logo
ಕನ್ನಡ ಸುದ್ದಿ  /  ಜೀವನಶೈಲಿ  /  ಸೌಂದರ್ಯವನ್ನು ಇಮ್ಮಡಿಗೊಳಿಸಬಹುದು ನೀವಿಡುವ ಬಿಂದಿ: ಮುಖದ ಆಕಾರಕ್ಕೆ ಒಪ್ಪುವಂತಹ ಬಿಂದಿಯನ್ನು ಕಂಡುಹಿಡಿಯುವುದು ಹೇಗೆ, ಇಲ್ಲಿ ತಿಳಿದುಕೊಳ್ಳಿ

ಸೌಂದರ್ಯವನ್ನು ಇಮ್ಮಡಿಗೊಳಿಸಬಹುದು ನೀವಿಡುವ ಬಿಂದಿ: ಮುಖದ ಆಕಾರಕ್ಕೆ ಒಪ್ಪುವಂತಹ ಬಿಂದಿಯನ್ನು ಕಂಡುಹಿಡಿಯುವುದು ಹೇಗೆ, ಇಲ್ಲಿ ತಿಳಿದುಕೊಳ್ಳಿ

Priyanka Gowda HT Kannada

Oct 21, 2024 07:45 AM IST

google News

ಮುಖದ ಆಕಾರಕ್ಕೆ ಒಪ್ಪುವಂತಹ ಬಿಂದಿಯನ್ನು ಕಂಡುಹಿಡಿಯುವುದು ಹೇಗೆ, ಇಲ್ಲಿ ತಿಳಿದುಕೊಳ್ಳಿ

  • ಬಹುತೇಕ ಪ್ರತಿಯೊಬ್ಬ ಭಾರತೀಯ ಮಹಿಳೆಗೆ ಅತ್ಯುನ್ನತವಾದ ಪರಿಕರವಾಗಿರುವ ಬಿಂದಿಯು ಮುಖದ ಸೌಂದರ್ಯವನ್ನು ತಕ್ಷಣವೇ ಹೆಚ್ಚಿಸುತ್ತದೆ. ಸೀರೆಯಾಗಿರಲಿ, ಸೂಟ್ ಆಗಿರಲಿ ಅಥವಾ ಯಾವುದೇ ಸಾಂಪ್ರದಾಯಿಕ ಉಡುಗೆಯಾಗಿರಲಿ, ಬಿಂದಿಯನ್ನು ಧರಿಸಿದ ನಂತರ ನೋಟ ಬದಲಾಗುತ್ತದೆ. ಆದರೆ, ಮುಖದ ಆಕಾರಕ್ಕೆ ಹೊಂದಿಕೆಯಾಗದ ಬಿಂದಿಯನ್ನು ಧರಿಸುವುದರಿಂದ ಮುಖದ ಸೌಂದರ್ಯ ಹಾಳಾಗುತ್ತದೆ.

ಮುಖದ ಆಕಾರಕ್ಕೆ ಒಪ್ಪುವಂತಹ ಬಿಂದಿಯನ್ನು ಕಂಡುಹಿಡಿಯುವುದು ಹೇಗೆ, ಇಲ್ಲಿ ತಿಳಿದುಕೊಳ್ಳಿ
ಮುಖದ ಆಕಾರಕ್ಕೆ ಒಪ್ಪುವಂತಹ ಬಿಂದಿಯನ್ನು ಕಂಡುಹಿಡಿಯುವುದು ಹೇಗೆ, ಇಲ್ಲಿ ತಿಳಿದುಕೊಳ್ಳಿ (PC: Canva)

ಭಾರತೀಯ ಸಂಪ್ರದಾಯದಲ್ಲಿ ಹೆಣ್ಣುಮಕ್ಕಳು ಬಿಂದಿ ಹಾಕುವುದು ಅವಶ್ಯಕ. ವಿವಾಹಿತ ಮಹಿಳೆಯರು ಮಾತ್ರವಲ್ಲ ಮಕ್ಕಳು ಹಾಗೂ ಯುವತಿಯರೂ ಬಿಂದಿ ಹಾಕುವುದು ಶತಮಾನಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಬಿಂದಿ ಧರಿಸುವುದು ಕೇವಲ ಸಂಪ್ರದಾಯ ದೃಷ್ಟಿಯಿಂದ ಮಾತ್ರವಲ್ಲ, ಇದರಿಂದ ಮುಖದ ಸೌಂದರ್ಯ ಕೂಡ ಹೆಚ್ಚಾಗುತ್ತದೆ. ಅದರಲ್ಲೂ ಸಾಂಪ್ರದಾಯಿಕ ಉಡುಗೆ ತೊಟ್ಟು, ಮೇಕಪ್ ಎಲ್ಲಾ ಮಾಡಿದ ಮೇಲೆ ಬಿಂದಿ ಹಾಕದಿದ್ದರೆ ಅದು ಅಪೂರ್ಣವಾಗುತ್ತದೆ. ಬಿಂದಿ ಹಾಕಿದರೆ ಮುಖದ ಸೌಂದರ್ಯ ಇಮ್ಮಡಿಯಾಗುತ್ತದೆ.

ಬಿಂದಿಯನ್ನು ಹಾಕುವ ದೊಡ್ಡ ವೈಶಿಷ್ಟ್ಯವೆಂದರೆ ಅದು ಮುಖವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ. ಪ್ರತಿನಿತ್ಯ ಬಿಂದಿಯನ್ನು ಧರಿಸದೆ ಒಂದು ದಿನ ಧರಿಸಿದರೆ, ನಿಮ್ಮ ಮುಖವು ಸಂಪೂರ್ಣವಾಗಿ ವಿಭಿನ್ನವಾಗಿ ಕಾಣುತ್ತದೆ. ಬಿಂದಿಯನ್ನು ಹಾಕುವುದರಿಂದ ಮುಖದ ಲಕ್ಷಣ ಬದಲಾಗುತ್ತದೆ. ಮುಖವು ಸಂಪೂರ್ಣವಾಗಿ ವಿಭಿನ್ನ ಆಕಾರದಲ್ಲಿ ಕಾಣುತ್ತದೆ. ಈಗಂತೂ ಮಾರುಕಟ್ಟೆಯಲ್ಲಿ ವೈವಿಧ್ಯಮಯ ಬಿಂದಿಗಳು ಲಭ್ಯವಿದೆ. ತಮಗೆ ಯಾವುದು ಚೆನ್ನಾಗಿ ಕಾಣಿಸುತ್ತದೆ ಎಂದು ನೋಡುತ್ತಾ ಹೆಂಗಳೆಯರು ಬಿಂದಿಯನ್ನು ಆಯ್ಕೆ ಮಾಡುತ್ತಾರೆ.

ಬಹುತೇಕ ಪ್ರತಿಯೊಬ್ಬ ಭಾರತೀಯ ಮಹಿಳೆಗೆ ಅತ್ಯುನ್ನತವಾದ ಪರಿಕರವಾಗಿರುವ ಬಿಂದಿಯು ಮುಖದ ಸೌಂದರ್ಯವನ್ನು ತಕ್ಷಣವೇ ಹೆಚ್ಚಿಸುತ್ತದೆ. ಸೀರೆಯಾಗಿರಲಿ, ಸೂಟ್ ಆಗಿರಲಿ ಅಥವಾ ಯಾವುದೇ ಸಾಂಪ್ರದಾಯಿಕ ಉಡುಗೆಯಾಗಿರಲಿ, ಬಿಂದಿಯನ್ನು ಧರಿಸಿದ ನಂತರ ನೋಟ ಬದಲಾಗುತ್ತದೆ. ಆದರೆ, ಮುಖದ ಆಕಾರಕ್ಕೆ ಹೊಂದಿಕೆಯಾಗದ ಬಿಂದಿಯನ್ನು ಧರಿಸುವುದರಿಂದ ಮುಖದ ಸೌಂದರ್ಯ ಹಾಳಾಗುತ್ತದೆ. ಹೀಗಾಗಿ, ಬಿಂದಿಯನ್ನು ಆಯ್ಕೆ ಮಾಡುವಾಗ ಯಾವಾಗಲೂ ಇಲ್ಲಿ ಕೆಳಗೆ ತಿಳಿಸಿರುವ ಅಂಶವನ್ನು ಪರಿಗಣಿಸಬೇಕು. ನಿಮ್ಮ ಮುಖಕ್ಕೆ ಪರಿಪೂರ್ಣವಾದ ಬಿಂದಿಯನ್ನು ನೀವು ಹೇಗೆ ಆಯ್ಕೆ ಮಾಡಬಹುದು ಎಂಬುದು ಇಲ್ಲಿದೆ.

ಮುಖಕ್ಕೆ ಬಿಂದಿಯನ್ನು ಆರಿಸುವುದು ಹೇಗೆ

ಹೃದಯಾಕಾರದ ಮುಖ ಇರುವವರು ಈ ರೀತಿ ಇರುವ ಬಿಂದಿ ಧರಿಸಿ: ಹೃದಯದ ಆಕಾರದ ಮುಖ ಇರುವವರಿಗೆ ಹಣೆ ವಿಶಾಲವಾಗಿದ್ದು, ಕೆನ್ನೆ ಅಗಲವಾಗಿರುತ್ತದೆ. ಸ್ವಲ್ಪ ಕಿರಿದಾದ ಗಲ್ಲವನ್ನು ಹೊಂದಿರುತ್ತಾರೆ. ಈ ರೀತಿಯ ಮುಖ ಹೊಂದಿರುವವರು ದೊಡ್ಡ ಬಿಂದಿಗಳನ್ನು ಹಾಕಬೇಡಿ. ದೊಡ್ಡ ಬಿಂದಿಗಳು ನಿಮ್ಮ ಹಣೆಯನ್ನು ಇನ್ನಷ್ಟು ಪ್ರಮುಖವಾಗಿಸುತ್ತವೆ. ಮುಖದಲ್ಲಿ ಬಿಂದಿಯೇ ಹೈಲೈಟ್ ಆಗಿ ಕಾಣಿಸುತ್ತದೆ. ಮುಖಕ್ಕೆ ಚಿಕ್ಕ ಬಿಂದಿಯನ್ನು ಆರಿಸಿಕೊಳ್ಳಿ. ಸಣ್ಣ ಹೊಳೆಯುವ ಚುಕ್ಕೆಗಳಿಂತಿರುವ ಬಿಂದಿಗಳು ಸಹ ನಿಮ್ಮ ಮೊಗಕ್ಕೆ ಒಪ್ಪುತ್ತದೆ.

ಅಂಡಾಕಾರದ ಮುಖ: ಹಣೆಯು ಗಲ್ಲದೊಂದಿಗೆ ಸ್ವಲ್ಪಮಟ್ಟಿಗೆ ಸಮಾನ ಪ್ರಮಾಣದಲ್ಲಿದ್ದರೆ ಮತ್ತು ಕೆನ್ನೆಯ ಮೂಳೆಗಳು ಪ್ರಬಲವಾಗಿದ್ದರೆ, ನೀವು ಅಂಡಾಕಾರದ ಮುಖವನ್ನು ಹೊಂದಿದ್ದೀರಿ. ಅಂಡಾಕಾರದ ಮುಖವನ್ನು ಹೊಂದಿರುವವರು ಯಾವುದೇ ಆಕಾರದ ಬಿಂದಿಗಳನ್ನು ಪ್ರಯತ್ನಿಸಬಹುದು. ಆದರೆ, ತುಂಬಾ ಉದ್ದವಾದ ಬಿಂದಿಗಳನ್ನು ಹಾಕುವುದು ಬೇಡ. ಇವು ನಿಮ್ಮ ಮುಖಕ್ಕೆ ಉದ್ದವಾದ ನೋಟವನ್ನು ನೀಡಬಹುದು. ಅಲ್ಲದೆ, ಬಿಂದಿಯ ಬಣ್ಣವು ಲಿಪ್‌ಸ್ಟಿಕ್‌ಗೆ ಹೊಂದಿಕೆಯಾಗಲಿ.

ತ್ರಿಕೋನ ಮುಖ: ಸಣ್ಣ ಹಣೆ, ಬಲವಾದ ದವಡೆ ಮತ್ತು ಮೊನಚಾದ ಗಲ್ಲ ಇದ್ದರೆ ತ್ರಿಕೋನ ಮುಖದ ಲಕ್ಷಣಗಳಾಗಿವೆ. ಇಂತಹ ಮುಖವನ್ನು ಹೊಂದಿದ್ದರೆ, ನೀವು ಬಹಳ ಅದೃಷ್ಟವಂತೆಯೇ ಹೌದು. ಏಕೆಂದರೆ ಬಿಂದಿಗಳ ವಿವಿಧ ಆಕಾರಗಳನ್ನು ಪ್ರಯತ್ನಿಸಬಹುದು. ಸರಳ ಬಿಂದಿಯಿಂದ ಡಿಸೈನರ್‌ವರೆಗೆ ಯಾವುದೇ ರೀತಿಯ ಬಿಂದಿಗಳನ್ನು ಪ್ರಯೋಗಿಸಬಹುದು. ಹೊಳೆಯುವ, ಚಿಕ್ಕದಾದ ಮತ್ತು ಉದ್ದವಾದ ವಿನ್ಯಾಸಗಳಿಂದ ಹಿಡಿದು ದೊಡ್ಡ ಮತ್ತು ದಪ್ಪ ವಿನ್ಯಾಸಗಳವರೆಗೆ ಯಾವುದಾದರೂ ನಿಮ್ಮ ಮುಖದ ಪ್ರಕಾರಕ್ಕೆ ಸರಿಹೊಂದುತ್ತದೆ.

ಚೌಕಾಕಾರದ ಮುಖ: ಈ ಮುಖದ ಪ್ರಮುಖ ಲಕ್ಷಣವೆಂದರೆ ವಿಶಾಲ ದವಡೆಯನ್ನು ಹೊಂದಿರುವುದು. ಈ ರೀತಿಯ ಮುಖವನ್ನು ಹೊಂದಿರುವವರು ಸೂಕ್ಷ್ಮವಾದ ವೃತ್ತಾಕಾರದ ಬಿಂದಿಗಳು ಮತ್ತು ವಿ ಆಕಾರದ ಬಿಂದಿಗಳನ್ನು ಧರಿಸಬಹುದು. ಇದು ನಿಮ್ಮ ಮುಖಕ್ಕೆ ಚೆನ್ನಾಗಿ ಒಪ್ಪುತ್ತದೆ. ಇದು ಮುಖದ ತೀಕ್ಷ್ಣತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ, ಅಗಲ ಮತ್ತು ಹೆಚ್ಚು ಉದ್ದವಾದ ಆಕಾರದಲ್ಲಿರುವ ಬಿಂದಿಗಳನ್ನು ಧರಿಸಬೇಡಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ