logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Dhanwanthari Temple: ಆಯುರ್ವೇದದ ಹರಿಕಾರ, ಮಹಾವಿಷ್ಣುವಿನ ಅವತಾರ ಧನ್ವಂತರಿಗೆ ಮುಡಿಪಾದ ದೇವಾಲಯಗಳಿವು; ಗಿಡಮೂಲಿಕೆಗಳೇ ಇಲ್ಲಿ ಪ್ರಸಾದ

Dhanwanthari Temple: ಆಯುರ್ವೇದದ ಹರಿಕಾರ, ಮಹಾವಿಷ್ಣುವಿನ ಅವತಾರ ಧನ್ವಂತರಿಗೆ ಮುಡಿಪಾದ ದೇವಾಲಯಗಳಿವು; ಗಿಡಮೂಲಿಕೆಗಳೇ ಇಲ್ಲಿ ಪ್ರಸಾದ

Rakshitha Sowmya HT Kannada

Apr 17, 2024 09:22 AM IST

google News

ಭಾರತದ ಧನ್ವಂತರಿ ದೇವಾಲಯಗಳು

  • Dhanwanthari Temples:  ಕೇರಳ, ತಮಿಳುನಾಡಿನಲ್ಲಿಆಯುರ್ವೇದದ ಹರಿಕಾರ, ಮಹಾವಿಷ್ಣುವಿನ ಅವತಾರ ಎಂದೇ ನಂಬಲಾದ ಧನ್ವಂತರಿ   ದೇವಾಲಯಗಳಿವೆ. ಇಲ್ಲಿ ವಿಶೇಷ ಸಂದರ್ಭಗಳಲ್ಲಿ 108 ಗಿಡಮೂಲಿಕೆಗಳಿಂದ ಹೋಮ ಹವನ ಮಾಡಲಾಗುತ್ತದೆ. ಆಯುರ್ವೇದ ಸಸ್ಯಗಳಿಂದ ತಯಾರಿಸಲಾದ ಪ್ರಸಾದವನ್ನೇ ಭಕ್ತರಿಗೆ ನೀಡಲಾಗುತ್ತದೆ. 

ಭಾರತದ ಧನ್ವಂತರಿ ದೇವಾಲಯಗಳು
ಭಾರತದ ಧನ್ವಂತರಿ ದೇವಾಲಯಗಳು (PC: dhanwantaritemple.in website)

ಭಾರತದ ಧನ್ವಂತರಿ ದೇವಾಲಯಗಳು: ಸ್ವಲ್ಪ ನೆಗಡಿ, ಕೆಮ್ಮು ಆದರೆ ಸಾಕು ವೈದ್ಯರ ಬಳಿ ಹೋಗುತ್ತೇವೆ. ಅಥವಾ ಮೆಡಿಕಲ್‌ ಸ್ಟೋರ್‌ನಲ್ಲಿ ಖರೀದಿಸಿದ ಮಾತ್ರೆಗಳನ್ನು ನುಂಗಿ, ಗುಣಮುಖರಾಗುತ್ತೇವೆ. ಆದರೆ ಬಹಳಷ್ಟು ಮಂದಿ ಇಂಗ್ಲೀಷ್‌ ಔಷಧಗಳ ಮೊರೆ ಹೋಗದೆ ಮನೆ ಮದ್ದನ್ನು ಪ್ರಯತ್ನಿಸುತ್ತಾರೆ. ಹಿಂದಿನ ಕಾಲದಲ್ಲಿ ಈಗಿನಂತೆ ಇಂಗ್ಲೀಷ್‌ ಔಷಧಗಳು ಲಭ್ಯವಿರಲಿಲ್ಲ. ಆಗೆಲ್ಲಾ ಗಿಡಮೂಲಿಕೆಗಳಿಂದಲೇ ಆರೋಗ್ಯ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕಿತ್ತು.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಆಯುರ್ವೇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಭಾರತದ ಮೊದಲ ವೈದ್ಯ ಧನ್ವಂತರಿಯನ್ನುಆಯುರ್ವೇದದ ಹರಿಕಾರ ಎಂದೇ ಕರೆಯಲಾಗುತ್ತದೆ. ಮಹಾವಿಷ್ಣುವಿನ ಅವತಾರವಾದ ಶ್ರೀ ಧನ್ವಂತರಿಯು ಆಯುರ್ವೇದದ ಪ್ರಧಾನ ದೇವತೆಯಾಗಿ ಪೂಜಿಸಲ್ಪಡುತ್ತಾನೆ. ದೇವತೆಗಳು ಮತ್ತು ಅಸುರರು ಕ್ಷೀರಸಾಗರದ ಮಂಥನ ಮಾಡಿದಾಗ ಭಗವಾನ್ ಮಹಾವಿಷ್ಣು ಅಮೃತದೊಂದಿಗೆ ಧನ್ವಂತರಿಯಾಗಿ ಹೊರ ಬಂದನೆಂದು ನಂಬಲಾಗಿದೆ. ಈಗಲೂ ನೀವು ಯಾವುದೇ ಆಯುರ್ವೇದ ಆಸ್ಪತ್ರೆಗೆ ಹೋದರೆ ಅಲ್ಲಿ ಧನ್ವಂತರಿಯ ಫೋಟೋ ಇಟ್ಟು ಪೂಜಿಸುವುದನ್ನು ನೋಡಿರಬಹುದು. ಇಂತಹ ಧನ್ವಂತರಿಗೆಂದೇ ಭಾರತದಲ್ಲಿ ಕೆಲವೊಂದು ದೇವಾಲಯವನ್ನು ಸ್ಥಾಪಿಸಲಾಗಿದೆ. ಈ ದೇವಾಲಯಕ್ಕೆ ಬರುವ ಭಕ್ತರಿಗೆ ಗಿಡಮೂಲಿಕೆಗಳನ್ನೇ ಪ್ರಸಾದವನ್ನಾಗಿ ನೀಡುವ ವಾಡಿಕೆ ಇದೆ. ಭಾರತದ ಖ್ಯಾತ ಧನ್ವಂತರಿ ದೇವಾಲಯಗಳ ಬಗ್ಗೆ ಒಂದಿಷ್ಟು ವಿವರ ಇಲ್ಲಿದೆ.

ಕೇರಳದ ಪೆರಿಂಗಾವು ಧನ್ವಂತರಿ ದೇವಸ್ಥಾನ

ಕೇರಳದ ಪೆರಿಂಗಾವುನಲ್ಲಿರುವ ಶ್ರೀ ಧನ್ವಂತರಿ ದೇವಾಲಯವು ತ್ರಿಶೂರ್ ಪಟ್ಟಣದ ಹೊರ ವಲಯದಲ್ಲಿರುವ ಪುರಾತನ ಧನ್ವಂತರಿ ದೇವಾಲಯವಾಗಿದೆ. ಈ ದೇವಾಲಯದ ಗರ್ಭಗುಡಿಯು ಗುಂಡನೆಯ ಆಕಾರದಲ್ಲಿ 2 ಅಂತಸ್ತುಗಳನ್ನು ಹೊಂದಿದೆ, ಇದು ಇತರ ಕೇರಳ ಶೈಲಿಯ ವಾಸ್ತುಶೈಲಿಗಿಂತ ಅಪರೂಪದ ವಿನ್ಯಾಸವಾಗಿದೆ. ಪ್ರಧಾನ ದೇವತೆ ಧನ್ವತಾರಿ ಮತ್ತು ವಿಗ್ರಹವು ಸುಮಾರು 5 ಅಡಿ ಎತ್ತರವಿದ್ದು ಪೂರ್ವಾಭಿಮುಖವಾಗಿದೆ. ಉಳಿದಂತೆ ಈ ದೇವಾಲಯದಲ್ಲಿ ಗಣಪತಿ, ಅಯ್ಯಪ್ಪ, ಭದ್ರಕಾಳಿ, ಬ್ರಹ್ಮ ರಾಕ್ಷಸ, ನಾಗಪ್ರತಿಷ್ಠೆ ಗುಡಿಗಳು ಕೂಡಾ ಇವೆ. ಪ್ರತಿದಿನ ನೂರಾರು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಕೇರಳದ ತೊಟ್ಟುವ ಧನ್ವಂತರಿ ದೇವಾಲಯ

ತೊಟ್ಟುವ ಧನ್ವಂತರಿ ದೇವಸ್ಥಾನವು ಎರ್ನಾಕುಲಂ ಜಿಲ್ಲೆಯ ಕೂವಪಾಡಿ ಪಂಚಾಯತ್‌ನ ತೊಟ್ಟುವ ಜಂಕ್ಷನ್‌ನಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿದೆ. ಪ್ರಧಾನ ದೇವತೆ ಧನ್ವಂತರಿಯ ವಿಗ್ರಹವು 6 ಅಡಿ ಎತ್ತರದಲ್ಲಿದ್ದು ಪೂರ್ವಾಭಿಮುಖವಾಗಿದೆ. ಬಲಗೈಯಲ್ಲಿ ಅಮೃತವನ್ನು ಹಿಡಿದಿದ್ದು ಮತ್ತೊಂದು ಕೈನಲ್ಲಿ ಶಂಕು ಮತ್ತು ಚಕ್ರವನ್ನು ಹಿಡಿದಿದ್ದಾನೆ. ದೇವಸ್ಥಾನದ ಬಳಿ ಹರಿಯುತ್ತಿರುವ ತೊರೆಯಲ್ಲಿ ಸ್ನಾನ ಮಾಡುವ ಭಕ್ತರಿಗೆ ವಾತ , ಪಿತ್ತ ಮತ್ತು ಕಫಗಳಿಂದ ಉಂಟಾಗುವ ತೊಂದರೆಗಳು ಗುಣವಾಗುತ್ತವೆ ಎಂದು ನಂಬಲಾಗಿದೆ. ವಿಶೇಷವಾಗಿ ದೀಪಾವಳಿ ವೇಳೆ ಧನ್‌ ತೆರೇಸ್‌ ದಿನದಂದು ಇಲ್ಲಿಗೆ ಬಂದು ಧನ್ವಂತರಿಯ ದರ್ಶನ ಪಡೆಯುವುದು ಒಳ್ಳೆಯದು ಎಂಬ ನಂಬಿಕೆಯಿದೆ.

ಕೇರಳದ ಅಲೆಪ್ಪಿಯ ಪ್ರಾಯಿಕರ ದೇವಸ್ಥಾನ

ಈ ದೇವಸ್ಥಾನವು ಕೇರಳ ರಾಜ್ಯದ ಅಲೆಪ್ಪಿಯ ಪ್ರಾಯೀಕರದಲ್ಲಿದೆ. ಈ ಪುರಾತನ ದೇವಾಲಯವು ಸಾವಿರ ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ. ಭಾರತದಲ್ಲಿ ಧನ್ವಂತರಿಗೆ ಮುಡಿಪಾದ ಕೆಲವೇ ಕೆಲವು ದೇವಾಲಯಗಳಲ್ಲಿ ಇದು ಎಲ್ಲಕ್ಕಿಂತ ಪವಿತ್ರವೆಂದು ನಂಬಲಾಗಿದೆ. ಈ ದೇವಸ್ಥಾನದಲ್ಲಿ ಪ್ರತಿದಿನ ಶ್ರೀಗಂಧ, ಹಾಲಿನ ಅಭಿಷೇಕ ಸೇರಿದಂತೆ ವಿಷ್ಣುವಿಗೆ ಮಾಡಲಾಗುವ ಎಲ್ಲಾ ಸೇವೆಗಳನ್ನು ಮಾಡಲಾಗುತ್ತದೆ.

ಕೇರಳದ ಪರಪ್ಪುರ್ ಶ್ರೀ ಧನ್ವಂತರಿ ದೇವಸ್ಥಾನ

ಈ ದೇವಾಲಯವು ಕೇರಳದ ತ್ರಿಶೂರ್ ಜಿಲ್ಲೆಯ ಪರಪ್ಪುರ್‌ನಲ್ಲಿದೆ. ಇದು ಸುಮಾರು 5000 ವರ್ಷಗಳಷ್ಟು ಹಳೆಯ ದೇವಸ್ಥಾನವಾಗಿದೆ. ಆಯುರ್ವೇದ ವೈದ್ಯಕೀಯಕ್ಕೆ ಸೇರುವ ಮುನ್ನ, ವಿದ್ಯಾರ್ಥಿಗಳು ಇಲ್ಲಿಗೆ ಬಂದು ಆಶೀರ್ವಾದ ಪಡೆದು ಹೋಗುತ್ತಾರೆ. ಪ್ರತಿ ವರ್ಷ ಧನ್ವಂತರಿ ಜಯಂತಿಯಂದು ಇಲ್ಲಿ 108 ಔಷಧೀಯ ಗಿಡಮೂಲಿಕೆಗಳೊಂದಿಗೆ ವಿಶೇಷ ಹೋಮ ಹವನ ಮಾಡಲಾಗುತ್ತದೆ. ದೂರದ ಊರುಗಳಿಂದ ಜನರು ಇಲ್ಲಿಗೆ ಬಂದು ರೋಗಗಳಿಂದ ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿ ದೇವಸ್ಥಾನದಲ್ಲಿ ಕೊಡುವ ಪ್ರಸಾದವನ್ನು ಸ್ವೀಕರಿಸುತ್ತಾರೆ. ರಹಸ್ಯ ಆಯುರ್ವೇದ ಔಷಧಿಗಳ ಬಗ್ಗೆ ತಿಳಿದಿರುವವರಿಂದ ಇಲ್ಲಿ ಪ್ರತಿದಿನ ಮುಕ್ಕುಡಿ ಪ್ರಸಾದವನ್ನು ತಯಾರಿಸಲಾಗುತ್ತದೆ.

ತಮಿಳುನಾಡಿನ ವೆಲ್ಲೂರು ಪಟ್ಟಣದಲ್ಲಿರುವ ದೇವಸ್ಥಾನ

ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಕೀಲ್ಪುದುಪೆಟ್ಟೈನಲ್ಲಿರುವ ಧನ್ವಂತರಿ ದೇವಸ್ಥಾನವು 500 ವರ್ಷಗಳಷ್ಟು ಹಳೆಯದಾಗಿದೆ. ಇಲ್ಲಿ ಪ್ರಧಾನ ದೇವತೆ ಧನ್ವಂತರಿ ವಿಗ್ರವು 7 ಅಡಿ ಇದ್ದು ಆಶೀರ್ವಾದ ಮಾಡುತ್ತಿರುವ ಭಂಗಿಯಲ್ಲಿದೆ. ಈ ದೇವಾಲಯವನ್ನು ಶ್ರೀ ಧನ್ವಂತ್ರಿ ಆರೋಗ್ಯ ಪೀಠ ಎಂದೂ ಕರೆಯುತ್ತಾರೆ. ಇಲ್ಲಿ ಕೊಡುವ ಪ್ರಸಾದವನ್ನು ಸೇವಿಸಿದ ಎಲ್ಲಾ ಭಕ್ತರು ಆರೋಗ್ಯ ಸಮಸ್ಯೆಗಳಿಂದ ಮುಕ್ತರಾಗಿದ್ದಾರೆ ಎಂಬ ಮಾತಿದೆ. ಧನ್ವಂತರಿಯನ್ನು ಹೊರತುಪಡಿಸಿ ಇಲ್ಲಿ ಗಣೇಶ, ಮಹಿಷಾಸುರ ಮರ್ದಿನಿ, ವಾಸ್ತುಪುರುಷ, ಇಂದ್ರ, ಅಗ್ನಿ, ವಾಯು, ಕುಬೇರ ದೇವತೆಗಳ ಉಪದೇವಾಲಗಳಿವೆ. ಈ ದೇವಾಲಯದಲ್ಲಿ ವಿಶೇಷ ಸಂದರ್ಭಗಳಲ್ಲಿ ಧನ್ವಂತರಿ ಹೋಮ ಮಾಡಲಾಗುತ್ತದೆ.

ಇದನ್ನು ಹೊರತುಪಡಿಸಿ ತಮಿಳುನಾಡಿನ ಕೊಯಂಬತ್ತೂರು, ತಿರುಚಿರಾಪಳ್ಳಿ, ಕಾಶಿಯಲ್ಲಿ ಧನ್ವಂತರಿ ದೇವಸ್ಥಾನಗಳಿವೆ.

 

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ