logo
ಕನ್ನಡ ಸುದ್ದಿ  /  ಜೀವನಶೈಲಿ  /  ಪ್ರೀಮಿಯಂ ದ್ವಿಚಕ್ರ ವಾಹನಗಳಿಗೆ ಹೆಚ್ಚಿದ ಬೇಡಿಕೆ, ಸಿಸಿ ಹೆಚ್ಚಾದಷ್ಟು ಯುವ ಜನರಿಗೆ ಖುಷಿ ಜಾಸ್ತಿ; ಹೀಗಂದ್ರು ಯಮಹಾ ವೈಸ್‌ ಪ್ರೆಸಿಡೆಂಟ್‌

ಪ್ರೀಮಿಯಂ ದ್ವಿಚಕ್ರ ವಾಹನಗಳಿಗೆ ಹೆಚ್ಚಿದ ಬೇಡಿಕೆ, ಸಿಸಿ ಹೆಚ್ಚಾದಷ್ಟು ಯುವ ಜನರಿಗೆ ಖುಷಿ ಜಾಸ್ತಿ; ಹೀಗಂದ್ರು ಯಮಹಾ ವೈಸ್‌ ಪ್ರೆಸಿಡೆಂಟ್‌

Praveen Chandra B HT Kannada

Oct 01, 2024 06:32 PM IST

google News

ಯಮಹಾ ಪ್ರೀಮಿಯಂ ಬೈಕ್‌

    • ದೇಶದಲ್ಲಿ ಹೆಚ್ಚು ಸಿಸಿ ಇರುವ ಪ್ರೀಮಿಯಂ ಬೈಕ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲೂ ಈ ಟ್ರೆಂಡ್‌ ಹೆಚ್ಚಾಗುತ್ತಿದೆ ಎಂದು ಯಮಹಾ ಕಂಪನಿ ತಿಳಿಸಿದೆ. ಕಂಪನಿಯು ಭಾರತದಲ್ಲಿ ಯಮಹಾ 700 ಸಿಸಿ ಮತ್ತು 900 ಸಿಸಿ ಬೈಕ್‌ಗಳನ್ನು ಬಿಡುಗಡೆ ಮಾಡಲು ಉದ್ದೇಶಿಸಿದೆ.
ಯಮಹಾ ಪ್ರೀಮಿಯಂ ಬೈಕ್‌
ಯಮಹಾ ಪ್ರೀಮಿಯಂ ಬೈಕ್‌

ಬೆಂಗಳೂರು: ಯಮಹಾ ಕಂಪನಿಯ ಪ್ರಕಾರ ಭಾರತದಲ್ಲಿ ವಿಶೇಷವಾಗಿ ಕರ್ನಾಟಕದಲ್ಲಿ ಯುವ ಜನತೆಗೆ ಹೆಚ್ಚು ಸಿಸಿ ಬೈಕ್‌ಗಳ ಮೇಲೆ ಪ್ರೀತಿ ಹೆಚ್ಚಾಗಿದೆ. ಇದೇ ಕಾರಣಕ್ಕೆ ದೇಶದಲ್ಲಿ ಯಮಹಾ 700 ಸಿಸಿ ಮತ್ತು 900 ಸಿಸಿ ಬೈಕ್‌ಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ. "ಕರ್ನಾಟಕ ಮಾರುಕಟ್ಟೆಯಲ್ಲಿ ಮಾರಾಟದಲ್ಲಿ ಶೇಕಡ 18ರಷ್ಟು ಬೆಳವಣಿಗೆ ಕಂಡ ಯಮಹಾ ಮೋಟಾರ್‌ಸೈಕಲ್ ಮಾರುಕಟ್ಟೆಯು ಮಹತ್ವದ ಬದಲಾವಣೆಗೆ ಸಾಕ್ಷಿಯಾಗುತ್ತಿದೆ. ಮಾರುಕಟ್ಟೆ ಬೆಳೆಯುತ್ತಿದೆ. ಜೊತೆಗೆ ಗ್ರಾಹಕರು ಅತ್ಯುತ್ತಮ ರೈಡಿಂಗ್ ಖುಷಿ ಒದಗಿಸುವ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಅದ್ಭುತ ಕಾರ್ಯಕ್ಷಮತೆ ಹೊಂದಿರುವ ಪ್ರೀಮಿಯಂ ಬೈಕ್‌ ಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ" ಎಂದು ಯಮಹಾ ಕಂಪನಿ ತಿಳಿಸಿದೆ.

ಪ್ರೀಮಿಯಂ ಬೈಕ್‌ಗಳಿಗೆ ಬೇಡಿಕೆ ಹೆಚ್ಚಳ

ಯಮಹಾ 2018ರಲ್ಲಿ 'ದಿ ಕಾಲ್ ಆಫ್ ದಿ ಬ್ಲೂ' ಬ್ರ್ಯಾಂಡ್ ಪ್ರಚಾರವನ್ನು ಪ್ರಾರಂಭಿಸಿತ್ತು. ಅಲ್ಲಿಂದ ಬಳಿಕ ಪ್ರೀಮಿಯಂ ಮಾಡೆಲ್ ಗಳನ್ನು ಬಿಡುಗಡೆ ಮಾಡಿದ್ದಲ್ಲದೇ ಆ ವಿಭಾಗದಲ್ಲಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿತು. ಜೊತೆಗೆ ಬ್ಲೂ ಸ್ಕ್ವೇರ್ ಶೋರೂಮ್‌ ಗಳ ಸಂಖ್ಯೆಗಳು ಜಾಸ್ತಿಯಾಗಿವೆ. ನಗರ ಮತ್ತು ಎರಡನೇ ಹಂತದ ನಗರಗಳಲ್ಲಿ ಯುವ ಗ್ರಾಹಕರನ್ನು ಆಕರ್ಷಿಸಲು ಅನೇಕ ವಿಶಿಷ್ಟ ಯೋಜನೆಗಳನ್ನು ವಿನ್ಯಾಸಗೊಳಿಸಲಾಗಿದೆ. ವಿಶೇಷವೆಂದರೆ ಯಮಹಾ ಈಗ ದೇಶದಾದ್ಯಂತ 384 ವಿಶೇಷ ಬ್ಲೂ ಸ್ಕ್ವೇರ್ ಶೋರೂಮ್‌ ಗಳನ್ನು ಹೊಂದಿದೆ ಮತ್ತು ಕರ್ನಾಟಕದಲ್ಲಿ 30ಕ್ಕೂ ಹೆಚ್ಚು ಶೋರೂಂಗಳು ಇವೆ. ಈ ಶೋರೂಮ್ ಗಳು ತನ್ನ ಗ್ರಾಹಕರಿಗೆ ಪ್ರೀಮಿಯಂ ಅನುಭವವನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ ಎಂದು ಯಮಹಾ ಮಾಹಿತಿ ನೀಡಿದೆ.

ಪ್ರೀಮಿಯಂ ಬೈಕ್‌ಗಳಿಂದಾಗಿ ದೇಶದಲ್ಲಿ ಪ್ರಮುಖ ಪ್ರದೇಶಗಳಲ್ಲಿ ಮಾರಾಟವು ಹೆಚ್ಚಾಗಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ 2024ರ ಜನವರಿಯಿಂದ ಆಗಸ್ಟ್‌ ವರೆಗಿನ ಅವಧಿಯಲ್ಲಿ ಕರ್ನಾಟಕದ ಮಾರಾಟದಲ್ಲಿ ಶೇ.18 ಮತ್ತು ದಕ್ಷಿಣ ಭಾರತದಲ್ಲಿ ಶೇ.19 ಅಭಿವೃದ್ಧಿ ಉಂಟಾಗಿದೆ ಎಂದು ಕಂಪನಿ ಮಾಹಿತಿ ನೀಡಿದೆ.

ಯಮಹಾ ಪ್ರೀಮಿಯಂ ಬೈಕ್‌ಗಳ ಪಾಲು

"ಪ್ರಸ್ತುತ, ಮಾರುಕಟ್ಟೆಯಲ್ಲಿ ಪ್ರೀಮಿಯಂ ದ್ವಿಚಕ್ರ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ವಿಶೇಷ ಎಂದರೆ ನಾವು ಈಗಾಗಲೇ 150 ಸಿಸಿ ಮತ್ತು ಅದಕ್ಕಿಂತ ಹೆಚ್ಚಿನ ಸಿಸಿಯ ಬೈಕ್ ವಿಭಾಗದಲ್ಲಿ ವಿಶ್ವ ದರ್ಜೆಯ ಉತ್ಪನ್ನಗಳನ್ನು ಒದಗಿಸುತ್ತಿದ್ದೇವೆ. 125 ಸಿಸಿಯ ಮತ್ತು ಅದಕ್ಕೂ ಹೆಚ್ಚಿನ ಸಿಸಿಯ ಸ್ಕೂಟರ್ ವಿಭಾಗದಲ್ಲಿ ಕೂಡ ಅತ್ಯುತ್ತಮ ಉತ್ಪನ್ನಗಳನ್ನು ದಗಿಸುತ್ತಿದ್ದೇವೆ. ಹೊಸ ಪಾಲುದಾರಿಕೆಗಳು ಮತ್ತು ಪೋರ್ಟ್‌ಫೋಲಿಯೊ ಅಪ್‌ ಗ್ರೇಡ್‌ಗಳ ಮೂಲಕ ಗ್ರಾಹಕರ ಆದ್ಯತೆಗಳನ್ನು ಪೂರೈಸುವಲ್ಲಿ ಗಮನ ಕೇಂದ್ರೀಕರಿಸುವ ನಮ್ಮ 'ಕಾಲ್ ಆಫ್ ದಿ ಬ್ಲೂ' ಅಭಿಯಾನಕ್ಕೆ ನಾವು ಬದ್ಧರಾಗಿದ್ದೇವೆ. ಅದಕ್ಕಾಗಿ ಬೇಡಿಕೆ ಹೆಚ್ಚುವಂತೆ ಮಾಡಿದ ಗ್ರಾಹಕರಿಗೆ ನಾವು ಧನ್ಯವಾದ ಸಲ್ಲಿಸುತ್ತಿದ್ದೇವೆ. ನಮ್ಮ ಗ್ರಾಹಕರ ರೈಡಿಂಗ್ ಆದ್ಯತೆಗಳು ಬದಲಾಗುತ್ತಿದ್ದಂತೆ ಅವರು ನಮ್ಮ ಬ್ರ್ಯಾಂಡ್‌ ನಲ್ಲಿಯೇ ಉಳಿಯುವಂತೆ ಮಾಡಲು ಹೆಚ್ಚಿನ ಶಕ್ತಿಯ ಮಾಡೆಲ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಕೆಲಸ ನಡೆಯುತ್ತಿದೆ” ಎಂದು ಯಮಹಾ ಮೋಟಾರ್ ಸೇಲ್ಸ್ ಇಂಡಿಯಾದ ಹಿರಿಯ ಉಪಾಧ್ಯಕ್ಷ ರವೀಂದ್ರ ಸಿಂಗ್ ಹೇಳಿದ್ದಾರೆ.

"ಜೆನ್-ಝೀ ಗ್ರಾಹಕರು ತಿಳುವಳಿಕೆಯುಳ್ಳವರು, ಆತ್ಮವಿಶ್ವಾಸ ಉಳ್ಳವರು ಮತ್ತು ವಿಶೇಷವಾಗಿ ಅವರ ವ್ಯಕ್ತಿತ್ವದ ಜೊತೆ ಹೊಂದಿಕೊಳ್ಳುವ ಜಾಗತಿಕ ಮಟ್ಟದ ಸೌಲಭ್ಯಗಳುಳ್ಳ ಉತ್ಪನ್ನಗಳನ್ನು ಹುಡುಕುತ್ತಾರೆ. ಈ ವಿಭಾಗದ ಗಮನ ಸೆಳೆಯಲು ನಾವು 'ಕಾಲ್ ಆಫ್ ದಿ ಬ್ಲೂ' ಅಭಿಯಾನದ ಮೂಲಕ ನಮ್ಮ ಉತ್ಪನ್ನ ಪೋರ್ಟ್‌ಫೋಲಿಯೊವನ್ನು ಹೆಚ್ಚಿಸುವುದರ ಕಡೆಗೆ ಗಮನಹರಿಸಿದ್ದೇವೆ. ತಾಜಾ ಬಣ್ಣಗಳು, ಗ್ರಾಫಿಕ್ಸ್ ಮತ್ತು ಇತರ ಮಾರುಕಟ್ಟೆ ಟ್ರೆಂಡ್ ಗಳಿಗೆ ಪೂರಕವಾಗಿ ಉತ್ಪನ್ನಗಳನ್ನು ಅಪ್ ಗ್ರೇಡ್ ಮಾಡುತ್ತಿದ್ದೇವೆ. ಟ್ರ್ಯಾಕ್ ಡೇ, ಓವರ್‌ ನೈಟ್ ಟೂರ್ ಮತ್ತು ಸಿಓಟಿಬಿ ವೀಕೆಂಡ್ ಒಳಗೊಂಡಂತೆ ಅನೇಕ ಗ್ರಾಹಕ ಸ್ನೇಹಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ. ಆ ಮೂಲಕ ಯುವ ಗ್ರಾಹಕರ ಜೊತೆ ಸಂವಹನ ಸಾಧ್ಯವಾಗಿಸಿದ್ದೇವೆ. ಈ ಎಲ್ಲಾ ಪ್ರಯತ್ನಗಳು ಯುವ ಮತ್ತು ಕ್ರಿಯಾಶೀಲ ಗ್ರಾಹಕರನ್ನು ಸೆಳೆಯಲು ಸಹಾಯ ಮಾಡುತ್ತವೆ. ಜೊತೆಗೆ ಮುಂದಿನ ಪೀಳಿಗೆಯ ಯುವ ಗ್ರಾಹಕರಿಗೆ ಬ್ರಾಂಡ್ ನ ಪ್ರೀಮಿಯಂ ಉತ್ಪನ್ನಗಳನ್ನು ತಲುಪಿಸಲು ಸಹಾಯ ಆಗುತ್ತದೆ” ಎಂದು ಅವರು ಹೇಳಿದ್ದಾರೆ.

ಭಾರತೀಯ ಯುವ ಗ್ರಾಹಕರ ಬೇಡಿಕೆ ಪೂರೈಸಲು ಯಮಹಾ 700 ಸಿಸಿ ಮತ್ತು 900 ಸಿಸಿ ವಿಭಾಗಗಳ ಜಾಗತಿಕ ಮಟ್ಟಗಳಲ್ಲಿ ಜನಪ್ರೀತಿ ಹೊಂದಿದ ಮಾಡೆಲ್ ಗಳನ್ನು ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದ್ದು, ಬ್ರಾಂಡ್ ನ ನಡೆ ಕುತೂಹಲ ಹುಟ್ಟಿಸಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ