ಇಲ್ಲಿ ಕಾಗೆಗಳೇ ಇಲ್ಲ, ನಂದಿ ವಿಗ್ರಹ ಪ್ರತಿವರ್ಷ ಬೆಳೆಯುತ್ತಿದೆ; ಆಂಧ್ರಪ್ರದೇಶ ಯಾಗಂಟಿ ಉಮಾಮಹೇಶ್ವರ ದೇವಸ್ಥಾನ ದರ್ಶನ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಇಲ್ಲಿ ಕಾಗೆಗಳೇ ಇಲ್ಲ, ನಂದಿ ವಿಗ್ರಹ ಪ್ರತಿವರ್ಷ ಬೆಳೆಯುತ್ತಿದೆ; ಆಂಧ್ರಪ್ರದೇಶ ಯಾಗಂಟಿ ಉಮಾಮಹೇಶ್ವರ ದೇವಸ್ಥಾನ ದರ್ಶನ

ಇಲ್ಲಿ ಕಾಗೆಗಳೇ ಇಲ್ಲ, ನಂದಿ ವಿಗ್ರಹ ಪ್ರತಿವರ್ಷ ಬೆಳೆಯುತ್ತಿದೆ; ಆಂಧ್ರಪ್ರದೇಶ ಯಾಗಂಟಿ ಉಮಾಮಹೇಶ್ವರ ದೇವಸ್ಥಾನ ದರ್ಶನ

Indian Temple: ಅಗಸ್ತ್ಯ ಮುನಿ ನಿರ್ಮಿಸಿದ ಆಂಧ್ರಪ್ರದೇಶ ಯಾಗಂಟಿ ಉಮಾಮಹೇಶ್ವರ ದೇವಸ್ಥಾನ ಮಹಿಮೆಗಳಿಗೆ ಹೆಸರಾಗಿದೆ. ಅಗಸ್ತ್ಯನು ನೀಡಿದ ಶಾಪದ ಕಾರಣ ಈ ಕ್ಷೇತ್ರದಲ್ಲಿ ಒಂದೂ ಕಾಗೆಗಳು ಇಲ್ಲ. ಇಲ್ಲಿನ ನಂದಿ ವಿಗ್ರಹ ಪ್ರತಿ ವರ್ಷ ಬೆಳೆಯುತ್ತಿರುವುದು ಆಶ್ಚರ್ಯ ಎನಿಸಿದೆ.

ಆಂಧ್ರಪ್ರದೇಶ ಯಾಗಂಟಿ ಉಮಾಮಹೇಶ್ವರ ದೇವಸ್ಥಾನ ದರ್ಶನ
ಆಂಧ್ರಪ್ರದೇಶ ಯಾಗಂಟಿ ಉಮಾಮಹೇಶ್ವರ ದೇವಸ್ಥಾನ ದರ್ಶನ (PC: Right Singh @rightwingchora)

ನಮ್ಮ ದೇಶದಲ್ಲಿ ಬಹಳಷ್ಟು ದೇವತೆಗಳು ಪವಾಡಕ್ಕೆ, ವಾಸ್ತುಶಿಲ್ಪಕ್ಕೆ ಹೆಸರಾಗಿದೆ. ಸಾವಿರಾರು ಭಕ್ತರು ಪ್ರತಿದಿನ ಈ ದೇವಾಲಯಕ್ಕೆ ತೆರಳಿ ದೇವರ ದರ್ಶನ ಮಾಡಿ ಬರುತ್ತಾರೆ. ತಮ್ಮ ಕಷ್ಟಗಳನ್ನು ದೇವರ ಬಳಿ ಹೇಳಿಕೊಂಡು ಎಲ್ಲವನ್ನೂ ಪರಿಹರಿಸುವಂತೆ ಬೇಡಿಕೊಳ್ಳುತ್ತಾರೆ. ಅಂತಹ ಒಂದು ದೇವಾಲಯಗಳಲ್ಲಿ ಆಂಧ್ರಪ್ರದೇಶದ ಯಾಗಂಟಿ ದೇವಾಲಯ ಕೂಡಾ ಒಂದು.

ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯ ನಂದ್ಯಾಲದ ಬಳಿ ಇರುವ ಯಾಗಂಟಿ ಕ್ಷೇತ್ರ ಬಹಳ ಪುರಾತನವಾದುದು. ಕರ್ನೂಲ್‌ನಲ್ಲಿ ಇದು ಬಹಳ ಪ್ರಸಿದ್ದ ದೇವಾಲಯ. ಈ ಕ್ಷೇತ್ರವು ಭಕ್ತರನ್ನು ಮಾತ್ರವಲ್ಲದೆ ಪ್ರವಾಸಿಗರನ್ನೂ ಆಕರ್ಷಿಸುತ್ತದೆ. ದೇವಾಲಯದ ದಾರಿಯಲ್ಲಿ ಹಾಗೂ ಸುತ್ತಮುತ್ತಲಿನ ಹಸಿರು ವಾತಾವರಣ ನೋಡಲು ಅನೇಕ ಪ್ರವಾಸಿಗರು ಇಲ್ಲಿಗೆ ಬರುತ್ತಲೇ ಇರುತ್ತಾರೆ. ಈ ದೇವಾಲಯ ಅನೇಕ ಮಹಿಮೆಗಳಿಗೆ ಹೆಸರಾಗಿದೆ. ಈ ದೇವಾಲಯದಲ್ಲಿರುವ ನಂದಿ ವಿಗ್ರಹ ಬೆಳೆಯುತ್ತಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಕಲ್ಲಿನ ನಂದಿ ವಿಗ್ರಹ ಬೆಳೆಯಲು ಹೇಗೆ ಸಾಧ್ಯ? ಇದರ ಹಿಂದಿನ ಮರ್ಮವೇನು? ಇತರ ವಿಚಾರಗಳನ್ನು ತಿಳಿದುಕೊಳ್ಳುವ ಮೊದಲು ದೇವಾಲಯದ ಇತಿಹಾಸವನ್ನು ತಿಳಿದುಕೊಳ್ಳಬೇಕು.

ಅಗಸ್ತ್ಯ ಮುನಿ ನಿರ್ಮಿಸಿದ ದೇವಾಲಯ

ಬಹಳ ಹಿಂದೆ, ದಕ್ಷಿಣಾಭಿಮುಖವಾಗಿ ಪ್ರಯಾಣಿಸಿದ ಅಗಸ್ತ್ಯ ಮುನಿ ಬನಗಾನಪಲ್ಲಿಯಿಂದ 10 ಕಿಮೀ ದೂರದಲ್ಲಿರುವ ನಲ್ಲಮಲ್ಲ ಬೆಟ್ಟಗಳ ಮಧ್ಯದಲ್ಲಿ ವೈಷ್ಣವ ಶೈಲಿಯಲ್ಲಿ ವೆಂಕಟೇಶ್ವರನ ದೇವಾಲಯವನ್ನು ನಿರ್ಮಿಸಿದನು. ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲು ಕೆತ್ತಿದ ವೆಂಕಟೇಶ್ವರನ ವಿಗ್ರಹದ ಕೈ ಬೆರಳು ಮುರಿದಿದ್ದರಿಂದ ಅದನ್ನು ಪ್ರತಿಷ್ಠಾಪಿಸಿದರೆ ಒಳ್ಳೆಯದಲ್ಲ ಎಂದು ಭಾವಿಸಿದ ಅಗಸ್ತ್ಯ ಮುನಿ ಶಿವನನ್ನು ಕುರಿತು ತಪಸ್ಸು ಮಾಡುತ್ತಾನೆ. ಶಿವನು ಪ್ರತ್ಯಕ್ಷನಾಗಿ, ವಿಗ್ರಹಕ್ಕೆ ಆದ ಹಾನಿಯ ಬಗ್ಗೆ ಚಿಂತಿಸಬೇಡ ಎಂದು ಧೈರ್ಯ ಹೇಳುತ್ತಾನೆ. ಇದಾದ ನಂತರ ಮುನಿಯು, ಈ ಕ್ಷೇತ್ರ ಶಿವನಿಗೆ ಸೂಕ್ತವೆಂದು ಭಾವಿಸಿ ಉಮಾಮಹೇಶ್ವರಾಗಿ ದರ್ಶನ ನೀಡುವಂತೆ ಮನವಿ ಮಾಡುತ್ತಾನೆ. ಅವನ ಆಸೆಯಂತೆ ಶಿವನು ಅರ್ಧನಾರೀಶ್ವರನಾಗಿ ಕಾಣಿಸಿಕೊಳ್ಳುತ್ತಾನೆ. ಆದ್ದರಿಂದ ಈ ಕ್ಷೇತ್ರದಲ್ಲಿ ಅರ್ಧನಾರೀಶ್ವರ ವಿಗ್ರಹವನ್ನು ಇಂದಿಗೂ ಕಾಣಬಹುದು.

ಎಲ್ಲಾ ಶಿವ ದೇವಾಲಯಗಳಲ್ಲಿ ನಂದಿ ಇರುವಂತೆ ಇಲ್ಲಿಯೂ ನಂದಿಯನ್ನು ಪ್ರತಿಷ್ಠಾಪಿಸಲಾಗಿದೆ. ಆದರೆ ಅಂದು ಸ್ಥಾಪಿಸಿದ ಪುಟ್ಟ ಕಲ್ಲಿನ ನಂದಿ ಈಗ ದೊಡ್ಡದಾಗಿದೆ. ಪ್ರತಿ ವರ್ಷವೂ ಇಲ್ಲಿ ನಂದಿ ಬೆಳೆಯುತ್ತಿದೆ. ನಂದಿ ವಿಗ್ರಹವನ್ನು ಕೆತ್ತಲು ಬಳಸಲಾದ ಕಲ್ಲು ಶೀತದ ವಾತಾವಣದಿಂದ ಬೆಳೆಯುತ್ತಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. 400 ವರ್ಷಗಳ ಹಿಂದೆ ಈ ನಂದಿ ವಿಗ್ರಹವು ತುಂಬಾ ಚಿಕ್ಕದಾಗಿತ್ತು ಮತ್ತು ಭಕ್ತರು ಇದರ ಸುತ್ತಲೂ ಪ್ರದಕ್ಷಿಣೆ ಹಾಕುತ್ತಿದ್ದರು. ಆದರೆ ಈಗ ನಂದಿ ಮೂರ್ತಿಯ ಗಾತ್ರ ಹೆಚ್ಚಳದಿಂದ ಪ್ರದಕ್ಷಿಣೆ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ವೆಂಕಟೇಶ್ವರ ದೇವರನ್ನು ಪ್ರತಿಷ್ಠಾಪಿಸಿದ ಗುಹೆಯ ಪಕ್ಕದಲ್ಲಿ ಮತ್ತೊಂದು ಗುಹೆಯಿದೆ. ಇದನ್ನು ಶಿವ ಗುಹೆ ಎಂದು ಕರೆಯಲಾಗುತ್ತದೆ. ಸುಮಾರು 5 ನೇ ಶತಮಾನದಿಂದಲೂ, ಚೋಳರು, ಪಲ್ಲವರು ಮತ್ತು ಚಾಣಕ್ಯರು ಈ ದೇವಾಲಯದಲ್ಲಿ ನಿಯಮಿತವಾಗಿ ಪೂಜೆ ಸಲ್ಲಿಸುತ್ತಿದ್ದರು. 15 ನೇ ಶತಮಾನದಲ್ಲಿ, ವಿಜಯ ನಗರ ಸಾಮ್ರಾಜ್ಯದ ಸಂಗಮ ಸಾಮ್ರಾಜ್ಯದ ವಂಶಸ್ಥ ಹರಿಹರ ಬುಕ್ಕರಾಯನು ಪಾಳುಬಿದ್ದ ದೇವಾಲಯವನ್ನು ಪುನರ್ನಿರ್ಮಿಸಿದನು.

ಈ ಕ್ಷೇತ್ರದಲ್ಲಿ ಕಾಗೆಗಳು ಇಲ್ಲ

ನಾವು ಎಲ್ಲಿ ಹೋದರೂ ಯಾವ ದೇವಸ್ಥಾನಗಳನ್ನು ನೋಡಿದರೂ ಕಾಗೆಗಳನ್ನು ಕಾಣುತ್ತೇವೆ. ಭಕ್ತರು ಕೊಡುವ ಪ್ರಸಾದ, ಅನ್ನವನ್ನು ತಿನ್ನಲಾದರೂ ಕಾಗೆಗಳು ಬರುತ್ತವೆ. ಆದರೆ ಈ ಯಾಗಂಟಿ ಉಮಾ ಮಹೇಶ್ವರ ದೇವಸ್ಥಾನದ ಸುತ್ತಮುತ್ತ ಒಂದೂ ಕಾಗೆಗಳು ಕಾಣಸಿಗುವುದಿಲ್ಲ. ಇದಕ್ಕೂ ಒಂದು ಕಥೆ ಇದೆ. ಅಗಸ್ತ್ಯ ಮುನಿ, ಶಿವನನ್ನು ಕುರಿತು ತಪಸ್ಸು ಮಾಡುವಾಗ ಕಾಗೆಗಳು ಬಂದು ಅರಚುತ್ತಾ ಅವರ ತಪಸ್ಸಿಗೆ ಅಡ್ಡಿಪಡಿಸಿದ ಕಾರಣ ಅಗಸ್ತ್ಯನಿಗೆ ಕೋಪ ಬಂದು, ಇನ್ನು ಮುಂದೆ ನಿಮಗೆ ಈ ಕ್ಷೇತ್ರಕ್ಕೆ ಪ್ರವೇಶ ಇರದಂತಾಗಲಿ ಎಂದು ಶಾಪ ನೀಡುತ್ತಾನೆ. ಆ ಶಾಪದ ಫಲದಿಂದ ಇಂದಿಗೂ ಇಲ್ಲಿ ಒಂದು ಕಾಗೆ ಕೂಡಾ ಕಾಣಿಸಿಕೊಳ್ಳುವುದಿಲ್ಲ ಎನ್ನಲಾಗಿದೆ.

ಇಲ್ಲಿನ ಭವ್ಯವಾದ ಗುಹೆಯಂತೂ ಎಂಥವರನ್ನಾದರೂ ಆಕರ್ಷಿಸುತ್ತಿದೆ. ಈ ಕ್ಷೇತ್ರದಲ್ಲಿರುವ ಕೊಳಕ್ಕೆ ಅಗಸ್ತ್ಯ ಕೊಳ ಎಂದೇ ಹೆಸರಿಡಲಾಗಿದೆ. ಈ ನೀರು ಔಷಧೀಯ ಗುಣಗಳನ್ನು ಹೊಂದಿದ್ದು ಇಲ್ಲಿ ಸ್ನಾನ ಮಾಡಿದರೆ ಅನೇಕ ಚರ್ಮದ ಸಮಸ್ಯೆಗಳು ಗುಣಮುಖವಾಗುತ್ತದೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲ ಇಲ್ಲಿರುವ ಗುಹೆಯಲ್ಲಿ ಕುಳಿತು ಬ್ರಹ್ಮನು ಕಾಲಜ್ಞಾನ ಬರೆದನೆಂಬ ನಂಬಿಕೆ ಇಂದಿಗೂ ಇದೆ. ಒಟ್ಟಿನಲ್ಲಿ ಈ ದೇವಸ್ಥಾನ ಅನೇಕ ವೈಶಿಷ್ಟ್ಯಕ್ಕೆ ಹೆಸರಾಗಿದ್ದು ಪ್ರತಿದಿನ ಸಾವಿರಾರು ಭಕ್ತರು ಈ ಕ್ಷೇತ್ರಕ್ಕೆ ಬರುತ್ತಾರೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

 

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.