ಮಹಾಭಾರತ ಕಥೆಗಳು: ತಾನು ಬ್ರಹ್ಮಚಾರಿಯಾಗಿ ಉಳಿದು ತಂದೆ ಶಂತನು ಮೆಚ್ಚಿದ ಸತ್ಯವತಿಯನ್ನು ಮದುವೆ ಮಾಡಿಸಿದ ಭೀಷ್ಮ
Sep 05, 2024 03:17 PM IST
ಮಹಾಭಾರತ ಕಥೆಗಳು: ತಾನು ಬ್ರಹ್ಮಚಾರಿಯಾಗಿ ಉಳಿದು ತಂದೆ ಶಂತನು ಮೆಚ್ಚಿದ ಸತ್ಯವತಿಯನ್ನು ಮದುವೆ ಮಾಡಿಸಿದ ಭೀಷ್ಮ
ತಾನು ಬ್ರಹ್ಮಚಾರಿಯಾಗಿ ಉಳಿಯುವ ದೇವವ್ರತ ತಂದೆಗಾಗಿ ತ್ಯಾಗ ಮಾಡುತ್ತಾನೆ. ನಾನು ಮದುವೆಯೇ ಆಗುವುದಿಲ್ಲ. ನಿನ್ನ ಮೊಮ್ಮಕ್ಕಳೇ ಹಸ್ತಿನಾಪುರದ ಮುಂದಿನ ರಾಜ ಎಂದು ದಶರಾಜನಿಗೆ ಭಾಷೆ ನೀಡಿ ತಂದೆ ಶಂತನು ಮೆಚ್ಚಿದ ಸತ್ಯವತಿಯನ್ನು ಆತನಿಗೆ ಮದುವೆ ಮಾಡಿಸುತ್ತಾನೆ. ಇದನ್ನೇ ಭೀಷ್ಮ ಪ್ರತಿಜ್ಞೆ ಎಂದು ಕರೆಯಲಾಗುತ್ತದೆ. (ಬರಹ: ಎಚ್. ಸತೀಶ್, ಜ್ಯೋತಿಷಿ)
ಭೀಷ್ಮನ ತಂದೆ ಶಂತನುಗೆ ದಶರಾಜನ ಪುತ್ರಿ ಸತ್ಯವತಿಯ ಮೇಲೆ ಮನಸ್ಸಾಗುತ್ತದೆ. ಆಕೆಯನ್ನು ಮದುವೆ ಮಾಡಿಕೊಡುವಂತೆ ತಂದೆ ಬಳಿ ಕೇಳಿದಾಗ ಆತ ಒಂದು ಷರತ್ತು ವಿಧಿಸುತ್ತಾನೆ. ನನಗೆ ನನ್ನ ಮಗಳ ಭವಿಷ್ಯದ ಬಗ್ಗೆ ಯೋಚನೆ ಆಗುತ್ತಿದೆ. ಆಕೆಗೆ ಮಕ್ಕಳಾದ ನಂತರ ನೀನು ನನ್ನ ಮಗಳನ್ನೂ, ಮಕ್ಕಳನ್ನೂ ನಿರ್ಲಕ್ಷ್ಯ ಮಾಡಿದರೆ ಕಷ್ಟ, ಆದ್ದರಿಂದ ಅವಳಿಗೆ ಜನಿಸಿದ ಗಂಡು ಮಗುವನ್ನು ಹಸ್ತಿನಾಪುರದ ರಾಜನಾಗಿ ಪಟ್ಟಾಭಿಷೇಕ ಮಾಡುವಂತೆ ಹೇಳುತ್ತಾನೆ. ಅದರೆ ಈ ಮಾತು ಕೇಳಿ ಶಂತನು ಬೇಸರ ವ್ಯಕಪಡಿಸುತ್ತಾನೆ.
ತಾಜಾ ಫೋಟೊಗಳು
ತಂದೆಯ ಬೇಸರಕ್ಕೆ ಕಾರಣ ತಿಳಿದುಕೊಂಡ ದೇವವ್ರತ
ಬೇಸರದಿಂದ ಶಂತನು ಅರಮನೆಗೆ ಮರಳುತ್ತಾನೆ. ಕೆಲಸ ಕಾರ್ಯಗಳಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾನೆ. ರಾಜ್ಯದ ಆಡಳಿತದಲ್ಲಿ ಸಹ ಶಂತನು ಯಾವ ಆಸಕ್ತಿ ತೋರುವುದಿಲ್ಲ. ದೇವವ್ರತನು ತಂದೆಯಲ್ಲಿ ಉಂಟಾದ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾನೆ. ತಂದೆಯನ್ನು ಕುರಿತು ಆತನ ಬೇಸರಕ್ಕೆ ಕಾರಣವೇನೆಂದು ಕೇಳುತ್ತಾನೆ. ಆದರೆ ಶಂತನು ಉತ್ತರಿಸಲಾಗದೆ ಹೋಗುತ್ತಾನೆ. ಮತ್ತೊಮ್ಮೆ ಪ್ರಶ್ನಿಸಿದಾಗ ಶಂತನು ಮುಂದಿನ ದಿನಗಳಲ್ಲಿ ನೀನು ಒಂಟಿಯಾಗುವೆ. ನನ್ನ ಮನದಲ್ಲಿ ಇರುವ ಚಿಂತೆ ಅದೊಂದೇ ಎಂದು ತಿಳಿಸುತ್ತಾನೆ. ಆದರೆ ದೇವವ್ರತನಿಗೆ ಈ ಉತ್ತರದಿಂದ ಸಮಾಧಾನವಾಗುವುದಿಲ್ಲ.
ತಂದೆಯ ಆತ್ಮೀಯ ಮಂತ್ರಿಯಾದ, ಸದಾಕಾಲ ತಂದೆಯೊಂದಿಗೆ ಇರುತ್ತಿದ್ದ ಮಂತ್ರಿಯನ್ನು ಇದರ ಬಗ್ಗೆ ಕೇಳಿದಾಗ ನಿಜಾಂಶ ತಿಳಿಯುತ್ತದೆ. ತಕ್ಷಣವೇ ಧೃಡ ನಿರ್ಧಾರಕ್ಕೆ ಬರುವ ದೇವವ್ರತ, ಯಮುನಾ ನದಿಯ ತೀರಕ್ಕೆ ತೆರಳುತ್ತಾನೆ. ಅಲ್ಲಿಯೇ ಇದ್ದ ದಶರಾಜನ ಮನೆಯನ್ನು ಹುಡುಕಿ ಅವನೊಂದಿಗೆ ಮಾತನಾಡುತ್ತಾನೆ. ದೇವವ್ರತನ ಆಗಮನದಿಂದ ದಶರಾಜ ಭಯಗೊಳ್ಳುತ್ತಾನೆ. ಮನದಲ್ಲಿ ಗಾಬರಿ ಇದ್ದರೂ ಅದನ್ನು ತೋರ್ಪಡಿಸದೆ ಗೌರವ ಮತ್ತು ಸಡಗರದಿಂದ ಅವನನ್ನು ಬರ ಮಾಡಿಕೊಳ್ಳುತ್ತಾನೆ. ದೇವವ್ರತನ ಮೊಗದಲ್ಲಿ ಇದ್ದ ವಿಶೇಷ ತೇಜಸ್ಸು ದಶರಾಜನು ಮಾತುಗಳನ್ನೇ ಮರೆಯುವಂತೆ ಮಾಡುತ್ತದೆ.
ದೇವವ್ರತನ ಬಳಿ ತಂದೆಗಾಗಿ ಹೆಣ್ಣು ಕೇಳಲು ಬಂದ ಭೀಷ್ಮ
ದೇವವ್ರತನು ದಶರಾಜನನ್ನು ಕುರಿತು ತನ್ನ ತಂದೆಯು ನಿನ್ನ ಮಗಳ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ. ಆದ್ದರಿಂದ ಅವರಿಬ್ಬರ ವಿವಾಹದ ಬಗ್ಗೆ ಮಾತನಾಡಲು ನಾನು ಬಂದಿದ್ದೇನೆ ಎಂದು ಹೇಳುತ್ತಾನೆ. ದೇವವ್ರತನ ಮಾತನ್ನು ಕೇಳಿದ ದಶರಾಜನಿಗೆ ಆಶ್ಚರ್ಯವಾಗುತ್ತದೆ. ಆತನ ದೃಢವಾದ ಮಾತು ಗಾಬರಿಯನ್ನು ಉಂಟುಮಾಡುತ್ತದೆ. ಯುವರಾಜ ನಿನ್ನ ಊಹೆ ನಿಜವಾಗಿದೆ. ಆದರೆ ನನ್ನ ಮನದಲ್ಲಿ ಹತ್ತು ಹಲವು ಯೋಚನೆಗಳು ಹರಿದಾಡುತ್ತಿವೆ. ಅದಕ್ಕೆ ಪರಿಹಾರ ದೊರೆಯದೆ ಈ ವಿವಾಹ ನಡೆಯುವುದು ಕನಸಿನ ಮಾತು. ನಿನ್ನ ತಂದೆಯ ಮನಸ್ಸು ಒಳ್ಳೆಯದಿರಬಹುದು, ನಿನ್ನ ಮನಸ್ಸು ಒಳ್ಳೆಯದಿರಬಹುದು. ಆದರೆ ನಿಮ್ಮ ಕುಲದವರೆಲ್ಲರೂ ನಿಮ್ಮಂತೆ ನಡೆದುಕೊಳ್ಳುವರು ಎಂಬ ನಂಬಿಕೆ ನನಗಿಲ್ಲ.
ಭವಿಷ್ಯದಲ್ಲಿ ಎದುರಾಗಬಹುದಾದ ತೊಂದರೆಯನ್ನು ಊಹಿಸಿದರೆ ನನ್ನಲ್ಲಿರುವ ಧೈರ್ಯ ನಶಿಸಿ ಹೋಗುತ್ತದೆ. ಪ್ರೀತಿ ವಾತ್ಸಲ್ಯದಿಂದ ಬೆಳೆಸಿದ ನನ್ನ ಮಗಳನ್ನು ನಾನೇ ಕಷ್ಟದ ಪರಿಸ್ಥಿತಿಗೆ ದೂಡಲಾರೆ. ಆದ್ದರಿಂದ ನನ್ನ ಮನಸ್ಸಿಗೆ ಮೊದಲು ಸಮಾಧಾನದ ಮಾತುಗಳು ದೊರೆಯಬೇಕು. ಆ ಮಾತುಗಳು ಕಾರ್ಯಗತಗೊಳ್ಳುವದೆಂಬ ನಂಬಿಕೆ ಮೂಡಬೇಕು. ಆಗ ಮಾತ್ರ ನಾನು ಈ ವಿವಾಹಕ್ಕೆ ಸಮ್ಮತಿ ಸೂಚಿಸಬಹುದು. ನನ್ನ ಸಮಸ್ಯೆಗೆ ಪರಿಹಾರ ಸೂಚಿಸುವವರು ಯಾರು? ಎಂದು ಪ್ರಶ್ನಿಸುತ್ತಾನೆ.
ಇದೇ ಭೀಷ್ಮ ಪ್ರತಿಜ್ಞೆ
ನೀವು ಯುವರಾಜರಾಗಿರಬಹುದು. ಆದರೆ ಮುಂದಿನ ದಿನಗಳಲ್ಲಿ ನನ್ನ ಮಗಳ ಉದರದಲ್ಲಿ ಜನಿಸಿದ ಮಕ್ಕಳೇ ಹಸ್ತಿನಾಪುರದ ರಾಜರಾಗಬೇಕು ವಿಚಾರವನ್ನು ನಿಮ್ಮ ತಂದೆಯವರಿಗೂ ತಿಳಿಸಿದ್ದೇನೆ. ಆದರೆ ಇಲ್ಲಿಯವರೆಗೂ ನನ್ನ ಮನಸ್ಸಿಗೆ ಸಮಾಧಾನವಾಗುವಂತಹ ಮಾತುಗಳು ಬಂದಿಲ್ಲ. ಆದ್ದರಿಂದ ಈ ವಿವಾಹದ ಬಗ್ಗೆ ಮಾತನಾಡದಿರುವುದು ಒಳ್ಳೆಯದು ಎಂದು ಹೇಳುತ್ತಾನೆ. ಆಗ ದೇವವ್ರತನು ಹಸ್ತಿನಾಪುರದ ಯುವರಾಜ ನಾನೇ ಅಂದರೆ ಮುಂದಿನ ದಿನಗಳಲ್ಲಿ ರಾಜನಾಗುವವನು ನಾನೇ ಆದ್ದರಿಂದ ನಾನೇ ಹೇಳುತ್ತೇನೆ. ನನಗೆ ಅಧಿಕಾರದ ಆಸೆ ಇಲ್ಲ. ರಾಜ್ಯವನ್ನು ಆಳಬೇಕೆಂಬ ಆಸೆಯೂ ಇಲ್ಲ. ಯಾರ ಬಲವಂತದ ನಡುವೆಯೂ ಎಂದಿಗೂ ನಾನು ಹಸ್ತಿನಾಪುರದ ರಾಜನಾಗುವುದಿಲ್ಲ. ನಾನೇ ಮುಂದೆ ನಿಂತು ನಿನ್ನ ಮಗಳ ಮಕ್ಕಳಿಗೆ ರಾಜನಾಗಿ ಪಟ್ಟಾಭಿಷೇಕ ಮಾಡುತ್ತೇನೆ. ನನ್ನ ಮಾತುಗಳಲ್ಲಿ ನಂಬಿಕೆ ಇಡು. ನಾನು ಒಮ್ಮೆ ಕೊಟ್ಟ ಮಾತನ್ನು ಜೀವ ಹೋದರೂ ಮರೆಯುವುದಿಲ್ಲ. ನನಗೆ ನನ್ನ ತಂದೆಯ ಸುಖ ಸಂತೋಷವೇ ಮುಖ್ಯ ಎಂದು ಹೇಳುತ್ತಾನೆ.
ಆಗಲೂ ಸಮಾಧಾನಗೊಳ್ಳದ ದಶರಾಜನು ತಂದೆ ಮಕ್ಕಳು ಒಳ್ಳೆಯವರೇ. ನಿನ್ನ ಮಕ್ಕಳು ನಿನ್ನ ಮಾತನ್ನು ಪಾಲಿಸುವರು ಎಂಬ ನಂಬಿಕೆ ನನ್ನಲ್ಲಿಲ್ಲ ಎಂದು ಹೇಳುತ್ತಾನೆ. ಆ ಕ್ಷಣವೇ ದೇವವ್ರತನು ಎಲೆ ದಶರಾಜನೆ ನನ್ನ ಮಾತನ್ನು ಕೇಳು. ನಿನ್ನ ಮನಸ್ಸಿನಲ್ಲಿ ಇಂತಹ ಅನುಮಾನವಿದ್ದರೆ ದೇವಾನು ದೇವತೆಗಳ ಸಾಕ್ಷಿಯಾಗಿ, ನನಗೆ ಜನ್ಮ ನೀಡಿದ ತಾಯಿಯ ಸಾಕ್ಷಿಯಾಗಿ, ನಾನು ಆಜನ್ಮ ಬ್ರಹ್ಮಚಾರಿಯಾಗಿ ಬದುಕನ್ನು ಸಾಗಿಸುತ್ತೇನೆ. ನಿನ್ನ ಮಗಳಿಗೆ ಜನಿಸಿದ ಮಕ್ಕಳೇ ಮುಂದಿನ ರಾಜರಾಗಲಿ. ಈ ಪ್ರಪಂಚದಲ್ಲಿ ಇರುವ ಸಕಲ ನಾರಿಯರು ನನಗೆ ನನ್ನ ತಾಯಿಯ ಸಮಾನರಾಗುತ್ತಾರೆ ಎಂದು ಘೋರ ಪ್ರತಿಜ್ಞೆ ಕೈಗೊಳ್ಳುತ್ತಾನೆ. ಆ ಕ್ಷಣವೇ ದೇವಾನು ದೇವತೆಗಳಿಂದ ಪುಷ್ಪವೃಷ್ಠಿಯಾಗುತ್ತದೆ. ದೇವವ್ರತನನ್ನು ಗೌರವಿಸುತ್ತಾ ಭೀಷ್ಮ ಎಂದು ಸಂಭೋಧಿಸುತ್ತಾರೆ. ಇದನ್ನೇ ಭೀಷ್ಮ ಪ್ರತಿಜ್ಞೆ ಎಂದು ಕರೆಯುತ್ತೇವೆ. ನಂತರ ದೇವವ್ರತ, ದಶರಾಜನ ಮಗಳೊಂದಿಗೆ ಅರಮನೆಗೆ ತೆರಳುತ್ತಾನೆ. ಭೀಷ್ಮನ ಪ್ರತಿಜ್ಞೆಯನ್ನು ಕೇಳಿದ ಶಂತನು, ಮಗನನ್ನು ಕುರಿತು ನಿನ್ನ ಇಚ್ಛೆಯಂತೆ ನಿನ್ನ ಮರಣವಾಗಲಿ, ನೀನು ಇಚ್ಚಾ ಮರಣಿಯಾಗು ಎಂದು ವರ ನೀಡುತ್ತಾನೆ. ಆನಂತರ ಸ್ವತಃ ಭೀಷ್ಮನೇ ನಿಂತು ಶಂತನುವಿನ ವಿವಾಹ ನಡೆಸಿಕೊಡುತ್ತಾನೆ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).