logo
ಕನ್ನಡ ಸುದ್ದಿ  /  ಜೀವನಶೈಲಿ  /  ಪ್ರಧಾನಿ ಮೋದಿ ಕಾರಿಗಿಂತ ವಿಶೇಷವಾಗಿದೆ ಪುಟಿನ್ ಬಳಸುವ ಕಾರು; ರಷ್ಯಾ ಅಧ್ಯಕ್ಷರ ಕಾರಿನ ವೈಶಿಷ್ಟ್ಯ ಕೇಳಿದ್ರೆ ನೀವು ಬೆರಗಾಗ್ತೀರಿ

ಪ್ರಧಾನಿ ಮೋದಿ ಕಾರಿಗಿಂತ ವಿಶೇಷವಾಗಿದೆ ಪುಟಿನ್ ಬಳಸುವ ಕಾರು; ರಷ್ಯಾ ಅಧ್ಯಕ್ಷರ ಕಾರಿನ ವೈಶಿಷ್ಟ್ಯ ಕೇಳಿದ್ರೆ ನೀವು ಬೆರಗಾಗ್ತೀರಿ

Reshma HT Kannada

Nov 22, 2024 09:52 AM IST

google News

ರಷ್ಯಾ ಅಧ್ಯಕ್ಷ ಪುಟಿನ್ ಕಾರು

    • ಔರಸ್ ಸೆನಾಟ್ ಕಾರನ್ನು ರಷ್ಯಾದಲ್ಲಿ ಮಾತ್ರ ಅಭಿವೃದ್ಧಿಪಡಿಸಲಾಗಿದೆ. ಈ ಕಾರು ರಷ್ಯಾದಲ್ಲಿ 'ರಷ್ಯನ್ ರೋಲ್ಸ್ ರಾಯ್ಸ್' ಎಂಬ ಹೆಸರಿನಿಂದ ಜನಪ್ರಿಯತೆಯನ್ನು ಗಳಿಸಿದೆ. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಕಾರಿನಲ್ಲಿ ಐಷಾರಾಮಿ ಕೊರತೆಯಿಲ್ಲ, ಆದರೆ ಅದರ ಸುರಕ್ಷತಾ ವೈಶಿಷ್ಟ್ಯಗಳನ್ನು ನೋಡಿದರೆ ನೀವು ಬೆರಗಾಗುತ್ತೀರಿ. (ಬರಹ: ವಿನಯ್ ಭಟ್)
ರಷ್ಯಾ ಅಧ್ಯಕ್ಷ ಪುಟಿನ್ ಕಾರು
ರಷ್ಯಾ ಅಧ್ಯಕ್ಷ ಪುಟಿನ್ ಕಾರು

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಸ್ವತಃ ತಮ್ಮ ಕಾರನ್ನು ತಾವೇ ಚಲಾಯಿಸುತ್ತಿರುವ ಫೋಟೊವನ್ನು ನೀವು ಹಲವು ಬಾರಿ ನೋಡಿರಬಹುದು. ವಿಶ್ವದ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳಲ್ಲಿ ಒಬ್ಬರಾದ ವ್ಲಾಡಿಮಿರ್ ಪುಟಿನ್ ಅವರ ಅಧಿಕೃತ ಕಾರು ಕೂಡ ಅವರ ವ್ಯಕ್ತಿತ್ವದಂತೆಯೇ ಶಕ್ತಿಯುತವಾಗಿದೆ. ಅವರು ಔರಸ್ ಸೆನಾಟ್‌ನ ಸ್ಟ್ಯಾಂಡರ್ಡ್ ಆವೃತ್ತಿ ಮತ್ತು ಲಿಮೋಸಿನ್ ಆವೃತ್ತಿ ಎರಡನ್ನೂ ತಮ್ಮ ಅಧಿಕೃತ ಕಾರಾಗಿ ಹೊಂದಿದ್ದಾರೆ.

ಔರಸ್ ಸೆನಾಟ್ ಕಾರನ್ನು ರಷ್ಯಾದಲ್ಲಿ ಮಾತ್ರ ಅಭಿವೃದ್ಧಿಪಡಿಸಲಾಗಿದೆ. ಈ ಕಾರು ರಷ್ಯಾದಲ್ಲಿ 'ರಷ್ಯನ್ ರೋಲ್ಸ್ ರಾಯ್ಸ್' ಎಂಬ ಹೆಸರಿನಿಂದ ಜನಪ್ರಿಯತೆಯನ್ನು ಗಳಿಸಿದೆ. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಕಾರಿನಲ್ಲಿ ಐಷಾರಾಮಿ ಕೊರತೆಯಿಲ್ಲ, ಆದರೆ ಅದರ ಸುರಕ್ಷತಾ ವೈಶಿಷ್ಟ್ಯಗಳನ್ನು ನೋಡಿದರೆ ನೀವು ಬೆರಗಾಗುತ್ತೀರಿ.

ಪುಟಿನ್ ಅವರ ಕಾರು ಅಷ್ಟೊಂದು ವಿಶೇಷ ಏಕೆ?

ನಾವು ವ್ಲಾಡಿಮಿರ್ ಪುಟಿನ್ ಅವರ ‘ಔರಸ್ ಸೆನಾಟ್' ಕಾರಿನ ನೋಟದ ಕುರಿತು ಮಾತನಾಡಿದರೆ, ಅದು ಸ್ವಲ್ಪಮಟ್ಟಿಗೆ ರೋಲ್ಸ್ ರಾಯ್ಸ್ ಫ್ಯಾಂಟಮ್‌ನಂತೆ ಕಾಣುತ್ತದೆ. ಇದರ ಮುಂಭಾಗದ ಗ್ರಿಲ್ ಸಾಕಷ್ಟು ದಪ್ಪವಾಗಿದ್ದು, ಕ್ರೋಮ್ ಲೇಪಿತವಾಗಿದೆ. ಇದರ ಗ್ರಿಲ್ ಕೂಡ ದೊಡ್ಡದಾಗಿದೆ ಅದು ಹೆಚ್ಚು ಗಾಳಿಯನ್ನು ಸೆಳೆಯಬಲ್ಲದು. ಈ ಕಾರು ನಯವಾದ ಮತ್ತು ವೃತ್ತಾಕಾರದ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ, ಇದರಲ್ಲಿ DRL ಅನ್ನು ಸಂಯೋಜಿಸಲಾಗಿದೆ.

ಈ ಕಾರಿನ ಸಾಮರ್ಥ್ಯದ ಬಗ್ಗೆ ಹೇಳುವುದಾದರೆ, ಇದು ಟಿಂಟೆಡ್ ಬುಲೆಟ್ ಪ್ರೂಫ್ ವಿಂಡೋಗಳನ್ನು ಹೊಂದಿದೆ. ಇದರ 20 ಇಂಚಿನ ಮಿಶ್ರಲೋಹದ ಚಕ್ರಗಳು ಕೂಡ ಬುಲೆಟ್ ಪ್ರೂಫ್ ಆಗಿದೆ. ಈ ಕಾರು ಎಷ್ಟು ಬಲಿಷ್ಠವಾಗಿದೆ ಎಂದರೆ ಅದು ಬ್ಯಾಲಿಸ್ಟಿಕ್ ಕ್ಷಿಪಣಿಯ ಆಘಾತವನ್ನು ಕೂಡ ತಡೆದುಕೊಳ್ಳಬಲ್ಲದು. ಈ ಕಾರು VR10 ಮಟ್ಟದ ಬ್ಯಾಲಿಸ್ಟಿಕ್ ಪ್ರೊಟೆಕ್ಷನ್ ರೇಟಿಂಗ್ ಹೊಂದಿದೆ. ಇದರಲ್ಲಿ ಒಂದು ರಹಸ್ಯ ಬಾಗಿಲು ಕೂಡ ಇದೆ. ಇದು ಅಪಘಾತದ ಸಮಯದಲ್ಲಿ ವ್ಲಾಡಿಮಿರ್ ಪುಟಿನ್ ಅದರಿಂದ ಹೊರಬರಲು ಅವಕಾಶವನ್ನು ಮಾಡಿಕೊಡುತ್ತದೆ.

ಸ್ಫೋಟವಾಗದಂತಹ ಇಂಧನ ಟ್ಯಾಂಕ್, ಸಂವಹನ ವ್ಯವಸ್ಥೆ, ಏರ್ ಫಿಲ್ಟರೇಶನ್ ಸಿಸ್ಟಮ್ ಮತ್ತು ಬೆಂಕಿಯನ್ನು ನಂದಿಸುವಂತಹ ವ್ಯವಸ್ಥೆಗಳನ್ನು ಸಹ ಈ ಕಾರಿನಲ್ಲಿ ಒದಗಿಸಲಾಗಿದೆ. ಈ ಕಾರು 4.4 ಲೀಟರ್ ಟ್ವಿನ್ ಟರ್ಬೊ V8 ಪೆಟ್ರೋಲ್ ಹೈಬ್ರಿಡ್ ಎಂಜಿನ್ ಹೊಂದಿದೆ. ಇದು 598 ಅಶ್ವಶಕ್ತಿ ಮತ್ತು 880 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರು ಕೇವಲ 6 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ತಲುಪುತ್ತದೆ. ಇದು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದೆ.

ಪ್ರಧಾನಿ ಮೋದಿಯವರ ಮರ್ಸಿಡಿಸ್ ಹೇಗಿದೆ?

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತವಾಗಿ ಶಸ್ತ್ರಸಜ್ಜಿತ ಕಾರನ್ನು ಬಳಸುತ್ತಾರೆ. ಈ ಕಾರು Mercedes-Maybach S650 ಗಾರ್ಡ್ ಆಗಿದೆ. ಈ ಕಾರು 15 ಕೆಜಿಯಷ್ಟು TNT ದಾಳಿಯನ್ನು ತಡೆದುಕೊಳ್ಳಬಲ್ಲದು. ಸಂಪೂರ್ಣ ಬುಲೆಟ್ ಪ್ರೂಫ್ ಆಗಿದೆ. ಈ ಕಾರು VR10 ಬ್ಯಾಲಿಸ್ಟಿಕ್ ರೇಟಿಂಗ್ ಅನ್ನು ಸಹ ಪಡೆದುಕೊಂಡಿದೆ. ಈ ಕಾರು 6 ಲೀಟರ್ ಟ್ವಿನ್ ಟರ್ಬೊ ವಿ12 ಎಂಜಿನ್ ಹೊಂದಿದೆ. ಇದು 630 BHP ಶಕ್ತಿಯನ್ನು ಉತ್ಪಾದಿಸುತ್ತದೆ. ಇದರ ಅಂದಾಜು ಬೆಲೆ 12.5 ಕೋಟಿ ರೂ. ಆಗಿದೆ.

ಬರಹ: ವಿನಯ್ ಭಟ್

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ