Bangaru Adigalar: ಮೇಲ್ ಮರುವತ್ತೂರು ಕ್ಷೇತ್ರವನ್ನು ಮುನ್ನೆಲೆಗೆ ತಂದ ಬಂಗಾರು ಅಡಿಗಳ್ ಬಗ್ಗೆ ನೀವು ತಿಳಿಯಬೇಕಾದ ಮಾಹಿತಿ ಇದು
Jan 25, 2024 05:30 AM IST
ಮೇಲ್ ಮರುವತ್ತೂರು ದೇವಸ್ಥಾನದ ಸಂಸ್ಥಾಪಕ ಬಂಗಾರು ಅಡಿಗಳರ್
Bangaru Adigalar: ಮುಟ್ಟಾದ ಮಹಿಳೆಯರು ಕೂಡಾ ಗರ್ಭಗುಡಿಗೆ ಹೋಗಿ ಪೂಜೆ ಮಾಡಬಹುದಾದ ದೇವಸ್ಥಾನ ಎಂದರೆ ಅದು ತಮಿಳುನಾಡಿನ ಮೇಲ್ ಮರವತ್ತೂರು ಕೂಡಾ ಒಂದು. ಈ ದೇವಸ್ಥಾನವನ್ನು ನಿರ್ಮಿಸಿದ ಬಂಗಾರು ಅಡಿಗಳರ್ ಬಗ್ಗೆ ಭಕ್ತರು ತಿಳಿಯಬೇಕಾದ ವಿಚಾರ ಇಲ್ಲಿದೆ.
Bangaru Adigalar: ದೇಶದಲ್ಲಿ ಅನೇಕ ದೇವಾಲಯಗಳು ಅದರ ಮಹಿಮೆಗೆ ಹೆಸರುವಾಸಿಯಾಗಿದೆ. ಅದರಲ್ಲಿ ತಮಿಳುನಾಡಿನ ಮೇಲ್ ಮರವತ್ತೂರು ಆದಿಪರಾಶಕ್ತಿಯ ಪೀಠ ಕೂಡಾ ಒಂದು. ಇದು ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯಗಳಲ್ಲಿ ಒಂದು. ಮಹಿಳೆಯರಿಗೆ ಈ ದೇವಿ ಎಂದರೆ ಎಲ್ಲಿಲ್ಲದ ಭಕ್ತಿ. ಇದಕ್ಕೆ ಕಾರಣ, ಮುಟ್ಟಾದ ಮಹಿಳೆಯರೂ ಕೂಡಾ ಈ ದೇವಾಲಯಕ್ಕೆ ಹೋಗಿ ತಾಯಿಗೆ ಪೂಜೆ ಸಲ್ಲಿಸಿ ಬರಬಹುದು.
ಪವಾಡಗಳಿಗೆ ಸಾಕ್ಷಿಯಾದ ಆದಿ ಪರಾಶಕ್ತಿ
ಆದಿ ಪರಾಶಕ್ತಿಯು ಇದುವರೆಗೂ ಎಷ್ಟೋ ಪವಾಡಗಳಿಗೆ ಸಾಕ್ಷಿಯಾಗಿದ್ದಾಳೆ. ಈ ದೇವಾಲಯಕ್ಕೆ ಸುಮಾರು 2 ಸಾವಿರ ವರ್ಷಗಳ ಇತಿಹಾಸವಿದೆ. ಇಲ್ಲಿ ವಿವಿಧ ಧರ್ಮಕ್ಕೆ ಸೇರಿದ ಸುಮಾರು 21 ಸಿದ್ಧ ಪುರುಷ ಹಾಗೂ ಮಹಿಳೆಯರು ಜೀವಂತ ಸಮಾಧಿಯಾಗಿದ್ದಾರೆ ಎಂಬ ನಂಬಿಕೆ ಇದೆ. ಆದ್ದರಿಂದಲೇ ಪ್ರತಿದಿನ ಸಾವಿರಾರು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಇಷ್ಟೆಲ್ಲಾ ಖ್ಯಾತ ಗಳಿಸಿರುವ ದೇವಾಲಯವು ಎಲ್ಲೆಡೆ ಹೆಸರುವಾಸಿಯಾಗಲು ಕಾರಣ ಆಧ್ಯಾತ್ಮಿಕ ಗುರು ಬಂಗಾರು ಅಡಿಗಳ್. ಇವರು ಈಗ ಇಲ್ಲ. ಆದರೂ ದೇವಾಲಯವನ್ನು ಮುನ್ನೆಲೆಗೆ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ. ಅಷ್ಟೇ ಅಲ್ಲ ದೇವಾಲಯದ ಗರ್ಭಗುಡಿಯಲ್ಲಿ ಮಹಿಳೆಯರು ಪೂಜೆ ಮಾಡಲು ಅವಕಾಶವಾಗುವಂತೆ ಕ್ರಾಂತಿಕಾರಿ ಸುಧಾರಣೆಗೆ ಕಾರಣರಾದವರು, ಅಮ್ಮ ಎಂದೇ ಹೆಸರಾದವರು ಈ ಬಂಗಾರು ಅಡಿಗಳ್.
ಬಂಗಾರು ಅಡಿಗಳ್ ಯಾರು?
ಬಂಗಾರು ಅಡಿಗಳ್ ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯವರು, ಗೋಪಾಲ ನಾಯ್ಕರ್ ಮತ್ತು ಮೀನಾಕ್ಷಿ ಅಮ್ಮಾಳ್ ದಂಪತಿಗೆ ಜನಿಸಿದ ಎರಡನೇ ಮಗು. ಇವರ ಮೊದಲ ಹೆಸರು ಜಿ ಸುಬ್ರಮಣ್ಯಂ. ಸ್ವಂತ ಊರಿನಲ್ಲೇ ವಿದ್ಯಾಭ್ಯಾಸ ಮುಗಿಸಿದ ಅವರು ಶಾಲಾ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದರು. ಆದರೂ ಇವರಿಗೆ ಆಧ್ಯಾತ್ಮದ ಬಗ್ಗೆ ಅಪಾರ ಒಲವಿತ್ತು. ಅನೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಲ್ಲದೆ, ತಾವೇ ಅನೇಕ ಕಾರ್ಯಕ್ರಮಗಳನ್ನೂ ಏರ್ಪಿಡಿಸುತ್ತಿದ್ದರು. ಕ್ರಮೇಣ ತಮಿಳುನಾಡಿನ ಮೇಲ್ ಮರುವತ್ತೂರ್‌ನಲ್ಲಿ ಆದಿಪರಾಶಕ್ತಿ ದೇವಾಲಯವನ್ನು ಸ್ಥಾಪಿಸಿ, ಅದನ್ನು ಪವಿತ್ರ ಪಟ್ಟಣವನ್ನಾಗಿ ಪರಿವರ್ತಿಸಿದರು. ಈ ದೇವಾಲಯಕ್ಕೆ ತಮಿಳುನಾಡು ಮಾತ್ರವಲ್ಲ, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟದಿಂದ ಕೂಡಾ ಮಹಿಳೆಯರು ಆಗಮಿಸುತ್ತಾರೆ. ಮುಟ್ಟಾದ ಮಹಿಳೆಯರು ಕೂಡಾ ಈ ದೇವಾಲಯಕ್ಕೆ ಪ್ರವೇಶಿಸಬಹುದು, ಅದು ಈ ದೇವಸ್ಥಾನದ ವಿಶೇಷ.
ಸಾಮಾಜಿಕ ಸೇವೆಯಲ್ಲೂ ಎತ್ತಿದ ಕೈ
ಎಲ್ಲಾ ಜಾತಿಯವರು ಹಾಗೂ ಸ್ವತ: ಮಹಿಳೆಯರು ಆದಿ ಪರಾಶಕ್ತಿ ದೇವಾಲಯದ ಗರ್ಭಗುಡಿಗೆ ತೆರಳಿ ಪೂಜೆ ಸಲ್ಲಿಸಲು ಬಂಗಾರು ಅಡಿಗಳ್ ಅನುವು ಮಾಡಿಕೊಟ್ಟರು. ಇದೇ ಕಾರಣಕ್ಕೆ ಇವರು ದಕ್ಷಿಣ ಭಾರತಾದ್ಯಂತ ಹೆಸರುವಾಸಿಯಾಗಿದ್ದಾರೆ. ಆಧ್ಯಾತ್ಮದಲ್ಲಿ ಮಾತ್ರವಲ್ಲ ಅಡಿಗಳ್ ಅವರು ಸಾಮಾಜಿಕ ಸೇವೆಯಲ್ಲೂ ಮುಂದಿದ್ದರು. ಬಡವರಿಗಾಗಿ ವೈದ್ಯಕೀಯ ಶಿಕ್ಷಣ ಸಂಸ್ಥೆ, ಎಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸಿದರು. ಇವರು ಮಾಡಿದ ಆಧ್ಯಾತ್ಮಿಕ , ಸಾಮಾಜಿಕ ಕಾರ್ಯಕ್ಕೆ ವಿದೇಶದಲ್ಲಿ ಕೂಡಾ ಇವರಿಗೆ ಲಕ್ಷಾಂತರ ಭಕ್ತರಿದ್ದಾರೆ. 2019 ರಲ್ಲಿ ಪದ್ಮಶ್ರೀ ಪ್ರಶಸ್ತಿ ಕೂಡಾ ದೊರೆತಿದೆ. ಆದಿಪರಾಶಕ್ತಿ ದೇವಾಲಯಕ್ಕೆ ಅನೇಕ ಗಣ್ಯರು ಕೂಡಾ ಭೇಟಿ ನೀಡಿದ್ದಾರೆ. ಭಾರತದ ಮೊದಲ ಸಿಖ್ ಅಧ್ಯಕ್ಷ ಜೈಲ್ ಸಿಂಗ್ ಅವರು 1986 ರಲ್ಲಿ ಚೆನ್ನೈನಲ್ಲಿ ನಡೆಸಿದ ಪ್ರಮುಖ ಯಜ್ಞದಲ್ಲಿ ಭಾಗವಹಿಸಿದ್ದ ವೇಳೆ ಆದಿಪರಾಶಕ್ತಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಮಾಜಿ ಪ್ರಧಾನಿ ರಾಜೀವ್ ಗಾಂಧಿ 1989 ರಲ್ಲಿ ಮೇಲ್ ಮರುವತ್ತೂರ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
19 ಅಕ್ಟೋಬರ್ 2023ರಲ್ಲಿ ನಿಧನರಾದ ಬಂಗಾರು ಅಡಿಗಳ್
ಮಹಿಳೆಯರನ್ನು ಸಬಲೀಕರಣಗೊಳಿಸುವುದೇ ನನ್ನ ಆಧ್ಯಾತ್ಮಿಕತೆ ಎಂದು ನಂಬಿದ್ದ ಅಡಿಗಳ್, 19 ಅಕ್ಟೋಬರ್ 2023ರಲ್ಲಿ ನಿಧನರಾದರು. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಪ್ರಧಾನಿ ಮೋದಿ, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಅನೇಕ ಗಣ್ಯರು ಅಡಿಗಳ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದರು. ಬಂಗಾರು ಅಡಿಗಳ್ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಆಧ್ಯಾತ್ಮಿಕತೆ ಮತ್ತು ಸಹಾನುಭೂತಿಯಿಂದ ಸಮೃದ್ಧವಾಗಿರುವ ಅವರ ಜೀವನವು ಶಾಶ್ವತವಾಗಿ ಅನೇಕರಿಗೆ ಮಾರ್ಗದರ್ಶಕ ಬೆಳಕು. ಮಾನವೀಯತೆಗೆ ತಮ್ಮ ದಣಿವರಿಯದ ಸೇವೆ ಮತ್ತು ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಅವರು ಅನೇಕರ ಜೀವನದಲ್ಲಿ ಭರವಸೆ ಮತ್ತು ಜ್ಞಾನದ ಬೀಜಗಳನ್ನು ಬಿತ್ತಿದರು. ಅವರ ಕೆಲಸವು ಪೀಳಿಗೆಗೆ ಸ್ಫೂರ್ತಿ ಮತ್ತು ಮಾರ್ಗದರ್ಶನ ನೀಡುತ್ತಲೇ ಇರುತ್ತದೆ. ಅಡಿಗಳ್ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ, ಓಂ ಶಾಂತಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದರು.
(This copy first appeared in Hindustan Times Kannada website. To read more like this please logon to kannada.hindustantime.com )