ನುಗ್ಗೆಸೊಪ್ಪಿನ ಸಾಂಬಾರ್, ಪಲ್ಯ ತಿಂದಿರುವಿರಿ: ಲಾಡು ತಿಂದಿದ್ದೀರಾ? ದಿನಕ್ಕೊಂದು ಈ ಸಿಹಿತಿಂಡಿ ತಿಂದರೆ ಆರೋಗ್ಯ ಭಾಗ್ಯ ನಿಮ್ಮದು
ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ನುಗ್ಗೆಸೊಪ್ಪು ಸೇವನೆಯು, ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿದೆ. ನುಗ್ಗೆಸೊಪ್ಪು ಸೇವನೆಯು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ನುಗ್ಗೆಸೊಪ್ಪಿನಿಂದ ಸಿಹಿತಿಂಡಿ ಲಾಡು ಕೂಡ ತಯಾರಿಸಲಾಗುತ್ತದೆ. ನುಗ್ಗೆಸೊಪ್ಪಿನ ಲಾಡು ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯಿರಿ.
ನುಗ್ಗೆಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದಕ್ಷಿಣ ಭಾರತದಲ್ಲಿ ನುಗ್ಗೆಸೊಪ್ಪಿನ ಹಲವು ಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಸಾಂಬಾರ್, ಪಲ್ಯ ಮಾತ್ರವಲ್ಲ ಕೆಲವು ರೀತಿಯ ಸಿಹಿತಿಂಡಿಗಳನ್ನು ಸಹ ತಯಾರಿಸಬಹುದು ಎಂಬುದು ನಿಮಗೆ ಗೊತ್ತೆ? ಹೌದು, ನುಗ್ಗೆಸೊಪ್ಪಿನಿಂದ ಸಿಹಿಯಾದ ಲಾಡು ತಯಾರಿಸಬಹುದು. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ವಿಶೇಷವಾಗಿ ಮಹಿಳೆಯರು ಇದನ್ನು ತಿನ್ನಬಹುದು. ತಮ್ಮ ಚರ್ಮ, ಕೂದಲು ಮತ್ತು ಉಗುರುಗಳ ಆರೋಗ್ಯಕ್ಕೆ ಉತ್ತಮವಾಗಿದೆ. ಮಕ್ಕಳಿಗೆ ಪ್ರತಿದಿನ ಒಂದೊಂದು ನುಗ್ಗೆಸೊಪ್ಪಿನ ಲಾಡು ತಿನ್ನಿಸಿ. ದಿನನಿತ್ಯ ತಿಂದರೆ ಅವರಿಗೆ ನೆಗಡಿ, ಜ್ವರ ಬರುವುದಿಲ್ಲ. ಹಾಗಿದ್ದರೆ ನುಗ್ಗೆಸೊಪ್ಪಿನ ಲಾಡು ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯಿರಿ.
ನುಗ್ಗೆಸೊಪ್ಪಿನ ಲಾಡು ತಯಾರಿಸುವ ವಿಧಾನ
ಬೇಕಾಗುವ ಸಾಮಗ್ರಿಗಳು: ನುಗ್ಗೆಸೊಪ್ಪು- ಒಂದು ಕಪ್, ಪಿಸ್ತಾ- ಕಾಲು ಕಪ್, ತುರಿದ ತೆಂಗಿನಕಾಯಿ- ಅರ್ಧ ಕಪ್, ಏಲಕ್ಕಿ ಪುಡಿ- ಅರ್ಧ ಟೀ ಚಮಚ, ಒಣದ್ರಾಕ್ಷಿ- 3/4 ಕಪ್, ಕುಂಬಳಕಾಯಿ ಬೀಜಗಳು- ಕಾಲು ಕಪ್
ಮಾಡುವ ವಿಧಾನ: ಮೊದಲಿಗೆ ಬಾಣಲೆಯನ್ನು ಒಲೆಯ ಮೇಲೆ ಇಟ್ಟು ನುಗ್ಗೆಸೊಪ್ಪನ್ನು ಹುರಿಯಿರಿ. ಅವು ತೇವಾಂಶವಿಲ್ಲದೆ ಒಣಗಿದಾಗ, ಅವುಗಳನ್ನು ಪಕ್ಕಕ್ಕೆ ಇರಿಸಿ. ಅದೇ ಬಾಣಲೆಯಲ್ಲಿ ಪಿಸ್ತಾ, ಕುಂಬಳಕಾಯಿ ಮತ್ತು ತುರಿದ ತೆಂಗಿನಕಾಯಿ ಸೇರಿಸಿ ಫ್ರೈ ಮಾಡಿ. ನಂತರ ಒಣದ್ರಾಕ್ಷಿಗಳನ್ನು ಕೂಡ ಫ್ರೈ ಮಾಡಿ.
ಇನ್ನು ಸ್ಟೌವ್ ಆಫ್ ಮಾಡಿ ಹುರಿದ ನುಗ್ಗೆಸೊಪ್ಪನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಮಿಕ್ಸಿಂಗ್ ಬೌಲ್ ತೆಗೆದುಕೊಂಡು ಅದರಲ್ಲಿ ಜೀರಿಗೆ ಪುಡಿಯನ್ನು ಸೇರಿಸಿ. ಜತೆಗೆ ಏಲಕ್ಕಿ ಪುಡಿಯನ್ನೂ ಸೇರಿಸಬೇಕು. ನಂತರ ಮಿಕ್ಸಿಗೆ ಪಿಸ್ತಾ, ಕುಂಬಳಕಾಯಿ ಬೀಜಗಳು ಮತ್ತು ಒಣದ್ರಾಕ್ಷಿಗಳನ್ನು ಸೇರಿಸಿ ಅವುಗಳನ್ನು ನುಣ್ಣಗೆ ಪುಡಿಮಾಡಿ. ಈ ಮಿಶ್ರಣವನ್ನು ನುಗ್ಗೆಸೊಪ್ಪಿನ ಪುಡಿಗೆ ಸೇರಿಸಬೇಕು. ನಂತರ ತೆಂಗಿನ ತುರಿಯನ್ನೂ ಸೇರಿಸಿ. ಬೇಕು ಎನಿಸಿದಲ್ಲಿ ತುಪ್ಪವನ್ನು ಸೇರಿಸಬಹುದು. ಇವೆಲ್ಲವನ್ನೂ ಮಿಕ್ಸ್ ಮಾಡಿ, ಲಾಡುಗಳ ಆಕಾರಕ್ಕೆ ಉಂಡೆ ಕಟ್ಟಿಕೊಳ್ಳಿ. ಪ್ರತಿದಿನ ಈ ಲಾಡು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ.
ನುಗ್ಗೆಸೊಪ್ಪಿನಲ್ಲಿರುವ ಪೋಷಕಾಂಶಗಳು
ನುಗ್ಗೆಸೊಪ್ಪು ಸೇವನೆಯು ದೇಹಕ್ಕೆ ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಬಿ ನಂತಹ ಪ್ರಮುಖ ಪೋಷಕಾಂಶಗಳನ್ನು ಒದಗಿಸುತ್ತದೆ. ಸತು, ಕಬ್ಬಿಣ, ತಾಮ್ರ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಮ್ಯಾಂಗನೀಸ್ ಇವೆ. ಮಹಿಳೆಯರು ಪ್ರತಿದಿನ ಈ ಲಾಡು ತಿನ್ನುವುದರಿಂದ ತ್ವಚೆ ಹೊಳೆಯುತ್ತದೆ. ಕೂದಲಿನ ಬೆಳವಣಿಗೆಗೂ ಉತ್ತಮವಾಗಿದೆ. ಉಗುರುಗಳ ಆರೋಗ್ಯಕ್ಕೂ ಉತ್ತಮವಾಗಿರುತ್ತವೆ. ಹೀಗಾಗಿ ಒಂದು ತಿಂಗಳ ಕಾಲ ಪ್ರತಿದಿನ ನುಗ್ಗೆಸೊಪ್ಪಿನ ಲಾಡು ತಿನ್ನುವುದರಿಂದ ಪ್ರಯೋಜನ ಪಡೆಯಬಹುದು. ಒಂದು ತಿಂಗಳ ನಂತರ ನಿಮ್ಮ ಚರ್ಮ, ಕೂದಲು ಮತ್ತು ಉಗುರುಗಳಲ್ಲಿ ಬದಲಾವಣೆಯನ್ನು ಗಮನಿಸಬಹುದು. ಅಲ್ಲದೆ, ಈ ನುಗ್ಗೆಸೊಪ್ಪಿನ ಲಾಡನ್ನು ಮಕ್ಕಳಿಗೆ ತಿನ್ನಿಸುವುದರಿಂದ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಜ್ವರ, ಶೀತ ಮತ್ತು ಕೆಮ್ಮಿಗೆ ರಾಮಬಾಣವಾಗಿದೆ.