Elon Musk: ಮೊಬೈಲ್‌ ಸಂಖ್ಯೆ ಇಲ್ಲದೆ ಕರೆ ಮಾಡಲು ಎಕ್ಸ್‌ನಿಂದ ಹೊಸ ಫೀಚರ್‌, ಟ್ವಿಟ್ಟರ್‌ ಬಳಕೆದಾರರಿಗೆ ಸಿಹಿಸುದ್ದಿ ಕೊಟ್ಟ ಎಲಾನ್‌ ಮಸ್ಕ್‌
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Elon Musk: ಮೊಬೈಲ್‌ ಸಂಖ್ಯೆ ಇಲ್ಲದೆ ಕರೆ ಮಾಡಲು ಎಕ್ಸ್‌ನಿಂದ ಹೊಸ ಫೀಚರ್‌, ಟ್ವಿಟ್ಟರ್‌ ಬಳಕೆದಾರರಿಗೆ ಸಿಹಿಸುದ್ದಿ ಕೊಟ್ಟ ಎಲಾನ್‌ ಮಸ್ಕ್‌

Elon Musk: ಮೊಬೈಲ್‌ ಸಂಖ್ಯೆ ಇಲ್ಲದೆ ಕರೆ ಮಾಡಲು ಎಕ್ಸ್‌ನಿಂದ ಹೊಸ ಫೀಚರ್‌, ಟ್ವಿಟ್ಟರ್‌ ಬಳಕೆದಾರರಿಗೆ ಸಿಹಿಸುದ್ದಿ ಕೊಟ್ಟ ಎಲಾನ್‌ ಮಸ್ಕ್‌

Twitter calls: ಹಳೆ ಟ್ವಿಟ್ಟರ್‌ ಈಗ ಎಕ್ಸ್‌ ಆಗಿ ಹೆಸರು ಬದಲಾಯಿಸಿಕೊಂಡಿದೆ. ಹೆಸರು ಮಾತ್ರವಲ್ಲದೆ ತನ್ನ ಫೀಚರ್‌ಗಳನ್ನು ಬದಲಾಯಿಸಿಕೊಳ್ಳುತ್ತಿದೆ. ಶೀಘ್ರದಲ್ಲಿ ಟ್ವಿಟ್ಟರ್‌ ಬಳಕೆದಾರರು ಮೊಬೈಲ್‌ ಸಂಖ್ಯೆ ಇಲ್ಲದೆ ಕರೆ ಮಾಡಲು ಅನುವಾಗುವಂತಹ ಫೀಚರ್‌ ಪರಿಚಯಿಸುವುದಾಗಿ ಎಲಾನ್‌ ಮಸ್ಕ್‌ (Elon Musk) ಘೋಷಿಸಿದ್ದಾರೆ.

 ಟ್ವಿಟ್ಟರ್‌ ಬಳಕೆದಾರರಿಗೆ ಸಿಹಿಸುದ್ದಿ ಕೊಟ್ಟ ಎಲಾನ್‌ ಮಸ್ಕ್‌
ಟ್ವಿಟ್ಟರ್‌ ಬಳಕೆದಾರರಿಗೆ ಸಿಹಿಸುದ್ದಿ ಕೊಟ್ಟ ಎಲಾನ್‌ ಮಸ್ಕ್‌ (REUTERS)

ಎಲಾನ್‌ ಮಸ್ಕ್‌ ನೇತೃತ್ವದ ಸಾಮಾಜಿಕ ಜಾಲತಾಣ ಎಕ್ಸ್‌ (ಹಳೆಯ ಹೆಸರು ಟ್ವಿಟ್ಟರ್‌)ನಲ್ಲಿ ಹಲವು ಹೊಸ ಫೀಚರ್‌ಗಳು ಬರುತ್ತಿವೆ. ಶೀಘ್ರದಲ್ಲಿ ಟ್ವಿಟ್ಟರ್‌ (ಹೊಸ ಹೆಸರು ಎಕ್ಸ್‌) ಬಳಕೆದಾರರು ತಮ್ಮ ಟ್ವಿಟ್ಟರ್‌ ಸಂಪರ್ಕದಲ್ಲಿರುವವರಿಗೆ ಫೋನ್‌ ನಂಬರ್‌ ಇಲ್ಲದೆ ಕರೆ ಮಾಡಬಹುದಾಗಿದೆ. ಇಂತಹ ಕಾಲ್‌ ಫೀಚರ್‌ ಪರಿಚಯಿಸುವುದಾಗಿ ಎಲಾನ್‌ ಮಸ್ಕ್‌ ಇದೀಗ ಘೋಷಿಸಿದ್ದಾರೆ. ಈ ಸೌಲಭ್ಯವು ಎಲ್ಲಾ ಎಕ್ಸ್‌ ಬಳಕೆದಾರರಿಗೆ, ಅಂದರೆ ಐಒಎಸ್‌, ಆಂಡ್ರಾಯ್ಡ್‌ ಮತ್ತು ಡೆಸ್ಕ್‌ಟಾಪ್‌ ಬಳಕೆದಾರರಿಗೆ ದೊರಕಲಿದೆ. ಇದರಿಂದ ಮೊಬೈಲ್‌ಗೆ ಕರೆ ಮಾಡುವ ಸಲುವಾಗಿ ರೀಚಾರ್ಜ್‌ ಮಾಡುವುದು ಕಡಿಮೆಯಾಗಲಿದೆ. ಈಗಾಗಲೇ ವಾಟ್ಸಪ್‌, ಫೇಸ್‌ಬುಕ್‌ ಮೆಸೆಂಜರ್‌ಗಳಲ್ಲಿ ಕಾಲ್‌, ವಿಡಿಯೋ ಕಾಲ್‌ ಇತ್ಯಾದಿ ಫೀಚರ್‌ಗಳಿವೆ. ಮುಂದಿನ ದಿನಗಳಲ್ಲಿ ಟ್ವಿಟ್ಟರ್‌ನಲ್ಲೂ ಕಾಲ್‌ ಮಾಡಬಹುದಾಗಿದೆ.

ಈ ಕುರಿತು ಎಲಾನ್‌ ಮಸ್ಕ್‌ ಇಂದು ಅಧಿಕೃತಕವಾಗಿ ಎಕ್ಸ್‌ ಖಾತೆಯಲ್ಲಿ ಘೋಷಿಸಿದ್ದಾರೆ. "ಎಕ್ಸ್‌ನಲ್ಲಿ ವಿಡಿಯೋ ಮತ್ತು ಆಡಿಯೋ ಕಾಲ್‌ಗಳು ಬರಲಿವೆ. ಇದು ಐಒಎಸ್‌, ಆಂಡ್ರಾಯ್ಡ್‌, ಮ್ಯಾಕ್‌ ಮತ್ತು ಪಿಸಿಯಲ್ಲಿ ಕಾರ್ಯನಿರ್ವಹಿಸಲಿದೆ. ಯಾವುದೇ ಫೋನ್‌ ನಂಬರ್‌ ಇರುವ ಅಗತ್ಯವಿರುವುದಿಲ್ಲ. ಎಕ್ಸ್‌ ಎನ್ನುವುದು ಪರಿಣಾಮಕಾರಿ ಜಾಗತಿಕ ವಿಳಾಸ ಪುಸ್ತಕವಾಗಲಿದೆ. ಈ ಫೀಚರ್‌ ತುಂಬಾ ವಿಶೇಷವಾಗಿರಲಿದೆ" ಎಂದು ಎಲಾನ್‌ ಮಸ್ಕ್‌ ಘೋಷಿಸಿದ್ದಾರೆ.

ವರದಿಗಳ ಪ್ರಕಾರ ನೂತನ ಫೀಚರ್‌ ಡೈರೆಕ್ಟ್‌ ಮೆಸೆಜ್‌ (ಡಿಎಂ) ಮೆನು ಇರುವಲ್ಲಿ ಇರಲಿದೆ. ವಿಡಿಯೋ ಕರೆ ಮಾಡುವ ಆಯ್ಕೆಯು ಮೇಲ್ಬಾಗದಲ್ಲಿ ಬಲಭಾಗದಲ್ಲಿ ಇರುವ ಸಾಧ್ಯತೆಯಿದೆ. ಇಂತಹ ಫೀಚರ್‌ ಆಗಮಿಸುವ ಕುರಿತು ಈ ಹಿಂದೆ ಎಕ್ಸ್‌ ಸಿಇಒ ಲಿಂಡಾ ಯಕರಿನೊ ಅವರು ಸಿಎನ್‌ಬಿಸಿ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಪ್ರತಿಯೊಬ್ಬರು, ಟ್ವಿಟ್ಟರ್‌ ಬಳಕೆದಾರರು ತಮ್ಮ ನಡುವೆ ಹೆಚ್ಚು ಕನೆಕ್ಟ್‌ ಆಗುವಂತಹ ಫೀಚರ್‌ ಪರಿಚಯಿಸುವುದಾಗಿ ಅವರು ಹೇಳಿದ್ದರು.

ಎಕ್ಸ್‌ನ ಡಿಸೈನ್‌ ಎಂಜಿನಿಯರ್‌ ಆಂಡ್ರಿಯಾ ಕಾನ್‌ವೇ ಅವರು ಟ್ವಿಟ್ಟರ್‌ನ ಹೊಸ ಡಿಎಂ ಮೆನುವಿನ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಆ ಚಿತ್ರದಲ್ಲಿ ವಿಡಿಯೋ ಕಾಲ್‌ ಆಯ್ಕೆ ಕಾಣಿಸುತ್ತದೆ. ಈಗಾಗಲೇ ಇರುವ ಟೆಕ್ಸ್ಟ್‌ ಮೆಸೆಜ್‌, ಫೋಟೋಸ್‌, ವಿಡಿಯೋಸ್‌ನ ನಂತರದ ಆಯ್ಕೆಯಾಗಿ ಕಾಲ್‌ ಆಯ್ಕೆ ಇರಲಿದೆ. ನೂತನ ಕರೆ ಮಾಡುವ ಮತ್ತು ವಿಡಿಯೋ ಕರೆ ಮಾಡುವ ಫೀಚರ್‌ ಕೆಲವೇ ವಾರದಲ್ಲಿ ಟ್ವಿಟ್ಟರ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಮೆಟಾ ಮಾಲೀಕತ್ವದ ಫೇಸ್‌ಬುಕ್‌ ಮೆಸೆಂಜರ್‌ ಮತ್ತು ವಾಟ್ಸಪ್‌ ಕಾಲ್‌ ಫೀಚರ್‌ಗಳಿಗೆ ಸೆಡ್ಡುಹೊಡೆಯುವಂತೆ ಇಂತಹ ಫೀಚರ್‌ ಅನ್ನು ಎಲಾನ್‌ ಮಸ್ಕ್‌ ಎಕ್ಸ್‌ಗೆ ಅಳವಡಿಸುತ್ತಿದ್ದಾರೆ. ಇದು ಫೇಸ್‌ಬುಕ್‌, ವಾಟ್ಸಪ್‌ಗಿಂತ ಭಿನ್ನವಾಗಿರುವ ಸಾಧ್ಯತೆ ಇದೆ ಎಂದು ಟೆಕ್‌ ತಜ್ಞರು ಅಂದಾಜಿಸಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.