ಅಫ್ಘನ್ ಎದುರು ಸರಣಿ ವೈಟ್ವಾಶ್; ಏಷ್ಯಾಕಪ್ಗೂ ಮುನ್ನ ಏಕದಿನ ಕ್ರಿಕೆಟ್ಗೆ ಪಾಕಿಸ್ತಾನ ಅಧಿಪತಿ
Aug 27, 2023 01:58 PM IST
ಏಷ್ಯಾಕಪ್ಗೂ ಮುನ್ನ ಏಕದಿನ ಕ್ರಿಕೆಟ್ಗೆ ಪಾಕಿಸ್ತಾನ ಅಧಿಪತಿ.
- Pakistan vs Afghanistan: ಅಫ್ಘಾನಿಸ್ತಾನ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯನ್ನು ವೈಟ್ವಾಶ್ ಮಾಡಿದ ಪಾಕಿಸ್ತಾನ ಕ್ರಿಕೆಟ್ ತಂಡವು, ಏಕದಿನ ಕ್ರಿಕೆಟ್ನಲ್ಲಿ ನಂಬರ್ ಶ್ರೇಯಾಂಕ ಪಡೆದಿದೆ.
ಅಫ್ಘಾನಿಸ್ತಾನ ಎದುರಿನ ಏಕದಿನ ಸರಣಿಯಲ್ಲಿ 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದ ಪಾಕಿಸ್ತಾನ, ಏಷ್ಯಾಕಪ್, ವಿಶ್ವಕಪ್ ಮುನ್ನ ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಈ ಸರಣಿ ಗೆಲುವಿನೊಂದಿಗೆ ಆಗಸ್ಟ್ 30ರಿಂದ ಶುರುವಾಗುವ ಏಷ್ಯಾಕಪ್ಗೂ ಸಿದ್ಧತೆಯ ಭಾಗವಾಗಿತ್ತು. ನಿನ್ನೆ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದ ಪಾಕಿಸ್ತಾನದ ಎದುರು ಅಫ್ಘನ್ 59 ರನ್ಗಳಿಂದ ಶರಣಾಯಿತು.
ಸದ್ಯ ಇನ್ನೆರಡು ತಿಂಗಳಲ್ಲಿ ಮಹತ್ವದ ಎರಡು ಟೂರ್ನಿಗಳಿದ್ದು, ಅದಕ್ಕೂ ಮುನ್ನವೇ ರ್ಯಾಂಕಿಂಗ್ನಲ್ಲಿ ನಂಬರ್ 1 ತಂಡವಾಗಿ ಕಣಕ್ಕಿಳಿಯಲು ಪಾಕ್ ಸಿದ್ಧತೆ ಆರಂಭಿಸಿದೆ. 3ನೇ ಏಕದಿನ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ಏಕದಿನ ಕ್ರಿಕೆಟ್ನಲ್ಲಿ ಮೊದಲ ಸ್ಥಾನ ಅಲಂಕರಿಸಿತ್ತು. ಪಂದ್ಯ ಗೆದ್ದ ಬಳಿಕ ಆಸ್ಟ್ರೇಲಿಯಾ ಸಡ್ಡು ಹೊಡೆದು ರ್ಯಾಂಕಿಂಗ್ನಲ್ಲಿ ನಂಬರ್ ವನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಸದ್ಯ ಪಾಕ್ 118 ರೇಟಿಂಗ್ಸ್ (2724 ಅಂಕ), ಆಸಿಸ್ 118 ರೇಟಿಂಗ್ಸ್ (2714 ಅಂಕ) ಹೊಂದಿದೆ.
ಮೂರನೇ ಸ್ಥಾನದಲ್ಲಿ ಭಾರತ
ಇದೀಗ ಏಷ್ಯಾಕಪ್ನಲ್ಲಿ ಇದೇ ಭರ್ಜರಿ ಪ್ರದರ್ಶನ ಮುಂದುವರೆಸಿದರೆ, ನಂಬರ್ 1 ಸ್ಥಾನವನ್ನು ಕಾಯ್ದುಕೊಳ್ಳಲಿದೆ. ಸದ್ಯ ಟೀಮ್ ಇಂಡಿಯಾ ಮೂರನೇ ಸ್ಥಾನದಲ್ಲಿದೆ. ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು 113 ರೇಟಿಂಗ್ಸ್ (4081 ಅಂಕ) ಪಡೆದು 3ನೇ ಸ್ಥಾನದಲ್ಲಿದೆ. ಇನ್ನು ನ್ಯೂಜಿಲೆಂಡ್ 104 ರೇಟಿಂಗ್ಸ್ (2806 ಅಂಕ), ಇಂಗ್ಲೆಂಡ್ 101 ರೇಟಿಂಗ್ಸ್ (2426 ಅಂಕ) ಪಡೆದು ಕ್ರಮವಾಗಿ 4 ಮತ್ತು 5ನೇ ಸ್ಥಾನದಲ್ಲಿವೆ.
ಪಾಕಿಸ್ತಾನಕ್ಕೆ ಭರ್ಜರಿ ಜಯ
ಅಫ್ಘನ್ ಎದುರು ಅಂತಿಮ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 268 ರನ್ ಗಳಿಸಿತ್ತು. ಆದರೆ ಈ ಸ್ಪರ್ಧಾತ್ಮಕ ಮೊತ್ತ ಗುರಿ ಬೆನ್ನತ್ತಿದ ಅಫ್ಘನ್, ಪಾಕಿಸ್ತಾನ ಬೌಲರ್ಗಳ ದಾಳಿಗೆ ಶರಣಾಯಿತು. 48.4 ಓವರ್ಗಳಲ್ಲಿ 209 ರನ್ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ 59 ರನ್ಗಳಿಂದ ಸೋಲೊಪ್ಪಿಕೊಂಡಿತು. ಅಲ್ಲದೆ, 3-0 ಅಂತರದಲ್ಲಿ ಸರಣಿ ಸೋತು ಮುಖಭಂಗಕ್ಕೆ ಒಳಗಾಯಿತು.
ಆಗಸ್ಟ್ 30ರಿಂದ ಏಷ್ಯಾಕಪ್
ಏಷ್ಯಾಕಪ್ ಟೂರ್ನಿಗೂ ಮುನ್ನ ಏಕದಿನ ಸರಣಿ ಗೆದ್ದು ಭರ್ಜರಿ ಲಯಕ್ಕೆ ಮರಳಿದೆ. ಆಗಸ್ಟ್ 30ರಿಂದ ಏಕದಿನ ಮಾದರಿಯ ಏಷ್ಯಾಕಪ್ ಟೂರ್ನಿ ಆರಂಭಗೊಳ್ಳಲಿದೆ. ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ನೇಪಾಳ ತಂಡವನ್ನು ಎದುರಿಸಲಿದೆ. ಆ ಬಳಿಕ ಸೆಪ್ಟೆಂಬರ್ 2ರಂದು ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು, ಬಾಬರ್ ಅಜಮ್ ಸಾರಥ್ಯದ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.