Bengaluru News: ಬಿಎಂಟಿಸಿ ಚಾಲಕರಿಗೆ ವಿಶೇಷ ರಜೆ ಭತ್ಯೆ ಘೋಷಣೆ; ತಿಂಗಳಲ್ಲಿ 26 ದಿನ ಕೆಲಸ ಮಾಡಿದರೆ 500 ರೂ
ಕನ್ನಡ ಸುದ್ದಿ  /  ಕರ್ನಾಟಕ  /  Bengaluru News: ಬಿಎಂಟಿಸಿ ಚಾಲಕರಿಗೆ ವಿಶೇಷ ರಜೆ ಭತ್ಯೆ ಘೋಷಣೆ; ತಿಂಗಳಲ್ಲಿ 26 ದಿನ ಕೆಲಸ ಮಾಡಿದರೆ 500 ರೂ

Bengaluru News: ಬಿಎಂಟಿಸಿ ಚಾಲಕರಿಗೆ ವಿಶೇಷ ರಜೆ ಭತ್ಯೆ ಘೋಷಣೆ; ತಿಂಗಳಲ್ಲಿ 26 ದಿನ ಕೆಲಸ ಮಾಡಿದರೆ 500 ರೂ

ಬಿಎಂಟಿಸಿ ಬಸ್‌ ಚಾಲಕರಿಗೆ ವಿಶೇಷ ರಜೆ ಭತ್ಯೆಯನ್ನು ಘೋಷಿಸಿದ್ದು, ತಿಂಗಳಲ್ಲಿ 26 ದಿನ ಕೆಲಸ ಮಾಡುವಂತೆ ಉತ್ತೇಜಿಸುವ ಉಪಕ್ರಮ ಜಾರಿಗೊಳಿಸಿದೆ. ದಿನಕ್ಕೆ ಒಟ್ಟು ಚಾಲನಾ ಸಿಬ್ಬಂದಿ ಪೈಕಿ ಶೇಕಡ 6.8 ಜನ ರಜೆ ಇರುವ ಕಾರಣ ಹಲವು ಟ್ರಿಪ್‌ಗಳು ರದ್ದುಗೊಂಡು ನಷ್ಟವಾಗುತ್ತಿರುವ ಕಾರಣ ಈ ಉಪಕ್ರಮವನ್ನು ಅದು ಜಾರಿಗೊಳಿಸಿದೆ.

ಚಾಲಕರಿಗೆ ವಿಶೇಷ ರಜೆ ಭತ್ಯೆಯನ್ನು ಘೋಷಿಸಿದ ಬಿಎಂಟಿಸಿ (ಸಾಂಕೇತಿಕ ಚಿತ್ರ)
ಚಾಲಕರಿಗೆ ವಿಶೇಷ ರಜೆ ಭತ್ಯೆಯನ್ನು ಘೋಷಿಸಿದ ಬಿಎಂಟಿಸಿ (ಸಾಂಕೇತಿಕ ಚಿತ್ರ) (@blrcitytraffic)

ಬೆಂಗಳೂರು: ಬಿಎಂಟಿಸಿ ಬಸ್ ಚಾಲಕರು ವಾರದ ರಜೆ ಬಿಟ್ಟು ಬೇರಾವುದೇ ರಜೆ ಪಡೆಯದೇ ಕೆಲಸ ಮಾಡಿದರೆ, ಆ ರಜಾದಿನಗಳಲ್ಲಿ ಕೆಲಸ ಮಾಡಿದ್ದಕ್ಕಾಗಿ ವಿಶೇಷ ಭತ್ಯೆ ಎಂದು 500 ರೂಪಾಯಿ ನೀಡಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಿರ್ಧರಿಸಿದೆ.

ಬಿಎಂಟಿಸಿಯ ಒಟ್ಟು ಚಾಲನಾ ಸಿಬ್ಬಂದಿ ಪೈಕಿ ನಿತ್ಯವೂ ಶೇಕಡ 6.8 ಸಿಬ್ಬಂದಿ ದೈನಂದಿನ ಅಥವಾ ದೀರ್ಘಾವಧಿ ರಜೆಯಲ್ಲಿರುತ್ತಾರೆ. ಚಾಲನಾ ಸಿಬ್ಬಂದಿ ಈ ರೀತಿ ಗೈರಾಗುವ ಕಾರಣ ಬಸ್ ಸೇವೆ ಒದಗಿಸಲು ಸಂಕಷ್ಟ ಉಂಟಾಗಿದೆ ಎಂಬ ಕಾರಣಕ್ಕೆ ಬಿಎಂಟಿಸಿ ಈ ಉಪಕ್ರಮವನ್ನು ಘೋ‍ಷಿಸಿದೆ.

ಬಿಎಂಟಿಸಿಯ ಅಂಕಿ ಅಂಶ ಪ್ರಕಾರ, 2023ರ ಏಪ್ರಿಲ್‌ನಿಂದ ಅಕ್ಟೋಬರ್ ತನಕ ಚಾಲನಾ ಸಿಬ್ಬಂದಿ ರಜೆ ಹಾಕಿರುವ ಕಾರಣ 44.27 ಲಕ್ಷ ಷೆಡ್ಯೂಲ್ ರದ್ದುಗೊಂಡಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಎಂಟಿಸಿ ಆಡಳಿತ, ಚಾಲಕರನ್ನು ಉತ್ತೇಜಿಸುವ ಸಲುವಾಗಿ 500 ರೂಪಾಯಿ ವಿಶೇಷ ಭತ್ಯೆಯನ್ನು ನೀಡುವ ಉಪಕ್ರಮವನ್ನು ಪ್ರಕಟಿಸಿದೆ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ.

ಈ ಹೊಸ ಉಪಕ್ರಮದ ಪ್ರಯೋಜನ ಪಡೆಯಬೇಕಾದರೆ ಬಿಎಂಟಿಸಿ ಚಾಲಕರು, ತಿಂಗಳಲ್ಲಿ ವಾರದ ರಜೆಗಳನ್ನು ಹೊರತುಪಡಿಸಿ 26 ದಿನ ಕೆಲಸ ಮಾಡಬೇಕು. ಯಾವುದೇ ಶಿಸ್ತು ಕ್ರಮಕ್ಕೆ ಒಳಗಾಗಿರಬಾರದು. ಅಂತಹ ಚಾಲನಾ ಸಿಬ್ಬಂದಿಗೆ 500 ರೂಪಾಯಿ ವಿಶೇಷ ಭತ್ಯೆ ಸಿಗಲಿದೆ.

ಆಯಾ ಘಟಕದಲ್ಲಿ ರಜೆ ರಹಿತವಾಗಿ ಕೆಲಸ ಮಾಡಿದ ಚಾಲಕರ ಪಟ್ಟಿಯನ್ನು ವಲಯದ ಅಧಿಕಾರಿಗಳು ಮುಖ್ಯ ಸಂಚಾರ ವ್ಯವಸ್ಥಾಪಕರಿಗೆ ಸಲ್ಲಿಸಬೇಕು. ಅವರು ಅದನ್ನು ಆಧರಿಸಿ ರಜೆ ರಹಿತ ಚಾಲಕರ ವೇತನಕ್ಕೆ ವಿಶೇಷ ಭತ್ಯೆ ಮೊತ್ತವನ್ನು ಬಿಡುಗಡೆ ಮಾಡಲು ಶಿಫಾರಸು ಮಾಡಲಿದ್ದಾರೆ.

ಈ ಉಪಕ್ರಮದ ಮೂಲಕ ಬೆಂಗಳೂರಿನಲ್ಲಿ ಬಸ್‌ಗಳ ಸೇವೆಯನ್ನು ಪ್ರಯಾಣಿಕರಿಗೆ ನಿಯತವಾಗಿ ಒದಗಿಸಲು ಬಿಎಂಟಿಸಿ ಮುಂದಾಗಿದೆ. ಚಾಲಕರು ಇದಕ್ಕೆ ಹೇಗೆ ಪ್ರತಿಸ್ಪಂದಿಸುತ್ತಾರೆ ಎಂಬುದು ಸದ್ಯದ ಕುತೂಹಲದ ಮಾತುಗಳು ಚಾಲಕರ ವಲಯದಲ್ಲಿ ಓಡಾಡಿದೆ.

ಕಳೆದ ವರ್ಷ 35,800ಕ್ಕೂ ಹೆಚ್ಚು ಪ್ರಯಾಣಿಕರಿಂದ 76 ಲಕ್ಷ ರೂ ದಂಡ ವಸೂಲಿ ಮಾಡಿದ್ದ ಬಿಎಂಟಿಸಿ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಿಎಂಟಿಸಿಯು ಕಳೆದ ವರ್ಷ (2023) 35,803 ಪ್ರಯಾಣಿಕರಿಂದ ಒಟ್ಟು 76 ಲಕ್ಷ ರೂಪಾಯಿಯಷ್ಟು ದಂಡ ವಸೂಲಿ ಮಾಡಿ, ಆದಾಯ ಸಂಗ್ರಹಿಸಿದೆ. ಈ ಪೈಕಿ ಮಹಿಳೆಯರ ಸೀಟಲ್ಲಿ ಕುಳಿತು ಪ್ರಯಾಣಿಸಿದ 3,673 ಮಂದಿ 3.5 ಲಕ್ಷ ರೂಪಾಯಿ ದಂಡ ಪಾವತಿಸಿದ್ದಾರೆ.

ತಿಂಗಳ ಲೆಕ್ಕಾಚಾರ ಗಮನಿಸಿದರೆ, 2023ರ ಜನವರಿಯಲ್ಲಿ ಟಿಕೆಟ್ ರಹಿತ ಪ್ರಯಾಣದ ಕಾರಣ 6,77,190 ರೂ., ಮಹಿಳೆಯರ ಸೀಟಲ್ಲಿ ಕುಳಿತು ಪ್ರಯಾಣಿಸಿದವರು 32,200 ರೂ. ದಂಡಪಾವತಿಸಿದ್ದಾರೆ. ಫೆಬ್ರವರಿಯಲ್ಲಿ ಟಿಕೆಟ್ ರಹಿತ ಪ್ರಯಾಣಿಕರು 6,52,580 ರೂಪಾಯಿ, ಮಹಿಳೆಯರ ಸೀಟಲ್ಲಿ ಕುಳಿತು ಪ್ರಯಾಣಿಸಿದವರು 37,500 ರೂ, ಮಾರ್ಚ್‌ ತಿಂಗಳಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸಿದವರು 6,54,740 ರೂ.. ಹಾಗೂ ಮಹಿಳಾ ಸೀಟಲ್ಲಿ ಕುಳಿತವರಿಂದ 14,600 ರೂಪಾಯಿ ದಂಡವನ್ನು ಬಿಎಂಟಿಸಿ ಸಂಗ್ರಹಿಸಿದೆ.

ಇದೇ ರೀತಿ ಏಪ್ರಿಲ್‌ನಲ್ಲಿ ಟಿಕೆಟ್ ಇಲ್ಲದವರಿಂದ 6,56,740 ರೂ., ಮಹಿಳಾ ಸೀಟ್‌ನಲ್ಲಿ ಕುಳಿತು ಪ್ರಯಾಣಿಸಿದವರಿಂದ 26,800 ರೂಪಾಯಿ, ಮೇ ತಿಂಗಳಲ್ಲಿ ಟಿಕೆಟ್ ಇಲ್ಲದವರಿಂದ 6,62,260 ರೂ., ಲೇಡಿಸ್ ಸೀಟ್​ನಲ್ಲಿ ಕುಳಿತವರಿಂದ 34,400 ರೂಪಾಯಿಯನ್ನು ಬಿಎಂಟಿಸಿ ಸಂಗ್ರಹಿಸಿದೆ.

ಜೂನ್​ನಲ್ಲಿ ಟಿಕೆಟ್ ಇಲ್ಲದವರಿಂದ 5,19,060 ರೂಪಾಯಿ, ಮಹಿಳಾ ಸೀಟಲ್ಲಿ ಕುಳಿತವರಿಂದ 32,800 ರೂಪಾಯಿ, ಜುಲೈನಲ್ಲಿ ಟಿಕೆಟ್ ಇಲ್ಲದವರಿಂದ 5,87,310 ರೂಪಾಯಿ ಹಾಗೂ ಮಹಿಳಾ ಸೀಟ್​ನಲ್ಲಿ ಕುಳಿತವರಿಂದ 32,200 ರೂಪಾಯಿ, ಆಗಸ್ಟ್‌ನಲ್ಲಿ ಟಿಕೆಟ್ ರಹಿತರಿಂದ 6,96,570 ರೂಪಾಯಿ, ಮಹಿಳಾ ಸೀಟ್‌ನಲ್ಲಿ ಕುಳಿತವರಿಂದ 46,100 ರೂಪಾಯಿ, ಸೆಪ್ಟೆಂಬರ್‌ನಲ್ಲಿ ಟಿಕೆಟ್ ಇಲ್ಲದವರಿಂದ 6,10,880 ರೂಪಾಯಿ, ಲೇಡಿಸ್ ಸೀಟ್​ನಲ್ಲಿ ಕುಳಿತವರಿಂದ 38,700 ದಂಡವನ್ನು ಬಿಎಂಟಿಸಿ ಸಂಗ್ರಹಿಸಿದೆ.

ಅಕ್ಟೋಬರ್​ನಲ್ಲಿ ಟಿಕೆಟ್ ಇಲ್ಲದವರಿಂದ 6,72,120 ರೂಪಾಯಿ, ಮಹಿಳಾ ಸೀಟ್‌ನಲ್ಲಿ ಕುಳಿತು ಪ್ರಯಾಣಿಸಿದವರಿಂದ 27,200 ರೂಪಾಯಿ, ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಟಿಕೆಟ್ ಇಲ್ಲದವರಿಂದ 6,68,610 ರೂಪಾಯಿ ಹಾಗೂ ಮಹಿಳಾ ಸೀಟ್​ನಲ್ಲಿ ಕುಳಿತವರಿಂದ 43,800 ರೂಪಾಯಿ ದಂಡ ಸಂಗ್ರಹಿಸಿರುವುದಾಗಿ ಬಿಎಂಟಿಸಿ ಮೂಲಗಳು ತಿಳಿಸಿವೆ.

Whats_app_banner