Chikkaballapur News: 14 ವರ್ಷದ ಬಾಲಕಿ ಈಗ ಮಗುವಿನ ತಾಯಿ; ಮಧುಗಿರಿ ಸರ್ಕಾರಿ ಹಾಸ್ಟೆಲ್‌ನ 9ನೇ ಕ್ಲಾಸ್ ವಿದ್ಯಾರ್ಥಿನಿ
ಮಧುಗಿರಿ ಸರ್ಕಾರಿ ಹಾಸ್ಟೆಲ್‌ನಲ್ಲಿದ್ದ 9ನೇ ತರಗತಿಯ ವಿದ್ಯಾರ್ಥಿನಿ ಗರ್ಭಿಣಿಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಹದಿನಾಲ್ಕು ವರ್ಷದ ಬಾಲಕಿ ಗರ್ಭಿಣಿಯಾಗಿರುವ ವಿಚಾರ ಆಕೆ ಪ್ರಸವ ವೇದನೆ ಅನುಭವಿಸುವ ತನಕವೂ ಯಾರ ಗಮನಕ್ಕೂ ಬಾರದೇ ಇರುವುದು ಅಚ್ಚರಿ ಮತ್ತು ಕಳವಳವನ್ನು ಉಂಟುಮಾಡಿದೆ. ಹಾಸ್ಟೆಲ್ ವಾರ್ಡನ್ ಅಮಾನತಾಗಿದ್ದು, ಪೋಕ್ಸೋ ಪ್ರಕರಣ ದಾಖಲಾಗಿದೆ.
ಚಿಕ್ಕಬಳ್ಳಾಪುರ: ಸರ್ಕಾರಿ ಹಾಸ್ಟೆಲ್‌ನಲ್ಲಿದ್ದುಕೊಂಡು ಓದುತ್ತಿದ್ದ 9ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಗಂಡುಮಗುವಿಗೆ ಜನ್ಮನೀಡಿದ್ದಾಳೆ. ಆಕೆ ಗರ್ಭಿಣಿ ಎಂಬ ವಿಚಾರ ಹೆರಿಗೆ ಆಗುವ ತನಕವೂ ಗೊತ್ತಿರಲಿಲ್ಲ ಎಂಬ ಕಳವಳಕಾರಿ ಘಟನೆ ಚಿಕ್ಕಬಳ್ಳಾಪುರದ ಬಾಗೇಪಲ್ಲಿಯಿಂದ ವರದಿಯಾಗಿದೆ.
ಸಂತ್ರಸ್ತ ಬಾಲಕಿ ತುಮಕೂರು ಜಿಲ್ಲೆಯ ಮಧುಗಿರಿ ಸರ್ಕಾರಿ ಹಾಸ್ಟೆಲ್‌ನಲ್ಲಿದ್ದಳು. ಬಾಗೇಪಲ್ಲಿ ಮೂಲದ ಬಾಲಕಿ ಬಡತನದ ಕೌಟುಂಬಿಕ ಹಿನ್ನೆಲೆಯವಳು. ಬಾಲಕಿಗೆ 14 ವರ್ಷ ವಯಸ್ಸು. ತಾಯಿ ಅಂಗನವಾಡಿ ಶಿಕ್ಷಕಿ. ಮೂರ್ನಾಲ್ಕು ದಿನಗಳ ಹಿಂದೆ ಹೊಟ್ಟೆ ನೋವು ಎಂದು ತಾಯಿ ಬಳಿ ಹೇಳಿಕೊಂಡಾಗ, ಬಾಗೇಪಲ್ಲಿಯ ಸರ್ಕಾರಿ ಆಸ್ಪತ್ರೆಗೆ ಹೋಗಿ ಚುಚ್ಚುಮದ್ದು ಪಡೆದಿದ್ದಳು. ಆದರೆ ಕೆಲವೇ ಹೊತ್ತಿನಲ್ಲಿ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಪುನಃ ಆಸ್ಪತ್ರೆಗೆ ಹೋಗಿದ್ದರು.
ಆಗ ಆಕೆಗೆ ಮತ್ತೊಂದು ಇಂಜೆಕ್ಷನ್ ನೀಡಿ, ಸ್ಕ್ಯಾನಿಂಗ್ ಮಾಡಿಸಿದ್ದಾರೆ. ಆಗ ಆಕೆ ಗರ್ಭಿಣಿ ಎಂಬ ವಿಚಾರ ಆಸ್ಪತ್ರೆಯವರ ಗಮನಕ್ಕೂ ಬಂದಿದೆ. ಬಳಿಕ ಆಸ್ಪತ್ರೆ ವೈದ್ಯರು ಆಕೆಯ ಹೆರಿಗೆ ಮಾಡಿಸಿದ್ದಾರೆ. ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮಗು 2.2 ಕಿಲೋ ತೂಕ ಇದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದ್ದಾಗಿ ಕನ್ನಡ ಪ್ರಭ ವರದಿ ಮಾಡಿದೆ.
ಆಸ್ಪತ್ರೆಯ ಫಾರಂ ಭರ್ತಿ ಮಾಡುವುದಕ್ಕಾಗಿ ವಿವರ ಕೇಳಿದಾಗ ಆಕೆ ಶಾಲಾ ವಿದ್ಯಾರ್ಥಿನಿ ಎಂಬ ಅಂಶ ಬೆಳಕಿಗೆ ಬಂದಿದೆ. ನಂತರ ತಾಯಿ ಮತ್ತು ಮಗುವನ್ನು ಹೆಚ್ಚಿನ ಆರೈಕೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಈ ನಡುವೆ, ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಈ ವಿಚಾರವನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ.
ಹಾಸ್ಟೆಲ್‌ಗೆ ಭೇಟಿ ನೀಡಿದ ಅಧಿಕಾರಿಗಳು; ವಾರ್ಡನ್ ಅಮಾನತು: ಹದಿನಾಲ್ಕು ವರ್ಷದ ಬಾಲಕಿ ಪ್ರಸವಿಸಿದ ಸುದ್ದಿ ತಿಳಿಯುತ್ತಿದ್ದಂತೆ, ಆ ಬಾಲಕಿ ಉಳಿದುಕೊಂಡಿದ್ದ ತುಮಕೂರು ಜಿಲ್ಲೆ ಮಧುಗಿರಿಯ ಸರ್ಕಾರಿ ಹಾಸ್ಟೆಲ್‌ಗೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಸ್.ಕೃಷ್ಣಪ್ಪ ಮತ್ತು ಸಹಾಯಕ ನಿರ್ದೇಶಕ ವಿ. ಎಸ್.ಶಿವಣ್ಣ ಬೇಟಿ ನೀಡಿ ಪರಿಶೀಲಿಸಿ ಜಿಲ್ಲಾ ಪಂಚಾಯತ್ ಸಿಇಒ ಜಿ.ಪ್ರಭು ಅವರಿಗೆ ವರದಿ ನೀಡಿದ್ದರು. ಈ ವರದಿ ಆಧರಿಸಿ ಕರ್ತವ್ಯಲೋಪ, ನಿರ್ಲಕ್ಷ್ಯ ತೋರಿಸಿದ್ದಕ್ಕಾಗಿ ಹಾಸ್ಟೆಲ್ ವಾರ್ಡನ್ ಜಿ.ನಿವೇದಿತಾ ಅವರನ್ನು ಅಮಾನತು ಮಾಡಲಾಗಿದೆ.
ಗೊಂದಲ ಮತ್ತು ಸಂದೇಹಗಳು: ತಾನು ಗರ್ಭಿಣಿ ಎಂಬ ವಿಚಾರ ಸ್ವತಃ ಬಾಲಕಿಗೆ ತಿಳಿದಿರಲಿಲ್ಲ. ಶರೀರದಲ್ಲಾಗುತ್ತಿರುವ ಬದಲಾವಣೆಯೂ ಆಕೆಯ ಗಮನಕ್ಕೆ ಬಂದಿರಲಿಲ್ಲ. ಆಕೆಯ ತಾಯಿಗೆ, ಶಾಲಾ ಶಿಕ್ಷಕರಿಗೆ, ಹಾಸ್ಟೆಲ್ ವಾರ್ಡನ್‌ಗೂ ಬಾಲಕಿ ಶರೀರದಲ್ಲಾದ ಬದಲಾವಣೆ ಯಾಕೆ ಗಮನಕ್ಕೆ ಬಂದಿಲ್ಲ ಎಂಬ ಸಂದೇಹಗಳು ಎಲ್ಲರನ್ನೂ ಕಾಡತೊಡಗಿದೆ ಎಂದು ವರದಿ ಹೇಳಿದೆ.
ಪೋಕ್ಸೋ ಕೇಸ್ ದಾಖಲು: ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ನೀಡಿದ ಮಾಹಿತಿ ಆಧರಿಸಿ ಪೊಲೀಸರು ಪೋಕ್ಸೋ ಕೇಸ್ ದಾಖಲಿಸಿದ್ದಾರೆ. ಬಾಲಕಿಯ ಬಳಿ ಹೇಳಿಕೆ ಪಡೆದುಕೊಂಡ ಪೊಲೀಸರಿಗೆ, ಬಾಲಕಿಯ ಜತೆಗೆ ಲೈಂಗಿಕ ಸಂಪರ್ಕ ಬೆಳೆಸಿದವರನ್ನು ಪತ್ತೆ ಹಚ್ಚುವುದು ಸಾಧ್ಯವಾಗಿಲ್ಲ. ಮೊದಲ ಬಾರಿ ಹೇಳಿಕೆ ನೀಡಿದಾಗ ಬಾಲಕಿ ತನಗಿಂತ ಎರಡು ವರ್ಷ ಹಿರಿಯ ವಿದ್ಯಾರ್ಥಿಯ ಹೆಸರು ಹೇಳಿದ್ದಳು. ಆತ ಈಗ ಶಾಲೆಗೆ ಹೋಗುತ್ತಿಲ್ಲ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ. ಮತ್ತೊಮ್ಮೆ ವಿಚಾರಿಸಿದಾಗ ಇನ್ನೊಬ್ಬರ ಹೆಸರು ಹೇಳಿದ್ದಾಳೆ. ಹೀಗಾಗಿ ಪೊಲೀಸರು ಬಾಲಕಿಗೆ ಕೌನ್ಸೆಲಿಂಗ್ ಮಾಡಿಸಲು ಮುಂದಾಗಿದ್ದಾರೆ ಎಂದು ವರದಿ ವಿವರಿಸಿದೆ.