Bhagavad Gita: ಲೌಕಿಕ ಚಾಣಾಕ್ಷತನವಿಲ್ಲದೆ ಶತ್ರುವಿಗೆ ಸತ್ಯವನ್ನು ಹೇಳುವ ನೇರ ನಡೆತೆಯೇ ಸರಳತೆ; ಭಗವದ್ಗೀತೆಯ ಅರ್ಥ ತಿಳಿಯಿರಿ
Aug 21, 2024 06:04 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
- Bhagavad Gita: ಲೌಕಿಕ ಚಾಣಾಕ್ಷತನವಿಲ್ಲದೆ ಶತ್ರುವಿಗೆ ಸತ್ಯವನ್ನು ಹೇಳುವ ನೇರ ನಡೆತೆಯೇ ಸರಳತೆ ಎಂಬುದರ ಅರ್ಥವನ್ನು ಭಗವದ್ಗೀತೆಯ 13 ನೇ ಅಧ್ಯಾಯದ 8 ರಿಂದ 12 ವರೆಗಿನ ಶ್ಲೋಕಗಳಲ್ಲಿನ ಮುಂದುವರಿದ ಭಾಗದಲ್ಲಿ ತಿಳಿಯಿರಿ.
ಅಧ್ಯಾಯ - 13: ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ - 8-12
ಅಮಾನಿತ್ವಮದಮ್ಭಿತ್ವಮಹಿಂಸಾ ಕ್ಷಾನ್ತಿರಾರ್ಜಮಮ್ |
ಆಚಾರ್ಯೋಪಾಸನಂ ಶೌಚಂ ಸ್ಥೈರ್ಯಮಾತ್ಮವಿನಿಗ್ರಹಃ ||8|
ಇನ್ದ್ರಿಯಾರ್ಥೇಷು ವೈರಾಗ್ಯಮನಹನ್ಕಾರ ಏವ ಚ |
ಜನ್ಮಮೃತ್ಯಜರಾವ್ಯಾಧಿದುಃಖದೋಷಾನುದರ್ಶನಮ್ ||9||
ಅಸಕ್ತಿರನಭಿಷ್ಟಂಗಃ ಪುತ್ರದಾರಗೃಹಾದಿಷು |
ನಿತ್ಯಂ ಚ ಸಮಚಿತ್ತತ್ವಮಿಷ್ಟಾನಿಷ್ಟೋಪಪತ್ತಿಷು ||10||
ಮಯಿ ಚಾನನ್ಯಯೋಗೇನ ಭಕ್ತಿರವ್ಯಭಿಚಾರಿಣೀ |
ವಿವಕ್ತದೇಶಸೇವಿತ್ವಮರತಿರ್ಜನಸಂಸದಿ ||11||
ಅಧ್ಯಾತ್ಮಜ್ಞಾನನಿತ್ಯತ್ವಂ ತತ್ತ್ವ ಜ್ಞಾನಾರ್ಥದರ್ಶನಮ್ |
ಏತಜ್‌ಜ್ಞಾನಮಿತಿ ಪ್ರೋಕ್ತಮಜ್ಞಾನಂ ಯದತೋನ್ಯಥಾ ||12||
ಅನುವಾದ: ನಮ್ರತೆ, ಜಂಬವಿಲ್ಲದಿರುವುದು, ಅಹಿಂಸೆ, ತಾಳ್ಮೆ, ಸರಳತೆ, ನಿಜವಾದ ಗುರುವಿನ ಬಳಿಗೆ ಹೋಗುವುದು, ಶೌಚ, ಸ್ಥೈರ್ಯ, ಆತ್ಮಸಂಯಮ, ಇಂದ್ರಿಯ ತೃಪ್ತಿಯ ವಸ್ತುಗಳಲ್ಲಿ ವೈರಾಗ್ಯ, ಅಹಂಕಾರವಿಲ್ಲದಿರುವುದು, ಜನ್ಮ, ಸಾವು, ಮುಪ್ಪು ಮತ್ತು ರೋಗಗಳ ಕೆಡುಕನ್ನು ಗ್ರಹಿಸುವುದು, ಅನಾಸಕ್ತಿ, ಮಕ್ಕಳು ಹೆಂಡತಿ, ಮನ ಮತ್ತಿತರ ವಿಷಯಗಳಲ್ಲಿ ಸಿಕ್ಕಿಕೊಳ್ಳದೆ ಮುಕ್ತವಾಗಿರುವುದು, ಇಷ್ಟಾನಿಷ್ಟಗಳ ಮಧ್ಯೆ ಸಮಚಿತ್ತತೆ, ನನ್ನಲ್ಲಿ ನಿರಂತರವಾದ ಮತ್ತು ಪರಿಶುದ್ಧವಾದ ಭಕ್ತಿ, ಏಕಾಂತಪ್ಪರದೇಶದಲ್ಲಿ ವಾಸಮಾಡುವ ಅಭಿಲಾಷೆ, ಜನಸಮೂಹದಲ್ಲಿ ಆಸಕ್ತಿಯಿಲ್ಲದಿರುವುದು, ಆತ್ಮಸಾಕ್ಷಾತ್ಕಾರದ ಮಹತ್ವವನ್ನು ಒಪ್ಪಿಕೊಳ್ಳುವುದು, ಪರಿಪೂರ್ಣ ಸತ್ಯದ ತತ್ವಜ್ಞಾನಾರ್ಥ ಅನ್ವೇಷಣೆ - ಇವೆಲ್ಲ ಜ್ಞಾನ ಎಂದು ನಾನು ಘೋಷಿಸುತ್ತೇನೆ. ಇದಲ್ಲದೆ ಇರುವುದೆಲ್ಲ ಅಜ್ಞಾನ.
ತಾಜಾ ಫೋಟೊಗಳು
ಭಗವದ್ಗೀತೆಯ 13 ನೇ ಅಧ್ಯಾಯದ 8 ರಿಂದ 12 ರವರೆಗಿನ ಶ್ಲೋಕಗಳ ಮುಂದುವರಿದ ಭಾಗದಲ್ಲಿ ತಾಳ್ಮೆ ಎಂದರೆ ಅಪಮಾನವನ್ನು ಅಗೌರವವನ್ನು ತಡೆದುಕೊಳ್ಳುವುದನ್ನು ಅಭ್ಯಾಸಮಾಡುವುದು. ಅಧ್ಯಾತ್ಮಿಕ ಜ್ಞಾನದಲ್ಲಿ ಮುಂದುವರಿಯುವುದರಲ್ಲಿ ನಿರತನಾದವಿಗೆ ಇತರರಿಂದ ಎಷ್ಟೋ ಅಮಾನಗಳು ಅಗೌರವವೂ ಆಗುತ್ತದೆ. ಐಹಿಕ ಪ್ರಕೃತಿಯ ರಚನೆಯೇ ಇಂತಹುದು. ಆದುದರಿಂದ ಇದು ನಿರಿಕ್ಷಿಸಬೇಕಾದದ್ದೇ (Bhagavad Gita Updesh in Kannada).
ಐದೇ ವರ್ಷ ವಯಸ್ಸಿನ ಹುಡುಗ ಪ್ರಹ್ಲಾದನು ಅಧ್ಯಾತ್ಮಿಕ ಜ್ಞಾನವನ್ನು ಬೆಳೆಸಿಕೊಳ್ಳುವುದರಲ್ಲಿ ತೊಡಗಿದ್ದ. ಅವನ ತಂದೆಯು ಅವನ ಭಕ್ತಿಗೆ ವಿರೋಧಿಯಾದಾಗ ಹುಡುಗನಿಗೆ ಅಪಾಯವಾಯಿತು. ಅವನ ತಂದೆಯು ಅವನನ್ನು ಕೊಲ್ಲಲು ಅನೇಕ ರೀತಿಗಳಲ್ಲಿ ಪ್ರಯತ್ನಿಸಿದ. ಆದರೆ ಪ್ರಹ್ಲಾದನು ಅದನ್ನು ಸಹಿಸಿಕೊಂಡ. ಹೀಗೆ ಅಧ್ಯಾತ್ಮಿಕ ಜ್ಞಾನದಲ್ಲಿನ ಪ್ರಗತಿಗೆ ಎಷ್ಟೋ ಅಡ್ಡಿಗಳಿರಬಹುದು. ಆದರೆ ನಾವು ಸಹನೆಯಿಂದಿರಬೇಕು ಮತ್ತು ದೃಢಸಂಕಲ್ಪದಿಂದ ನಮ್ಮ ಪ್ರಗತಿಯನ್ನು ಮುಂದುವರಿಸಬೇಕು.
ಸರಳತೆ ಎಂದರೆ ಮನುಷ್ಯನು ಲೌಕಿಕ ಚಾಣಾಕ್ಷತನವಿಲ್ಲದೆ ಶತ್ರುವಿಗೂ ಸತ್ಯವನ್ನು ಹೇಳಿಬಿಡುವಷ್ಟು ನೇರವಾದ ನಡೆತೆ. ವ್ಯಕ್ತಿಯು ಗುರುವನ್ನು ಸ್ವೀಕರಿಸುವುದು ಅತ್ಯಗತ್ಯ. ಏಕೆಂದರೆ ಒಬ್ಬ ಸದ್ಗುರುವಿನ ಉಪದೇಶವಿಲ್ಲದೆ ಮನುಷ್ಯನು ಅಧ್ಯಾತ್ಮಿಕ ವಿಜ್ಞಾನದಲ್ಲಿ ಮುಂದುವರಿಯಲಾರ. ಅತ್ಯಂತ ನಮ್ರತೆಯಿಂದ ಗುರುವಿನ ಬಳಿಗೆ ಹೋಗಬೇಕು ಮತ್ತು ಎಲ್ಲ ರೀತಿಗಳಲ್ಲಿ ಅವನ ಸೇವೆಯನ್ನು ಮಾಡಬೇಕು. ಇದರಿಂದ ಆತನು ಶಿಷ್ಯನಿಗೆ ಆಶೀರ್ವಾದವನ್ನು ಅನುಗ್ರಹಿಸುತ್ತಾನೆ. ಸದ್ಗುರುವು ಕೃಷ್ಣನ ಪ್ರತಿನಿಧಿ. ಆದುದರಿಂದ ಆತನು ಶಿಷ್ಯನಿಗೆ ಆಶೀರ್ವಾದವನ್ನು ಮಾಡಿದರೆ, ಶಿಷ್ಯನು ನಿಯಂತ್ರಕ ತತ್ವಗಳನ್ನು ಪರಿಪಾಲಿಸದೆಯೇ ಕೂಡಲೇ ಪ್ರಗತಿಯನ್ನು ಸಾಧಿರಸುತ್ತಾನೆ. ಅಥವಾ, ಯಾವುದೇ ಹಿಂಜರಿಕೆಯಿಲ್ಲದೆ ಗುರುವಿನ ಸೇವೆ ಮಾಡಿದವನಿಗೆ ನಿಯಂತ್ರಕ ತತ್ವಗಳು ಇನ್ನೂ ಸುಲಭವಾಗುತ್ತವೆ.
ಅಧ್ಯಾತ್ಮಿಕ ಜೀವನದಲ್ಲಿ ಪ್ರಗತಿಯನ್ನು ಸಾಧಿಸಲು ಶುಚಿತ್ವವು ಅಗತ್ಯ. ಶುಚಿತ್ವದಲ್ಲಿ ಎರಡು ಬಗೆಗಳು - ಬಹಿರಂಗ ಮತ್ತು ಅಂತರಂಗ. ಬಹಿರಂಗ ಶುಚಿತ್ವ ಎಂದರೆ ಸ್ನಾನ ಮಾಡುವುದು. ಆದರೆ ಅಂತರಂಗ ಶುಚಿತ್ವಕ್ಕೆ ಮನುಷ್ಯನು ಸದಾ ಕೃಷ್ಣನನ್ನು ಕುರಿತು ಚಿಂತಿಸಬೇಕು ಮತ್ತು ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಎಂದು ಸಂಕೀರ್ತನೆ ಮಾಡಬೇಕು. ಇದು ಸಂಚಿತವಾದ ಹಿಂದಿನ ಕರ್ಮವನ್ನು ಮನಸ್ಸಿನಿಂದ ತೊಡೆದು ಹಾಕಿ ಸ್ವಚ್ಛಗೊಳಿಸುತ್ತದೆ.