logo
ಕನ್ನಡ ಸುದ್ದಿ  /  ಕರ್ನಾಟಕ  /  Yuva Nidhi: ಶಿವಮೊಗ್ಗದಲ್ಲಿ ಯುವ ನಿಧಿ ಯೋಜನೆಗೆ ಇಂದು ಚಾಲನೆ; 1 ಲಕ್ಷ ಜನ ಸೇರುವ ನಿರೀಕ್ಷೆ

Yuva Nidhi: ಶಿವಮೊಗ್ಗದಲ್ಲಿ ಯುವ ನಿಧಿ ಯೋಜನೆಗೆ ಇಂದು ಚಾಲನೆ; 1 ಲಕ್ಷ ಜನ ಸೇರುವ ನಿರೀಕ್ಷೆ

Umesh Kumar S HT Kannada

Jan 12, 2024 04:52 AM IST

google News

ಶಿವಮೊಗ್ಗದಲ್ಲಿ ನಾಳೆ (ಜ.12) ನಡೆಯಲಿರುವ ಯುವ ನಿಧಿ ಯೋಜನೆ ಉದ್ಘಾಟನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಭೆ ನಡೆಸಿದ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್. ಸಚಿವ ಮಧು ಬಂಗಾರಪ್ಪ ಮತ್ತು ಇತರೆ ಅಧಿಕಾರಿಗಳು ಜತೆಗಿದ್ದರು.

  • ಯುವನಿಧಿ ನಗದು ವರ್ಗಾವಣೆ ಕಾರ್ಯಕ್ರಮಕ್ಕೆ ಶಿವಮೊಗ್ಗ ಸಜ್ಜುಗೊಂಡಿದೆ. ಸ್ವಾಮಿ ವಿವೇಕಾನಂದ ಜಯಂತಿ ದಿನವಾದ ನಾಳೆ (ಜ.12) ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಯುವ ನಿಧಿ ಯೋಜನೆಗೆ ಚಾಲನೆ ನೀಡಲಿದ್ದು, 1 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದು ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್‌ ಹೇಳಿದ್ದಾರೆ.  

ಶಿವಮೊಗ್ಗದಲ್ಲಿ ನಾಳೆ (ಜ.12) ನಡೆಯಲಿರುವ ಯುವ ನಿಧಿ ಯೋಜನೆ ಉದ್ಘಾಟನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಭೆ ನಡೆಸಿದ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್. ಸಚಿವ ಮಧು ಬಂಗಾರಪ್ಪ ಮತ್ತು ಇತರೆ ಅಧಿಕಾರಿಗಳು ಜತೆಗಿದ್ದರು.
ಶಿವಮೊಗ್ಗದಲ್ಲಿ ನಾಳೆ (ಜ.12) ನಡೆಯಲಿರುವ ಯುವ ನಿಧಿ ಯೋಜನೆ ಉದ್ಘಾಟನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಭೆ ನಡೆಸಿದ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್. ಸಚಿವ ಮಧು ಬಂಗಾರಪ್ಪ ಮತ್ತು ಇತರೆ ಅಧಿಕಾರಿಗಳು ಜತೆಗಿದ್ದರು.

ಬೆಂಗಳೂರು: ಕರ್ನಾಟಕ ಸರ್ಕಾರದ ಮಹತ್ಷಕಾಂಕ್ಷೆಯ 5ನೇ ಗ್ಯಾರಂಟಿ ಘೋಷಣೆ ʼಯುವ ನಿಧಿʼ ಯೋಜನೆಯ ಫಲಾನುಭವಿಗಳಿಗೆ ನಗದು ವರ್ಗಾವಣೆ ಕಾರ್ಯಕ್ರಮಕ್ಕೆ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ನಗರ ಸಜ್ಜಾಗಿದೆ.

ಸ್ವಾಮಿ ವಿವೇಕಾನಂದರ ಜಯಂತಿ (ಜ.12) ದಿನವೇ ಯುವ ನಿಧಿ ಯೋಜನೆ ಜಾರಿಯಾಗುತ್ತಿದೆ. ಈ ಐತಿಹಾಸಿಕ ಸಮಾರಂಭಕ್ಕೆ ಶಿವಮೊಗ್ಗದ ಫ್ರೀಡಂ ಪಾರ್ಕ್‌(ಹಳೆ ಕಾರಾಗೃಹದ ಆವರಣ)ನಲ್ಲಿ ಬೃಹತ್ ವೇದಿಕೆ ನಿರ್ಮಾಣವಾಗಿದೆ. ಸಾರ್ವಜನಿಕರಿಗೆ ಕುಳಿತುಕೊಳ್ಳಲು 85,000ಕ್ಕೂ ಹೆಚ್ಚು ಆಸನ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಡಿಪ್ಲೋಮಾ ಮತ್ತು ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ಉದ್ಯೋಗಭತ್ಯೆ ನೀಡುವ ಸರ್ಕಾರದ ಮಹತ್ವಾಕಾಂಕ್ಷೆಯ ಯುವನಿಧಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮೊದಲ ಕಂತಿನ ಹಣವನ್ನು ಬಿಡುಗಡೆ ಮಾಡಲಾಗುತ್ತದೆ.

ಶುಕ್ರವಾರ (ಜ.12) ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಶಿವಮೊಗ್ಗ ,ದಾವಣಗೆರೆ, ಚಿತ್ರದುರ್ಗಾ, ಚಿಕ್ಕಮಗಳೂರು, ಉಡುಪಿ ಹಾಗೂ ಹಾವೇರಿ ಜಿಲ್ಲೆಗಳಿಂದ ಸುಮಾರು 1 ಲಕ್ಷಕ್ಕೂ ಹೆಚ್ಚಿನ ಫಲಾನುಭವಿಗಳು ಹಾಗೂ ಅಷ್ಟೆ ಸಂಖ್ಯೆಯ ಜನರು ಪಾಲ್ಗೊಳ್ಳಲಿದ್ದಾರೆ.

ಶಿವಮೊಗ್ಗ ಹಾಗೂ ನೆರೆಯ ಜಿಲ್ಲೆಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಯುವಜನರನ್ನು ಸಮಾರಂಭ ಸ್ಥಳಕ್ಕೆ ಕರೆತರಲು ರಸ್ತೆ ಸಾರಿಗೆ ನಿಗಮ ಮತ್ತು ಖಾಸಗಿ ಒಡೆತನದ ಬಸ್ ಹಾಗೂ ಇತರೆ ವಾಹನಗಳ ಸೌಲಭ್ಯವನ್ನು ಕಲ್ಪಿಸಲಾಗಿದೆ. ಪ್ರತಿ ಬಸ್‌ ಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಪ್ರತಿ ಫಲಾನುಭವಿಯ ಹೆಸರು ಮತ್ತು ಮೊಬೈಲ್ ನಂಬರ್ ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಕಾರ್ಯಕ್ರಮಕ್ಕೆ , ಬರುವವರಿಗಾಗಿ ವೇದಿಕೆಯ ಸಿದ್ಧತೆ, ಆಸನ ವ್ಯವಸ್ಥೆ, ವಾಹನ ನಿಲುಗಡೆ, ಊಟೋಪಹಾರ ಹಾಗೂ ಮೂಲಭೂತ ವ್ಯವಸ್ಥೆ ಒದಗಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಡಾ.ಶರಣ ಪ್ರಕಾಶ್ ಪಾಟೀಲ್ ವಿವರಿಸಿದರು.

ಏನಿದು ಯುವನಿಧಿ ಯೋಜನೆ : ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳ ಪೈಕಿ ಯುವನಿಧಿ ಯೋಜನೆಯೂ ಒಂದು. ಈಗಾಗಲೇ 4 ಗ್ಯಾರಂಟಿಗಳನ್ನು ಸರ್ಕಾರ ಜಾರಿಗೊಳಿಸಿದೆ. ಇದು 5ನೇ ಗ್ಯಾರಂಟಿ. ಯುವನಿಧಿ ಈ ಯೋಜನೆಯ ಪ್ರಕಾರ ನಿರುದ್ಯೋಗಿ ಪದವೀಧರ ಹಾಗೂ ಡಿಪ್ಲೋಮಾ ಪದವೀಧರರಿಗೆ ಪ್ರತಿ ತಿಂಗಳು ಭತ್ಯೆ ಸಿಗಲಿದೆ. ಪದವೀಧರರಿಗೆ ಪ್ರತಿ ತಿಂಗಳು 3000 ರೂಪಾಯಿ ನೀಡಿದರೆ, ಡಿಪ್ಲೋಮಾ ಪದವೀಧರರಿಗೆ 1500 ರೂಪಾಯಿ ನೀಡಲಾಗುತ್ತದೆ. ಪದವೀಧರರಿಗೆ ಉದ್ಯೋಗ ಸಿಗುವರೆಗೆ ಅಥವಾ ಗರಿಷ್ಠ 2 ವರ್ಷದವರೆಗೆ ನೀಡಲಾಗುತ್ತದೆ.

ಯುವ ನಿಧಿ ಯೋಜನೆಗೆ ನೋಂದಣಿ ಮಾಡುವುದು ಹೇಗೆ: ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸುವವರು ಕರ್ನಾಟಕದ ನಿವಾಸಿಯಾಗಿರಬೇಕು. 2023ರಲ್ಲಿ ಪದವಿ/ ಡಿಪ್ಲೊಮಾ ಉತ್ತೀರ್ಣರಾಗಿರಬೇಕು. ಉತ್ತೀರ್ಣರಾಗಿ 180 ದಿನಗಳಾದರೂ ಉದ್ಯೋಗ ಸಿಗದೆ ನಿರುದ್ಯೋಗಿಯಾಗಿರಬೇಕು. ಅದೇ ರೀತಿ, ಅರ್ಜಿ ಸಲ್ಲಿಸಿದ ದಿನದಿಂದ ಹುದ್ದೆ ಸಿಗುವವರೆಗೂ ಅಥವಾ 2ವರ್ಷ ಗರಿಷ್ಠ ಅವಧಿವರೆಗೆ ಮಾತ್ರ ನಿರುದ್ಯೋಗ ಭತ್ಯೆ ಸಿಗಲಿದೆ. ಉದ್ಯೋಗ ಸಿಕ್ಕಿದ ಕೂಡಲೇ ಈ ಸೌಲಭ್ಯ ಸ್ಥಗಿತಗೊಳ್ಳಲಿದೆ.

ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್, ಎಸ್‍ಎಸ್‍ಎಲ್ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ, ಪದವಿ ಪ್ರಮಾಣಪತ್ರಗಳು ಹಾಗೂ ರೇಷನ್ ಕಾರ್ಡ್ ಅಗತ್ಯ. ಅರ್ಜಿಯನ್ನು ಕರ್ನಾಟಕ ಒನ್, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ, ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಯುವನಿಧಿ ಯೋಜನೆಗೆ ಉನ್ನತ ವ್ಯಾಸಂಗಕ್ಕೆ ದಾಖಲಾತಿ ಹೊಂದಿ ವಿದ್ಯಾಭ್ಯಾಸ ಮುಂದುವರಿಸುತ್ತಿರುವವರು ಅರ್ಜಿ ಸಲ್ಲಿಸುವಂತಿಲ್ಲ. ಅದೇ ರೀತಿ, ಶಿಷ್ಯ ವೇತನವನ್ನು ಪಡೆಯುತ್ತಿರುವವರು ಕೂಡ ಅರ್ಜಿ ಸಲ್ಲಿಸಬಾರದು. ಸರ್ಕಾರಿ/ಖಾಸಗಿ ವಲಯದಲ್ಲಿ ಉದ್ಯೋಗ ಪಡೆದವರು ಈ ಯೋಜನೆಗೆ ಫಲಾನುಭವಿ ಆಗುವಂತಿಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ