ವಿಜ್ಞಾನಿಗಳಿಗೂ ಈ ದೇವಸ್ಥಾನದ ಜ್ವಾಲೆ ರಹಸ್ಯ ಭೇದಿಸಲು ಸಾಧ್ಯವಾಗಿಲ್ಲ; ಹಿಮಾಚಲ ಪ್ರದೇಶ ಜ್ವಾಲಾದೇವಿ ದೇವಾಲಯ ದರ್ಶನ
May 21, 2024 08:29 AM IST
ಹಿಮಾಚಲ ಪ್ರದೇಶ ಜ್ವಾಲಾದೇವಿ ದೇವಾಲಯ
Indian Temple: ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯಿಂದ 30 ಕಿ.ಮೀ ದೂರದಲ್ಲಿರುವ ಕಾಳಿಧರ್ ಬೆಟ್ಟದ ನಡುವೆ ನೆಲೆಗೊಂಡಿರುವ ಜ್ವಾಲಾಮುಖಿ ದೇವಸ್ಥಾನ ನಿಗೂಢತೆಗೆ ಹೆಸರಾಗಿದೆ. ಇಲ್ಲಿ ನೈಸರ್ಗಿಕವಾಗಿ 9 ಜ್ವಾಲೆಗಳು ಉರಿಯುತ್ತಿದ್ದು ವಿಜ್ಞಾನಿಗಳಿಗೂ ಇದುವರೆಗೂ ಈ ದೇವಸ್ಥಾನದ ಜ್ವಾಲೆ ರಹಸ್ಯ ಭೇದಿಸಲು ಸಾಧ್ಯವಾಗಿಲ್ಲ.
ಭಾರತದಲ್ಲಿ ಅನೇಕ ದೇವಾಲಯಗಳು ತನ್ನದೇ ವೈಶಿಷ್ಟ್ಯಕ್ಕೆ ಹೆಸರಾಗಿದೆ. ಜೊತೆಗೆ ನಿಗೂಢತೆಗೆ ಕೂಡಾ ಪ್ರಸಿದ್ಧಿ ಪಡೆದಿವೆ. ಇಂದಿಗೂ ಯಾರಿಂದಲೂ ಈ ದೇವಸ್ಥಾನಗಳ ನಿಗೂಢತೆಯನ್ನು ಭೇದಿಸಲು ಸಾಧ್ಯವಾಗಿಲ್ಲ. ಅಂತಹ ದೇವಾಲಯಗಳಲ್ಲಿ ಹಿಮಾಚಲ ಪ್ರದೇಶದ ಜ್ವಾಲಾದೇವಿ ದೇವಸ್ಥಾನ ಕೂಡಾ ಒಂದು. ಈ ದೇವಸ್ಥಾನ ಎಲ್ಲಿದೆ? ಇದು ಯಾವುದಕ್ಕೆ ಹೆಸರು ಗಳಿಸಿದೆ? ಎಂಬುದರ ಬಗ್ಗೆ ಒಂದಿಷ್ಟು ವಿವರ.
ತಾಜಾ ಫೋಟೊಗಳು
51 ಶಕ್ತಿಪೀಠಗಳಲ್ಲಿ ಒಂದು
ಜ್ವಾಲಾದೇವಿ ದೇವಸ್ಥಾನವು ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯಿಂದ 30 ಕಿ.ಮೀ ದೂರದಲ್ಲಿರುವ ಕಾಳಿಧರ್ ಬೆಟ್ಟದಲ್ಲಿದೆ. 51 ಶಕ್ತಿಪೀಠಗಳಲ್ಲಿ ಒಂದಾದ ಈ ಶಕ್ತಿಪೀಠವನ್ನು ಜ್ವಾಲಾಮುಖಿ ದೇವಾಲಯ ಎಂದು ಕರೆಯುತ್ತಾರೆ. ಕೆಲವರು ಇದನ್ನು ಜಟಾ ವಾಲಿ ಮಾ ದೇವಸ್ಥಾನ ಎಂದೂ ಕರೆಯುತ್ತಾರೆ. ಈ ಸ್ಥಳದಲ್ಲಿ ಮಾತಾ ಸತಿಯ ದೇಹದಿಂದ ಆಕೆಯ ನಾಲಿಗೆ ಹೊರ ಬಿತ್ತು ಎಂದು ನಂಬಲಾಗಿದೆ. ಈ ಜ್ವಾಲೆಗಳು ಉರಿಯುತ್ತಿದ್ದ ಸ್ಥಳವನ್ನು ಕಂಡುಹಿಡಿದ ಕೀರ್ತಿ ಪಾಂಡವರಿಗೆ ಸಲ್ಲುತ್ತದೆ.
ಹಿಮಾಚಲದ ಈ ದೇವಾಲಯದಲ್ಲಿ ಶತಮಾನಗಳಿಂದ 9 ನೈಸರ್ಗಿಕ ಜ್ವಾಲೆಗಳು ಉರಿಯುತ್ತಿವೆ. ಇದುವರೆಗೂ ಆ ಜ್ವಾಲೆಯನ್ನು ಯಾರಿಂದಲೂ ಆರಿಸಲು ಸಾಧ್ಯವಾಗಿಲ್ಲ. ಈ ಜ್ವಾಲೆ ಹೇಗೆ ಉರಿಯುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ವಿಜ್ಞಾನಿಗಳು ಕೂಡಾ ಸಾಕಷ್ಟು ಪ್ರಯತ್ನ ಪಟ್ಟಿದ್ಧಾರೆ. ಕಳೆದ ಹಲವು ವರ್ಷಗಳಿಂದ ಸಂಶೋಧನೆಯಲ್ಲಿ ತೊಡಗಿದ್ದಾರೆ, ಆದರೆ 9 ಕಿಲೋ ಮೀಟರ್‌ನಷ್ಟು ಅಗೆದರೂ ಇಲ್ಲಿ ಜ್ವಾಲೆ ಯಾವ ರೀತಿ ಉರಿಯುತ್ತಿದೆ ಎಂದು ತಿಳಿಯಲು ಯಾರಿಂದಲೂ ಸಾಧ್ಯವಾಗಿಲ್ಲ.
ಇಲ್ಲಿ ಭೂಮಿಯ ಮೇಲೆ 9 ವಿವಿಧ ಸ್ಥಳಗಳಿಂದ ಜ್ವಾಲೆಯು ಹೊರ ಬರುತ್ತಿದೆ, ಅದರ ಮೇಲೆ ದೇವಾಲಯವನ್ನು ನಿರ್ಮಿಸಲಾಗಿದೆ. ಈ ಒಂಬತ್ತು ದೀಪಗಳನ್ನು ಅನ್ನಪೂರ್ಣ, ಚಂಡಿ, ಹಿಂಗ್ಲಾಜ್, ವಿಂಧ್ಯವಸ್ನಿ, ಮಹಾಲಕ್ಷ್ಮಿ, ಸರಸ್ವತಿ, ಅಂಬಿಕಾ, ಅಂಜಿದೇವಿ, ಮಹಾಕಾಳಿ ಎಂದು ಕರೆಯಲಾಗುತ್ತದೆ. ಈ ದೇವಾಲಯವನ್ನು ಮೊದಲು ರಾಜ ಭೂಮಿ ಚಂದ್ ನಿರ್ಮಿಸಿದನು. ನಂತರ ಮಹಾರಾಜ ರಂಜಿತ್ ಸಿಂಗ್ ಮತ್ತು ರಾಜಾ ಸಂಸರ್ಚಂದ್ 1835 ರಲ್ಲಿ ಈ ದೇವಾಲಯದ ನಿರ್ಮಾಣವನ್ನು ಪೂರ್ಣಗೊಳಿಸಿದರು.
ಜ್ವಾಲೆ ಆರಿಸಲು ಪ್ರಯತ್ನಿಸಿದ್ದ ಅಕ್ಬರ್
ಮೊಘಲ್ ಚಕ್ರವರ್ತಿ ಅಕ್ಬರ್ ಕೂಡಾ ಈ ದೇವಾಲಯದಲ್ಲಿ ನೈಸರ್ಗಿಕವಾಗಿ ಉರಿಯುತ್ತಿರುವ ಜ್ವಾಲೆಯ ರಹಸ್ಯವನ್ನು ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ. ಬಹಳಷ್ಟು ಸಾರಿ ಈ ನೈಸರ್ಗಿಕ ಜ್ವಾಲೆಯ ರಹಸ್ಯವನ್ನು ತಿಳಿಯಲು ವಿಫಲನಾದ ನಂತರ ಅಕ್ಬರ್ ಜ್ವಾಲೆಯನ್ನು ನಂದಿಸಲು ಪ್ರಯತ್ನಿಸಿರೂ ಅದೂ ಕೂಡಾ ಸಾಧ್ಯವಾಗಿಲ್ಲ.
ಜ್ವಾಲೆಯ ಮೇಲೆ ನಿರಂತರವಾಗಿ ನೀರು ಸುರಿದರೂ ಅದು ಆರದ ಕಾರಣ ಕೊನೆಗೆ ಅಕ್ಬರ್ ದೇವಿಯ ಮಹಿಮೆಗೆ ಸೋತು ಸ್ವತಃ ದೇವಿಗೆ ನಮಸ್ಕರಿಸಿ ಅಲ್ಲಿ ಚಿನ್ನದ ಛತ್ರಿಯನ್ನು ಇರಿಸಿದನು. ಆದರೆ ದೇವಿಯು ಆತನು ನೀಡಿದ ಉಡುಗೊರೆಯನ್ನು ಸ್ವೀಕರಿಸಿಲ್ಲ. ಬದಲಿಗೆ ಆ ಚಿನ್ನದ ಛತ್ರಿ ಈಗ ಬೇರೆ ಲೋಹವಾಗಿ ಬದಲಾಗಿದ್ದು ಅದೂ ಕೂಡಾ ಇಂದಿಗೂ ಇದೇ ಸ್ಥಳದಲ್ಲಿದೆ. ಬ್ರಿಟಿಷರು ಕೂಡಾ ಸಾಕಷ್ಟು ಬಾರಿ ಪ್ರಯತ್ನಿಸಿದರೂ ಅವರಿಗೂ ಸಾಧ್ಯವಾಗಲಿಲ್ಲ.
ಈ ದೇವಸ್ಥಾನದಲ್ಲಿ ಪೂಜಿಸಲು ಯಾವುದೇ ದೇವರ ವಿಗ್ರಹಗಳಿಲ್ಲ. ನೈಸರ್ಗಿಕ ಜ್ವಾಲೆಗಳನ್ನೇ ಇಲ್ಲಿ ದೇವಿಯ ರೂಪದಲ್ಲಿ ಪೂಜಿಸಲಾಗುತ್ತಿದೆ. ಅನಾದಿಕಾಲದಿಂದಲೂ ಈ ಜ್ವಾಲೆಗಳೇ ಜ್ವಾಲಾದೇವಿ ಎಂದು ಹೆಸರಾಗಿದೆ. ಪ್ರತಿ ವರ್ಷ ಇಲ್ಲಿ ನವರಾತ್ರಿ ಸಮಯದಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು ನಡೆಯುತ್ತದೆ. ಭಕ್ತರು ದೂರದ ಊರುಗಳಿಂದ ಜ್ವಾಲಾದೇವಿಯ ದರ್ಶನ ಪಡೆಯಲು ಬರುತ್ತಾರೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)