Yuzvendra Chahal: ಭಾರತ ತಂಡದಲ್ಲಿ ಆಡಲು ಈತನಿಗೆ ಯೋಗ್ಯತೆಯೇ ಇಲ್ಲ; ಪಾಕಿಸ್ತಾನ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ ಹೇಳಿಕೆ
Danish Kaneria on Yuzvendra Chahal: ಏಷ್ಯಾಕಪ್ ಟೂರ್ನಿಗೆ ಪ್ರಕಟಗೊಂಡ ಭಾರತದ ತಂಡದಲ್ಲಿ ಅವಕಾಶ ಪಡೆಯಲು ಲೆಗ್ಸ್ಪಿನ್ನರ್ ಚಹಲ್‌ಗೆ ಅರ್ಹತೆಯೇ ಇಲ್ಲ ಎಂದು ಪಾಕಿಸ್ತಾನದ ಮಾಜಿ ಆಟಗಾರ ದಾನಿಶ್ ಕನೇರಿಯಾ ತಮ್ಮ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ.
ಒಂದೆಡೆ ಅನುಭವಿ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರಿಗೆ ಏಷ್ಯಾಕಪ್ ಟೂರ್ನಿಗೆ ಅವಕಾಶ ನೀಡದಿರುವ ಕುರಿತು ಭಾರಿ ಚರ್ಚೆ ನಡೆಯುತ್ತಿದೆ. ಆದರೆ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಏಷ್ಯಾಕಪ್ ಟೂರ್ನಿಗೆ ಪ್ರಕಟಗೊಂಡ ಭಾರತದ ತಂಡದಲ್ಲಿ ಅವಕಾಶ ಪಡೆಯಲು ಲೆಗ್ಸ್ಪಿನ್ನರ್ ಚಹಲ್‌ಗೆ ಅರ್ಹತೆಯೇ ಇಲ್ಲ ಎಂದು ತಮ್ಮ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ. ಏಷ್ಯಾಕಪ್ ಮಾತ್ರವಲ್ಲದೆ ಭಾರತ ತಂಡದಲ್ಲಿರಲು ಅರ್ಹತೆಯೇ ಇಲ್ಲ ಎಂದಿದ್ದಾರೆ.
ಇದೇ ಆಗಸ್ಟ್ 30ರಿಂದ ಪ್ರಾರಂಭವಾಗುವ ಏಷ್ಯಾಕಪ್ ಟೂರ್ನಿಗೆ ಆಗಸ್ಟ್ 21ರಂದು ಭಾರತ ತಂಡವು ಪ್ರಕಟವಾಗಿತ್ತು. 17 ಸದಸ್ಯರ ತಂಡವನ್ನು ಘೋಷಿಸಿರುವ ಭಾರತ ತಂಡವು, ವೆಸ್ಟ್ ಇಂಡೀಸ್ ಸರಣಿಯಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡುವಲ್ಲಿ ವಿಫಲರಾದ ಚಹಲ್ ಅವರನ್ನು ಕೈ ಬಿಡಲಾಗಿದೆ. ಬದಲಿಗೆ ಚೈನಾಮೆನ್ ಹಾಗೂ ರಿಸ್ಟ್ ಸ್ಪಿನ್ನರ್ ಕುಲ್ದೀಪ್ ಯಾದವ್ಗೆ ಮಣೆ ಹಾಕಿತ್ತು. ಆದರೆ, ಚಹಲ್‌ಗೆ ಅವಕಾಶ ನೀಡದ್ದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ದಾನಿಶ್ ಕನೇರಿಯಾ ಅಭಿಪ್ರಾಯ
ಇದೀಗ ಭಾರತ ತಂಡಕ್ಕೆ ಚಹಲ್ ಅವಶ್ಯಕತೆ ಇದೆಯೇ ಇಲ್ಲವೇ ಎಂಬುದರ ಕುರಿತು ದಾನಿಶ್ ಕನೇರಿಯಾ ಮಾತನಾಡಿದ್ದಾರೆ. ಪ್ರಸ್ತುತ ಚಹಲ್ ಪ್ರದರ್ಶನ ಉತ್ತಮವಾಗಿಲ್ಲ. ಸಿಕ್ಕ ಅವಕಾಶಗಳಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಆದರೆ, ಕುಲ್ದೀಪ್ ಯಾದವ್ ತನಗೆ ಸಿಕ್ಕೆಲ್ಲಾ ಅವಕಾಶಗಳಲ್ಲಿ ನಿರಂತರ ವಿಕೆಟ್ ಪಡೆದು ಯಶಸ್ವಿಯಾಗುತ್ತಿದ್ದಾರೆ. ಜೊತೆಗೆ ಮಧ್ಯಮ ಓವರ್ಗಳಲ್ಲಿ ಪರಿಣಾಮಕಾರಿ ಆಗಲಿದ್ದಾರೆ ಎಂದು ತಮ್ಮ ಅಧಿಕೃತ ಯೂಟ್ಯೂಬ್ ಚಾನಲ್‌ನಲ್ಲಿ ಹೇಳಿದ್ದಾರೆ.
ನಿಜ ಹೇಳಬೇಕೆಂದರೆ, ಪ್ರಸ್ತುತ ಟೀಮ್ ಇಂಡಿಯಾ ಪರ ಆಡಲು ಯುಜ್ವೇಂದ್ರ ಚಹಲ್‌ಗೆ ಯಾವುದೇ ಅರ್ಹತೆಯೇ ಇಲ್ಲ. ಏಕೆಂದರೆ ಸ್ಥಿರ ಪ್ರದರ್ಶನ ತೋರುವಲ್ಲಿ ಪದೆಪದೇ ವಿಫಲರಾಗಿದ್ದಾರೆ. ಬೌಲಿಂಗ್ನಲ್ಲಿ ತನ್ನ ಹಳೆಯ ರಿದಮ್ ಕಳೆದುಕೊಂಡಿದ್ದಾರೆ. ಇದು ತಂಡದ ಹಿನ್ನೆಡೆಗೆ ಕಾರಣವಾಗಬಹುದು. ಅದರಲ್ಲೂ ಮಹತ್ವದ ಟೂರ್ನಿಗಳಲ್ಲಿ ಹೀಗೆ ವೈಫಲ್ಯ ಅನುಭವಿಸಿದರೆ, ತಂಡಕ್ಕೆ ಮತ್ತಷ್ಟು ಕಷ್ಟವಾಗಬಹುದು ಎಂದು ತಮ್ಮ ಅಭಿಪ್ರಾಯ ಹೊರ ಹಾಕಿದ್ದಾರೆ.
ಮತ್ತೊಂದು ಕಡೆ ಕುಲ್ದೀಪ್ ಯಾದವ್ ಬೊಂಬಾಟ್ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದು, ಇತ್ತೀಚೆಗೆ ಆಡಿದ ಎಲ್ಲಾ ಮ್ಯಾಚ್ಗಳಲ್ಲೂ ವಿಕೆಟ್ ಸಾಧನೆ ಮಾಡಿದ್ದಾರೆ. ಮಿಡಲ್ ಓವರ್ಗಳಲ್ಲಿ ವಿಕೆಟ್ ಬೇಟೆ ಜೊತೆಗೆ ರನ್ ನಿಯಂತ್ರಿಸುವಲ್ಲಿ ಕುಲ್ದೀಪ್ ತಂಡಕ್ಕೆ ನೆರವಾಗಲಿದ್ದಾರೆ. ಈ ಕಾರಣದಿಂದ ಚಹಲ್ ಬದಲಿಗೆ ಕುಲ್ದೀಪ್ ಯಾದವ್ರನ್ನು ಆಯ್ಕೆ ಮಾಡಿದ ನಿರ್ಧಾರವು ಉತ್ತವಾಗಿದೆ ಎಂದು ದಾನಿಶ್ ಕನೇರಿಯಾ, ಭಾರತೀಯ ಸೆಲೆಕ್ಟರ್ಗಳಿಗೆ ಬೆಂಬಲ ಸೂಚಿಸಿದ್ದಾರೆ.
3 ವರ್ಷಗಳಿಂದ ಬರೀ 29 ಏಕದಿನ ವಿಕೆಟ್
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮೋಡಿ ಮಾಡದ ಚಹಲ್, ಐಪಿಎಲ್ನ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಮುಗಿದ ಐಪಿಎಲ್ನಲ್ಲಿ ಚಹಲ್ 14 ಇನ್ನಿಂಗ್ಸ್ಗಳಲ್ಲಿ 21 ವಿಕೆಟ್ ಪಡೆದಿದ್ದರು. ಅಲ್ಲದೆ, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ ದಾಖಲೆ ಬರೆದಿದ್ದಾರೆ. ಈವರೆಗೂ ಒಟ್ಟು 187 ವಿಕೆಟ್ ಪಡೆದಿದ್ದಾರೆ. ಆದರೆ ಏಕದಿನ ಕ್ರಿಕೆಟ್ನಲ್ಲಿ ಅಷ್ಟೇನು ಉತ್ತಮವಾಗಿಲ್ಲ. 2021ರಿಂದ 18 ಒಡಿಐ ಪಂದ್ಯಗಳಲ್ಲಿ 29 ವಿಕೆಟ್ ಪಡೆದಿದ್ದಾರೆ. ಏಷ್ಯಾಕಪ್ ಟೂರ್ನಿಗೆ ಚಹಲ್ರ ಈ ಖದರ್ ಸಾಲಲ್ಲ ಎನ್ನುವುದು ಕನೇರಿಯಾ ಮಾತಾಗಿದೆ.
ಅಗರ್ಕರ್ ಹೇಳಿದ್ದೇನು?
ಇನ್ನು ಮಾಧ್ಯಮ ಗೋಷ್ಠಿಯಲ್ಲಿ ಚಹಲ್ ಅವರಿಗೆ ಅವಕಾಶ ಯಾಕೆ ಕೊಟ್ಟಿಲ್ಲ ಎನ್ನುವುದಕ್ಕೆ ಚೀಫ್ ಸೆಲೆಕ್ಟರ್ ಉತ್ತರ ಕೊಡುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದರು. ಚಹಲ್ ಒಬ್ಬ ಅದ್ಭುತ ಆಟಗಾರ. ಆದರೆ ಏಷ್ಯಾಕಪ್ ಟೂರ್ನಿಗೆ ಅತ್ಯುತ್ತಮ ತಂಡ ಕಟ್ಟಬೇಕೆನ್ನುವ ಉದ್ದೇಶದಿಂದ ಚಹಲ್ರನ್ನು ಕೈಬಿಡಲಾಗಿದೆ. ಅಕ್ಷರ್ ಪಟೇಲ್ ಮತ್ತು ಕುಲ್ದೀಪ್ ಯಾದವ್ ರನ್ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಇದೇ ಕಾರಣಕ್ಕೆ ಚಹಲ್ರನ್ನು ಕೈ ಬಿಟ್ಟೆವು ಎಂದು ಸ್ಪಷ್ಟಪಡಿಸಿದ್ದರು.