ಆರೋಗ್ಯ ಭವಿಷ್ಯ 2025: ಮಕರ ರಾಶಿಯವರಿಗೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆ, ಕುಂಭ ರಾಶಿಯವರು ಮೇ ನಂತರ ಅನಾರೋಗ್ಯ ಮುಕ್ತ
Dec 01, 2024 10:46 PM IST
ಮಕರ, ಕುಂಭ, ಮೀನ ರಾಶಿಯವರ ಆರೋಗ್ಯ ಭವಿಷ್ಯ 2025
Health Horoscope 2025: ಜ್ಯೋತಿಷ್ಯದಲ್ಲಿ ನೀರು, ಗಾಳಿ, ಬೆಂಕಿ, ಭೂಮಿಗೆ ಸಂಬಂಧಿಸಿದ ಗ್ರಹಗಳು ಒಂದೊಂದು ರೀತಿಯ ಆರೋಗ್ಯ ಸಮಸ್ಯೆಯನ್ನು ಉಂಟು ಮಾಡುತ್ತದೆ. 2025ರಲ್ಲಿ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಮಕರ, ಕುಂಭ, ಮೀನ ರಾಶಿಯವರ ಆರೋಗ್ಯ ಭವಿಷ್ಯ ಇಲ್ಲಿದೆ.
ಆರೋಗ್ಯ ಭವಿಷ್ಯ 2025: ಆರೋಗ್ಯವೇ ಭಾಗ್ಯ ಎಂಬ ಮಾತನ್ನು ಆಗ್ಗಾಗ್ಗೆ ಕೇಳುತ್ತೇವೆ. ಅದು ದೈಹಿಕ, ಮಾನಸಿಕ ಆರೋಗ್ಯ ಯಾವುದೇ ಆಗಿರಲಿ ನಮ್ಮ ಆರೋಗ್ಯ ಚೆನ್ನಾಗಿದ್ದರೆ ಜೀವನದಲ್ಲಿ ಎಲ್ಲವೂ ಚೆನ್ನಾಗಿದ್ದಂತೆ. ಆರೋಗ್ಯ ಚೆನ್ನಾಗಿರಬೇಕೆಂದು ವ್ಯಾಯಾಮ, ಉತ್ತಮ ಆಹಾರಗಳನ್ನು ಸೇವಿಸಲು ಗಮನ ಕೊಡುತ್ತೇವೆ. ಆದರೆ ಕೆಲವೊಮ್ಮೆ ಎಷ್ಟೇ ಎಚ್ಚರವಾಗಿದ್ದರೂ ನಮ್ಮನ್ನು ಅನಾರೋಗ್ಯ ಕಾಡುತ್ತದೆ. ಇದಕ್ಕೆ ಗ್ರಹಗತಿಗಳೂ ಕಾರಣವಾಗಿರುತ್ತದೆ.
ತಾಜಾ ಫೋಟೊಗಳು
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಅಗ್ನಿ ಅಂಶಕ್ಕೆ ಸೇರಿದ ಗ್ರಹಗಳು ಶಾಖ, ಗಾಯ, ಜೀರ್ಣಕ್ರಿಯೆ ಮತ್ತು ರಕ್ತಕ್ಕೆ ಸಂಬಂಧಿಸಿದ ಇತ್ಯಾದಿಗಳಿಗೆ ಕಾರಣವಾದರೆ,
ವಾಯು ಅಂಶಕ್ಕೆ ಸೇರಿದ ಗ್ರಹಗಳು ಗಾಳಿಗೆ ಸಂಬಂಧಿಸಿದ ರೋಗಗಳಿಗೆ ಕಾರಣವಾಗುತ್ತದೆ. ಭೂಮಿಯ ಅಂಶಗಳಿಗೆ ಸಂಬಂಧಿಸಿದ ಗ್ರಹಗಳು ನೋವನ್ನುಂಟುಮಾಡುವ ಕಾಯಿಲೆಗಳು ಹಾಗೂ ಜಲಕ್ಕೆ ಸಂಬಂಧಿಸಿದ ಗ್ರಹಗಳಿಂದ ಕೆಮ್ಮು, ಶೀತ ಇತ್ಯಾದಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಹೊಸ ವರ್ಷ ಬರುತ್ತಿದೆ. ಮುಂದಿನ ವರ್ಷ ದ್ವಾದಶ ರಾಶಿಗಳ ಆರೋಗ್ಯ ಹೇಗಿರಲಿದೆ ನೋಡೋಣ.
ಮಕರ, ಕುಂಭ, ಮೀನ ರಾಶಿಯವರ ಆರೋಗ್ಯ ಭವಿಷ್ಯ 2025
ಮಕರ ರಾಶಿ
2025 ರಲ್ಲಿ ಆರೋಗ್ಯ ಚೆನ್ನಾಗಿರುತ್ತದೆ. ಮಾರ್ಚ್ ನಂತರ, ಶನಿಯ ಪ್ರಭಾವವು ನಿಮ್ಮ 2ನೇ ಮನೆಯಿಂದ ದೂರ ಹೋಗುತ್ತದೆ. ಈ ಸಮಯವು ಆರೋಗ್ಯಕ್ಕೆ ಅನುಕೂಲಕರವಾಗಿರುತ್ತದೆ. ಆದರೆ ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸಬೇಡಿ. ಆರೋಗ್ಯ ಚೆನ್ನಾಗಿರಬೇಕೆಂದರೆ ಆಹಾರ ಪದ್ಧತಿಯ ಬಗ್ಗೆ ವಿಶೇಷ ಕಾಳಜಿ ವಹಿಸಿ, ಸಮತೋಲಿತ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ. ಮೇ ನಂತರ 2ನೇ ಮನೆಯಲ್ಲಿ ರಾಹು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯತೆ ಇದೆ. ಗುರು ಸಂಕ್ರಮಣವು ಆರೋಗ್ಯಕ್ಕೆ ಅನುಕೂಲಕರವಾದ ಸೂಚನೆಯನ್ನು ನೀಡುತ್ತಿದೆ. ಸಣ್ಣಪುಟ್ಟ ಸಮಸ್ಯೆಗಳನ್ನು ಹೊರತುಪಡಿಸಿ ಯಾವುದೇ ಗಂಭೀರ ಸಮಸ್ಯೆಗಳು ನಿಮ್ಮನ್ನು ಕಾಡುವುದಿಲ್ಲ.
ಕುಂಭ ರಾಶಿ
ಜನವರಿಯಿಂದ ಮಾರ್ಚ್‌ವರೆಗೆ, ಲಗ್ನದ ಅಧಿಪತಿ ಶನಿಯು ತನ್ನದೇ ಆದ ರಾಶಿಚಕ್ರ ಚಿಹ್ನೆಯಲ್ಲಿ ಉಳಿಯಲಿದ್ದಾನೆ, ಇದರಿಂದಾಗಿ ಯಾವುದೇ ಆರೋಗ್ಯ ಸಂಬಂಧಿ ಸಮಸ್ಯೆಗಳು ಇರುವುದಿಲ್ಲ. ಮೇ ತಿಂಗಳ ನಂತರ ರಾಹು ಸಂಕ್ರಮಣದಿಂದ ಕೆಲವೊಂದು ಸಮಸ್ಯೆಗಳನ್ನು ನೀವು ಎದುರಿಸುವ ಸಾಧ್ಯತೆ ಇದೆ. ಈ ಅವಧಿಯಲ್ಲಿ, ನಿಮ್ಮ ಉದರ ಸಂಬಂಧಿ ಅಥವಾ ಕೆಲವೊಂದು ಮಾನಸಿಕ ಸಮಸ್ಯೆಗಳನ್ನು ಎದುರಿಸಬಹುದು. ಮೇ ಮಧ್ಯದಿಂದ ವರ್ಷದ ಉಳಿದ ಭಾಗದವರೆಗೆ, ಗುರುವು ನಿಮ್ಮ 5 ಮನೆಯಲ್ಲಿ ಸಾಗುತ್ತಾನೆ, ಇದು ನಿಮ್ಮ ಆರೋಗ್ಯವನ್ನು ರಕ್ಷಿಸುತ್ತದೆ. ಮೇ ತಿಂಗಳ ನಂತರ, ನೀವು ಆರೋಗ್ಯ ಸಮಸ್ಯೆಗಳಿಂದ ಮುಕ್ತರಾಗುತ್ತೀರಿ.
ಮೀನ ರಾಶಿ
ಈ ವರ್ಷ ಆರೋಗ್ಯದ ದೃಷ್ಟಿಯಿಂದ ಸ್ವಲ್ಪ ದುರ್ಬಲವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಲು ನಿಮಗೆ ಸಲಹೆ ನೀಡಲಾಗುತ್ತಿದೆ. ಜನವರಿಯಿಂದ ಮೇ ವರೆಗೆ, ರಾಹು ಕೇತುಗಳ ಸಂಕ್ರಮಣವು ನಿಮ್ಮ ಮೊದಲ ಮನೆಯ ಮೇಲೆ ಪರಿಣಾಮ ಬೀರುತ್ತದೆ ಅದು ನಿಮ್ಮ ಆರೋಗ್ಯಕ್ಕೆ ನಕಾರಾತ್ಮಕ ಚಿಹ್ನೆಗಳನ್ನು ನೀಡುತ್ತದೆ. ವಿಶೇಷವಾಗಿ ಮೀನ ರಾಶಿಯವರಿಗೆ ಈಗಾಗಲೇ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಮಾರ್ಚ್ ನಂತರ, ಶನಿಯು ನಿಮ್ಮ ಮೊದಲ ಮನೆಗೆ ಸಾಗುತ್ತಾನೆ, ಹಾಗೂ ವರ್ಷವಿಡೀ ಅಲ್ಲಿಯೇ ಇರುತ್ತಾನೆ ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಆಹಾರ ಪದ್ಧತಿಯ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು. ಫಿಟ್ನೆಸ್‌ನತ್ತ ಗಮನ ಹರಿಸಬೇಕು. ತೋಳು ಮತ್ತು ಸೊಂಟಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಯೋಗ, ಧ್ಯಾನ ಮಾಡಿದರೆ ಆರೋಗ್ಯ ಸುಧಾರಿಸುತ್ತದೆ.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.