ನೀವು ಹೀಗೆ ಕಾರು ಡ್ರೈವಿಂಗ್ ಮಾಡಿದ್ರೆ ಕ್ಲಚ್ ಪ್ಲೇಟ್ ಹಾಳಾಗೋದು ಗ್ಯಾರಂಟಿ, ಚಾಲನೆ ಅನುಭವ ಇರುವವರೂ ಮಾಡ್ತಾರೆ ಇದೇ ತಪ್ಪು
ಹೊಸದಾಗಿ ಕಾರು ಖರೀದಿಸಿದವರು ಅಥವಾ ಈಗಾಗಲೇ ಕಾರು ಹೊಂದಿರುವವರು ಕೆಟ್ಟ ಚಾಲನಾ ಅಭ್ಯಾಸಗಳನ್ನು ಹೊಂದಿರುತ್ತಾರೆ. ಈ ತಪ್ಪುಗಳಿಂದ ಕ್ಲಚ್ ಪ್ಲೇಟ್ ಬೇಗನೇ ಹಾಳಾಗುತ್ತದೆ. ಕಾರು ಚಾಲನೆ ಮಾಡುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ಅಂಶಗಳು ಇಲ್ಲಿವೆ.
ಈಗ ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ, ಧಾರಾವಾಡ ಎಲ್ಲಿ ನೋಡಿದರೂ ರಸ್ತೆಯಲ್ಲಿ ಟ್ರಾಫಿಕ್. ಹಳ್ಳಿಯಿರಲಿ, ದಿಲ್ಲಿ ಇರಲಿ ಎಲ್ಲೆಲ್ಲೂ ಕಾರುಗಳದ್ದೇ ಕಾರುಬಾರು. ಝೀರೋ ಡೌನ್‌ಪೇಮೆಂಟ್‌ಗೂ ಕಾರು ಖರೀದಿಸುವ ಅವಕಾಶ ಈಗ ಇದೆ. ಇಂತಹ ಸಮಯದಲ್ಲಿ ಸಾಕಷ್ಟು ಜನರು ಹೊಸ ಅಥವಾ ಹಳೆಯ ಕಾರು ಖರೀದಿಸುತ್ತಾರೆ. ಸಾಕಷ್ಟು ಜನರಿಗೆ ಕಾರು ಖರೀದಿಸಲು ಗೊತ್ತು, ಆದರೆ, ಸರಿಯಾಗಿ ಕಾರು ಚಲಾಯಿಸಲು ಗೊತ್ತಿರುವುದಿಲ್ಲ. ಸಾಕಷ್ಟು ಜನರು ತಮ್ಮ ಕೆಟ್ಟ ಚಾಲನಾ ಅಭ್ಯಾಸಗಳಿಂದ ಕಾರುಗಳಿಗೆ ತೀವ್ರ ಹಾನಿ ಮಾಡುತ್ತಾ ಇರುತ್ತಾರೆ. ಒಂದೆರಡು ವರ್ಷಗಳಲ್ಲಿಯೇ ಕಾರಿನ ಕ್ಲಚ್ ಪ್ಲೇಟ್ ಗತಿ ಗೋವಿಂದ ಎನ್ನುವಂತೆ ಆಗುತ್ತದೆ. ಇಂದಿನ ಲೇಖನದಲ್ಲಿ ಕಾರಿನ ಕ್ಲಚ್ ಪ್ಲೇಟ್‌ಗೆ ಹಾನಿಯಾಗದಂತೆ ಹೇಗೆ ಕಾರು ಚಾಲನೆ ಮಾಡಬೇಕೆಂದು ತಿಳಿಯೋಣ.
ಕಾರು ಸ್ಟಾರ್ಟ್ ಮಾಡುವ ಮುನ್ನ ಒಂದು ಅಂಶ ಗಮನದಲ್ಲಿಡಿ. ಕಾರಿನ ಗಿಯರ್ ನ್ಯೂಟ್ರಲ್‌ನಲ್ಲಿ ಇರಲಿ. ನ್ಯೂಟ್ರಲ್‌ನಲ್ಲಿ ಗಿಯರ್ ಇರುವುದನ್ನು ಖಚಿತಪಡಿಸಿಕೊಂಡೇ ಮ್ಯಾನುಯಲ್ ಗಿಯರ್ ಕಾರನ್ನು ಸ್ಟಾರ್ಟ್ ಮಾಡಿ. ಈ ರೀತಿ ಸ್ಟಾರ್ಟ್ ಮಾಡುವ ಸಂದರ್ಭದಲ್ಲಿ ಕಾರಿನ ಎಂಜಿನ್ ಚಾಲು ಆಗುತ್ತದೆ. ಆದರೆ, ಕಾರು ಚಲಿಸುವುದಿಲ್ಲ. ಯಾಕೆ ಕಾರು ಚಲಿಸುವುದಿಲ್ಲ ಎಂದರೆ, ಕಾರಿನ ಎಂಜಿನ್‌ನ ಪವರ್ ಗಿಯರ್ ವ್ಯವಸ್ಥೆ ಮೂಲಕ ಟ್ರಾನ್ಸ್‌ಮಿಷನ್ ವ್ಯವಸ್ಥೆಗೆ ವರ್ಗಾವಣೆಯಾಗುವುದಿಲ್ಲ. ಈ ಸಂದರ್ಭದಲ್ಲಿ ಆಕ್ಸಿಲರೇಟರ್ ಒತ್ತಿದರೂ ಕಾರು ಚಲಿಸುವುದಿಲ್ಲ. ಈ ಸಂದರ್ಭದಲ್ಲಿ ಕ್ಲಚ್ ಅದುಮಿ ಫಸ್ಟ್ ಗಿಯರ್ ಹಾಕಿ ಆಕ್ಸಿಲರೇಟರ್ ನೀಡಿದರೆ ಕಾರು ಮುಂದಕ್ಕೆ ಚಲಿಸುತ್ತದೆ. ಈ ರೀತಿ ಕಾರಿನ ಮೊದಲ ಗಿಯರ್ ಹಾಕಿದ ಸಂದರ್ಭದಲ್ಲಿ ಗಿಯರ್ ಬಾಕ್ಸ್ ಮತ್ತು ಎಂಜಿನ್ ಸಂಪರ್ಕಗೊಳ್ಳುತ್ತದೆ. ಇದು ಕ್ಲಚ್ ಎಂಗೇಜ್‌ಮೆಂಟ್ ಪ್ರಕ್ರಿಯೆ.
ಇಲ್ಲಿ ಕ್ಲಚ್ ಎನ್ನುವುದು ಬೇಕಾದಾಗ ಅದುಮಲು, ಕಾಲಿಟ್ಟುಕೊಳ್ಳಲು, ಅರ್ಧ ಅದುಮಲು ಇರುವ ವ್ಯವಸ್ಥೆಯಲ್ಲ. ಸಾಕಷ್ಟು ಜನರು ಕ್ಲಚ್ ಅನ್ನು ಸರಿಯಾಗಿ ಬಳಸುವುದೇ ಇಲ್ಲ. ಇದರಿಂದ ಸಹಜವಾಗಿ ಕ್ಲಚ್ ಪ್ಲೇಟ್ ಹಾಳಾಗುತ್ತದೆ. ಕಾರು ಮಾಲೀಕರಿಗೆ ದೊಡ್ಡ ಖರ್ಚು ಸದ್ಯದಲ್ಲೇ ಬರುತ್ತದೆ. ಇನ್ಮುಂದೆ ಕಾರು ಚಲಾಯಿಸುವಾಗ ಮುಂದಿನ ತಪ್ಪುಗಳನ್ನು ಮಾಡಬೇಡಿ.
ಕಾರು ಚಲಿಸುತ್ತಿರುವಾಗ ಕ್ಲಚ್ ಮೇಲೆ ಕಾಲಿಡಬೇಡಿ
ಸಾಕಷ್ಟು ಜನರು ಕಾರು ಚಲಿಸುವ ಸಂದರ್ಭದಲ್ಲಿ ಕ್ಲಚ್ ಮೇಲೆ ಕಾಲಿಟ್ಟಿರುತ್ತಾರೆ. ಒಂದು ಕಾಲು ಆಕ್ಸಿಲರೇಟರ್ ಮೇಲಿದ್ದರೆ, ಇನ್ನೊಂದು ಕಾರು ಕ್ಲಚ್ ಮೇಲಿರುತ್ತದೆ. ಇಲ್ಲ ನಾವು ಕ್ಲಚ್ ಅದುಮುತ್ತಿಲ್ಲ, ಸುಮ್ಮನೆ ಕಾಲಿಟ್ಟಿದ್ದೇವೆ ಅನ್ನಬೇಡಿ. ತುಸು ಕಾಲು ತಾಗಿದರೂ ಪರಿಣಾಮ ಕೆಟ್ಟದ್ದಾಗಿರುತ್ತದೆ. ನೆನಪಿಡಿ, ಗಿಯರ್ ಬದಲಾಯಿಸುವ ಸಮಯದಲ್ಲಿ ಮಾತ್ರ ಕ್ಲಚ್ ಮೇಲೆ ಕಾಲಿಡಿ. ಉಳಿದ ಸಮಯ ನಿಮ್ಮ ಎಡಗಾಲ ಕ್ಲಚ್ ಮೇಲೆ ಇರಬಾರದು. ಕಾಲಿಟ್ಟರೆ ಅರೆಬರೆ ಕ್ಲಚ್ ಅದುಮಿ ಫ್ರಿಕ್ಷನ್ ಡಿಸ್ಕ್ ಹಾಳಾಗುತ್ತದೆ.
ನ್ಯೂಟ್ರಲ್‌ನಲ್ಲಿರುವ ಕ್ಲಚ್ ಅದುಮುವಿರಾ?
ಕಾರು ನ್ಯೂಟ್ರಲ್‌ನಲ್ಲಿರುವ ಸಂದರ್ಭದಲ್ಲಿ ಕ್ಲಚ್ ಪೆಡೆಲ್ ಒತ್ತಬಹುದು, ಡಿಸ್ಕ್‌ಗೆ ಸಂಪರ್ಕ ಇಲ್ಲದೆ ಇರುವುದರಿಂದ ಏನು ತೊಂದರೆ ಇಲ್ಲ ಎಂದು ಸಾಕಷ್ಟು ಜನರು ಭಾವಿಸುತ್ತಾರೆ. ಆದರೆ, ಈ ರೀತಿ ಮಾಡುವುದರಿಂದ ಕ್ಲಚ್ ಕಂಟ್ರೋಲ್ ಕೇಬಲ್‌ಗಳು ವಿಸ್ತರಣೆಯಾಗಲು ಆರಂಭವಾಗುತ್ತದೆ. ನ್ಯೂಟ್ರಲ್‌ನಲ್ಲಿದ್ದಾಗಲೂ ಕ್ಲಚ್ ಸಹವಾಸಕ್ಕೆ ಹೋಗಬೇಡಿ..
ಗಿಯರ್ ಬದಲಾಯಿಸುವಾಗ ಪೂರ್ಣವಾಗಿ ಕ್ಲಚ್ ಅದುಮದೆ ಇರುವುದು.
ಈ ತಪ್ಪನ್ನೂ ಸಾಕಷ್ಟು ಜನರು ಮಾಡುತ್ತಾರೆ. ಅರ್ಧ ಕ್ಲಚ್ ಅದುಮಿ ಗಿಯರ್ ಬದಲಾಯಿಸಿ ಬಿಡುತ್ತಾರೆ. ಈ ರೀತಿ ಮಾಡಿದರೂ ಕಾರಿನ ಕ್ಲಚ್ ಪ್ಲೇಟ್‌ಗೆ ಡ್ಯಾಮೆಜ್ ಪಕ್ಕಾ. ಪೂರ್ಣ ಪ್ರಮಾಣದಲ್ಲಿ ಕ್ಲಚ್ ಅದುಮಿದ ಬಳಿಕವೇ ಗಿಯರ್ ಬದಲಾಯಿಸಿ.
ವಾಷಿಂಗ್ ಸಮಯದಲ್ಲಿ ಎಚ್ಚರವಹಿಸಿ
ಕಾರು ವಾಷ್ ಮಾಡುವಾಗ ಕಾರಿನ ಕ್ಲಚ್ ಸಿಸ್ಟಮ್‌ನಡಿ ಅತ್ಯಧಿಕ ಒತ್ತಡದಿಂದ ನೀರು ಹಾಕಬೇಡಿ. ಇದರಿಂದಲೂ ಕ್ಲಚ್‌ಗೆ ಹಾನಿಯಾಗುತ್ತದೆ.
ಇಳಿಜಾರಿನಲ್ಲಿ ಕ್ಲಚ್ ಬಳಸಬೇಡಿ
ಇಳಿಜಾರಿನಲ್ಲಿ ಕಾರು ಸರಾಗವಾಗಿ ಹೋಗುತ್ತಿರುವಾಗ ಕ್ಲಚ್ ಅದುಮುವ ಅಭ್ಯಾಸ ಸಾಕಷ್ಟು ಜನರಿಗೆ ಇರುತ್ತದೆ.
ಗಿಯರ್ ಬದಲಾಯಿಸುವಾಗ ಹೆಚ್ಚು ಆಕ್ಸಿಲರೇಷನ್ ನೀಡಬೇಡಿ
ಸಾಕಷ್ಟು ಚಾಲಕರು ಗಿಯರ್ ಬದಲಾಯಿಸುವ ಸಮಯದಲ್ಲಿ ಪೂರ್ಣ ಪ್ರಮಾಣದಲ್ಲಿ ಆಕ್ಸಿಲರೇಷನ್ ರಿಲೀಸ್ ಮಾಡೋದಿಲ್ಲ. ಕೆಲವರು ಗಿಯರ್ ಬದಲಾಯಸಿ ತಕ್ಷಣ ಓವರ್ ಆಕ್ಸಿಲರೇಷನ್ ನೀಡುತ್ತಾರೆ. ಈ ರೀತಿ ಮಾಡಿದರೂ ಕ್ಲಚ್‌ಪ್ಲೇಟ್‌ಗೆ ಹಾನಿ ಖಚಿತ.
ಕಾರು ಓವರ್‌ಲೋಡ್ ಮಾಡಬೇಡಿ
ಕಾರಿನ ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚು ಲೋಡ್ ಮಾಡಬೇಡಿ. ಈ ರೀತಿ ಮಾಡಿದರೆ ಕ್ಲಚ್ ಪ್ಲೇಟ್, ಟೈರ್, ಸಸ್ಪೆನ್ಷನ್‌ಗೆ ಹಾನಿಯಾಗುತ್ತದೆ.