Bhagavad Gita: ಪರಮಾತ್ಮನ ಬಗ್ಗೆ ತಿಳಿದುಕೊಂಡರೆ ಮನುಷ್ಯ ಜೀವನದ ಅಮೃತ ಸವಿಯಬಹುದು; ಭಗವದ್ಗೀತೆಯ ಸಾರಾಂಶ ಹೀಗಿದೆ
Aug 27, 2024 06:33 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
- Bhagavad Gita: ಪರಮಾತ್ಮನ ಬಗ್ಗೆ ತಿಳಿದುಕೊಂಡರೆ ಮನುಷ್ಯ ಜೀವನದ ಅಮೃತ ಸವಿಯಬಹುದು ಎಂಬುದರ ಅರ್ಥವನ್ನು ಭಗವದ್ಗೀತೆಯ 13 ನೇ ಅಧ್ಯಾಯದ 13 ನೇ ಶ್ಲೋಕದಲ್ಲಿ ತಿಳಿಯಿರಿ.
ಅಧ್ಯಾಯ - 13: ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ - 13
ಜ್ಞೇಯಂ ಯತ್ತತ್ಪ್ರವಕ್ಷ್ಯಾಮಿ ಯಜ್‌ಜ್ಞಾತ್ವಾಮೃತಮಶ್ನುತೇ |
ಅನಾದಿ ಮತ್ಪರಂ ಬ್ರಹ್ಮ ನ ಸತ್ತನ್ನಾಸದುಚ್ಯತೇ ||13||
ಅನುವಾದ: ಯಾವ ಜ್ಞಾನವನ್ನು ತಿಳಿದುಕೊಂಡು ನೀನು ಅಮೃತತ್ವವನ್ನು ಸವಿಯುವೆಯೋ ಆ ಜ್ಞೇಯವಾದುದನ್ನು ವಿವರಿಸುತ್ತೇನೆ. ಅನಾದಿಯಾದ ಮತ್ತು ನನಗೆ ಅಧೀನವಾದ ಬ್ರಹ್ಮನ್ ಈ ಐಹಿಕ ಜಗತ್ತಿನ ಕಾರ್ಯಕಾರಣದಾಚೆ ಇದೆ.
ತಾಜಾ ಫೋಟೊಗಳು
ಭಾವಾರ್ಥ: ಪ್ರಭುವು ಕ್ಷೇತ್ರವನ್ನೂ ಕ್ಷೇತ್ರಜ್ಞನನ್ನೂ ವಿವರಿಸಿದ್ದಾನೆ. ಕ್ಷೇತ್ರಜ್ಞನನ್ನು ತಿಳಿದುಕೊಳ್ಳಲು ಪ್ರಕ್ರಿಯೆಯನ್ನೂ ಅವನು ವಿವರಿಸಿದ್ದಾನೆ. ಈಗ ಅವನು ಜ್ಞೇಯವನ್ನು, ಎಂದರೆ ತಿಳಿದುಕೊಳ್ಳಲು ಸಾಧ್ಯವಿರುವುದನ್ನು, ವಿವರಿಸಲು ಪ್ರಾರಂಭಿಸುತ್ತಾನೆ. ಮೊದಲು ಆತ್ಮನನ್ನು ಅನಂತರ ಪರಮಾತ್ಮನನ್ನು ವಿವರಿಸುತ್ತಾನೆ. ಕ್ಷೇತ್ರಜ್ಞ, ಆತ್ಮ ಮತ್ತು ಪರಮಾತ್ಮ ಇವುಗಳನ್ನು ತಿಳಿದುಕೊಂಡು ಮನುಷ್ಯನು ಜೀವನದ ಅಮೃತವನ್ನು ಸವಿಯಬಹುದು. ಎರಡನೆಯ ಅಧ್ಯಾಯದಲ್ಲಿ ವಿವರಿಸಿದಂತೆ ಜೀವಿಯು ನಿತ್ಯನು, ಶಾಶ್ವತನು. ಇದನ್ನೂ ಇಲ್ಲಿ ದೃಢಪಡಿಸಿದೆ.
ಜೀವಿಯು ಹುಟ್ಟಿದ ನಿಶ್ಚಿತ ದಿನವಿಲ್ಲ. ಪರಮ ಪ್ರಭುವಿನಿಂದ ಅಭಿವ್ಯಕ್ತಿ ಪಡೆದ ಜೀವನಾತ್ಮನ ಇತಿಹಾಸವನ್ನು ಗುರುತಿಸಲು ಯಾರಿಗೂ ಸಾಧ್ಯವಿಲ್ಲ. ಆದುರಿಂದ ಅದು ಅನಾದಿ. ವೇದ ಸಾಹಿತ್ಯವು ಇದನ್ನು ದೃಢಪಡಿಸುತ್ತದೆ -ನ ಜಾಯತೇ ಮ್ರಿಯತೇ ವಾ ವಿಪಶ್ಚಿತ್ (ಕಠ ಉಪನಿಷತ್ತು 1.2.18) ಕ್ಷೇತ್ರಜ್ಞನು ಹುಟ್ಟುವುದೂ ಇಲ್ಲ, ಸಾಯುವುದೂ ಇಲ್ಲ. ಅವನು ಜ್ಞಾನದಿಂದ ತುಂಬಿದ್ದಾನೆ.
ವೈದಿಕ ಸಾಹಿತ್ಯದಲ್ಲಿ (ಶ್ವೇತಾಶ್ವತರ ಉಪನಿಷತ್ತು 6.16) ಪರಮ ಪ್ರಭುವು ಪರಮಾತ್ಮನಾಗಿ ಪ್ರಧಾನ ಕ್ಷೇತ್ರಜ್ಞ ಪತಿರ್ ಗುಣೇಶಃ ಎಂದು ಹೇಳಿದೆ. ಹೀಗೆಂದರೆ ಅವನು ಪ್ರಧಾನ ಕ್ಷೇತ್ರಜ್ಞ ಮತ್ತು ಐಹಿಕ ಪ್ರಕೃತಿಯ ತ್ರಿಗುಣಗಳ ಒಡೆಯ. ಸ್ಮೃತಿಯಲ್ಲಿ ಹೀಗೆ ಹೇಳಿದೆ - ದಾಸ ಭೂತೋ ಹರೇರ್ ಏವ ನಾನ್ಯಸ್ಯ್ವೈವ ಕದಾಚನ ಜೀವಿಗಳು ಪರಮ ಪ್ರಭುವಿನ ನಿರಂತರ ದಾಸರು.
ಇದನ್ನು ಚೈತನ್ಯ ಪ್ರಮಹಾಪ್ರಭುಗಳು ತಮ್ಮ ಉಪದೇಶಗಳಲ್ಲಿ ದೃಢಪಡಿಸಿದ್ದಾರೆ. ಆದುದರಿಂದ ಈ ಶ್ಲೋಕದಲ್ಲಿ ಪ್ರಸ್ತಾಪಿಸಿರುವ ಬ್ರಹ್ಮನ್ ವರ್ಣೆಯು ವ್ಯಕ್ತಿಗತ ಆತ್ಮಕ್ಕೆ ಸಂಬಂಧಿಸಿದ್ದು, ಬ್ರಹ್ಮ ಎನ್ನುವ ಪದವನ್ನು ಜೀವಿಗೆ ಅನ್ವಯಿಸಿದಾಗ ಅವನು ಆನಂದ ಬ್ರಹ್ಮನ್‌ಗೆ ವ್ಯತಿರಿಕ್ತನಾದ ವಿಜ್ಞಾನ ಬ್ರಹ್ಮನ್ ಎಂದು ಅರ್ಥಮಾಡಿಕೊಳ್ಳಬೇಕು. ಆನಂದ ಬ್ರಹ್ಮವು ದೇವೋತ್ತಮ ಪರಮ ಪುರುಷ ಅಥವಾ ಪರಬ್ರಹ್ಮನ್.