Rahu Ketu Transit 2025: ರಾಹು ಕೇತು ಸಂಕ್ರಮಣ 2025: ಯಾವ ರಾಶಿಯವರಿಗೆ ಏನು ಫಲ, ಯಾವ ರೀತಿ ಪರಿಹಾರ ಕೈಗೊಳ್ಳಬೇಕು?
Dec 19, 2024 06:03 PM IST
ರಾಹು ಕೇತು ಸಂಕ್ರಮಣ 2025
ನೆರಳು ಗ್ರಹಗಳು ಎನಿಸಿಕೊಂಡಿರುವ ರಾಹು ಮತ್ತು ಕೇತು 2025ರಲ್ಲಿ ಮತ್ತೊಂದು ರಾಶಿಗೆ ಪ್ರವೇಶಿಸುತ್ತವೆ. ರಾಹುವು 18 ಮೇ 2025 ರಂದು ಮೀನದಿಂದ ಕುಂಭಕ್ಕೆ ಮತ್ತು ಕೇತುವು ಕನ್ಯಾ ರಾಶಿಯಿಂದ ಸಿಂಹ ರಾಶಿ ಚಲಿಸುತ್ತದೆ. ಇದರಿಂದ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. (ಬರಹ: ಎಚ್. ಸತೀಶ್, ಜ್ಯೋತಿಷಿ)
ರಾಹು ಗ್ರಹವು ಯಾವುದೇ ಸ್ಥಾನದಲ್ಲಿ ಇದ್ದರೂ ಜೀವನದಲ್ಲಿ ಕೊಂಚ ಏರುಪೇರುಗಳು ಎದುರಾಗುತ್ತವೆ. ಆದರೆ ಪಂಚಮ ಸ್ಥಾನದಲ್ಲಿ ಸ್ಥಿತನಾಗಿದ್ದಲ್ಲಿ ಜೀವನದಲ್ಲಿ ಪ್ರಮುಖ ಬದಲಾವಣೆಗಳು ಉಂಟಾಗುತ್ತವೆ. ಆದ್ದರಿಂದ ಸೂಕ್ತ ಪರಿಹಾರಗಳು ಮುಖ್ಯವಾಗುತ್ತವೆ. ಪರಿಹಾರದಲ್ಲಿ ಸಾಕುಪ್ರಾಣಿಗಳನ್ನು ಸಹ ಪರಿಗಣಿಸಲಾಗುತ್ತದೆ. ಎಲ್ಲರ ಮುದ್ದಿನ ಪ್ರಾಣಿ ನಾಯಿಯು ನಮಗೆ ಶುಭಫಲಗಳನ್ನು ಪಡೆಯಲು ಸಹಕಾರಿಯಾಗುತ್ತದೆ.
ತಾಜಾ ಫೋಟೊಗಳು
ದ್ವಾದಶ ರಾಶಿಗಳ ಮೇಲೆ ರಾಹು-ಕೇತು ಸಂಕ್ರಮಣದ ಪ್ರಭಾವ
ಮೇಷ ರಾಶಿ
ಮೇಷ ಮತ್ತು ವೃಶ್ಚಿಕ ರಾಶಿಯವರಿಗೆ ರಾಹುವಿನಿಂದ ಸಮಸ್ಯೆ ಉಂಟಾಗುವುದಿಲ್ಲ. ಜೀವನದಲ್ಲಿ ಹಿನ್ನೆಡೆ ಉಂಟಾದರೂ ಅದು ಕ್ಷಣಿಕ ಮಾತ್ರ. ಮೇಷ ರಾಶಿಯಿಂದ ಪಂಚಮದಲ್ಲಿ ರಾಹುವಿದ್ದಲ್ಲಿ ಆತ್ಮವಿಶ್ವಾಸದ ಕೊರತೆ ಉಂಟಾಗುತ್ತದೆ. ಸಣ್ಣಪುಟ್ಟ ಕೆಲಸ ಕಾರ್ಯಗಳಿಗೂ ಬೇರೆಯವರನ್ನು ಅವಲಂಬಿಸಬೇಕಾಗುತ್ತದೆ. ಆದ್ದರಿಂದ ಬಿಳಿ ನಾಯಿಗೆ ಬೆಳಗಿನ ವೇಳೆ ಆಹಾರ ನೀಡುವುದರಿಂದ ದೋಷ ಪರಿಹಾರವಾಗುತ್ತದೆ. ಉತ್ತಮ ಆರೋಗ್ಯ ಕೂಡಾ ಲಭಿಸುತ್ತದೆ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಪಂಚಮದಲ್ಲಿ ರಾಹು ಇದ್ದಲ್ಲಿ ಯಾವುದೇ ವಿಚಾರಗಳಲ್ಲಿ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಸಣ್ಣಪುಟ್ಟ ಕೆಲಸ ಕಾರ್ಯಗಳಿಗೂ ಬೇರೆಯವರನ್ನು ಅವರಂಬಿಸುತ್ತಾರೆ. ಮನದಲ್ಲಿ ಉತ್ತಮ ವಿದ್ಯೆ ಗಳಿಸಬೇಕೆಂಬ ಆಸೆ ಇದ್ದರೂ ಮಾನಸಿಕ ಸದೃಢತೆ ಇರುವುದಿಲ್ಲ. ಸಾಮಾನ್ಯವಾಗಿ ಇವರು ಸಂದರ್ಭಕ್ಕೆ ಅನುಸಾರವಾಗಿ ಜೀವನ ನಡೆಸುತ್ತಾರೆ. ಬಿಳಿ ಬಣ್ಣದ ನಾಯಿಗಳಿಗೆ ದ್ರವಹಾರ ನೀಡುವ ಮೂಲಕ ಉತ್ತಮ ಫಲಗಳನ್ನು ಪಡೆಯಬಹುದು.
ಮಿಥುನ ರಾಶಿ
ಮಿಥುನ ಮತ್ತು ಕನ್ಯಾ ರಾಶಿಗಳಿಗೆ ರಾಹುವು ಪಂಚಮ ಸ್ಥಾನದಲ್ಲಿ ಇರುವ ವೇಳೆ ದಿನ ನಿತ್ಯದ ಜೀವನದಲ್ಲಿ ತೊಂದರೆ ಉಂಟಾಗುತ್ತದೆ. ಇದರಿಂದಾಗಿ ರಾಹುವಿನ ಶಾಂತಿ ಮಾಡುವುದು ಮುಖ್ಯವಾಗುತ್ತದೆ. ಮಿಥುನ ರಾಶಿಯವರಿಗೆ ಪಂಚಮದಲ್ಲಿ ರಾಹು ಇದ್ದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತದೆ. ಸಂತಾನ ದೋಷವಿರುತ್ತದೆ. ಇವರು ಯಾವುದೇ ಕೆಲಸದಲ್ಲೂ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಆದರೆ ಹಣಕಾಸಿನ ತೊಂದರೆ ಇರುವುದಿಲ್ಲ. ಕಂದು ಬಣ್ಣದ ನಾಯಿಗೆ ಸಂಜೆಯ ವೇಳೆ ಆಹಾರವನ್ನು ನೀಡುವುದರಿಂದ ಉತ್ತಮ ಫಲಗಳನ್ನು ಪಡೆಯಬಹುದು.
ಕಟಕ ರಾಶಿ
ಕಟಕ ರಾಶಿಯವರಿಗೆ ರಾಹುವಿನಿಂದ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ. ಆದರೆ ಕಟಕ ರಾಶಿಯಿಂದ ರಾಹುವು ಪಂಚಮ ಭಾವದಲ್ಲಿ ಇದ್ದರೆ ಮಕ್ಕಳ ವಿಚಾರವಾಗಿ ಮಾನಸಿಕ ಒತ್ತಡ ಎದುರಾಗುತ್ತದೆ. ಉದ್ಯೋಗದಲ್ಲಿ ಎದುರಾಗುವ ಬದಲಾವಣೆಗಳನ್ನು ಸ್ವೀಕರಿಸುವಲ್ಲಿ ಹಿಂದೆ ಉಳಿಯುತ್ತಾರೆ. ಇವರ ಆತ್ಮವಿಶ್ವಾಸ ಕಡಿಮೆಯಾಗುತ್ತದೆ. ಇದರಿಂದಾಗಿ ಕೆಂಪು ಬಣ್ಣದ ಚುಕ್ಕೆಗಳಿರುವ ನಾಯಿಗಳಿಗೆ ಆಹಾರ ನೀಡಿದರೆ ದೋಷ ಪರಿಹಾರವಾಗುತ್ತದೆ. ಆದರೂ ಇವರಿಗೆ ಕೋಪವನ್ನು ತಡೆಯಲು ಸಾಧ್ಯವಾಗುವುದಿಲ್ಲ.
ಸಿಂಹ ರಾಶಿ
ಸಿಂಹರಾಶಿಯವರಿಗೆ ಪಂಚಮದಲ್ಲಿ ರಾಹು ಇದ್ದಲ್ಲಿ ಅವರಿಗೆ ಬಹಳ ಕೋಪವಿರುತ್ತದೆ. ಆದರೆ ಮನದಲ್ಲಿ ಒಳ್ಳೆಯ ಭಾವನೆ ಇರುತ್ತದೆ. ಎಲ್ಲರೊಂದಿಗೆ ಸ್ನೇಹದಿಂದ ಬೆರೆಯಬೇಕೆಂಬ ಆಸೆ ಇದ್ದರೂ ಕಾರ್ಯಗತಗೊಳಿಸಲು ಸಾಧ್ಯವಾಗುವುದಿಲ್ಲ. ಕೇವಲ ಆಯ್ದ ಕೆಲವು ಜನರೊಂದಿಗೆ ಮಾತ್ರ ಪ್ರೀತಿ ವಿಶ್ವಾಸದಿಂದ ಇರುತ್ತಾರೆ. ಸುಲಭವಾಗಿ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಸೋಲುವ ಸಂದರ್ಭದಲ್ಲಿ ಸಹನೆಯನ್ನು ಕಳೆದುಕೊಳ್ಳುತ್ತಾರೆ. ಆದ್ದರಿಂದ ಬಿಳಿ ಬಣ್ಣದ ನಾಯಿಗೆ ದ್ರವರೂಪದ ಆಹಾರ ನೀಡುವುದರಿಂದ ಇವರ ಮನಸ್ಸು ತಿಳಿಯಾಗುತ್ತದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಪಂಚಮದಲ್ಲಿ ರಾಹುಗ್ರಹವಿದ್ದರೆ ಉದ್ಯೋಗದಲ್ಲಿ ತೊಂದರೆ ಇರುತ್ತದೆ. ಯಾವುದೇ ಉದ್ಯೋಗದಲ್ಲಿ ಬಹುಕಾಲ ಇರಲು ಸಾಧ್ಯವಾಗುವುದಿಲ್ಲ. ಮಾಡದ ತಪ್ಪನ್ನು ಒಪ್ಪಿಕೊಳ್ಳಬೇಕು. ಸಾಮಾನ್ಯವಾಗಿ ಇವರು ತಮ್ಮ ಕೆಲಸ ಕಾರ್ಯಗಳಿಗೆ ಬೇರೆಯವರನ್ನು ಅವಲಂಬಿಸುತ್ತಾರೆ. ಇದರಿಂದಾಗಿ ಕಪ್ಪು ಬಣ್ಣದ ನಾಯಿಗಳಿಗೆ ನೆಲೆಸಲು ಗೂಡನ್ನು ಕಟ್ಟಿಸಿಕೊಟ್ಟಲ್ಲಿ ಜೀವನದಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ.
ತುಲಾ ರಾಶಿ
ತುಲಾ ರಾಶಿಯವರಿಗೆ ಪಂಚಮದಲ್ಲಿ ರಾಹುವಿದ್ದಲ್ಲಿ ಒಂದೇ ಮನಸ್ಸಿನಿಂದ ಜವಾಬ್ದಾರಿಗಳನ್ನುಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಬಹಳ ನಿಧಾನವಾಗಿ ತಮ್ಮ ಕೆಲಸ ಕಾರ್ಯಗಳು ಆರಂಭಿಸುತ್ತಾರೆ. ಇದರಿಂದ ದೊರೆಯುವ ಫಲಿತಾಂಶ ಅತ್ಯಲ್ಪವಾಗುತ್ತದೆ. ತಮ್ಮ ಮನದಲ್ಲಿ ಇರುವ ವಿಚಾರಗಳನ್ನು ಸುಲಭವಾಗಿ ಬೇರೆಯವರಲ್ಲಿ ಹಂಚಿಕೊಳ್ಳುವುದಿಲ್ಲ. ಏಕಾಂಗಿತನದಿಂದ ಬಳಲುತ್ತಾರೆ. ಇದರಿಂದಾಗಿ ನಾಯಿಗಳನ್ನು ಸಲಹುವ ಕೇಂದ್ರಗಳಿಗೆ ಸಹಾಯ ಮಾಡುವ ಮೂಲಕ ನಿರೀಕ್ಷಿತ ಫಲಿತಾಂಶಗಳನ್ನು ಪಡೆಯಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಪಂಚಮದಲ್ಲಿ ರಾಹು ಇದ್ದಲ್ಲಿ ಸಂತಾನ ದೋಷವಿರುತ್ತದೆ. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಆಸಕ್ತಿ ಇರುವುದಿಲ್ಲ. ಮಕ್ಕಳ ಜೀವನದಲ್ಲಿ ಅನಾವಶ್ಯಕವಾದ ಹಿನ್ನೆಡೆ ಲಭಿಸುತ್ತದೆ. ಮನದಲ್ಲಿ ಒಂದು ರೀತಿಯ ಭಯ ಮನೆ ಮಾಡಿರುತ್ತದೆ. ಆದ್ದರಿಂದ ಕಂದು ಬಣ್ಣದ ನಾಯಿಗೆ ಮಲಗಲು ಮೆತ್ತನೆಯ ಹಾಸಿಗೆಯ ವ್ಯವಸ್ಥೆ ಮಾಡಿದರೆ ಎದುರಾಗುವ ಅಡೆತಡೆಗಳಿಂದ ಪಾರಾಗಬಹುದು.
ಧನಸ್ಸು ರಾಶಿ
ಧನುರ್ ರಾಶಿಯವರಿಗೆ ಪಂಚಮದಲ್ಲಿ ರಾಹು ಇದ್ದಲ್ಲಿಅವರ ಕೆಲಸ ಕಾರ್ಯಗಳಲ್ಲಿ ನಿಧಾನತೆ ಕಂಡು ಬರುತ್ತದೆ. ತಮ್ಮ ಮಕ್ಕಳ ಮೇಲೆ ಅನಾವಶ್ಯಕವಾಗಿ ಒತ್ತಡ ಹೇರುತ್ತಾರೆ. ವಿದ್ಯಾರ್ಥಿಗಳು ಕಲಿಕೆಯ ವಿಚಾರವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಬೇರೆಯವರ ಸಹಾಯ ಸಹಕಾರವಿಲ್ಲದೆ ಇವರು ಯಾವುದೇ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಜೀವನದಲ್ಲಿ ದೊಡ್ಡಮಟ್ಟದ ಸಮಸ್ಯೆಗಳು ಎದುರಾಗುವುದಿಲ್ಲ. ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವುದು ಮುಖ್ಯವಾಗುತ್ತದೆ. ಇವರು ಕಂದು ಬಣ್ಣದ ನಾಯಿಗೆ ಆಹಾರ ನೀಡಿದರೆ ಉತ್ತಮ ಫಲಗಳನ್ನು ಪಡೆಯಬಹುದು.
ಮಕರ ರಾಶಿ
ಮಕರ ರಾಶಿಯವರಿಗೆ ರಾಹು ಪಂಚಮದಲ್ಲಿ ಇದ್ದಾಗ ಉದ್ಯೋಗದಲ್ಲಿ ಅಡೆತಡೆಗಳು ಎದುರಾಗುತ್ತವೆ. ಆದರೆ ಸಹೋದ್ಯೋಗಿಗಳ ಸಹಾಯ ಸಹಕಾರವು ಇವರಿಗೆ ದೊರೆಯುತ್ತದೆ. ಸೋಲಿನ ಭಯದಿಂದ ತಾವು ಮಾಡಬೇಕಾದ ಕಾರ್ಯಗಳನ್ನು ಅರ್ಧಕ್ಕೆ ನಿಲ್ಲಿಸುತ್ತಾರೆ. ವಾಹನ ಚಲಾಯಿಸುವ ವೇಳೆ ಕೈಕಾಲುಗಳಿಗೆ ಪೆಟ್ಟು ಉಂಟಾಗಬಹುದು ಜಾಗ್ರತೆ, ಹಿರಿಯ ಅಕ್ಕ ಅಥವಾ ಹಿರಿಯ ಸೋದರನ ಜೊತೆ ಅನಾವಶ್ಯಕವಾದ ಮನಸ್ತಾಪವಿರುತ್ತದೆ. ತೊಂದರೆಯಲ್ಲಿರುವ ಕಪ್ಪು ನಾಯಿಗಳನ್ನು ಕಾಪಾಡಿದಲ್ಲಿ ಜೀವನದ ತೊಂದರೆಗಳು ದೂರವಾಗುತ್ತವೆ.
ಕುಂಭ ರಾಶಿ
ಕುಂಭ ರಾಶಿಯವರ ಮನದ ಇಂಗಿತವನ್ನು ಅರಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಪಂಚಮ ಸ್ಥಾನದಲ್ಲಿ ನೆಲೆಸಿದ್ದರೆ ಕುಟುಂಬದ ರಹಸ್ಯಗಳನ್ನು ಮಾತನ್ನು ಆಡುವ ಭರದಲ್ಲಿ ಎಲ್ಲರಿಗೂ ತಿಳಿಸುತ್ತಾರೆ. ತಮ್ಮ ತಪ್ಪನ್ನು ಮರೆ ಮಾಚಲು ಬೇರೆಯವರನ್ನು ಟೀಕಿಸುವುದು ಇವರ ಸ್ವಭಾವವಾಗುತ್ತದೆ. ಇದರಿಂದ ಆತ್ಮೀಯರೂ ಸಹ ಇವರಿಂದ ದೂರ ಉಳಿಯಬಹುದು. ಆದ್ದರಿಂದ ಇವರು ಕಪ್ಪು ಬಿಳಿ ಮಿಶ್ರ ಬಣ್ಣವಿರುವ ನಾಯಿಗಳಿಗೆ ಆಹಾರ ನೀಡುವುದು ಬಹಳ ಮುಖ್ಯ. ಮನೆಯಲ್ಲಿ ನಾಯಿಯನ್ನು ಸಾಕಿದ್ದಲ್ಲಿ ಅವುಗಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಇದರಿಂದ ಉತ್ತಮ ಫಲಗಳು ದೊರೆಯುತ್ತದೆ.
ಮೀನ ರಾಶಿ
ಮೀನ ರಾಶಿಯವರು ತೆಗೆದುಕೊಳ್ಳುವ ನಿರ್ಧಾರಗಳನ್ನು ಉಳಿಸಿಕೊಳ್ಳುವುದಿಲ್ಲ. ಆದರೆ ಪಂಚಮದಲ್ಲಿ ರಾಹು ನೆಲೆಸಿದ್ದಲ್ಲಿ ಇವರಿಗೆ ಉತ್ತಮ ಆತ್ಮವಿಶ್ವಾಸವಿರುತ್ತದೆ. ದೃಢವಾದ ಸಂಕಲ್ಪದಿಂದ ಸದಾ ಚುರುಕಿನಿಂದ ತಮ್ಮ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುತ್ತಾರೆ. ಆದರೆ ಸುಲಭವಾಗಿ ಬೇರೆಯವರ ಒತ್ತಡಕ್ಕೆ ಮಣಿಯುತ್ತಾರೆ. ಇದರಿಂದಾಗಿ ಕಪ್ಪು ಬಣ್ಣದ ನಾಯಿಗೆ ಆಹಾರ ನೀಡುವುದು ಬಲು ಮುಖ್ಯ. ಇದರಿಂದ ಶುಭಫಲಗಳನ್ನು ಪಡೆಯಬಹುದು.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ.)