Sarpa Dosha: ಹಾಸನದ ಈ ದೇವಸ್ಥಾನಕ್ಕೆ ಭೇಟಿ ನೀಡಿದರೆ ಸರ್ಪದೋಷ ನಿವಾರಣೆ ಆಗುವುದರಲ್ಲಿ ಎರಡು ಮಾತಿಲ್ಲ, ಹೆಚ್ಚಿನ ಮಾಹಿತಿಗೆ ಇದನ್ನುಓದಿ
Aug 16, 2023 10:10 PM IST
ಹಾಸನದ ಚನ್ನರಾಯಪಟ್ಟಣದಲ್ಲಿರುವ ಶ್ರೀ ನಾಗೇಶ್ವರಸ್ವಾಮಿ ದೇವಾಲಯ
ಸರ್ಪ ದೋಷ ನಿವಾರಣೆಗೆ ಒಂದು ಅದ್ಭುತವಾದ ದೇವಾಲಯ ನಮ್ಮ ಕರ್ನಾಟಕದಲ್ಲಿದೆ. ಜಮದಗ್ನಿ ಮಹರ್ಷಿಯು ನಿರ್ಮಿಸಿದ ಸುರಂಗಮಾರ್ಗವನ್ನು ಇಂದಿಗೂ ಕಾಣಬಹುದು. ಇಲ್ಲಿನ ನೀರಿನಿಂದ ಸ್ನಾನ ಮಾಡಿದಲ್ಲಿ ಚರ್ಮದೋಷ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ.
ಬಹುತೇಕ ಜನರಿಗೆ ಸರ್ಪ ದೋಷದ ಬಗ್ಗೆ ಹೆಚ್ಚಿನ ಭಯವಿರುತ್ತದೆ. ಆದರೆ ಯಾವುದೇ ಸಮಸ್ಯೆ ಇದ್ದರೂ ಅದಕ್ಕೆ ತಕ್ಕ ಪರಿಹಾರವನ್ನು ಆ ದೇವರೇ ಸೂಚಿಸುತ್ತಾನೆ. ಸರ್ಪದೋಷವು ಕೇವಲ ರಾಹು ಕೇತು ಮತ್ತು ಕುಜ ಗ್ರಹಗಳಿಂದ ಮಾತ್ರ ಬರುವುದಿಲ್ಲ.
ತಾಜಾ ಫೋಟೊಗಳು
ದಂಪತಿಯ ಜಾತಕದಲ್ಲಿ ದೋಷ ಇದ್ದರೆ ಸಮಸ್ಯೆ
ಮುಖ್ಯವಾದ ವಿಚಾರವೆಂದರೆ ಸರ್ಪ ದೋಷವು ಕೇವಲ ಪತಿಯ ಜಾತಕದಲ್ಲಿ ಇದ್ದಲ್ಲಿ ಯಾವುದೇ ತೊಂದರೆ ಇಲ್ಲ. ಹಾಗೆಯೇ ಪತ್ನಿಯ ಜಾತಕದಲ್ಲಿ ಮಾತ್ರ ಇದ್ದರೂ ಯಾವುದೇ ತೊಂದರೆ ಉಂಟಾಗುವುದಿಲ್ಲ. ಆದರೆ ದಂಪತಿ ಇಬ್ಬರ ಜಾತಕಗಳಲ್ಲಿ ಸರ್ಪದೋಷವಿದ್ದಲ್ಲಿ ಮಾತ್ರ ತೊಂದರೆ ಎದುರಾಗುತ್ತದೆ. ಉದಾಹರಣೆಗೆ ಕುಜನಿಂದ ಸರ್ಪ ದೋಷ ಉಂಟಾಗಿದೆ ಎಂದು ಭಾವಿಸೋಣ. ಆದರೆ ಕುಜನೊಂದಿಗೆ ಗುರು ಇದ್ದಲ್ಲಿ ಅಥವಾ ಕುಜನಿಗೆ ಗುರುವಿನ ದೃಷ್ಟಿ ಇದ್ದಲ್ಲಿ ಅಥವಾ ಕುಜನೇ ಒಂಬತ್ತನೇ ಮನೆಯ ಅಧಿಪತಿ ಆಗಿದ್ದಲ್ಲಿ ಕುಜ ದೋಷ ಅಥವಾ ಸರ್ಪ ದೋಷ ಪರಿಗಣನೆ ಮಾಡಲೇಬಾರದು. ಕುಜನೊಂದಿಗೆ ರಾಹು ಅಥವಾ ಕೇತು ಇದ್ದಲ್ಲಿ ಸರ್ಪ ದೋಷ ಪ್ರಬಲವಾಗಿರುತ್ತದೆ.
ಆರೋಗ್ಯ ಹಣಕಾಸಿನ ತೊಂದರೆ
ಹಾಗೆಯೇ ಲಗ್ನದ ಆದಿಯಾಗಿ ಎಲ್ಲಾ ಗ್ರಹಗಳು ರಾಹು ಕೇತುಗಳ ಮಧ್ಯೆ ಸ್ಥಿತರಾದಲ್ಲಿ ಅದನ್ನು ಕಾಳಸರ್ಪ ದೋಷ ಎಂದು ಕರೆಯುತ್ತೇವೆ. ಒಂದು ವೇಳೆ ಸರ್ಪ ದೋಷ ಜಾತಕದಲ್ಲಿ ಇದ್ದಿದ್ದೇ ಆದಲ್ಲಿ ಇದರ ಕೆಟ್ಟ ಪರಿಣಾಮ ಜಾತಕನ ಮೇಲೆ ಸದಾ ಇರುವುದಿಲ್ಲ. ಕೇವಲ ಆಯಾ ಗ್ರಹಗಳ ದಶಾಭುಕ್ತಿ ಅಂತರ್ಭುಕ್ತಿಗಳು ಬಂದರೆ ಮಾತ್ರ ತೊಂದರೆ ಉಂಟಾಗುತ್ತದೆ. ಶನಿಯಿಂದಲೂ ಸರ್ಪದೋಷ ಬರುತ್ತದೆ. ದೂಷಿತ ರವಿಯು ಪಂಚಮ ಸ್ಥಾನದಲ್ಲಿ ಇದ್ದರೆ ಅದು ಕೂಡಾ ಸರ್ಪ ದೋಷವೇ ಆಗುತ್ತದೆ. ಸರ್ಪ ದೋಷ ಎಂದ ಮಾತ್ರಕ್ಕೆ ಮಕ್ಕಳು ಆಗುವುದಿಲ್ಲ ಎಂಬ ತೀರ್ಮಾನಕ್ಕೆ ಬರಬಾರದು. ಸರ್ಪ ದೋಷದಿಂದಾಗಿ ಆರೋಗ್ಯದಲ್ಲಿ, ಹಣಕಾಸಿನ ವಿಚಾರದಲ್ಲಿ ತೊಂದರೆ ಕಂಡು ಬರಬಹುದು. ಸಹೋದರರ ನಡುವೆ ಭಿನ್ನಾಭಿಪ್ರಾಯ ಮೂಡಬಹುದು. ರವಿಯಿಂದ ಜಗಳವಾಗಬಹುದು.
ಪರಿಹಾರ
ಆದರೆ ಈ ಸರ್ಪ ದೋಷದ ವಿಚಾರ ಏನೇ ಆಗಿರಲಿ ದೋಷದಿಂದ ಮುಕ್ತಿ ಹೊಂದಲು ಜ್ಯೋತಿಷ್ಯದಲ್ಲಿ ಅನೇಕ ಪರಿಹಾರಗಳು ದೊರೆಯುತ್ತವೆ. ಸರ್ಪ ದೋಷ ಶ್ರೀಮಂತರು ಬಡವರು ಎಂದು ನೋಡಿ ಬರುವುದಿಲ್ಲ. ಹಣವಿದ್ದವರು ಹೋಮ ಹವನ ಮಾಡುತ್ತಾರೆ. ಹಾಗಾದರೆ ಬಡವರ ಪಾಡೇನು? ಈ ಕಾರಣದಿಂದ ಭೂಲೋಕದಲ್ಲಿ ದೇವರು ಬೇರೆ ಬೇರೆ ರೂಪದಲ್ಲಿ ನೆಲೆಸಿದ್ದಾನೆ. ಕೆಲವು ಪುಣ್ಯಕ್ಷೇತ್ರಗಳಿಗೆ ಶುದ್ಧವಾದ ಮನಸ್ಸಿನಿಂದ ಭೇಟಿಯಾದರೆ ಸಾಕು ನಮಗೆ ಶುಭ ಫಲಗಳು ಖಂಡಿತ ದೊರೆಯುತ್ತವೆ.
ಸರ್ಪ ದೋಷ ನಿವಾರಣೆಗೆ ಒಂದು ಅದ್ಭುತವಾದ ದೇವಾಲಯ ನಮ್ಮ ಕರ್ನಾಟಕದಲ್ಲಿದೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣದ ನಾಗರ ನವಿಲೆ ಎಂಬ ಊರಿನಲ್ಲಿರುವ ಶ್ರೀ ನಾಗೇಶ್ವರಸ್ವಾಮಿ ದೇವಾಲಯ ಅತ್ಯುತ್ತಮ ಫಲಗಳನ್ನು ನೀಡುತ್ತದೆ. ಇಲ್ಲಿನ ವಿಶೇಷವೆಂದರೆ ಪರಸ್ಪರ ಶತ್ರುಗಳಾದ ಹಾವು ಮತ್ತು ನವಿಲುಗಳು ಒಂದೇ ಕಡೆ ಇದ್ದರೂ ತೊಂದರೆ ನೀಡುವುದಿಲ್ಲ. ಈ ಕಾರಣಕ್ಕಾಗಿ ನಾಗರ ನವಿಲೆ ಎಂಬ ಹೆಸರು ಬಂದಿದೆ ಎಂಬ ನಂಬಿಕೆ ಇದೆ.
ವಿಶೇಷ ಪೂಜೆಗಳಿಗೆ ಹೆಸರುವಾಸಿ
ಶಿವ ಪಾರ್ವತಿಯರ ವಿಗ್ರಹಗಳು ಇಲ್ಲಿವೆ. ಈ ಸ್ಥಳದಲ್ಲಿ ಗಿರಿಜಾ ಕಲ್ಯಾಣ ಮಾಡಿಸಿದಲ್ಲಿ ಅವಿವಾಹಿತರಿಗೆ ವಿವಾಹವಾಗುವುದು ಎಂಬ ನಂಬಿಕೆ ಇದೆ. ಶ್ರೀ ರಾಮನು ಇಲ್ಲಿ ಪೂಜೆ ಸಲ್ಲಿಸಿದ್ದರಿಂದ ಶುಭ ಫಲಗಳನ್ನು ಪಡೆದಿದ್ದಾರೆ ಎಂಬ ನಂಬಿಕೆ ಇರುತ್ತದೆ. ಜಮದಗ್ನಿ ಮಹರ್ಷಿಯು ನಿರ್ಮಿಸಿದ ಸುರಂಗಮಾರ್ಗವನ್ನು ಇಂದಿಗೂ ಕಾಣಬಹುದು. ಇಲ್ಲಿನ ನೀರಿನಿಂದ ಸ್ನಾನ ಮಾಡಿದಲ್ಲಿ ಚರ್ಮದೋಷ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ. ಹುಣ್ಣಿಮೆಯ ದಿನ ಈ ಸ್ಥಳದಲ್ಲಿ ಬಂಗಾರದ ಬಣ್ಣದ ನಾಗರಹಾವು ಸಂಚರಿಸುತ್ತದೆ ಎಂಬ ನಂಬಿಕೆ ಇದೆ. ಪ್ರತಿ ವರ್ಷ ಇಲ್ಲಿ ಚೈತ್ರಮಾಸದ ಶುದ್ಧ ಷಷ್ಠಿಯಂದು ಬ್ರಹ್ಮರಥೋತ್ಸವ ನಡೆಯುತ್ತದೆ.
ಈ ಕೆಳಕಂಡ ಶ್ಲೋಕಗಳನ್ನು ಪಠಿಸುವುವರಿಂದ ಶುಭ ಫಲಗಳನ್ನು ಪಡೆಯಬಹುದು.
ನಮಸ್ತೆ ಜಗದಾಧಾರ ನಮಸ್ತೆ ಕರುಣಾಕರ
ನಮಸ್ತೆ ಪಾರ್ವತಿನಾಥ ಶ್ರೀ ನಾಗೇಶ್ವರ ನಮೋಸ್ತುತೆ
ನಮಸ್ತೆ ದೇವ ದೇವೇಶ ನಮಸ್ತೆ ರುದ್ರಮನ್ಯವೇ
ನಮಸ್ತೆ ಚಂದ್ರಚೂಡಾಯಾ ಪ್ಯೂತೋತಾ ಎಕ್ಷವೇ ನಮ:
ನಮಸ್ತೆ ಪಾರ್ವತಿ ಕಾಂತ ನಮಸ್ತೆ ಮೇರು ಧನ್ವನೇ
ನಮಸ್ತೆ ಭಗವಾನ್ ಶಂಭೋ ಬಾಹುಭ್ಯಾಂ ಮುತಾತೇ ನಮ: