ಮಹಾ ಕುಂಭಮೇಳಕ್ಕೆ ಹೋಗುವ ಪ್ಲಾನ್ ಇದೆಯಾ? ಈ 7 ಪವಿತ್ರ ಘಾಟ್ ಗಳನ್ನು ಕಣ್ತುಂಬಿಕೊಂಡು ಬನ್ನಿ -ಮಹಾ ಕುಂಭಮೇಳ 2025
Nov 21, 2024 11:48 AM IST
ಪ್ರಯಾಗ್ ರಾಜ್ ನಲ್ಲಿರುವ ಪ್ರಮುಖ ಘಾಟ್ ಗಳಲ್ಲಿ ಒಂದಾಗಿರುವ ದಶಾಶ್ವಮೇಧ ಘಾಟ್ ನ ವಿಹಂಗಮ ನೋಟ.
- ಮಹಾ ಕುಂಭಮೇಳ 2025: ಹೊಸ ವರ್ಷದ ಮಕರ ಸಂಕ್ರಾಂತಿ ಹಬ್ಬಕ್ಕೆ ಎರಡು ದಿನ ಮುಂಚಿತವಾಗಿ ಮಹಾ ಕುಂಭ ಮೇಳ ಆರಂಭವಾಗುತ್ತದೆ. ನೀವೇನಾದರೂ ಕುಂಭಮೇಳದ ಪವಿತ್ರ ಸ್ನಾನಕ್ಕೆ ಹೋಗುವ ಪ್ಲಾನ್ ಮಾಡುತ್ತಿದ್ದರೆ ತಪ್ಪದೇ ಈ ಏಳು ಪವಿತ್ರ ಘಾಟ್ ಗಳಿಗೆ ಭೇಟಿ ಕೊಟ್ಟು ಬನ್ನಿ. ಘಾಟ್ ಗಳ ಮಾಹಿತಿ ಇಲ್ಲಿದೆ.
ಪ್ರಯಾಗ್ ರಾಜ್‌ನಲ್ಲಿ ನಡೆಯಲಿರುವ 2025ರ ಮಹಾ ಕುಂಭ ಮೇಳ ಕೇವಲ ಧಾರ್ಮಿಕ ಹಬ್ಬವಲ್ಲ, ಅದೊಂದು ಅಧ್ಯಾತ್ಮಿಕ ಪಯಣ. ಜನರು ಪಾಪಗಳಿಂದ ಶುದ್ಧರಾಗಲು ಗಂಗಾ, ಯಮುನಾ ಮತ್ತು ಸರಸ್ವತಿಯಂತಹ ಪವಿತ್ರ ನದಿಗಳಲ್ಲಿ ಸ್ನಾನ ಮಾಡುತ್ತಾರೆ. ಇದು ಮೋಕ್ಷವನ್ನು ಪಡೆಯುವ ಮಾರ್ಗವೆಂದು ಪರಿಗಣಿಸಲಾಗಿದೆ. ಮಹಾ ಕುಂಭ ಮೇಳವು 2025ರ ಜನವರಿ 13 ರಿಂದ ಫೆಬ್ರವರಿ 26 ರವರೆಗೆ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯಲಿದೆ. ಇದು ಪುಷ್ಯ ಪೌರ್ಣಮಿಯಂದು ಪ್ರಾರಂಭವಾಗುತ್ತದೆ ಮತ್ತು ಮಹಾ ಶಿವರಾತ್ರಿಯಂದು ಕೊನೆಗೊಳ್ಳುತ್ತದೆ. 12 ವರ್ಷಗಳ ನಂತರ ಪ್ರಯಾಗ್ ರಾಜ್ ನಲ್ಲಿ ಕುಂಭ ಮೇಳ ನಡೆಯಲಿದೆ. ಮುಂದಿನ ವರ್ಷದ ಮಹಾ ಕುಂಭ ಮೇಳದಲ್ಲಿ ನೀವು ಪವಿತ್ರ ಸ್ನಾನ ಮಾಡಲು ಬಯಸುವುದಾದರೆ ಈ 7 ಪವಿತ್ರ ಘಾಟ್ ಗಳ ಬಗ್ಗೆ ತಿಳಿಯಿರಿ.
ತಾಜಾ ಫೋಟೊಗಳು
ದಶಾಶ್ವಮೇಧ ಘಾಟ್
ಈ ಘಾಟ್ ಪ್ರಾಚೀನ ದಂತಕಥೆಗಳೊಂದಿಗೆ ಸಂಬಂಧಿಸಿದೆ. ಇದು ಪ್ರಯಾಗ್ ರಾಜ್‌ನಲ್ಲಿರುವ ಪ್ರಮುಖ ಘಾಟ್‌ಗಳಲ್ಲಿ ಒಂದಾಗಿದೆ. ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇಲ್ಲಿ ಹತ್ತು ಅಶ್ವಮೇಧ ಯಜ್ಞಗಳನ್ನು ಮಾಡಿದನೆಂದು ಹೇಳಲಾಗುತ್ತದೆ. ಅಧ್ಯಾತ್ಮಿಕ ಶಕ್ತಿಗೆ ಹೆಸರುವಾಸಿಯಾಗಿರುವ ಈ ಘಾಟ್ ಮಹಾ ಕುಂಭ ಮೇಳದ ಸಮಯದಲ್ಲಿ ಭೇಟಿ ನೀಡಲೇಬೇಕು. ಇಲ್ಲಿ ಸ್ನಾನ ಮಾಡುವುದರಿಂದ ಪಾಪಗಳಿಂದ ಮುಕ್ತರಾಗಿ ದೇವರ ಅನುಗ್ರಹ ದೊರೆಯುತ್ತದೆ ಎಂಬುದು ಭಕ್ತರ ನಂಬಿಕೆ.
ಕಿಲಾ ಘಾಟ್
ಕಿಲಾ ಘಾಟ್ ಐತಿಹಾಸಿಕ ಅಕ್ಬರ್ ಕೋಟೆಯ ಸಮೀಪದಲ್ಲಿದೆ. ಈ ಸ್ಥಳವು ಅತ್ಯಂತ ಅಧ್ಯಾತ್ಮಿಕವಾಗಿದೆ. ಇತರ ಘಾಟ್‌ಗಳಿಗೆ ಹೋಲಿಸಿದರೆ ಇಲ್ಲಿ ಜನದಟ್ಟಣೆ ಕಡಿಮೆ. ಧ್ಯಾನ ಮಾಡಲು ಬಯಸುವವರಿಗೆ ಇದು ಸೂಕ್ತ ಸ್ಥಳವಾಗಿದೆ. ಪ್ರಶಾಂತ ಪರಿಸರವು ಮನಸ್ಸಿಗೆ ತುಂಬಾ ಹಿತವಾಗಿದೆ. ಇಲ್ಲಿಗೆ ಭೇಟಿ ನೀಡುವುದರಿಂದ ಉತ್ತಮ ಅಧ್ಯಾತ್ಮಿಕ ಅನುಭವದೊಂದಿಗೆ ನೀವು ಹಿಂತಿರುಗಿದ ಭಾವನೆಯನ್ನು ನೀಡುತ್ತದೆ.
ರಸೂಲಾಬಾದ್ ಘಾಟ್
ಈ ಘಾಟ್ ಶಾಂತಿಯುತ ವಾತಾವರಣಕ್ಕೆ ಹೆಸರುವಾಸಿಯಾಗಿದೆ. ಇಲ್ಲಿಗೆ ಬರುವ ಯಾತ್ರಿಕರು ತಮ್ಮ ಪೂರ್ವಜರಿಗೆ ಶ್ರಾದ್ಧ ಆಚರಣೆಗಳನ್ನು ಮಾಡುತ್ತಾರೆ. ಸ್ನಾನದ ಜೊತೆಗೆ ಇತರ ಆಚಾರ್ಯ ಕಾರ್ಯಗಳನ್ನು ಮಾಡಲು ಬಯಸುವವರು ಈ ಘಾಟ್‌ಗೆ ಭೇಟಿ ನೀಡಬಹುದು.
ನೌಕಾಯನ್ ಘಾಟ್
ಹೆಸರಿನಲ್ಲಿ ಹಡಗು ಇದೆ. ಅಂದರೆ ಅದು ಬೋಟಿಂಗ್ ಘಾಟ್. ತ್ರಿವೇಣಿ ಸಂಗಮದ ಭವ್ಯವಾದ ನೋಟವನ್ನು ಇಲ್ಲಿ ಕಾಣಬಹುದು. ಪವಿತ್ರ ನದಿಗಳಲ್ಲಿ ದೋಣಿ ವಿಹಾರ ಮಾಡಲು ಮತ್ತು ಅಧ್ಯಾತ್ಮಿಕತೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುವವರಿಗೆ ಈ ಘಾಟ್ ಉತ್ತಮ ಸ್ಥಳವಾಗಿದೆ. ಇಲ್ಲಿ ತುಂಬಾ ಶಾಂತಿಯುತವಾಗಿದೆ. ಸುತ್ತಮುತ್ತಲಿನ ಸೌಂದರ್ಯವು ಮರೆಯಲಾಗದ ಅನುಭವವನ್ನು ನೀಡುತ್ತದೆ.
ಮಹೇವ ಘಾಟ್
ಪವಿತ್ರ ಘಾಟ್ ಗಳಲ್ಲಿ ಮಹೇವ ಘಾಟ್ ಕೂಡ ಒಂದಾಗಿದೆ. ಇತರೆ ಘಾಟ್‌ಗಳಿಗೆ ಹೋಲಿಸಿದರೆ ಇಲ್ಲಿ ಸೌಲಭ್ಯಗಳು ಕಡಿಮೆ. ಆದರೆ ಯಾವುದೇ ಅಡೆತಡೆಯಿಲ್ಲದೆ ಶಾಂತಿಯುತವಾದ ನದಿ ಸ್ನಾನವನ್ನು ಆನಂದಿಸಲು ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಯಾತ್ರಾರ್ಥಿಗಳು ಮುಂಜಾನೆಯೇ ಇಲ್ಲಿಗೆ ತಲುಪುತ್ತಾರೆ. ಇಲ್ಲಿ ಸ್ನಾನ, ಧ್ಯಾನ ಹಾಗೂ ಪ್ರಾರ್ಥನೆಗಳನ್ನು ಮಾಡಲಾಗುತ್ತದೆ.
ಸರಸ್ವತಿ ಘಾಟ್
ಪ್ರಯಾಗ್ ರಾಜ್‌ನಲ್ಲಿರುವ ಪ್ರಮುಖ ಘಾಟ್ ಎಂದರೆ ಸರಸ್ವತಿ ಘಾಟ್. ಕುಂಭ ಮೇಳದ ಸಮಯದಲ್ಲಿ, ಅನೇಕ ಭಕ್ತರು ಸ್ನಾನ ಮಾಡಲು ಇಲ್ಲಿಗೆ ಬರುತ್ತಾರೆ. ಸುಂದರವಾಗಿ ನಿರ್ಮಿಸಲಾದ ಮೆಟ್ಟಿಲುಗಳು, ವಾತಾವರಣವು ತುಂಬಾ ಆರಾಮದಾಯಕವಾಗಿದೆ. ಅದಕ್ಕಾಗಿಯೇ ಇಲ್ಲಿಗೆ ಅನೇಕ ಭಕ್ತರು ಬರುತ್ತಾರೆ.
ಜ್ಞಾನ ಗಂಗಾ ಘಾಟ್
ಇದನ್ನು ಜ್ಞಾನ ಗಂಗಾ ಎಂದು ಕರೆಯಲಾಗುತ್ತದೆ. ಜ್ಞಾನೋದಯದ ಸ್ಥಳವೆಂದು ಪರಿಗಣಿಸಲಾಗಿದೆ. ಹೆಚ್ಚಾಗಿ ಋಷಿಮುನಿಗಳು ಮತ್ತು ವಿದ್ವಾಂಸರು ಧ್ಯಾನಕ್ಕಾಗಿ ಇಲ್ಲಿಗೆ ಬರುತ್ತಿದ್ದರು ಎಂದು ಹೇಳಲಾಗುತ್ತದೆ. ಅಧ್ಯಾತ್ಮಿಕ ಜ್ಞಾನವನ್ನು ಅಭಿವೃದ್ಧಿಪಡಿಸಲು ಇದು ಪರಿಪೂರ್ಣ ಸ್ಥಳವಾಗಿದೆ. ಭಕ್ತಿಯ ವಾತಾವರಣವಿದೆ.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.