Telsa Robotaxi: ಅ 10ರಂದು ಟೆಲ್ಸಾ ರೊಬೊ ಟ್ಯಾಕ್ಸಿ ಬಿಡುಗಡೆ; ಎಲಾನ್ ಮಸ್ಕ್ ಚಾಲಕರಹಿತ ಕಾರು ಹೀಗಿರಲಿದೆಯೇ?
Oct 07, 2024 03:42 PM IST
Telsa Robotaxi: ಅ 10ರಂದು ಟೆಲ್ಸಾ ರೊಬೊ ಟ್ಯಾಕ್ಸಿ ಬಿಡುಗಡೆ
- ಬಹುನಿರೀಕ್ಷಿತ ಟೆಲ್ಸಾ ರೊಬೊಟ್ಯಾಕ್ಸಿ ಇದೇ ಅಕ್ಟೋಬರ್ 10ರಂದು ಬಿಡುಗಡೆಯಾಗಲಿದೆ. ಎಲಾನ್ ಮಸ್ಕ್ ಸಿಇಒ ಆಗಿರುವ ಟೆಲ್ಸಾ ಕಂಪನಿಯ ನೂತನ ಕಾರಿಗೆ ಸೈಬರ್ ಕ್ಯಾಬ್ ಎಂದೂ ಹೇಳಲಾಗುತ್ತದೆ. ಅಂದಹಾಗೆ, ಚಾಲಕರಹಿತವಾಗಿ ಸಾಗಲಿರುವ ಈ ಕಾರು ಹೇಗಿರಬಹುದು?
ಟೆಕ್ ಜಗತ್ತಿನಲ್ಲಿ ಎಲಾನ್ ಮಸ್ಕ್ ಮಹಾತ್ವಾಕಾಂಕ್ಷೆಗೆ ಸರಿಸಾಟಿ ಯಾರೂ ಇರಲಿಕ್ಕಿಲ್ಲ. ಇವರು ಜಗತ್ತಿನ ಅಗ್ರ ಶ್ರೀಮಂತ ಟೆಲ್ಸಾ ಎಂಬ ಕಂಪನಿಯ ಸಿಇಒ ಕೂಡ ಹೌದು. ಅಂದಹಾಗೆ, ಈ ಕಂಪನಿಯ ಬಹುನಿರೀಕ್ಷಿತ ರೊಬೊ ಕಾರೊಂದು ಈ ತಿಂಗಳು ಬಿಡುಗಡೆಯಾಗಲಿದೆ. ಅಕ್ಟೋಬರ್ 10ರಂದು ರೊಬೊಟ್ಯಾಕ್ಸಿ ಬಿಡುಗಡೆಯಾಗಲಿದೆ. ಲಾಸ್ ಏಂಜಲಿಸ್‌ನಲ್ಲಿ ಬಿಡುಗಡೆಯಾಗುವ ಈ ಕಾರನ್ನೂ ಸೈಬರ್ ಕ್ಯಾಬ್ ಎಂದೂ ಕರೆಯಲಾಗುತ್ತಿದೆ. ಇದು ಸಂಪೂರ್ಣವಾಗಿ ಚಾಲಕರಹಿತ ಕಾರು. ಇದರಲ್ಲಿ ಅಲಂಕಾರಕ್ಕೂ ಸ್ಟಿಯರಿಂಗ್ ವೀಲ್ ಅಥವಾ ಪೆಡಲ್‌ಗಳು ಇರುವುದಿಲ್ಲ. ಗಿಯರ್‌ಬಾಕ್ಸ್, ಕ್ಲಚ್, ಆಕ್ಸಿಲರೇಟರ್, ಬ್ರೇಕ್ ಯಾವುದೂ ಇತರೆ ಕಾರುಗಳಂತೆ ಇರುವುದಿಲ್ಲ. ಎಲಾನ್ ಮಸ್ಕ್ ಕಂಪನಿಯ ಈ ಕಾರು ಹೇಗಿರಲಿದೆ ಎಂಬ ಕುತೂಹಲ ಎಲ್ಲರಲ್ಲಿಯೂ ಹೆಚ್ಚಾಗಿದೆ. ಪ್ರಯಾಣಿಕರ ಟ್ಯಾಕ್ಸಿ ಸೇವೆಗಾಗಿ ಎಲಾನ್ ಮಸ್ಕ್ ಕಂಪನಿ ಈ ಕಾರನ್ನು ಅಭಿವೃದ್ಧಿಪಡಿಸಿದೆ. ಈ ಕಾರಿನ ನಿರ್ದಿಷ್ಟ ಹೆಸರು ಇನ್ನೂ ಬಹಿರಂಗವಾಗಿಲ್ಲ.
ಹೇಗಿರಲಿದೆ ಟೆಲ್ಸಾ ರೊಬೊಟ್ಯಾಕ್ಸಿ?
ಸದ್ಯ ಈ ಕಾರು ಹೇಗಿರಲಿದೆ ಎಂಬ ಮಾಹಿತಿ ಯಾರಿಗೂ ಗೊತ್ತಿಲ್ಲ. ಈ ಕಾರಿನ ಗುಟ್ಟನ್ನು ಎಲಾನ್ ಮಸ್ಕ್ ಇಲ್ಲಿಯವರೆಗೆ ಬಿಟ್ಟುಕೊಟ್ಟಿಲ್ಲ. ಆದರೆ, ಸದ್ಯ ಈ ಕಾರು ಹೇಗಿರಲಿದೆ ಎಂಬ ಊಹಾಪೋಹ ಹರಡಿದೆ. ಇದೇ ಸಮಯದಲ್ಲಿ ಟೆಕ್ ಜಗತ್ತಿನ ಬುದ್ಧಿವಂತ ಅನ್ವೇಷಣೆಯಾದ ಚಾಟ್ ಜಿಪಿಟಿಯಲ್ಲಿ ಈ ರೊಬೊಟ್ಯಾಕ್ಸಿ ಹೇಗಿರಲಿದೆ ಎಂದು ಕೇಳಿದಾಗ ಕಲಾತ್ಮಕ ಫೋಟೋವನ್ನು ಬಿಡಿಸಿಕೊಟ್ಟಿದೆ. ಇದನ್ನು ಡೈಲಿಮೇಲ್ ಪ್ರಕಟಿಸಿದೆ. ಇದರಲ್ಲಿ ಎರಡು ಸೀಟುಗಳು, ಸಿಲ್ವರ್ ಸ್ಟೀಲ್ ಬಾಡಿ, ರೂಫ್‌ನಲ್ಲಿ ಒಂದು ಕ್ಯಾಮೆರಾ ಕಾಣಿಸಿದೆ. ಚಾಟ್‌ಜಿಪಿಟಿಗೆ ಸರಿಯಾದ ಪ್ರಾಂಪ್ಟ್ ನೀಡಿದರೆ ಅದಕ್ಕೆ ತಕ್ಕಂತೆ ಚಿತ್ರ ಮತ್ತು ಮಾಹಿತಿ ನೀಡುತ್ತದೆ.
ಶತಕೋಟ್ಯಧಿಪತಿ ಎಲಾನ್ ಮಸ್ಕ್ ಈಗಾಗಲೇ ಅಕ್ಟೋಬರ್ 10ರಂದು ಈ ಕಾರನ್ನು ಬಿಡುಗಡೆ ಮಾಡುವ ಕುರಿತು ಘೋಷಿಸಿದೆ. ಈ ಕಾರ್ಯಕ್ರಮಕ್ಕೆ ವಿ ರೋಬೊ ಎಂದು ಹೆಸರಿಡಲಾಗಿದೆ. ಈಗಾಗಲೇ ಎಲಾನ್ ಮಸ್ಕ್ ಈ ಕಾರ್ಯಕ್ರಮದ ಕುರಿತು ಇದು ಇತಿಹಾಸದ ಪುಟಗಳಲ್ಲಿ ಸೇರುವಂತಹ ಕಾರ್ಯಕ್ರಮ ಎಂದಿದ್ದಾರೆ.
ಟೆಲ್ಸಾವು ಡಿಜಿಟಲ್ ಕ್ಯಾಮೆರಾ ಲೆನ್ಸ್ ಚಿತ್ರವನ್ನು ನೀಡುವ ಮೂಲಕ ಈ ಕಾರಿನ ಟೀಸರ್ ಬಿಡುಗಡೆ ಮಾಡಿದೆ. ಈ ಕಣ್ಣು ಬಹುಶಃ ರೋಬೊ ಕಣ್ಣು ಆಗಿರಬಹುದು. ಅಥವಾ ಎಐ ಸಿಸ್ಟಮ್ ಆಗಿರಬಹುದು. ಇದು ಟ್ರಾಫಿಕ್ ಡಿಟೆಕ್ಷನ್ ಸಾಮರ್ಥ್ಯದ ಸೂಚನೆ ಆಗಿರಬಹುದು. ಒಟ್ಟಾರೆ, ಎಲ್ಲರಲ್ಲಿಯೂ ಟೆಲ್ಸಾ ಕಂಪನಿಯ ರೋಬೊ ಟ್ಯಾಕ್ಸಿ ಹೇಗಿರಲಿದೆ ಎಂಬ ಕುತೂಹಲ ಮೂಡಿದೆ. ಮುಂದಿನ ದಿನಗಳಲ್ಲಿ ರಸ್ತೆಯಲ್ಲಿ ಚಾಲಕರು ಇಲ್ಲದ ವಾಹನಗಳು ಹೆಚ್ಚುವ ಸೂಚನೆ ಇದೆಂದು ನೆಟ್ಟಿಗರು ಹೇಳುತ್ತಿದ್ದಾರೆ.