Ramiz Raja on BCCI: 'ನಾವೇನು ಭಾರತದ ಸೇವಕರಾ?' ಏಷ್ಯಾಕಪ್ ಆತಿಥ್ಯ ಕುರಿತು ಪಾಕಿಸ್ತಾನದ ಮುಗಿಯದ ಗೋಳು
“ಕ್ರಿಕೆಟ್‌ನಲ್ಲಿ ಭಾರತ ಜಾಗತಿಕ ಶಕ್ತಿಯಾಗಿದೆ ಎಂಬ ಕಾರಣಕ್ಕೆ ನಾವು ಭಾರತದ ಸೇವಕರೇ? ಅವರು ಹೇಳುವುದನ್ನೆಲ್ಲಾ ನಾವು ಕೇಳಬೇಕೇ?” ಎಂದು ರಾಜಾ ಪ್ರಶ್ನಿಸಿದ್ದಾರೆ.
ಪಾಕಿಸ್ತಾನದಲ್ಲಿ ನಡೆಯಲಿರುವ 2023ರ ಏಷ್ಯಾಕಪ್‌ನಲ್ಲಿ ಪಾಲ್ಗೊಳ್ಳುವ ಬಗ್ಗೆ ತನ್ನ ನಿಲುವು ತಿಳಿಸಿರುವ ಬಿಸಿಸಿಐ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನಡುವೆ ಘರ್ಷಣೆ ನಡೆಯುತ್ತಿದೆ. ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸ್ಪಷ್ಟಪಡಿಸಿದ್ದು, ಪಂದ್ಯಾವಳಿಯನ್ನು ತಟಸ್ಥ ಸ್ಥಳದಲ್ಲಿ ನಡೆಸುವ ಕಲ್ಪನೆಯನ್ನು ಈ ಹಿಂದೆಯೇ ಪ್ರಸ್ತಾಪಿಸಿದ್ದಾರೆ. ಆ ಬಳಿಕ ಉಭಯ ರಾಷ್ಟ್ರಗಳ ನಡುವೆ ಮುಸುಕಿನ ಗುದ್ದಾಟ ಜೋರಾಗಿದೆ.
ಶಾ ಅಕ್ಟೋಬರ್‌ನಲ್ಲಿ ಈ ಘೋಷಣೆ ಮಾಡಿದ್ದು, ಇದನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಖಂಡಿಸಿದ್ದಾರೆ. ಈ ಘೋಷಣೆಯ ಬಳಿಕ, ಏಷ್ಯಾಕಪ್ ನಂತರ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಅನ್ನು ಬಹಿಷ್ಕರಿಸುವುದಾಗಿ ಪಿಸಿಬಿ ಬೆದರಿಕೆ ಹಾಕಿತ್ತು.
ಅದೇ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಪಿಸಿಬಿ ಮಾಜಿ ಅಧ್ಯಕ್ಷ ರಮೀಜ್ ರಾಜಾ, ಭದ್ರತಾ ಕಾಳಜಿಯ ಕಾರಣದಿಂದ ತಂಡಗಳು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿರುವ ಬಗ್ಗೆ ಮಾತನಾಡಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಬಿಸಿಸಿಐ ಹೊಂದಿರುವ ಅಧಿಕಾರದ ಆಧಾರದ ಮೇಲೆ ಭಾರತದ ಸೂಚನೆಗಳಿಗೆ ತಲೆಬಾಗಬಾರದು ಎಂದು ಅವರು ವಿವಿಧ ರಾಷ್ಟ್ರಗಳ ಕ್ರಿಕೆಟ್ ಮಂಡಳಿಯ ಸದಸ್ಯರನ್ನು ಒತ್ತಾಯಿಸಿದ್ದಾರೆ.
“ಪಾಕಿಸ್ತಾನಕ್ಕೆ ಬರಲು ಆರಂಭದಲ್ಲಿ ಇಂಗ್ಲೆಂಡ್ ನಿರಾಕರಿಸಿತು. ನಾವು ಅವರೊಂದಿಗೆ ಮಾತನಾಡಿದ ಬಳಿಕ ಅವರು ಇಲ್ಲಿ 7 ಟಿ20ಗಳನ್ನು ಆಡಿದರು. 5ರ ಬದಲು ಎರಡು ಹೆಚ್ಚುವರಿ ಪಂದ್ಯಗಳಲ್ಲಿ ಆಡಿದರು. ಇಸಿಬಿ ಸಿಬ್ಬಂದಿ ಲಾಹೋರ್‌ನ ಗಡಾಫಿ ಸ್ಟೇಡಿಯಂಗೆ ಭೇಟಿ ನೀಡಿ ನನ್ನ ಕಚೇರಿಗೆ ಬಂದು ಕ್ಷಮೆಯಾಚಿಸಿದರು. ಅಂತೆಯೇ ಆಸ್ಟ್ರೇಲಿಯಾ ಕೂಡಾ ಪಾಕಿಸ್ತಾನಕ್ಕೆ ಭೇಟಿ ನೀಡಿದೆ. ಈಗ ನ್ಯೂಜಿಲ್ಯಾಂಡ್ ಕೂಡಾ ಬಂದಿದೆ” ಎಂದು ರಾಜಾ ಹೇಳಿದರು.
“ಕ್ರಿಕೆಟ್‌ನಲ್ಲಿ ಭಾರತ ಜಾಗತಿಕ ಶಕ್ತಿಯಾಗಿದೆ ಎಂಬ ಕಾರಣಕ್ಕೆ ನಾವು ಭಾರತದ ಸೇವಕರೇ? ಅವರು ಹೇಳುವುದನ್ನೆಲ್ಲಾ ನಾವು ಕೇಳಬೇಕೇ?” ಎಂದು ರಾಜಾ ಪ್ರಶ್ನಿಸಿದ್ದಾರೆ. ದುನ್ಯಾ ನ್ಯೂಸ್‌ನಲ್ಲಿ ಮಾತನಾಡುವಾಗ ರಮೀಜ್ ಈ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಮುಂದುವರಿದು ಮಾತನಾಡಿದ ಅವರು, ಪಾಕಿಸ್ತಾನವು ಈ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕು ಎಂಬುದನ್ನು ವಿವರಿಸಿದರು. ಅಲ್ಲದೆ ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ಬೆಳೆದು ಬಂದ ಬಗ್ಗೆ ಮಾತನಾಡಿದರು.
“ಪಾಕಿಸ್ತಾನ ಕ್ರಿಕೆಟ್ ತಂಡವು ಉತ್ತಮ ಆಟವನ್ನು ಆನಂದಿಸುತ್ತಿದೆ. ನಮ್ಮ ತಂಡಕ್ಕೆ ಭಾರಿ ಸಂಖ್ಯೆಯ ಅಭಿಮಾನಿಗಳಿದ್ದಾರೆ. ತಂಡದಲ್ಲಿ ಸೂಪರ್‌ಸ್ಟಾರ್‌ಗಳಿದ್ದಾರೆ. ಆದ್ದರಿಂದ ದಯವಿಟ್ಟು ತಂಡ ಮತ್ತು ಅಭಿಮಾನಿಗಳಿಗೆ ಅರ್ಹವಾದ ಗೌರವವನ್ನು ನೀಡಿ,” ಎಂದು ರಾಜಾ ಕೇಳಿಕೊಂಡಿದ್ದಾರೆ.
ಪಂದ್ಯಾವಳಿಯನ್ನು ಆಯೋಜಿಸುವ ಹಕ್ಕನ್ನು ಪಾಕಿಸ್ತಾನಕ್ಕೆ ನೀಡಿರುವುದರಿಂದ ಈ ವಿಷಯದ ಬಗ್ಗೆ ನಮ್ಮ ಗಮನಕ್ಕೆ ತಂದೇ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು. ಹೀಗಾಗಿ ನಮ್ಮ ಅಥವಾ ಎಸಿಸಿ ಸದಸ್ಯರೊಂದಿಗೆ ಸಮಾಲೋಚಿಸದೆ ಅದನ್ನು ಬೇರೆ ಸ್ಥಳಕ್ಕೆ ಹೇಗೆ ವರ್ಗಾಯಿಸಲು ಸಾಧ್ಯ? ಎಂದು ಅವರು ಪ್ರಶ್ನಿಸಿದ್ದಾರೆ.
ಈ ವಾರದ ಆರಂಭದಲ್ಲಿ ಪಿಸಿಬಿಯ ನೂತನ ಮುಖ್ಯಸ್ಥರಾಗಿ ಆಯ್ಕೆಯಾದ ನಜಮ್ ಸೇಥಿ ಅವರು, ಮುಂದಿನ ಏಕದಿನ ವಿಶ್ವಕಪ್‌ಗಾಗಿ ಭಾರತಕ್ಕೆ ಪ್ರಯಾಣಿಸಲು ದೇಶದ ನಿಲುವಿನ ಬಗ್ಗೆ ಮಾಹಿತಿ ನೀಡಿದರು. “ಭಾರತಕ್ಕೆ ಹೋಗಬೇಡಿ ಎಂದು ಸರ್ಕಾರ ಹೇಳಿದರೆ ನಾವು ಹೋಗುವುದಿಲ್ಲ. ಈ ಕುರಿತು ಮುಂದೆ ನಿರ್ಧಾರಗಳನ್ನು ಸರ್ಕಾರದ ಮಟ್ಟದಲ್ಲಿ ತೆಗೆದುಕೊಳ್ಳಲಾಗುತ್ತದೆ,” ಎಂದು ಅವರು ಹೇಳಿದರು.