ಏಷ್ಯಾಕಪ್ ವೀಕ್ಷಿಸಲು ಪಾಕಿಸ್ತಾನಕ್ಕೆ ಬಿಸಿಸಿಐ ಅಧ್ಯಕ್ಷ, ಉಪಾಧ್ಯಕ್ಷ ಪ್ರಯಾಣ ಖಚಿತ, ದಿನಾಂಕವೂ ನಿಗದಿ; ಹಲವು ವರ್ಷಗಳ ನಂತರ ಇದೇ ಮೊದಲು
ಕನ್ನಡ ಸುದ್ದಿ  /  ಕ್ರಿಕೆಟ್  /  ಏಷ್ಯಾಕಪ್ ವೀಕ್ಷಿಸಲು ಪಾಕಿಸ್ತಾನಕ್ಕೆ ಬಿಸಿಸಿಐ ಅಧ್ಯಕ್ಷ, ಉಪಾಧ್ಯಕ್ಷ ಪ್ರಯಾಣ ಖಚಿತ, ದಿನಾಂಕವೂ ನಿಗದಿ; ಹಲವು ವರ್ಷಗಳ ನಂತರ ಇದೇ ಮೊದಲು

ಏಷ್ಯಾಕಪ್ ವೀಕ್ಷಿಸಲು ಪಾಕಿಸ್ತಾನಕ್ಕೆ ಬಿಸಿಸಿಐ ಅಧ್ಯಕ್ಷ, ಉಪಾಧ್ಯಕ್ಷ ಪ್ರಯಾಣ ಖಚಿತ, ದಿನಾಂಕವೂ ನಿಗದಿ; ಹಲವು ವರ್ಷಗಳ ನಂತರ ಇದೇ ಮೊದಲು

Asia Cup 2023: ಏಷ್ಯಾಕಪ್ ಟೂರ್ನಿಯನ್ನು ವೀಕ್ಷಿಸಲು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ (Roger Binny), ಉಪಾಧ್ಯಕ್ಷ ರಾಜೀವ್ ಶುಕ್ಲಾ (Rajeev Shukla) ಸೆಪ್ಟೆಂಬರ್ 4 ರಂದು ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ಏಷ್ಯಾಕಪ್ ವೀಕ್ಷಿಸಲು ಪಾಕಿಸ್ತಾನಕ್ಕೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಉಪಾಧ್ಯಕ್ಷ ರಾಜೀವ್ ಶುಕ್ಲಾ ಪ್ರಯಾಣ ಖಚಿತ,
ಏಷ್ಯಾಕಪ್ ವೀಕ್ಷಿಸಲು ಪಾಕಿಸ್ತಾನಕ್ಕೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಉಪಾಧ್ಯಕ್ಷ ರಾಜೀವ್ ಶುಕ್ಲಾ ಪ್ರಯಾಣ ಖಚಿತ,

ಆಗಸ್ಟ್ 30ರಂದು ಪಾಕಿಸ್ತಾನದಲ್ಲಿ ಅದ್ಧೂರಿ ಚಾಲನೆ ಪಡೆಯಲಿರುವ ಏಕದಿನ ಮಾದರಿಯ ಏಷ್ಯಾಕಪ್ ಟೂರ್ನಿ (Asia Cup 2023) ವೀಕ್ಷಿಸಲು ಬರುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (Pakistan Cricket Borad) ನೀಡಿದ್ದ ಆಹ್ವಾನದ ಮೇರೆಗೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ (Roger Binny), ಉಪಾಧ್ಯಕ್ಷ ರಾಜೀವ್ ಶುಕ್ಲಾ (Rajeev Shukla) ಬದ್ಧವೈರಿಯ ರಾಷ್ಟ್ರಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂಬ ಸುದ್ದಿ ಖಚಿತವಾಗಿದೆ.

ಏಷ್ಯಾಕಪ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸುತ್ತಿದೆ. ಟೂರ್ನಿ ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿರುವ ಕಾರಣ, ಶ್ರೀಲಂಕಾವೂ ಆತಿಥ್ಯದ ಜವಾಬ್ದಾರಿ ಹೊಂದಿದೆ. ಆದರೆ, ಉದ್ಘಾಟನಾ ಪಂದ್ಯವು ಪಾಕಿಸ್ತಾನದಲ್ಲೇ ನಡೆಯಲಿದೆ. ಹಾಗಾಗಿ ಉದ್ಘಾಟನಾ ಪಂದ್ಯದ ನಂತರದ ಪಂದ್ಯಗಳನ್ನು ವೀಕ್ಷಿಸಲು ಬಿಸಿಸಿಐ ಸೇರಿ ಏಷ್ಯನ್ ಕ್ರಿಕೆಟ್ ಮಂಡಳಿಗೆ ಸೇರಿದ ಕ್ರಿಕೆಟ್​ ಮಂಡಳಿಗಳಿಗೆ ಪಿಸಿಬಿ ಆಹ್ವಾನಿಸಿತ್ತು.

ಸೆಪ್ಟೆಂಬರ್ 4ರಂದು ಪಾಕಿಸ್ತಾನಕ್ಕೆ ಪ್ರಯಾಣ

ಆದರೆ, ಈ ಮೊದಲು ಈ ಆಹ್ವಾನವನ್ನು ಬಿಸಿಸಿಐ ತಿರಸ್ಕರಿಸಿತ್ತು ಎಂದು ವರದಿಯಾಗಿತ್ತು. ಆದರೀಗ ಬಿಸಿಸಿಐ ​ಅಧ್ಯಕ್ಷ ರೋಜರ್ ಬಿನ್ನಿ (Roger Binny) ಮತ್ತು ಉಪಾಧ್ಯಕ್ಷ ರಾಜೀವ್ ಶುಕ್ಲಾ (Rajeev Shukla) ಟೂರ್ನಿ ವೀಕ್ಷಿಸಲು ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಟೈಮ್ಸ್ ನೌ ವರದಿ ಮಾಡಿತ್ತು. ಇದಕ್ಕೆ ಸಂಬಂಧಿಸಿ ಖಚಿತ ಮಾಹಿತಿ ಹೊರಬಿದ್ದಿದೆ. ರೋಜರ್ ಬಿನ್ನಿ, ರಾಜೀವ್ ಶುಕ್ಲಾ ಸೆಪ್ಟೆಂಬರ್ 4 ರಂದು ಪಾಕ್​ಗೆ ಪ್ರಯಾಣಿಸಲಿದ್ದಾರೆ ಎಂದು ವರದಿಯಾಗಿತ್ತು.

ಖಚಿತಪಡಿಸಿದ ರೋಜರ್​ ಬಿನ್ನಿ

ಇದೀಗ ಈ ಎಲ್ಲಾ ಗೊಂದಲಗಳಿಗೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಟೈಮ್ಸ್​ ಆಫ್ ಇಂಡಿಯಾ ಜೊತೆ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ. ಸೆಪ್ಟೆಂಬರ್​​ 4ರಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತು ನಾನು ವಾಘಾ ಗಡಿಯ ಮೂಲಕ ಪಾಕ್​ಗೆ ತೆರಳಲಿದ್ದೇವೆ. ಅಧಿಕೃತ ಔತಣಕೂಟದ ಹೊರತಾಗಿ ಒಂದೆರಡು ಪಂದ್ಯ ವೀಕ್ಷಿಸಿ ಭಾರತಕ್ಕೆ ಮರಳಲಿದ್ದೇವೆ ಎಂದು ಬಿಸಿಸಿಐ ಅಧ್ಯಕ್ಷ ಸ್ಪಷ್ಟಪಡಿಸಿದ್ದಾರೆ. 

ಬಿಸಿಸಿಐ ಪದಾಧಿಕಾರಿಗಳು ಸೆಪ್ಟೆಂಬರ್ 4ರಂದು ಪಾಕ್​ ಪ್ರಯಾಣಿಸಿದರೆ, ಸೆಪ್ಟೆಂಬರ್​ 5 ಮತ್ತು 6 ರಂದು ಲಾಹೋರ್‌ನ ಗಡಾಫಿ ಸ್ಟೇಡಿಯಂನಲ್ಲಿ ಜರುಗುವ ಅಫ್ಘಾನಿಸ್ತಾನ, ಶ್ರೀಲಂಕಾ ಹಾಗೂ ಸೂಪರ್ ಹಂತದ ಒಂದು ಪಂದ್ಯವನ್ನು ಬಿನ್ನಿ ಹಾಗೂ ಶುಕ್ಲಾ ವೀಕ್ಷಿಸಲಿದ್ದಾರೆ. ನಂತರ ಸೆ. 7ರಂದು ವಾಪಾಸ್ ಆಗಲಿದ್ದಾರೆ.

ವಾಘಾ ಗಡಿ ಮೂಲಕ ಪ್ರಯಾಣ

ಜುಲೈನಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್​​ ಟ್ರೋಫಿ ಹಾಕಿ ಟೂರ್ನಮೆಂಟ್​ಗಾಗಿ ಪಾಕಿಸ್ತಾನ ಅಟ್ಟಾರಿ-ವಾಘಾ ಗಡಿ ಮೂಲಕವೇ ಪಾಕಿಸ್ತಾನ ತಂಡವು, ಭಾರತಕ್ಕೆ ಬಂದಿತ್ತು. ಇದೀಗ ರೋಜರ್​ ಬಿನ್ನಿ ಮತ್ತು ರಾಜೀವ್ ಶುಕ್ಲಾ ಕೂಡ ಗಡಿ ಮೂಲಕವೇ ತೆರಳಿದ್ದಾರೆ. ಆಗಸ್ಟ್​ 30ರಿಂದ ಆರಂಭವಾಗುವ ಏಷ್ಯಾಕಪ್​ ಉದ್ಘಾಟನಾ ಪಂದ್ಯಕ್ಕೆ ಹಾಜರಾಗುವಂತೆ ಪಿಸಿಬಿ ಬಿಸಿಸಿಐಗೆ ಆಹ್ವಾನ ನೀಡಿತ್ತು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದರು. ಪಾಕ್​​ನಿಂದ ಆಹ್ವಾನ ಬಂದಿತ್ತು. ಆದರೆ ಈ ಸಮಯದಲ್ಲಿ ಪಾಕ್​ಗೆ ಭೇಟಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರು.

2004ರಲ್ಲಿ ಕೊನೆಯದಾಗಿ ಪ್ರಯಾಣ

ಇದೀಗ ಕೇಂದ್ರ ಸರ್ಕಾರದ ಅನುಮತಿ ಪಡೆದಿರುವ ರೋಜರ್ ಬಿನ್ನಿ ಮತ್ತು ರಾಜೀವ್ ಶುಕ್ಲಾ, ಪಂದ್ಯ ವೀಕ್ಷಿಸಲು ಪಾಕ್​ಗೆ ತೆರಳಲಿದ್ದಾರೆ. 2004ರ ಅವಧಿಯಲ್ಲಿ ಸೌರವ್ ಗಂಗೂಲಿ ನಾಯಕತ್ವದಡಿ ಟೀಮ್ ಇಂಡಿಯಾ ಪಾಕ್ ಪ್ರವಾಸ ಕೈಗೊಂಡಿದ್ದಾಗ, ರಾಜೀವ್ ಶುಕ್ಲಾ ಕೂಡ ತಂಡದ ಜೊತೆಗಿದ್ದರು. ಈಗ 19 ವರ್ಷಗಳ ಬಳಿಕ ಮತ್ತೆ ಬದ್ಧವೈರಿ ದೇಶಕ್ಕೆ ಶುಕ್ಲಾ ತೆರಳಲು ಸಜ್ಜಾಗಿದ್ದಾರೆ.

ಹಲವು ತಿಂಗಳು ಜಟಾಪಟಿ

ಏಷ್ಯಾಕಪ್ ವಿಚಾರದಲ್ಲಿ ಬಿಸಿಸಿಐ-ಪಿಸಿಬಿ ನಡುವೆ ಜಟಾಪಟಿ ನಡೆದಿತ್ತು. ಪಾಕ್​​ನಲ್ಲಿ ಪಂದ್ಯಗಳು ಜರುಗಿದರೆ ಭಾರತ ಭಾಗವಹಿಸಲ್ಲ ಎಂದು ಜಯ್​ ಶಾ ಎಚ್ಚರಿಸಿದ್ದರು. ಆದರೆ, ಪಿಸಿಬಿ ಇದಕ್ಕೆ ವಿರೋಧ ಒಡ್ಡಿತ್ತು. ಟೂರ್ನಿ ನಡೆಸುವುದೇ ಬೇಡ ಎಂದು ಹೇಳಿತ್ತು. ಹಲವು ತಿಂಗಳು ನಡೆದ ಈ ಜಟಾಪಟಿಯಲ್ಲಿ ಕೊನೆಗೂ ಸೋತ ಪಾಕ್,​ ಹೈಬ್ರೀಡ್​ ಮಾದರಿಯಲ್ಲಿ ಟೂರ್ನಿ ನಡೆಸಲು ತೀರ್ಮಾನಿಸಿತ್ತು. ಹಾಗಾಗಿ ಟೀಮ್ ಇಂಡಿಯಾದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. ಒಟ್ಟು 13 ಪಂದ್ಯಗಳ ಪೈಕಿ ಪಾಕ್​ನಲ್ಲಿ ಕೇವಲ 4 ಪಂದ್ಯಗಳು ಮಾತ್ರ ಜರುಗಲಿವೆ.

Whats_app_banner