Ramadan 2024: ಆತ್ಮಶುದ್ಧಿ, ಆಧ್ಯಾತ್ಮ ಭಾವ ವೃದ್ಧಿಸುವ ತರಾವೀಹ ನಮಾಜ್; ರಂಜಾನ್ ಮಾಸದ ವಿಶೇಷ ಆಚರಣೆಯಿದು
Mar 14, 2024 08:21 PM IST
ತರಾವೀಹ ನಮಾಜ್
- ಪವಿತ್ರ ಮಾಸ ರಂಜಾನ್‌ನಲ್ಲಿ ಮುಸ್ಲಿಮರು ಹಲವು ಪದ್ಧತಿಗಳನ್ನು ಪಾಲಿಸುತ್ತಾರೆ. ಉಪವಾಸದ ಜೊತೆಗೆ ದಾನ ಮಾಡುವುದಕ್ಕೂ ಹೆಚ್ಚಿನ ಮಹತ್ವವಿದೆ. ರಂಜಾನ್ ಆಚರಣೆಯಲ್ಲಿ ತರಾವೀಹ ನಮಾಜ್‌ನ ಉದ್ದೇಶ ಹಾಗೂ ಮಹತ್ವ ತಿಳಿಯಿರಿ. (ಬರಹ: ಸಮೀವುಲ್ಲಾ ಉಸ್ತಾದ, ವಿಜಯಪುರ)
ಆಧ್ಯಾತ್ಮ ಭಾವವನ್ನು ವೃದ್ಧಿಗೊಳಿಸಿ ಆತ್ಮಶುದ್ಧಿಯ ದಾರಿ ತೋರುವ ಪವಿತ್ರ ರಂಜಾನ್ ಮಾಸದಲ್ಲಿ ರೋಜಾ ಆಚರಣೆ, ಜಕಾತ್ ವಿತರಣೆಯಂತೆ ಪ್ರಮುಖವಾದ ಧಾರ್ಮಿಕ ಆಚರಣೆ `ತರಾವೀಹ' ನಮಾಜ್. ರೋಜಾ ಆಚರಣೆಯು ಬಡವರ ಹಸಿವಿನ ನೋವು ಏನು ಎಂಬುದು ತಿಳಿಸುವ ಜೊತೆಗೆ ಸಹನ ಶಕ್ತಿ, ಆರೋಗ್ಯ ವೃದ್ಧಿಗೆ ಕಾರಣವಾದಂತೆ ರಂಜಾನ್ ತಿಂಗಳಲ್ಲಿ ತರಾವೀಹ ನಮಾಜ್ ಆಧ್ಯಾತ್ಮಿಕ ಭಾವವನ್ನು ಜಾಗೃತಗೊಳಿಸುವ ನಮಾಜ್ ಆಗಿದೆ. ಸಾವಿರಾರು ಮುಸ್ಲಿಮರು ಸಾಮೂಹಿಕವಾಗಿ ಈ ನಮಾಜ್ ನಿರ್ವಹಿಸುತ್ತಾರೆ.
ತಾಜಾ ಫೋಟೊಗಳು
ರಂಜಾನ್ ತಿಂಗಳ ವಿಶೇಷವಿದು
ಕೇವಲ ರಂಜಾನ್ ತಿಂಗಳಲ್ಲಿ ಮಾತ್ರ ಈ ನಮಾಜ್ ನಿರ್ವಹಣೆಯಲ್ಲಿ ಮುಸ್ಲಿಂ ಬಾಂಧವರು ತೊಡಗುತ್ತಾರೆ. ಇಸ್ಲಾಂ ಧರ್ಮದ ಫರ್ಜ (ಕರ್ತವ್ಯ)ದಂತೆ ಫಜರ್, ಜೋಹರ್, ಅಸರ್, ಮಗ್ರೀಬ್ ಹಾಗೂ ಇಷಾ ಎಂಬ ಐದು ನಮಾಜ್ ನಿರ್ವಹಿಸಬೇಕು, ರಂಜಾನ್ ಸಂದರ್ಭದಲ್ಲಿ ಉಪವಾಸ ಆಚರಿಸುವ ಮುಸ್ಲಿಂ ಬಾಂಧವರು ಇಫ್ತಿಯಾರ್ (ರೋಜಾ ಬಿಡುವ ಪ್ರಕ್ರಿಯೆ) ಕೈಗೊಳ್ಳುತ್ತಾರೆ, ನಂತರ ಮಗ್ರೀಬ್ ನಮಾಜ್ ಸಲ್ಲಿಸುತ್ತಾರೆ. ಇದಾದ ಸರಿ ಸುಮಾರು ಒಂದು ಗಂಟೆ ನಂತರ ಇಷಾ ನಮಾಜ್ ಸಲ್ಲಿಸಲಾಗುತ್ತದೆ, ಅದಾದ ನಂತರ ತರಾವೀಹ ನಮಾಜ್ ಸಲ್ಲಿಸಲಾಗುತ್ತದೆ.
ಕುರಾನ್ ವಾಣಿ ಪಠಿಸುವುದು ಕಡ್ಡಾಯ
ಪವಿತ್ರ ಕುರಾನ್ ಅನ್ನು ಬಾಯಿಪಾಠ ಮಾಡಿರುವ ʼಹಾಫೀಜ್' ಹಾಗೂ ಉಲೇಮಾಗಳು ಈ ಪವಿತ್ರ ನಮಾಜ್ ಓದಿಸುತ್ತಾರೆ, ಪವಿತ್ರ ಕುರಾನ್ ವಾಣಿಗಳನ್ನು ಪಠಿಸಲಾಗುತ್ತದೆ. ರಂಜಾನ್ ತಿಂಗಳು ಪೂರ್ಣಗೊಳ್ಳುವ ಸಮಯದಲ್ಲಿ ಇಡೀ ಪವಿತ್ರ ಕುರಾನ್‌ನ 6,666 ವಾಣಿಗಳು ಪಠಿಸಲ್ಪಡಬೇಕು ಎಂಬ ನಿಯಮವಿದೆ. 8, 20 ರಕಾತ್ (ನಮಾಜ್ ಸಲ್ಲಿಸುವ ಅವಧಿ) ನಲ್ಲಿ ಈ ನಮಾಜ್ ಸಲ್ಲಿಸುವ ನಿಯಮವಿದ್ದು, ಸರಿಸುಮಾರು 1 ರಿಂದ ಎರಡು ಗಂಟೆಗಳ ಅವಧಿ ತೆಗೆದುಕೊಳ್ಳುತ್ತದೆ. ಪ್ರತಿ ದಿನ ಪವಿತ್ರ ಕುರಾನ್‌ನ ಒಂದು ಜುಝ್ (ಆಯತಗಳ ಸಮುಚ್ಚಯದ ಅಧ್ಯಾಯ) ಪಠಿಸಲಾಗುತ್ತದೆ, ಕೆಲವೊಂದು ಮಸೀದಿಗಳಲ್ಲಿ ಎರಡು ಜುಝ್ ಪಠಿಸುವುದು ಸಹ ಇದೆ.
ತರಾವೀಹ್ ಪ್ರಾರ್ಥನೆ ಫರ್ಜ (ಕಡ್ಡಾಯ ಕರ್ತವ್ಯ) ಆಗಿಲ್ಲ ಆದರೂ ಸಹ ಈ ನಮಾಜ್ ನಿರ್ವಹಿಸುವವರಿಗೆ ದೊಡ್ಡ ಮೊತ್ತದ ಪ್ರತಿಫಲವಿದೆ, ಪ್ರವಾದಿ ಮೊಹಮದ್ ಪೈಗಂಬರ್ ಅವರು ಈ ನಮಾಜ್ ವೈಶಿಷ್ಟ್ಯತೆ ಹಾಗೂ ಮಹತ್ವವವನ್ನು ಅನೇಕ ರೀತಿಯಲ್ಲಿ ವರ್ಣಿಸಿದ್ದಾರೆ.
ಮೊಹಮದ್ ಅಬು ಹುರೈರಾ ಅವರ ಪ್ರಕಾರ, ಯಾರು ಇಮಾಮ್‌ನೊಂದಿಗೆ ಪವಿತ್ರ ತಾರಾವೀಹ್ ನಮಾಜ್ ನಿರ್ವಹಿಸುತ್ತಾರೋ ಅವರು ಇಡೀ ರಾತ್ರಿಯನ್ನು ಪ್ರಾರ್ಥನೆಯಲ್ಲಿ ಕಳೆದಂತೆ, ಅಷ್ಟೊಂದು ಅನುಗ್ರಹ ಈ ನಮಾಜ್‌ನಲ್ಲಿ ಪ್ರಾಪ್ತಿಯಾಗುತ್ತದೆ. ಹೀಗಾಗಿ ತರಾವೀಹ ನಮಾಜ್ ಅನೇಕ ವೈಶಿಷ್ಟ್ಯತೆಯಿಂದ ಕೂಡಿದೆ.
ಇದನ್ನೂ ಓದಿ
Ramadan 2024: ಬಡವರ ಸಂಕಷ್ಟಕ್ಕೆ ಅಭಯ ಒದಗಿಸುವ ʼಜಕಾತ್ʼ, ರಂಜಾನ್ ಮಾಸದಲ್ಲಿ ದಾನ ಮಾಡುವುದರ ಮಹತ್ವ ತಿಳಿಯಿರಿ
ಮುಸ್ಮಿಮರ ಪವಿತ್ರ ಹಬ್ಬಗಳಲ್ಲಿ ರಂಜಾನ್ ಕೂಡ ಒಂದು. ಇದನ್ನು ಪವಿತ್ರ ಮಾಸ ಎಂದು ಪರಿಗಣಿಸುವ ಮುಸ್ಮಿಮರು ಈ ತಿಂಗಳಲ್ಲಿ ಉಪವಾಸ ವ್ರತ ಕೈಗೊಳ್ಳುತ್ತಾರೆ. ರಂಜಾನ್‌ನಲ್ಲಿ ಜಕಾತ್ ಮಹತ್ವವೇನು, ಇದನ್ನು ಆಚರಿಸುವ ಉದ್ದೇಶವೇನು ತಿಳಿಯಿರಿ.
(This copy first appeared in Hindustan Times Kannada website. To read more like this please logon to kannada.hindustantimes.com)