ಭಗವದ್ಗೀತೆ: ಫಲಾಪೇಕ್ಷೆ ಇಲ್ಲದೆ ಸೇವೆ ಮನುಷ್ಯನನ್ನು ಉನ್ನತ ಮಟ್ಟಕ್ಕೆ ತಲುಪಿಸುತ್ತೆ; ಗೀತೆಯ ಸಾರಾಂಶ ತಿಳಿಯಿರಿ
Jan 26, 2024 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಫಲಾಪೇಕ್ಷೆ ಇಲ್ಲದೆ ಸೇವೆ ಮನುಷ್ಯನನ್ನು ಉನ್ನತ ಮಟ್ಟಕ್ಕೆ ತಲುಪಿಸುತ್ತೆ ಎಂಬುದರ ಅರ್ಥ ತಿಳಿಯಿರಿ.
ಸನ್ನ್ಯಾಸಃ ಕರ್ಮಯೋಗಶ್ಚ ನಿಃ ಶ್ರೇಯಕರಾವುಭೌ |
ತಯೋಸ್ತು ಕರ್ಮಸನ್ಯಾಸಾತ್ ಕರ್ಮಯೋಗೋ ವಿಶಿಷ್ಯತೇ ||2||
ದೇವೋತ್ತಮ ಪುರುಷನು ಹೀಗೆ ಉತ್ತರಿಸಿದನು - ಕರ್ಮ ಸನ್ಯಾಸ ಮತ್ತು ಭಕ್ತಿಸೇವಾಕರ್ಮ ಎರಡೂ ಮುಕ್ತಿಪಥಕ್ಕೆ ಕೊಂಡೊಯ್ಯುತ್ತವೆ. ಆದರೆ ಇವೆರಡರಲ್ಲಿ ಭಕ್ತಿಸೇವಾಕರ್ಮವು ಕರ್ಮಸನ್ಯಾಸಕ್ಕಿಂತ ಉತ್ತಮ.
ತಾಜಾ ಫೋಟೊಗಳು
ಫಲಾಪೇಕ್ಷೆಯಿಂದ ಕೂಡಿದ (ಇಂದ್ರಿಯ ತೃಪ್ತಿಯನ್ನು ಬಯಸುವ) ಕರ್ಮಗಳು ಐಹಿಕ ಬಂಧನಕ್ಕೆ ಕಾರಣ. ದೈಹಿಕ ಸುಖದ ಮಟ್ಟವನ್ನು ಹೆಚ್ಚಿಸಿಕೊಳ್ಳುವ ಕಾರ್ಯಗಳಲ್ಲಿ ಮನುಷ್ಯನು ತೊಡಗಿರುವಷ್ಟು ಕಾಲವೂ ಆತನು ಒಂದು ಬಗೆಯ ದೇಹದಿಂದ ಇನ್ನೊಂದು ಬಗೆಯ ದೇಹಕ್ಕೆ ಸಾಗುತ್ತಿರುವುದು ಖಚಿತ. ಇದರಿಂದ ಐಹಿಕ ಬಂಧನವು ನಿರಂತರವಾಗಿ ಮುಂದುವರಿಯುತ್ತಿರುವುದು. ಶ್ರೀಮದ್ಭಾಗವತವು (5.5.4-6) ಇದನ್ನು ಹೀಗೆ ದೃಢಪಡಿಸುತ್ತದೆ.
ನೂನಂ ಪ್ರಮತ್ತಃ ಕುರುತೇ ವಿಕರ್ಮ
ಯದಿನ್ದ್ರಿಯಪ್ರೀತಯ ಆಪೃಣೋತಿ |
ನ ಸಾಧು ಮನ್ಯೇ ಯತ ಆತ್ಮನೋಯಮ್
ಆಸನ್ನಪಿ ಕ್ಲೇಶದ ಆಸ ದೇಹಃ ||
ಪರಾಭವಸ್ತಾವದಬೋಧಜಾತೋ
ಯಾವನ್ನ ಜಿಜ್ಞಾಸತ ಆತ್ಮತತ್ತ್ವಮ್ |
ಯಾವತ್ಕ್ರಿಯಾಸ್ತಾವದಿದಂ ಮನೋ ವೈ
ಕರ್ಮಾತ್ಮಕಂ ಯೇನ ಶರೀರಬದ್ಧಃ ||
ಏವಂ ಮನಃ ಕರ್ಮವಶಂ ಪ್ರಯುಂಕ್ತೇ
ಅವಿದ್ಯಯಾತ್ಮನ್ಯುಪಧೀಯಮಾನೇ |
ಪ್ರೀತಿರ್ನಯಾವನ್ಮಯಿ ವಾಸುದೇವೇ
ನ ಮುಚ್ಯತೇ ದೇಹಯೋಗೇನ ತಾವತ್ ||
ಇಂದ್ರಿಯ ತೃಪ್ತಿಗಾಗಿ ಜನರು ಉತ್ಮತ್ತರಾಗುತ್ತಾರೆ. ಯಾತನೆಗಳಿಂದ ತುಂಬಿದ ಈಗಿನ ಶರೀರವು ಹಿಂದಿನ ಜನ್ಮಗಳಲ್ಲಿ ಫಲಾಪೇಕ್ಷೆಯಿಂದ ಕರ್ಮಗಳನ್ನು ಮಾಡಿದ್ದರ ಪರಿಣಾಮ ಎಂದು ಅವರಿಗೆ ತಿಳಿಯದು. ದೇಹವು ಅಲ್ಪಕಾಲದ್ದಾದರೂ ಅನೇಕ ರೀತಿಗಳಲ್ಲಿ ತೊಂದರೆ ಕೊಡುತ್ತದೆ. ಆದುದರಿಂದ ಇಂದ್ರಿಯ ತೃಪ್ತಿಗಾಗಿ ಕ್ರಮಾಡುವುದು ಒಳ್ಳೆಯದಲ್ಲ. ಒಬ್ಬ ಮನುಷ್ಯನು ತನ್ನ ನಿಜವಾದ ಸ್ವರೂಪವನ್ನು ಕುರಿತು ಜಿಜ್ಞಾಸೆ ಮಾಡದೆ ಇರುವವರೆಗೆ ಅವನು ಬದುಕಿನಲ್ಲಿ ವಿಫಲನಾದವನು ಎಂದು ಭಾವಿಸಬೇಕು.
ನಿಜವಾದ ಸ್ವರೂಪವು ತಿಳಿಯುವವರೆಗೆ ಅವನು ಇಂದ್ರಿಯತೃಪ್ತಿಗಾಗಿ ಫಲಾಕ್ಷೆಯಿಂದ ಕರ್ಮವನ್ನು ಮಾಡಬೇಕಾಗುತ್ತದೆ. ಇಂದ್ರಿಯತೃಪ್ತಿಯ ಪ್ರಜ್ಞೆಯಲ್ಲಿ ಮುಳುಗಿರುವವರೆಗೆ ಮನುಷ್ಯನು ದೇಹದಿಂದ ಹೇದಕ್ಕೆ ಸಾಗುತ್ತಿರಬೇಕಾಗುತ್ತದೆ. ಮನಸ್ಸು ಕಾಮ್ಯಕರ್ಮವಶವಾಗಿದ್ದು ಅಜ್ಞಾನದ ಪ್ರಭಾವಕ್ಕೆ ಒಳಗಾಗಿದ್ದರೂ ಮನುಷ್ಯನು ವಾಸುದೇವನ ಭಕ್ತಿಸೇವೆಯಲ್ಲಿ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಮನುಷ್ಯನಿಗೆ ಐಹಿಕ ಅಸ್ತಿತ್ವದ ಬಂಧನದಿಂದ ಮುಕ್ತನಾಗುವ ಅವಕಾಶ ಲಭ್ಯವಾಗುತ್ತದೆ.
ಆದುದರಿಂದ ಜ್ಞಾನವು (ನಾನು ಈ ಜಡಶರೀರವಲ್ಲ, ಆತ್ಮ ಎಂಬ ಅರಿವು) ಮುಕ್ತಿಗೆ ಸಾಲದು. ಚೇತನಾತ್ಮನ ನೆಲೆಯಿಂದ ಮನುಷ್ಯನು ಕ್ರಿಯಾಶೀಲನಾಗಬೇಕಾಗುತ್ತದೆ. ಇಲ್ಲವಾದರೆ ಐಹಿಕ ಬಂಧನದಿಂದ ಮುಕ್ತಿಯಿಲ್ಲ. ಕೃಷ್ಣಪ್ರಜ್ಞೆಯಿಂದ ಕೂಡಿದ ಕರ್ಮವು ಮಾತ್ರ ಫಲಾಪೇಕ್ಷೆಯಿಂದ ಮಾಡಿದ ಕರ್ಮವಲ್ಲ. ಪೂರ್ಣಜ್ಞಾನದಿಂದ ಮಾಡಿದ ಕಾರ್ಯಚಟುವಟಿಕೆಗಳು ಮನುಷ್ಯನು ನಿಜವಾದ ಜ್ಞಾನವನ್ನು ಬೆಳೆಸಿಕೊಳ್ಳಲು ನೆರವಾಗುತ್ತದೆ. ಕೃಷ್ಣಪ್ರಜ್ಞೆಯಿಲ್ಲದೆ, ಫಲಾಪೇಕ್ಷೆಯಿಂದ ಕೆಲಸಗಳನ್ನು ತ್ಯಜಿಸಿದ ಮಾತ್ರಕ್ಕೆ ಹೃದಯವು ಪರಿಶುದ್ಧವಾಗುವುದಿಲ್ಲ.
ಹೃದಯವು ಪರಿಶುದ್ಧವಾಗುವವರೆಗೆ ಮನುಷ್ಯನು ಫಲಾಪೇಕ್ಷೆಯ ನೆಲೆಯಲ್ಲಿಯೇ ಕಾರ್ಯಮಾಡಬೇಕಾಗುತ್ತದೆ. ಆದರೆ ಕೃಷ್ಣಪ್ರಜ್ಞೆಯಲ್ಲಿ ಮಾಡಿದ ಕರ್ಮವು ತಂತಾನೇ ಕರ್ಮಫಲದಿಂದ ಮನುಷ್ಯನು ಬಿಡುಗಡೆ ಹೊಂದಲು ನೆರವಾಗುತ್ತದೆ. ಇದರಿಂದ ಮನುಷ್ಯನು ಐಹಿಕ ನೆಲೆಗೆ ಇಳಿಯುವ ಅಗತ್ಯವಿರುವುದಿಲ್ಲ. ಕರ್ಮತ್ಯಾಗದಲ್ಲಿ ವ್ಯಕ್ತಿಯು ವಿಫಲನಾಗುವ ಅಪಾಯ ಇದ್ದೇ ಇದೆ. ಆದ್ದರಿಂದ ಕೃಷ್ಣಪ್ರಜ್ಞೆಯಿಂದ ಕೂಡಿ ಕರ್ಮಾಚರಣೆ ಮಾಡುವುದು ಯಾವಾಗಲೂ ಕರ್ಮತ್ಯಾಗಕ್ಕಿಂತ ಉತ್ತಮವಾದದ್ದು. ಕೃಷ್ಣಪ್ರಜ್ಞೆ ಇಲ್ಲದ ಕರ್ಮತ್ಯಾಗವು ಅಪೂರ್ಣವಾದದ್ದು. ಶ್ರೀಲ ರೂಪಗೋಸ್ವಾಮಿಯವರು ತಮ್ಮ ಭಕ್ತಿರಸಾಮೃತಸಿಂಧುವಿನಲ್ಲಿ (1.2.258) ಇದನ್ನು ದೃಢಪಡಿಸಿದ್ದಾರೆ -
ಪ್ರಾಪಞ್ಚಿಕತಯಾ ಬುದ್ಧ್ಯಾ ಹರಿಸಮ್ಬನ್ಧಿವಸ್ತುನ |
ಮುಮುಕ್ಷುಭಿಃ ಪರಿತ್ಯಾಗೋ ವೈರಾಗ್ಯಂ ಫಲ್ಗು ಕಥ್ಯತೇ ||
ಮುಕ್ತಿಯನ್ನು ಸಾಧಿಸಲು ಕಾತರರಾಗಿರುವ ವ್ಯಕ್ತಿಗಳು ದೇವೋತ್ತಮ ಪರಮ ಪುರುಷನಿಗೆ ಸಂಬಂಧಿಸಿದ ವಿಷಯಗಳನ್ನು ಐಹಿಕವೆಂದು ಭಾವಿಸಿ ತ್ಯಜಿಸಿದರೆ ಅವರ ತ್ಯಾಗವನ್ನು ಅಪೂರ್ಣ ಎಂದು ಹೇಳಲಾಗುತ್ತದೆ. ಅಸ್ತಿತ್ವದಲ್ಲಿರುವ ಪ್ರತಿಯೊಂದು ವಸ್ತುವೂ ಭಗವಂತನಿಗೆ ಸೇರಿದ್ದು. ಯಾರೂ ಯಾವ ವಸ್ತುವಿನ ಮೇಲೂ ತಮ್ಮ ಒಡೆತನವನ್ನು ಸಾಧಿಸಬಾರದು ಎನ್ನುವ ಅವರಿನಿಂದ ಮಾಡಿದ ತ್ಯಾಗವು ಸಂಪೂರ್ಣವಾದದ್ದು. ವಾಸ್ತವವಾಗಿ ಯಾವುದೂ ಯಾರಿಗೂ ಸೇರಿದ್ದಲ್ಲ ಎನ್ನುವುದನ್ನು ತಿಳಿದುಕೊಳ್ಳಬೇಕು. ಹಾಗಿರುವಾಗ ತ್ಯಾಗದ ಪ್ರಶ್ನೆ ಎಲ್ಲಿ ಬಂತು? ಎಲ್ಲವೂ ಕೃಷ್ಣನಿಗೆ ಸೇರಿದ್ದು ಎನ್ನುವ ಅರಿವಿರುವ ವ್ಯಕ್ತಿಯು ಸದಾ ತ್ಯಾಗದಲ್ಲಿಯೇ ನೆಲೆಸಿರುತ್ತಾನೆ. ಎಲ್ಲವೂ ಕೃಷ್ಣನಿಗೆ ಸೇರಿದ್ದಾದ್ದರಿಂದ ಎಲ್ಲವನ್ನೂ ಕೃಷ್ಣನ ಸೇವೆಗೆ ಬಳಸಬೇಕು. ಮಾಯಾವಾದಿ ಪಂಥದ ಸನ್ಯಾಸಿಯು ಕೃತಕವಾಗಿ ಎಷ್ಟೇ ತ್ಯಾಗಮಾಡಿದರೂ ಕೃಷ್ಣಪ್ರಜ್ಞೆಯಲ್ಲಿ ಮಾಡುವ ಪರಿಪೂರ್ಣ ಕರ್ಮವು ಅದಕ್ಕಿಂತ ಬಹುಶ್ರೇಷ್ಠವಾಗದ್ದು.
ವಿಭಾಗ