ಇಂಟರ್ನೆಟ್‌ನಲ್ಲಿ ವೈರಲ್ ಆಯ್ತು ಅಂಬಾನಿ ಲಾಡು ರೆಸಿಪಿ; ಚಿನ್ನ-ವಜ್ರ ಕೂಡ ಹಾಕ್ಬಿಡಿ ಅಂದ್ರು ನೆಟ್ಟಿಗರು!
Nov 28, 2024 11:37 AM IST
ಇಂಟರ್ನೆಟ್‌ನಲ್ಲಿ ವೈರಲ್ ಆಯ್ತು ಅಂಬಾನಿ ಲಾಡು ರೆಸಿಪಿ; ಚಿನ್ನ-ವಜ್ರ ಕೂಡ ಹಾಕ್ಬಿಡಿ ಅಂದ್ರು ನೆಟ್ಟಿಗರು
ಅಂಬಾನಿ ಲಾಡು ರೆಸಿಪಿ ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸುತ್ತಿದ್ದು, ನೆಟ್ಟಿಗರು ಚಿನ್ನ-ವಜ್ರವನ್ನೂ ಹಾಕಿಬಿಡಿ ಎಂದು ಹಾಸ್ಯಚಟಾಕಿ ಹಾರಿಸಿದ್ದಾರೆ. ಇದೊಂದು ಐಷಾರಾಮಿ ಲಾಡುವಾಗಿದ್ದು, ಶ್ರೀಮಂತ ಪದಾರ್ಥಗಳೊಂದಿಗೆ ತಯಾರಿಸಲಾದ ಸಿಹಿತಿಂಡಿಯಾಗಿದೆ. ಇದನ್ನು ಮಾಡುವುದು ಹೇಗೆ ಎಂಬುದು ಇಲ್ಲಿದೆ.
ಲಾಡು ಅಥವಾ ಲಡ್ಡು ಅಂದ್ರೆ ನಿಮಗಿಷ್ಟನಾ? ಕಡಲೆಹಿಟ್ಟಿನ ಲಾಡು, ರವೆ ಲಾಡು, ಡ್ರೈ ಫ್ರೂಟ್ಸ್ ಲಾಡು ಇತ್ಯಾದಿ ಲಾಡುಗಳನ್ನು ಸವಿದಿರಬಹುದು. ಆದರೆ, ಲಾಡು ಸಿಹಿತಿನಿಸಿನಲ್ಲಿ ಇದೀಗ ಹೊಸ ಅಲೆಯೇ ಸೃಷ್ಟಿಯಾಗುತ್ತಿದೆ. ಹೌದು, ಇದೀಗ ಅಂಬಾನಿ ಲಾಡು ಸಿಹಿತಿನಿಸು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಇದೊಂದು ಐಷಾರಾಮಿ ಲಡ್ಡುವಾಗಿದ್ದು, ಶ್ರೀಮಂತ ಪದಾರ್ಥಗಳೊಂದಿಗೆ ತಯಾರಿಸಲಾದ ಸಿಹಿತಿಂಡಿಯಾಗಿದೆ. ಈ ಪಾಕವಿಧಾನವನ್ನು ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಅಂಬಾನಿ ಲಾಡು ರೆಸಿಪಿ ಮಾಡುವ ವಿಧಾನ ಇಲ್ಲಿದೆ
ಇಶಿಕಾ ಸಾಹು ಎಂಬ ಮಹಿಳೆ ಇನ್‌ಸ್ಟಾಗ್ರಾಮ್‌ನಲ್ಲಿ ಲಾಡು ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಶಿಷ್ಟ ಲಾಡಿಗೆ ಅಂಬಾನಿ ಲಡ್ಡು ಎಂದು ಹೆಸರಿಸಿದ್ದಾರೆ. ಈ ವಿಡಿಯೋ ತ್ವರಿತವಾಗಿ ವೈರಲ್ ಆಗಿದ್ದು, 33 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ. ಈ ರೆಸಿಪಿ ಮಾಡುವುದು ಹೇಗೆ ಎಂಬುದನ್ನು ಮಹಿಳೆ ತೋರಿಸಿಕೊಟ್ಟಿದ್ದಾರೆ.
ಬೇಕಾಗುವ ಪದಾರ್ಥಗಳು: ಬಾದಾಮಿ- 1/2 ಕಪ್, ಗೋಡಂಬಿ- 1/2 ಕಪ್, ಪಿಸ್ತಾ- 1/4 ಕಪ್, ಖರ್ಜೂರ (ಬೀಜ ರಹಿತ)- 1 ಕಪ್, ಒಣ ಏಪ್ರಿಕಾಟ್- 1/2 ಕಪ್, ಅಂಜೂರ- 1/2 ಕಪ್, ಸೂರ್ಯಕಾಂತಿ ಅಥವಾ ಎಳ್ಳು ಬೀಜಗಳು ( ಐಚ್ಛಿಕ- ಬೇಕಿದ್ದರೆ ಮಾತ್ರ ಬಳಸಬಹುದು )- 2 ಟೀ ಚಮಚ.
ಮಾಡುವ ವಿಧಾನ: ಮೊದಲಿಗೆ ಬಾದಾಮಿ ಮತ್ತು ಗೋಡಂಬಿಯನ್ನು ಮಧ್ಯಮ ಉರಿಯಲ್ಲಿ ಆರೊಮ್ಯಾಟಿಕ್ (ಸುವಾಸನೆ) ಬರುವವರೆಗೆ ಹುರಿಯಿರಿ. ಪಿಸ್ತಾ ಹಾಕಿ 2 ರಿಂದ 3 ನಿಮಿಷ ಫ್ರೈ ಮಾಡಿ, ಪಕ್ಕಕ್ಕೆ ಇರಿಸಿ.
- ಸ್ಟೌವ್ ಆಫ್ ಮಾಡಿ. ನಂತರ ಬೆಚ್ಚಗಿನ ಪ್ಯಾನ್ ಮೇಲೆ ಖರ್ಜೂರ, ಒಣಗಿದ ಏಪ್ರಿಕಾಟ್ ಮತ್ತು ಅಂಜೂರದ ಹಣ್ಣುಗಳನ್ನು ಹಾಕಿ (ಬೀಜಗಳನ್ನು ತೆಗೆದುಹಾಕಬಹುದು).
- ಎಲ್ಲಾ ಪದಾರ್ಥಗಳು ಸಂಪೂರ್ಣವಾಗಿ ತಣ್ಣಗಾಗಲಿ. ಬೀಜಗಳನ್ನು (ಸೂರ್ಯಕಾಂತಿ ಅಥವಾ ಎಳ್ಳು ಬೀಜಗಳು) ಆರೊಮ್ಯಾಟಿಕ್ (ಸುವಾಸನೆ) ಬರುವವರೆಗೆ ತನಕ ಹುರಿದು ಪಕ್ಕಕ್ಕೆ ಇರಿಸಿ.
- ಎಲ್ಲಾ ಪದಾರ್ಥಗಳನ್ನು ಹುರಿದ ನಂತರ ಅವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಅವುಗಳನ್ನು ಬ್ಲೆಂಡರ್‌ನಲ್ಲಿ ಹಾಕಿ ಒರಟಾಗಿ ಪುಡಿಮಾಡಿ.
- ಈ ಮಿಶ್ರಣವನ್ನು 10 ರಿಂದ 12 ಭಾಗಗಳಾಗಿ ವಿಂಗಡಿಸಿ, ಪ್ರತಿ ಭಾಗವನ್ನು ಚೆಂಡಿನಂತೆ ರೂಪಿಸಿದರೆ ರುಚಿಕರವಾದ ಅಂಬಾನಿ ಲಾಡು ಸಿದ್ಧ.
ವಿಶಿಷ್ಟ ಲಾಡು ರೆಸಿಪಿಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು ಹೀಗೆ
ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಹಾಕಿದ ಕೂಡಲೇ ತ್ವರಿತವಾಗಿ ವೈರಲ್ ಆಯಿತು. ನೆಟ್ಟಿಗರಿಂದ ಪ್ರತಿಕ್ರಿಯೆಗಳ ಮಹಾಪೂರವೇ ಹರಿದುಬಂದಿದೆ. ಒಬ್ಬ ಬಳಕೆದಾರ, ಜನರನ್ನು ಬಡವರೆಂದು ಕರೆಯುವ ಉತ್ತಮ ಮಾರ್ಗ ಎಂದು ಹಾಸ್ಯಮಾಡಿದರೆ, ಮತ್ತೊಬ್ಬರು ಅಕ್ಕಾ, ನೀವು ಚಿನ್ನವನ್ನು ಸೇರಿಸಲು ಮರೆತಿದ್ದೀರಿ ಎಂದು ನಗೆ ಚಟಾಕಿ ಹಾರಿಸಿದ್ದಾರೆ. ಮತ್ತೊಬ್ಬ ಬಳಕೆದಾರ, ಇದನ್ನು ಮಾಡಲು ನಿಮಗೆ ಎಷ್ಟು ಸಾಲ ಬೇಕು ಎಂದು ಪ್ರಶ್ನಿಸಿದರೆ, ನಮ್ಮನ್ನು ಬಡವರೆಂದು ಕರೆಯುವ ವಿಧಾನವೇ? ಎಂದು ಇನ್ನೊಬ್ಬರು ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದಾರೆ. ಸಹೋದರಿ, ನೀವು ವಜ್ರಗಳನ್ನು ಹಾಕಲು ಮರೆತಿದ್ದೀರಿ ಎಂದು ಒಬ್ಬರು ಹೇಳಿದ್ರೆ, ನನ್ನ ಆಕ್ಟಿವಾ ಬದಲಿಗೆ ಒಂದು ಲಡ್ಡು ಸಿಗುತ್ತದೆಯೇ ಎಂದು ಇನ್ನೊಬ್ಬರು ಹಾಸ್ಯ ಚಟಾಕಿ ಹಾರಿಸಿದ್ದಾರೆ.