ವೃಷಭ ರಾಶಿ ದೀಪಾವಳಿ ಭವಿಷ್ಯ: ಪ್ರತಿಭೆಗೆ ತಕ್ಕ ಅವಕಾಶಗಳು ಹುಡುಕಿಕೊಂಡು ಬರುತ್ತವೆ; ಅನಿರೀಕ್ಷಿತ ಖರ್ಚುಗಳ ಬಗ್ಗೆ ಎಚ್ಚರ ವಹಿಸಿ
Oct 18, 2024 11:20 AM IST
ವೃಷಭ ರಾಶಿಯವರ ದೀಪಾವಳಿ ವರ್ಷ ಭವಿಷ್ಯ ಇಲ್ಲಿದೆ
- Deepavali Taurus Horoscope 2024: ದೀಪಾವಳಿಯನ್ನು ಹಲವರು ಹಣಕಾಸು ವರ್ಷದ ಆರಂಭ ಎಂದೇ ಪರಿಗಣಿಸುತ್ತಾರೆ. ಉದ್ಯೋಗ, ಹಣಕಾಸು, ವ್ಯಾಪಾರಗಳನ್ನೇ ದೃಷ್ಟಿಯಲ್ಲಿಟ್ಟುಕೊಂಡು ದೀಪಾವಳಿ ಪ್ರಯುಕ್ತ ವೈದಿಕ ಜ್ಯೋತಿಷ್ಯದ ರೀತಿಯಲ್ಲಿ ಲೆಕ್ಕ ಹಾಕಿ ವೃಷಭ ರಾಶಿಯ ದೀಪಾವಳಿ ವರ್ಷ ಭವಿಷ್ಯ ಇಲ್ಲಿದೆ. (ಬರಹ: ಎಚ್.ಸತೀಶ್)
Deepavali Taurus Horoscope 2024: ದೀಪಾವಳಿ ಅಮಾವಾಸ್ಯೆಯಂದು ಲಕ್ಷ್ಮೀಪೂಜೆ ಮಾಡುವ ಸಂಪ್ರದಾಯ ಕರ್ನಾಟಕದಲ್ಲಿದೆ. ಎಷ್ಟೋ ಅಂಗಡಿಗಳ ಮಾಲೀಕರು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು, ವ್ಯಾಪಾರಿಗಳು, ಉದ್ಯೋಗಿಗಳು ದೀಪಾವಳಿಯಿಂದ ದೀಪಾವಳಿಗೆ ಲಾಭ ನಷ್ಟಗಳ ಲೆಕ್ಕಾಚಾರ ಹಾಕುತ್ತಾರೆ. ವೃಷಭ ರಾಶಿಯವರಿಗೆ ದೀಪಾವಳಿ ವರ್ಷ ಭವಿಷ್ಯದ ಫಲಾಫಲಗಳು ಹೇಗಿದೆ ಎನ್ನುವ ವಿವರ ಇಲ್ಲಿದೆ.
ತಾಜಾ ಫೋಟೊಗಳು
ವೃಷಭ ರಾಶಿಯವರ ದೀಪಾವಳಿ ವರ್ಷದ ಭವಿಷ್ಯದಲ್ಲಿ ನಿಮ್ಮ ರೀತಿ ನೀತಿಗಳಿಗೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಪ್ರತಿಭೆಗೆ ತಕ್ಕಂತಹ ಅವಕಾಶಗಳು ತಾನಾಗಿಯೇ ದೊರೆಯುತ್ತವೆ. ಅನಾವಶ್ಯಕವಾಗಿ ಕುಟುಂಬದ ಹಿರಿಯರನ್ನು ವಿರೋಧಿಸುವಿರಿ. ಆತ್ಮೀಯರಿಂದ ದುಬಾರಿ ಉಡುಗೊರೆ ದೊರೆಯುತ್ತದೆ. ಅಪೂರ್ಣಗೊಂಡ ಕೆಲಸವನ್ನು ಹೆಚ್ಚಿನ ಪ್ರಯತ್ನದಿಂದ ಸಂಪೂರ್ಣಗೊಳಿಸುವಿರಿ. ಅವಿರತ ಕೆಲಸದಿಂದ ದೈಹಿಕವಾಗಿ ಬಳಲುವಿರಿ. ಎದುರಾಗುವ ಅಪಾಯ ಅಥವಾ ಸಮಸ್ಯೆಯನ್ನು ಲೆಕ್ಕಿಸದೆ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸ್ವೀಕರಿಸುವಿರಿ. ಸ್ವಂತ ವ್ಯಾಪಾರ ವ್ಯವಹಾರಗಳಿದ್ದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಉದ್ಯೋಗದಲ್ಲಿ ಉಂಟಾಗುವ ಬದಲಾವಣೆಗಳಿಂದ ಉನ್ನತ ಅಧಿಕಾರವನ್ನು ಪಡೆಯುವಿರಿ.
ಹೊಸ ಯೋಜನೆಗಳನ್ನು ಆರಂಭಿಸಿ ಅದರಲ್ಲಿ ಯಶಸ್ಸನ್ನು ಗಳಿಸುವಿರಿ. ಅನಿರೀಕ್ಷಿತ ಖರ್ಚು ವೆಚ್ಚಗಳು ಎದುರಾಗಲಿವೆ. ಅವಶ್ಯಕತೆ ಇದ್ದಲ್ಲಿ ಉದ್ಯೋಗವನ್ನು ಬದಲಿಸಬಹುದು. ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯುತ್ತದೆ. ನಿಮ್ಮ ವಿರೋಧಿಗಳು ಸೋಲನ್ನು ಒಪ್ಪಬೇಕಾಗುತ್ತದೆ. ನೆರೆಹೊರೆಯವರ ಜೊತೆಯಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ. ಪರಿಸ್ಥಿತಿಗೆ ಹೊಂದಿಕೊಂಡು ತೆಗೆದುಕೊಂಡ ತೀರ್ಮಾನಗಳನ್ನು ಬದಲಾಯಿಸ ಬೇಕಾಗುತ್ತದೆ. ವಿದ್ಯಾರ್ಥಿಗಳು ಗಲಿಬಿಲಿಗೆ ಒಳಗಾದಲ್ಲಿ ಕಲಿಕೆಯಲ್ಲಿ ಹಿಂದುಳಿಯುತ್ತಾರೆ. ಆದ್ದರಿಂದ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಕುಟುಂಬದಲ್ಲಿ ನಿಮ್ಮ ಒಳ್ಳೆಯತನದಿಂದ ಶಾಂತಿಯುತ ವಾತಾವರಣ ನೆಲೆಸಿರುತ್ತದೆ.
ಬಹುದಿನಿಂದ ಕಾಡುತ್ತಿರುವ ಆರೋಗ್ಯದ ತೊಂದರೆಯನ್ನು ಹೊಂದಿರುವವರು ಎಚ್ಚರಿಕೆಯಿಂದ ಇರಬೇಕು. ಬ್ಯಾಂಕ್ ಅಥವಾ ಹಣಕಾಸಿನ ಸಂಸ್ಥೆಗಳಿಂದ ಹಣದ ಸಹಾಯವನ್ನು ಪಡೆಯುವಿರಿ. ಹಣಕಾಸಿನ ವಿಚಾರದಲ್ಲಿ ಆತುರದ ನಿರ್ಧಾರವನ್ನು ತೆಗೆದುಕೊಳ್ಳದಿರಿ. ಹಣಕಾಸಿನ ಹೂಡಿಕೆ ಇದ್ದಲ್ಲಿ ಉತ್ತಮ ಆದಾಯ ಗಳಿಸುವಿರಿ. ಸ್ಟಾಕ್ ಮತ್ತು ಷೇರಿನ ವಿಚಾರದಲ್ಲಿ ಅದೃಷ್ಟವು ನಿಮ್ಮ ಬೆನ್ನಿಗಿರುತ್ತದೆ. ಆಧುನಿಕ ತಂತ್ರಜ್ಞಾನ ಮತ್ತು ಲೋಹಕ್ಕೆ ಸಂಬಂಧಪಟ್ಟ ವ್ಯವಹಾರದಿಂದ ಲಾಭವಿದೆ. ಸ್ತ್ರೀಯರು ತಮ್ಮ ಆರೋಗ್ಯದ ಬಗ್ಗೆ ವಿಶೇಷವಾದ ಕಾಳಜಿ ವಹಿಸಬೇಕು. ನಿಮ್ಮ ಆತ್ಮೀಯರೊಬ್ಬರು ನಿಮ್ಮ ರೀತಿ ನೀತಿಗಳನ್ನು ವಿರೋಧಿಸುತ್ತಾರೆ.
ವೃಷಭ ರಾಶಿಯ ದಂಪತಿ ನಡುವೆ ಉತ್ತಮ ಹೊಂದಾಣಿಕೆ ಇರುತ್ತೆ
ದಂಪತಿ ನಡುವೆ ಉತ್ತಮ ಅನುರಾಗವಿರುತ್ತದೆ. ದೈಹಿಕ ವ್ಯಾಯಾಮದಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಕುಟುಂಬದ ಕೆಲಸಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರುವಿರಿ. ನಿಮ್ಮ ಸೇವಾ ಮನೋಭಾವ ಹೊಸ ಆಸೆಗಳಿಗೆ ಕಾರಣವಾಗುತ್ತದೆ. ಅತಿಯಾದ ಅಥವಾ ನಿಧಾನದ ಪ್ರವೃತ್ತಿ ಸಲ್ಲದು. ಮನಸ್ಸಿಗೆ ಬೇಸರ ಆದಾಗ ಗೊಣಗುವಿರಿ. ಇದರಿಂದ ಬೇರೆಯವರಲ್ಲಿ ಅಪನಂಬಿಕೆ ಉಂಟಾಗುತ್ತದೆ. ಆರಂಭಿಸುವ ಕೆಲಸ ಕಾರ್ಯಗಳಲ್ಲಿ ಆತುರ ಅಥವಾ ನಿಧಾನಕ್ಕೆ ಒಳ್ಳೆಯದಲ್ಲ. ಸಹಜತೆಯಿಂದ ವರ್ತಿಸುವುದು ಬಲುಮುಖ್ಯ.
ಬೇರೆಯವರ ಬಗ್ಗೆ ಇರುವ ಕಾಳಜಿ ನಿಮ್ಮ ಆರೋಗ್ಯದ ಬಗ್ಗೆ ಇರುವುದಿಲ್ಲ. ಅವಿವಾಹಿತರಿಗೆ ವಿವಾಹ ಯೋಗವಿದೆ. ಕುಟುಂಬದ ಸ್ತ್ರೀಯರ ನಡುವೆ ಉತ್ತಮ ಅನ್ಯೋನ್ಯತೆ ಕಂಡುಬರುವುದಿಲ್ಲ. ಕುಟುಂಬದಲ್ಲಿರುವ ವಯೋವೃದ್ಧರ ಆಚಾರ ವಿಚಾರಗಳು ನಿಮ್ಮನ್ನು ಅವಲಂಬಿಸುತ್ತದೆ. ವಯಸ್ಸಿನ ಅಂತರವಿಲ್ಲದೆ ದುಡಿಯುವ ಸಾಮರ್ಥ್ಯ ತೋರಿಸುವಿರಿ. ನಿಮ್ಮ ಮನದ ತೀರ್ಮಾನಗಳನ್ನು ಬದಲಾಯಿಸುವುದು ಸುಲಭವಲ್ಲ. ನಿಮ್ಮ ಬಾಳ ಸಂಗಾತಿಗೆ ದೇವರಲ್ಲಿ ವಿಶೇಷವಾದ ಭಕ್ತಿ ಉಂಟಾಗುತ್ತದೆ. ಆದರೆ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ಹಿಂಜರಿಯುವುದಿಲ್ಲ. ಸೋಲುವ ಸಂದರ್ಭದಲ್ಲಿ ಸಹನೆ ಕಳೆದುಕೊಳ್ಳುವಿರಿ. ಅನಿವಾರ್ಯವಾಗಿ ಕೆಲ ದಿನಗಳ ಕಾಲ ಕುಟುಂಬದಿಂದ ದೂರ ಉಳಿಯಬೇಕಾಗುತ್ತದೆ.
ಕುಟುಂಬದ ಒಗ್ಗಟ್ಟಿನಲ್ಲಿ ಅಪಸ್ವರ ಉಂಟಾಗಬಹುದು. ಸಣ್ಣಪುಟ್ಟ ವಿಚಾರಗಳನ್ನು ಸಹ ಹೆಚ್ಚಿನ ಆಸಕ್ತಿಯಿಂದಲೇ ಮಾಡಬೇಕಾಗುತ್ತದೆ. ನೀರಿರುವ ಸ್ಥಳಗಳಿಗೆ ಪ್ರವಾಸಕ್ಕೆ ಹೋಗುತ್ತೀರಿ. ಧಾರ್ಮಿಕ ಕೆಲಸ ಕಾರ್ಯಗಳಿಗೆ ಸಹಾಯ ಮಾಡುವಿರಿ. ಸೋದರಿಯ ಕುಟುಂಬದಲ್ಲಿನ ವಿವಾದವು ದೂರವಾಗುತ್ತದೆ. ಹಿರಿಯರು ಮತ್ತು ಮಕ್ಕಳು ವಿಶ್ರಾಂತಿಯನ್ನು ಪಡೆಯುವುದು ಒಳ್ಳೆಯದು. ಕ್ರಮೇಣವಾಗಿ ಕುಟುಂಬದಲ್ಲಿ ನೆಮ್ಮದಿ ನೆಲೆಸುತ್ತದೆ. ಹಣದ ಕೊರತೆಯಾದಾಗ ಏಕಾಂಗಿಯಾಗುವಿರಿ. ಮನೆಯನ್ನು ಅಲಂಕರಿಸುವ ಗುರಿಯಿಂದ ಕೂಡಿಟ್ಟ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಸ್ವಂತ ಹುಟ್ಟೂರಿನಲ್ಲಿ ಜಮೀನನ್ನು ಕೊಳ್ಳುವ ಸೂಚನೆಗಳಿವೆ. ಆಸ್ಪತ್ರೆ ಅಥವಾ ಅನಾಥಾಶ್ರಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವಿರಿ.
ದೀಪಾವಳಿ 2024: ನಿಮಗೆ ತಿಳಿದಿರಬೇಕಾದ ವಿವರಗಳಿವು
ಕ್ರೋಧಿನಾಮ ಸಂವತ್ಸರದ ದೀಪಾವಳಿ ಅಮಾವಾಸ್ಯೆಯ ಲಕ್ಷ್ಮೀಪೂಜೆ ಮುಹೂರ್ತವು ನವೆಂಬರ್ 1 ರಂದು ಬಂದಿದೆ. ಇದೇ ಅಕ್ಟೋಬರ್ 31 ರ ನರಕ ಚತುರ್ದಶಿಯಿಂದ ದೀಪಾವಳಿ ಆಚರಣೆ ಮನೆಗಳಲ್ಲಿ ಆರಂಭವಾಗುತ್ತವೆ. ಮುಂದಿನ ವರ್ಷದ ದೀಪಾವಳಿ ಅಮಾವಾಸ್ಯೆಯವರೆಗೆ ಅಂದರೆ ವಿಶ್ವಾವಸುನಾಮ ಸಂವತ್ಸರದ ದೀಪಾವಳಿ ಅಮಾವಾಸ್ಯೆಯು 2025ರ ಅಕ್ಟೋಬರ್ 20 ಕ್ಕೆ ಬಂದಿದೆ. 2024 ರ ದೀಪಾವಳಿಯಿಂದ 2025 ರ ದೀಪಾವಳಿಯವರೆಗಿನ ಅವಧಿಯಲ್ಲಿ ಮೇಷ ರಾಶಿಯವರ ಸಾಂಸಾರಿಕ, ಔದ್ಯೋಗಿಕ, ವ್ಯಾವಹಾರಿಕ ಬದುಕಿನ ಮೇಲೆ ಗ್ರಹಗತಿಗಳ ಪ್ರಭಾವ ಹೇಗಿರಬಹುದು ಎನ್ನುವ ಇಣುಕು ನೋಟವನ್ನು ಈ ಬರಹದ ಮೂಲಕ ತಿಳಿದುಕೊಂಡಿರಿ. ದ್ವಾದಶ ರಾಶಿಗಳ ದೀಪಾವಳಿ ವರ್ಷ ಭವಿಷ್ಯ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಲಭ್ಯ.
ವೃಷಭ ರಾಶಿಯವರ ಗುಣಲಕ್ಷಣಗಳು
ವೃಷಭ ರಾಶಿಯಲ್ಲಿ ಜನಿಸಿದ ಮಹಿಳೆಯರಿಗೆ ಧೈರ್ಯ ಮತ್ತು ಆತ್ಮಶಕ್ತಿ ವಿಶೇಷವಾಗಿರುತ್ತದೆ. ದೈಹಿಕವಾಗಿಯೂ ಇವರು ಸಬಲರಾಗಿರುತ್ತಾರೆ. ಸಹನೆ ಮತ್ತು ಏಕಾಗ್ರತೆಗೆ ಇವರೇ ನಿಜವಾದ ಮಾದರಿ. ಪ್ರೀತಿ ಮತ್ತು ವಿಶ್ವಾಸದ ವಿಚಾರದಲ್ಲಿ ಇವರಿಗೆ ಬೇರಾರು ಸಮರಲ್ಲ. ಸಂಗಾತಿಯೊಂದಿಗೆ ಅರ್ಥಪೂರ್ಣ ಜೀವನ ನಡೆಸುತ್ತಾರೆ. ಸಣ್ಣಪುಟ್ಟ ವಿಚಾರಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಹಲವು ಬಾರಿ ಇವರನ್ನು ಗಮನಿಸಿದಾಗ ಇವರೆಂಥ ಭಾವನಾಜೀವಿಗಳು ಅನ್ನಿಸುತ್ತದೆ. ಇತರರು ಅರ್ಥ ಮಾಡಿಕೊಳ್ಳಲು ಕಷ್ಟಪಡುವ ಹಲವು ವಿಚಾರಗಳನ್ನು ಇವರು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾರೆ.
ವೃಷಭ ರಾಶಿಯಲ್ಲಿ ಜನಿಸಿದ ಪುರುಷರು ಸಾಮಾನ್ಯವಾಗಿ ಹಣಕಾಸಿನ ವಿಚಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಇವರ ಮನಸ್ಸು ಬದಲಾಯಿಸುವುದು ಸುಲಭದ ವಿಚಾರವಲ್ಲ. ಯಾವುದೇ ತೀರ್ಮಾನಗಳನ್ನು ತೆಗೆದುಕೊಂಡರೂ ಬೇರೆಯವರು ಒಪ್ಪಲೇಬೇಕೆಂಬ ಮನಸ್ಥಿತಿ ಇವರಿಗೆ ಇರುತ್ತದೆ. ಪ್ರಾಮಾಣಿಕತೆಯೇ ಇವರ ನಿಜವಾದ ಬಂಡವಾಳ. ಒಪ್ಪಿಕೊಂಡ ಜವಾಬ್ದಾರಿಗಳ ವಿಚಾರದಲ್ಲಿ ಶ್ರದ್ಧೆಯಿಂದ ಕೆಲಸ ಮಾಡುತ್ತಾರೆ. ಕೆಲಸ ದೊಡ್ಡದು-ಸಣ್ಣದು ಎಂದು ವ್ಯತ್ಯಾಸ ಮಾಡುವುದಿಲ್ಲ. ಹೆಂಡತಿಯ ಮೇಲೆ ವಿಶೇಷ ಪ್ರೀತಿ ಮತ್ತು ವಿಶ್ವಾಸ ಹೊಂದಿರುತ್ತಾರೆ. ಬೇರೊಬ್ಬರ ಅಧೀನದಲ್ಲಿ ಇರಲು ಇಷ್ಟಪಡದೆ ಸ್ವತಂತ್ರವಾಗಿ ಜೀವನ ಮಾಡುವುದು ಇವರ ಗುರಿ.
ವೃಷಭ ರಾಶಿಯವರಿಗೆ ಶುಭ ದಿನಾಂಕ, ವಾರ, ಬಣ್ಣ
ವೃಷಭ ರಾಶಿಗೆ ಅಧಿಪತಿ: ಶುಕ್ರ, ವೃಷಭ ರಾಶಿಯವರಿಗೆ ಶುಭ ದಿನಾಂಕಗಳು: 5, 6, 15, 18, 19, 20, 25, 29. ವೃಷಭ ರಾಶಿಯವರಿಗೆ ಶುಭ ದಿನಗಳು: ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರ. ವೃಷಭ ರಾಶಿಯವರಿಗೆ ಶುಭ ಸಂಖ್ಯೆಗಳು: 5, 6, 8. ವೃಷಭ ರಾಶಿಯವರಿಗೆ ಶುಭ ವರ್ಣ: ಪಿಂಕ್, ಹಸಿರು ಮತ್ತು ಬಿಳಿ. ವೃಷಭ ರಾಶಿಯವರಿಗೆ ಅಶುಭ ವರ್ಣ: ಕೆಂಪು ಮತ್ತು ಹಳದಿ. ವೃಷಭ ರಾಶಿಯವರಿಗೆ ಶುಭ ದಿಕ್ಕು: ದಕ್ಷಿಣ ಮತ್ತು ನೈರುತ್ಯ. ವೃಷಭ ರಾಶಿಯವರಿಗೆ ಶುಭ ತಿಂಗಳು: ಜನವರಿ 15 ರಿಂದ ಏಪ್ರಿಲ್15. ವೃಷಭ ರಾಶಿಯವರಿಗೆ ಶುಭ ಹರಳು: ಹಸಿರು ಪಚ್ಚೆ ಮತ್ತು ನೀಲಮಣಿ. ವೃಷಭ ರಾಶಿಯವರಿಗೆ ಶುಭ ರಾಶಿ: ಮಿಥುನ, ಕನ್ಯಾ ಮತ್ತು ಮಕರ. ವೃಷಭ ರಾಶಿಯವರಿಗೆ ಅಶುಭ ರಾಶಿ: ಕಟಕ, ಧನುಸ್ಸು ಮತ್ತು ಮೇಷ.
ವೃಷಭ ರಾಶಿಗೆ ಪರಿಹಾರಗಳು
1)ಇಂದ್ರಾಕ್ಷಿ ಸ್ತೋತ್ರ: ಪ್ರತಿದಿನ ಶ್ರೀ ಇಂದ್ರಾಕ್ಷಿ ಸ್ತೋತ್ರ ಪಠಿಸುವುದರಿಂದ ಅಥವಾ ಕೇಳಿಸಿಕೊಳ್ಳುವುದರಿಂದ ಆತ್ಮಶಕ್ತಿಯು ಹೆಚ್ಚುತ್ತದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ.
2) ದಾನಗಳಿಂದ ಶುಭ ಫಲ: ಬಿಳಿಬಣ್ಣದ ಬಟ್ಟೆ ಮತ್ತು ಗೋಧಿ ಅಥವಾ ರವೆಯನ್ನು ದಾನ ನೀಡುವುದರಿಂದ ಖರ್ಚುವೆಚ್ಚಗಳು ಕಡಿಮೆ ಆಗಲಿವೆ.
3)ದೇವಸ್ಥಾನ ಮತ್ತು ದೇವರ ಪೂಜೆ:ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಗೆ ಪಂಚಾಮೃತ ಅಭಿಷೇಕ ಮಾಡಿಸುವುದು ಕ್ಷೇಮಕರ. ಮನೆಯಲ್ಲಿಯೂ ಶ್ರೀ ಸತ್ಯನಾರಾಯಣ ಪೂಜೆ ಮಾಡಬಹುದು. ಹೂ ಬಿಡುವ ಗಿಡಗಳನ್ನು ಪೋಷಿಸಿದಲ್ಲಿ ಎಲ್ಲಾರೀತಿಯ ಸಮಸ್ಯೆಗಳು ದೂರವಾಗುತ್ತವೆ.
4)ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ನೀಲಿ ಮತ್ತು ಹಸಿರು ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.
ಗಮನಿಸಿ: ಇದು ಶಾಸ್ತ್ರ, ಸಂಪ್ರದಾಯ ಮತ್ತು ಪ್ರಚಲಿತದಲ್ಲಿರುವ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಮಾಹಿತಿ ಪ್ರಕಟಿಸಲಾಗಿದೆ. ಇದನ್ನು ನಂಬಿ, ಅನುಸರಿಸುವ ಮೊದಲು ನಿಮ್ಮ ಕುಲಗುರುಗಳು ಅಥವಾ ಪ್ರಾಜ್ಞರೊಂದಿಗೆ ಪರಾಮರ್ಶೆ ಮಾಡಿಕೊಳ್ಳಬೇಕು.
(ಈ ಬರಹವು ಮೊದಲ ಬಾರಿಗೆ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಪ್ರಕಟವಾಗಿದೆ. ದೀಪಾವಳಿ ಹಬ್ಬದ ಸಮಗ್ರಹ ಮಾಹಿತಿ, ಜ್ಯೋತಿಷ್ಯ, ಅಧ್ಯಾತ್ಮ ಕುರಿತ ಮತ್ತಷ್ಟು ವಿಚಾರಗಳನ್ನು ತಿಳಿಯಲು kannada.hindustantimes.com ವೆಬ್‌ಸೈಟ್‌ಗೆ ಭೇಟಿ ನೀಡಿ)