕೆಕೆಆರ್ ನಾಯಕ ರಾಣಾ, ಟಾಸ್ ವೇಳೆ ಮಾತನಾಡಿದ್ದಾರೆ. “ಮೊದಲ ಬಾರಿಗೆ ನಾಯಕತ್ವ ವಹಿಸಿರುವುದಕ್ಕೆ ನಾನು ಉತ್ಸುಕನಾಗಿದ್ದೇನೆ. ಏಕೆಂದರೆ ಕೆಲವೇ ಜನರಿಗೆ ಮಾತ್ರ ಇಂತಹ ಅವಕಾಶ ಸಿಗುತ್ತದೆ. ಇದು ಆಟವಾದ್ದರಿಂದ ಹೆಚ್ಚಿನ ಒತ್ತಡ ಇರುವುದಿಲ್ಲ. ಇಂಪ್ಯಾಕ್ಟ್ ಪ್ಲೇಯರ್ ನಿಯಮ ಆರಂಭಿಕ ಹಂತದಲ್ಲಿದೆ. ನಾವು ತೆಗೆದುಕೊಳ್ಳುವ ನಿರ್ಧಾರಗಳು ಸರಿ ಎಂದು ಸಾಬೀತಾಗುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು,” ಎಂದು ಅವರು ಹೇಳಿದರು.
ಪಂಜಾಬ್ ಕಿಂಗ್ಸ್ ಆಡುವ ಬಳಗ:
ಶಿಖರ್ ಧವನ್ (ನಾಯಕ), ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಭಾನುಕಾ ರಾಜಪಕ್ಸೆ, ಜಿತೇಶ್ ಶರ್ಮಾ, ಶಾರುಖ್ ಖಾನ್, ಸ್ಯಾಮ್ ಕರನ್, ಸಿಕಂದರ್ ರಜಾ, ನಾಥನ್ ಎಲ್ಲಿಸ್, ಹರ್ಪ್ರೀತ್ ಬ್ರಾರ್, ರಾಹುಲ್ ಚಾಹರ್, ಅರ್ಷದೀಪ್ ಸಿಂಗ್.
ಕೋಲ್ಕತ್ತಾ ನೈಟ್ ರೈಡರ್ಸ್ ಆಡುವ ಬಳಗ:
ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಮನದೀಪ್ ಸಿಂಗ್, ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಶಾರ್ದೂಲ್ ಠಾಕೂರ್, ಸುನಿಲ್ ನರೈನ್, ಟಿಮ್ ಸೌಥಿ, ಅನುಕುಲ್ ರಾಯ್, ಉಮೇಶ್ ಯಾದವ್, ವರುಣ್ ಚಕ್ರವರ್ತಿ.