ಕೇವಲ 3 ಪದಾರ್ಥಗಳಲ್ಲಿ ಸಿದ್ಧವಾಗುತ್ತೆ ಈ ಆರೋಗ್ಯಕರ ಲಾಡು: ಜೋಳದ ಲಡ್ಡು ಮಾಡುವುದು ತುಂಬಾ ಸಿಂಪಲ್, ಇಲ್ಲಿದೆ ರೆಸಿಪಿ
ಜೋಳ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಉತ್ತರ ಕರ್ನಾಟಕದಲ್ಲಿ ಜೋಳದ ರೊಟ್ಟಿ ಸಖತ್ ಫೇಮಸ್. ಮಧ್ಯಾಹ್ನ, ರಾತ್ರಿ ಊಟಕ್ಕೆ ಜೋಳದ ರೊಟ್ಟಿ ಬೇಕೇ ಬೇಕು. ಈ ಜೋಳದ ಹಿಟ್ಟಿನಿಂದ ರುಚಿಕರ ಹಾಗೂ ಆರೋಗ್ಯಕರವಾದ ಲಾಡು ತಯಾರಿಸಬಹುದು. ಈ ರೆಸಿಪಿ ಮಾಡುವುದು ತುಂಬಾ ಸಿಂಪಲ್. ಇಲ್ಲಿದೆ ಪಾಕವಿಧಾನ.
ರಾಗಿ, ಜೋಳ ಸೇವನೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಹಲವು ಮಂದಿ ಇವನ್ನು ತಮ್ಮ ಆಹಾರದ ಭಾಗವಾಗಿ ಮಾಡಿಕೊಂಡಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿ ರಾಗಿ ಮುದ್ದೆ ಪ್ರಸಿದ್ಧ ಆಹಾರವಾದ್ರೆ, ಉತ್ತರ ಕರ್ನಾಟಕದಲ್ಲಿ ಜೋಳದ ರೊಟ್ಟಿ ಸಖತ್ ಫೇಮಸ್. ಬಿಸಿ ಬಿಸಿ ಜೋಳದ ರೊಟ್ಟಿ, ಚಟ್ನಿ, ಪಲ್ಯ ಜತೆ ತಿಂತಾ ಇದ್ರೆ ಅದರ ರುಚಿಯ ಮಜಾವೇ ಬೇರೆ. ಜೋಳದಿಂದ ರೊಟ್ಟಿ ಮಾತ್ರವಲ್ಲ ಲಾಡು ಕೂಡ ತಯಾರಿಸಬಹುದು. ಇದನ್ನು ಮಾಡುವುದು ತುಂಬಾ ಸುಲಭ. ಒಮ್ಮೆ ತಯಾರಿಸಿದರೆ, ಅವು ಎರಡು ವಾರಗಳವರೆಗೆ ತಾಜಾವಾಗಿರುತ್ತವೆ. ಪ್ರತಿದಿನ ಲಡ್ಡು ತಿಂದರೆ ಸಾಕು. ಅವು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತವೆ ಮತ್ತು ಅನೇಕ ರೀತಿಯ ಪೋಷಕಾಂಶಗಳನ್ನು ಒದಗಿಸುತ್ತವೆ. ಈ ಲಾಡು ಮಾಡುವುದು ತುಂಬಾ ಸರಳ, ಇಲ್ಲಿದೆ ರೆಸಿಪಿ ಮಾಡುವುದು ವಿಧಾನ.
ಜೋಳ ಲಡ್ಡು ರೆಸಿಪಿ ಮಾಡುವ ವಿಧಾನ
ಬೇಕಾಗುವ ಸಾಮಗ್ರಿಗಳು: ಜೋಳದ ಹಿಟ್ಟು- ಒಂದು ಕಪ್, ಬೆಲ್ಲ- ಅರ್ಧ ಕಪ್, ತುಪ್ಪ- ಕಾಲು ಕಪ್.
ಮಾಡುವ ವಿಧಾನ: ಸ್ಟೌವ್ ಮೇಲೆ ಬಾಣಲೆ ಇಟ್ಟು ಜೋಳದ ಹಿಟ್ಟನ್ನು ಸ್ವಲ್ಪ ಸಮಯ ಫ್ರೈ ಮಾಡಿ ಪಕ್ಕಕ್ಕೆ ಇಡಿ. ನಂತರ ಮತ್ತೆ ಬಾಣಲೆಯನ್ನು ಸ್ಟೌವ್ ಮೇಲಿಟ್ಟು, ತುಪ್ಪ ಹಾಕಿ ಸಣ್ಣ ಉರಿಯಲ್ಲಿಡಿ. ತುಪ್ಪ ಕರಗಿದ ನಂತರ, ಅದಕ್ಕೆ ತುರಿದ ಬೆಲ್ಲವನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ನಂತರ ಸ್ಟೌವ್ ಆಫ್ ಮಾಡಿ. ತುಪ್ಪ ಮತ್ತು ಬೆಲ್ಲದ ಈ ಮಿಶ್ರಣಕ್ಕೆ, ಹುರಿದ ಜೋಳದ ಪುಡಿಯನ್ನು ಸೇರಿಸಿ, ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಬೇಕಿದ್ದರೆ ತುಪ್ಪದಲ್ಲಿ ಹುರಿದ ಒಣಹಣ್ಣುಗಳನ್ನು ಸೇರಿಸಬಹುದು. ಸ್ವಲ್ಪ ತಣ್ಣಗಾದ ನಂತರ (ಆದಷ್ಟು ಬಿಸಿಯಾಗಿಯೇ ಇರಲಿ) ಉಂಡೆಗಳಂತೆ ಕಟ್ಟಿಕೊಂಡರೆ ರುಚಿಕರವಾದ ಜೋಳದ ಲಾಡು ಸವಿಯಲು ಸಿದ್ಧ.
ಜೋಳದ ಲಡ್ಡುವಿನ ಆರೋಗ್ಯ ಪ್ರಯೋಜನ
ಪ್ರತಿದಿನ ಒಂದು ಜೋಳ ಲಡ್ಡು ತಿನ್ನಿ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ರಕ್ತಹೀನತೆಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ತುಂಬಾ ಉಪಯುಕ್ತ. ಈ ರೆಸಿಪಿಯನ್ನು ಸಕ್ಕರೆ ಬದಲು ಬೆಲ್ಲ ಹಾಕಿ ಮಾಡಲಾಗುವುದರಿಂದ ಆರೋಗ್ಯಕ್ಕೆ ಉತ್ತಮ. ಹಾಗಾಗಿ ಈ ಲಡ್ಡು ತಿಂದರೆ ರಕ್ತ ಉತ್ಪತ್ತಿಯಾಗುತ್ತದೆ. ಜೋಳ ಜೀರ್ಣಕ್ರಿಯೆಗೆ ತುಂಬಾ ಪ್ರಯೋಜನಕಾರಿ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಮಧುಮೇಹ ಇರುವವರು ಜೋಳದ ಲಾಡು ಸೇವಿಸಬಹುದು. ಪ್ರತಿದಿನ ಜೋಳದ ಲಾಡು ತಿಂದರೆ ಕ್ಯಾನ್ಸರ್ ಬರುವ ಸಾಧ್ಯತೆ ಬಹಳ ಕಡಿಮೆ ಎಂದು ಹೇಳಲಾಗಿದೆ. ಇವು ಹೃದಯದ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಉತ್ತಮ.
ಹಾಗೆಯೇ ಸ್ಥೂಲಕಾಯದಿಂದ ಬಳಲುತ್ತಿರುವವರು ಪ್ರತಿದಿನ ಈ ಲಾಡು ತಿನ್ನಬಹುದು. ಜೋಳವು ಹೆಚ್ಚು ಕಾಲ ಶಕ್ತಿಯನ್ನು ನೀಡುತ್ತದೆ ಮತ್ತು ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ. ಇದು ಕೊಬ್ಬಿನ ಶೇಖರಣೆಯನ್ನು ಕಡಿಮೆ ಮಾಡುತ್ತದೆ. ಬೊಜ್ಜು ತಡೆಗಟ್ಟುವಲ್ಲೂ ಸಹಕಾರಿ. ಜೋಳದಲ್ಲಿ ಸಾಕಷ್ಟು ಕ್ಯಾಲ್ಸಿಯಂ ಅಂಶವಿದ್ದು, ಇದು ಮೂಳೆಗಳನ್ನು ಗಟ್ಟಿಗೊಳಿಸುತ್ತದೆ ಹಾಗೂ ದೇಹವನ್ನು ಸದೃಢವಾಗಿಸುತ್ತದೆ.