Tata Curvv vs Grand Vitara: ಹೊಸ ಟಾಟಾ ಕರ್ವ್ ಕಾರು ತೆಗೆದುಕೊಳ್ಳುವಿರಾ ಅಥವಾ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರ ಚೆನ್ನಾಗಿರುವುದೇ?
Sep 05, 2024 02:21 PM IST
ಹೊಸ ಟಾಟಾ ಕರ್ವ್ ಕಾರು ತೆಗೆದುಕೊಳ್ಳುವಿರಾ ಅಥವಾ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರ
- Tata Curvv vs Grand Vitara: ಟಾಟಾ ಮೋಟಾರ್ಸ್ ಕಂಪನಿಯು ಇತ್ತೀಚೆಗೆ ಟಾಟಾ ಕರ್ವ್ ಎಂಬ ಕೂಪೆ ವಿನ್ಯಾಸದ ಎಸ್‌ಯುವಿಯನ್ನು ಪರಿಚಯಿಸಿದೆ. ಮಧ್ಯಮ ಗಾತ್ರದ ಎಸ್‌ಯುವಿ ಬಯಸುವವರಿಗೆ ಇದು ಸೂಕ್ತವಾಗಿದೆ. ಈ ಕಾರಿಗೆ ಹ್ಯುಂಡೈ ಕ್ರೆಟಾ ಮತ್ತು ಮಾರುತಿ ಸುಜುಕಿ ಗ್ರಾಂಡ್ ವಿಟಾರಾದಂತಹ ಪ್ರತಿಸ್ಪರ್ಧಿಗಳು ಇದ್ದಾರೆ.
Tata Curvv vs Grand Vitara: ದೇಶದ ವಾಹನ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಯಾದ ಟಾಟಾ ಕರ್ವ್ ಸಂಚಲನ ಮೂಡಿಸಿದೆ. ಟಾಟಾ ಮೋಟಾರ್ಸ್‌ನ ವಾಹನ ಬಯಸುವವರು ಕರ್ವ್ ಖರೀದಿಸುವ ಕುರಿತು ಆಲೋಚಿಸುತ್ತಿದ್ದಾರೆ. ಸಾಕಷ್ಟು ಜನರು ಈ ಕಾರು ಹೇಗಿದೆ ಎಂದು ಆನ್‌ಲೈನ್‌ನಲ್ಲಿ ರಿವ್ಯೂಗಳನ್ನೂ ಓದುತ್ತಿದ್ದಾರೆ. ಟಾಟಾ ಕರ್ವ್ ದೇಶದ ಮಧ್ಯಮ ಗಾತ್ರದ ಎಸ್‌ಯುವಿ ಮಾರುಕಟ್ಟೆಯಲ್ಲಿ ಹೊಸದೊಂದು ವಿಭಾಗ ಹುಟ್ಟುಹಾಕಿದೆ. ಟಾಟಾ ಕರ್ವ್ ಅನ್ನು ಸಿಟ್ರೊಯೆನ್ ಬಸಾಲ್ಟ್ ಶೈಲಿಯಲ್ಲಿ ಆರಂಭಿಸಲಾಯಿತು. ಕೂಪೆ ಎಸ್‌ಯುವಿ ಬಾಡಿ ಸ್ಟೈಲ್ ಇದುವರೆಗೆ ಐಷಾರಾಮಿ ಕಾರುಗಳಿಗೆ ಸೀಮಿತವಾಗಿತ್ತು. ಆದರೆ, ಸಿಟ್ರೊಯೆನ್ ಬಸಾಲ್ಟ್ ಮತ್ತು ಟಾಟಾ ಕರ್ವ್ ಎಂಬ ಕಾರುಗಳಲ್ಲಿ ಈ ವಿನ್ಯಾಸ ಆರಂಭವಾಗಿದೆ. ಕೂಪೆ ವಿನ್ಯಾಸ ಎನ್ನುವುದು ದುಬಾರಿ ಕಾರು ಮಾಲೀಕರ ಸ್ವತ್ತಲ್ಲ. ಮಧ್ಯಮ ಗಾತ್ರದ ಕಾರು ಮಾಲೀಕರಿಗೂ ಇಂತಹ ವಿನ್ಯಾಸ ದೊರಕುವಂತೆ ಮಾಡಿದ ಶ್ರೇಯಸ್ಸು ಈ ಎರಡು ಕಾರುಗಳಿಗೆ ದೊರಕಿದೆ.
ಟಾಟಾ ಕರ್ವ್, ಸಿಟ್ರೊಯೆನ್ ಬಸಾಲ್ಟ್ ಮಾತ್ರವಲ್ಲದೆ, ಈ ಮಧ್ಯಮ ಗಾತ್ರದ ಎಸ್‌ಯುವಿ ವಿಭಾಗದಲ್ಲಿ ಇನ್ನೂ ಅನೇಕ ಯಶಸ್ವಿ ಕಾರುಗಳಿವೆ. ಇವುಗಳಲ್ಲಿ ದೇಶದ ಅತ್ಯಂತ ಜನಪ್ರಿಯ ಮಾದರಿಗಳು ಸೇರಿವೆ. ಭಾರತದಲ್ಲಿ ಈಗ ಹತ್ತು ಲಕ್ಷ ರೂಪಾಯಿಯ ಆಸುಪಾಸಿನಲ್ಲಿ ದೊರಕುವ ಎಸ್‌ಯುವಿಗಳಿಗೆ ಬೇಡಿಕೆ ಹೆಚ್ಚಾಗಿದೆ.
ಟಾಟಾ ಕರ್ವ್ ವರ್ಸಸ್ ಮಾರುತಿ ಸುಜುಕಿ ಗ್ರಾಂಡ್ ವಿಟಾರಾ: ದರ ವ್ಯತ್ಯಾಸ
ಟಾಟಾ ಕರ್ವ್ ಬೆಲೆ ರೂ 9.99 ಲಕ್ಷ (ಎಕ್ಸ್ ಶೋ ರೂಂ) ರೂ.ನಿಂದ 17.69 ಲಕ್ಷ (ಎಕ್ಸ್ ಶೋ ರೂಂ) ರೂ.ವರೆಗೆ ಇದೆ. ಈ ಬೆಲೆ ಅಕ್ಟೋಬರ್ 31 ರವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಮತ್ತೊಂದೆಡೆ, ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಬೆಲೆ 10.99 ಲಕ್ಷ ರೂ.ನಿಂದ 19.93 ಲಕ್ಷ (ಎಕ್ಸ್ ಶೋ ರೂಂ) ರೂ.ವರೆಗಿದೆ. ಈ ಎರಡೂ ಎಸ್‌ಯುವಿಗಳು ದರದ ವಿಷಯದಲ್ಲಿ ಪರಸ್ಪರ ನಿಕಟವಾಗಿ ಸ್ಪರ್ಧಿಸುತ್ತವೆ.
ಟಾಟಾ ಕರ್ವ್ ವರ್ಸಸ್ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ: ತಂತ್ರಜ್ಞಾನ
ಟಾಟಾ ಕರ್ವ್ ಎರಡು ಪೆಟ್ರೋಲ್ ಮತ್ತು ಒಂದು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಕರ್ವ್‌ನಲ್ಲಿರುವ 1.2-ಲೀಟರ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್ 118 ಬಿಎಚ್‌ಪಿ ಪವರ್ ಮತ್ತು 170 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 7-ಸ್ಪೀಡ್ DCT ಸ್ವಯಂಚಾಲಿತ ಘಟಕದೊಂದಿಗೆ ಲಭ್ಯವಿದೆ. ಮತ್ತೊಂದು ಪೆಟ್ರೋಲ್ ಎಂಜಿನ್ 1.2-ಲೀಟರ್ ಹೈಪರಿಯನ್ ಯುನಿಟ್ ಆಗಿದೆ, ಇದು ಅದೇ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಲಭ್ಯವಿದೆ. ಈ ಎಂಜಿನ್ 123 bhp ಪವರ್ ಮತ್ತು 225 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಟಾಟಾ ಕರ್ವ್‌ನಲ್ಲಿ ಡೀಸೆಲ್ ಎಂಜಿನ್ ಕೂಡ ಲಭ್ಯವಿದೆ. ಇದು ಅದೇ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಲಭ್ಯವಿದೆ.
ಗ್ರ್ಯಾಂಡ್ ವಿಟಾರಾ ಎಂಜಿನ್ ಆಯ್ಕೆಗಳು
ಮಾರುತಿ ಸುಜುಕಿ ಗ್ರಾಂಡ್ ವಿಟಾರಾ 1.5-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಟಾಪ್ ಎಂಡ್‌ನಲ್ಲಿ ಹೈಬ್ರಿಡ್ ಎಂಜಿನ್ ಇದೆ. ಇದು ಎಲೆಕ್ಟ್ರಿಕ್ ಮೋಟಾರ್ ಮತ್ತು ಬ್ಯಾಟರಿ ಪ್ಯಾಕ್ನೊಂದಿಗೆ ಪೆಟ್ರೋಲ್ ಮೋಟರ್ ಸಂಯೋಜನೆ ಹೊಂದಿದೆ. ಪೆಟ್ರೋಲ್ ಎಂಜಿನ್ 6,000 ಆವರ್ತನಕ್ಕೆ 101 ಬಿಎಚ್‌ಪಿ ಮತ್ತು 4,400 ಆರ್‌ಪಿಎಂನಲ್ಲಿ 136.8 ಟಾರ್ಕ್ ಪವರ್ ಒದಗಿಸುತ್ತದೆ. ಮಾರುತಿ ಸುಜುಕಿ ಗ್ರಾಂಡ್ ವಿಟಾರಾ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್, 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮತ್ತು ಇ-ಸಿವಿಟಿ ಆಯ್ಕೆಗಳಲ್ಲಿ ದೊರಕುತ್ತದೆ.