ಹೆಣ್ಣುಮಕ್ಕಳೇ, ಅಂದ ಹೆಚ್ಚಿಸಿಕೊಳ್ಳುವ ಭರದಲ್ಲಿ ಈ ತಪ್ಪು ಮಾಡದಿರಿ, ಬ್ಯೂಟಿಪಾರ್ಲರ್‌ಗೆ ಹೋದಾಗ ಈ 5 ವಿಚಾರಗಳನ್ನ ಎಂದಿಗೂ ಕಡೆಗಣಿಸದಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  ಹೆಣ್ಣುಮಕ್ಕಳೇ, ಅಂದ ಹೆಚ್ಚಿಸಿಕೊಳ್ಳುವ ಭರದಲ್ಲಿ ಈ ತಪ್ಪು ಮಾಡದಿರಿ, ಬ್ಯೂಟಿಪಾರ್ಲರ್‌ಗೆ ಹೋದಾಗ ಈ 5 ವಿಚಾರಗಳನ್ನ ಎಂದಿಗೂ ಕಡೆಗಣಿಸದಿರಿ

ಹೆಣ್ಣುಮಕ್ಕಳೇ, ಅಂದ ಹೆಚ್ಚಿಸಿಕೊಳ್ಳುವ ಭರದಲ್ಲಿ ಈ ತಪ್ಪು ಮಾಡದಿರಿ, ಬ್ಯೂಟಿಪಾರ್ಲರ್‌ಗೆ ಹೋದಾಗ ಈ 5 ವಿಚಾರಗಳನ್ನ ಎಂದಿಗೂ ಕಡೆಗಣಿಸದಿರಿ

ಫೇಶಿಯಲ್‌, ಬ್ಲೀಚಿಂಗ್‌, ಐಬ್ರೋ, ವ್ಯಾಕ್ಸಿಂಗ್ ಅಂತೆಲ್ಲಾ ಮಾಡಿಸಿಕೊಳ್ಳಲು ಹೆಣ್ಣುಮಕ್ಕಳು ಬ್ಯೂಟಿಪಾರ್ಲರ್ ಬಾಗಿಲು ತಟ್ಟುವುದು ಸಾಮಾನ್ಯ. ಆದರೆ ಬ್ಯೂಟಿಪಾರ್ಲರ್‌ಗೆ ಹೋದಾಗ ನೀವು ಕಡೆಗಣಿಸುವ ಈ 5 ವಿಚಾರಗಳು ಅಂದ ಹೆಚ್ಚಿಸುವ ಬದಲು ಚರ್ಮದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಅಂತಹ ತಪ್ಪುಗಳು ಯಾವುವು ನೋಡಿ.

ಬ್ಯೂಟಿ ಪಾರ್ಲರ್‌ನಲ್ಲಿ ನಾವು ಮಾಡುವ ತಪ್ಪುಗಳು
ಬ್ಯೂಟಿ ಪಾರ್ಲರ್‌ನಲ್ಲಿ ನಾವು ಮಾಡುವ ತಪ್ಪುಗಳು (PC: Canva)

ಹೆಣ್ಣುಮಕ್ಕಳು ಸೌಂದರ್ಯ ಪ್ರಿಯರು. ತಮ್ಮ ಅಡಿಯಿಂದ ಮುಡಿವರೆಗೆ ಸುಂದರವಾಗಿ ಕಾಣಬೇಕು ಎಂದು ಬಯಸುವ ಅವರು ಬ್ಯೂಟಿಪಾರ್ಲರ್ ಮೊರೆ ಹೋಗುತ್ತಾರೆ. ವ್ಯಾಕ್ಸಿಂಗ್‌, ಥ್ರೆಡಿಂಗ್‌, ಐಬ್ರೋ, ಫೇಶಿಯಲ್‌, ಕ್ಲೀನ್‌ಅಪ್‌, ಮೆನಿಕ್ಯೂರ್, ಪೆಡಿಕ್ಯೂರ್ ಅಂತೆಲ್ಲಾ ಮಾಡಿಸಿಕೊಂಡು ಅಂದ ಹೆಚ್ಷಿಸಿಕೊಳ್ಳುತ್ತಾರೆ. ಆದರೆ ಬ್ಯೂಟಿಪಾರ್ಲರ್‌ಗೆ ಹೋದಾಗ ಈ ಕೆಲವು ವಿಚಾರಗಳನ್ನು ನೀವು ಕಡೆಗಣಿಸಿದರೆ ಅಂದ ಹೆಚ್ಚುವ ಬದಲು ಚರ್ಮದ ಮೇಲೆ ಅಡ್ಡಪರಿಣಾಮಗಳಾಗಬಹುದು.

ಪಾರ್ಲರ್‌ನಲ್ಲಿ ತಿಳಿದೋ ತಿಳಿಯದೆಯೋ ಮಾಡುವ ಕೆಲವು ತಪ್ಪುಗಳು ನಿಮ್ಮ ಆರೋಗ್ಯ ಮತ್ತು ತ್ವಚೆಗೆ ದೊಡ್ಡ ಹಾನಿಯನ್ನುಂಟುಮಾಡುತ್ತವೆ. ಹಾಗಾಗಿ ಇನ್ನು ಮುಂದೆ ಬ್ಯೂಟಿಪಾರ್ಲರ್‌ಗೆ ಹೋದಾಗ ಈ ವಿಚಾರಗಳನ್ನ ಎಂದಿಗೂ ಕಡೆಗಣಿಸಬೇಡಿ. ಹಾಗಾದರೆ ಬ್ಯೂಟಿಪಾರ್ಲರ್‌ನಲ್ಲಿ ನಾವು ಮಾಡುತ್ತಿರುವ ತಪ್ಪುಗಳು ಯಾವುದು ನೋಡಿ.

ಬಳಸುವ ಉತ್ಪನ್ನಗಳ ಪರಿಶೀಲನೆ

ಫೇಶಿಯಲ್‌, ಕ್ಲೀನ್‌ ಅಪ್‌, ಪೆಡಿಕ್ಯೂರ್ ಯಾವುದೇ ಆಗಲಿ ಅದನ್ನು ಮಾಡಲು ಪಾರ್ಲರ್‌ನವರು ಬಳಸುವ ಉತ್ಪನ್ನವನ್ನು ಶೇ 99ರಷ್ಟು ಮಂದಿ ಪರಿಶೀಲನೆ ಮಾಡುವುದಿಲ್ಲ. ಅಂದರೆ ಅದು ಉತ್ತಮ ಗುಣಮಟ್ಟದ್ದೇ, ವಾಯಿಕೆ ದಿನಾಂಕ ಈ ಯಾವುದನ್ನೂ ಪರಿಶೀಲಿಸುವುದಿಲ್ಲ. ನೀವು ಮಾಡುವ ಈ ತಪ್ಪು ಚರ್ಮದ ಮೇಲೆ ದೊಡ್ಡ ಪರಿಣಾಮ ಬೀರಬಹುದು. ಇದರಿಂದ ಚರ್ಮಕ್ಕೆ ಸಾಕಷ್ಟು ಹಾನಿಯಾಗಬಹುದು. ಹಾಗಾಗಿ ಪ್ರತಿ ಬಾರಿ ಪಾರ್ಲರ್‌ಗೆ ಹೋದಾಗ ಚರ್ಮಕ್ಕೆ ಬಳಸುವ ಉತ್ಪನ್ನ ಯಾವುದು, ಅದರ ವಾಯಿದೆ ದಿನಾಂಕ ಪರಿಶೀಲಿಸಿ.

ಬಳಸುವ ಟವಲ್ ಬಗ್ಗೆ ಗಮನ ಹರಿಸದೇ ಇರುವುದು

ಪಾರ್ಲರ್‌ಗೆ ಹೋದಾಗ ಮುಖ, ಕೈ ಕಾಲು, ಕೂದಲು ಒರೆಸಲು ಟವರ್ ಬಳಸುತ್ತಾರೆ. ಆದರೆ ಇದನ್ನು ಎಷ್ಟು ಬಾರಿ ವಾಶ್ ಮಾಡುತ್ತಾರೆ, ಒಮ್ಮೆ ಬಳಸಿದ ಟವಲ್ ಅನ್ನು ಪುನಃ ಬೇರೆಯವರಿಗೆ ಬಳಸುತ್ತಾರ ಅಥವಾ ಒಗೆದು ಬಳಸುತ್ತಾರೆಯೇ ಎಂದೆಲ್ಲಾ ನಾವು ಯೋಚಿಸುವುದೇ ಇಲ್ಲ. ಇದರಿಂದ ಕೂಡ ಚರ್ಮದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಮುಂದಿನ ಬಾರಿ ಪಾರ್ಲರ್‌ಗೆ ಹೋದಾಗ ಟವಲ್ ಬದಲು ಟಿಶ್ಯೂ ನೀಡಲು ಹೇಳಿ.

ಬ್ರಷ್‌ಗಳ ಬಳಕೆ

ಅನೇಕ ಪಾರ್ಲರ್‌ಗಳಲ್ಲಿ, ಎಲ್ಲಾ ಗ್ರಾಹಕರ ಮೇಕ್ಅಪ್‌ಗೆ ಒಂದೇ ಬ್ರಷ್ ಅನ್ನು ಬಳಸಲಾಗುತ್ತದೆ. ಕೆಲವು ಪಾರ್ಲರ್‌ಗಳಲ್ಲಿ ನೈರ್ಮಲ್ಯವನ್ನು ಗಮನದಲ್ಲಿಟ್ಟುಕೊಂಡು ಬ್ರಷ್ ಅನ್ನು ಸ್ವಚ್ಛಗೊಳಿಸಿದ ನಂತರ ಬಳಸಲಾಗಿದ್ದರೂ, ಕೆಲವು ಪಾರ್ಲರ್‌ಗಳಲ್ಲಿ ಈ ಎಲ್ಲಾ ವಿಷಯಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಮೇಕಪ್‌ಗೆ ಒಂದೇ ಬ್ರಷ್ ಬಳಸುವುದರಿಂದ ಒಬ್ಬರ ಚರ್ಮದಲ್ಲಿ ಸಮಸ್ಯೆಯಿದ್ದರೆ, ಅದು ಇನ್ನೊಬ್ಬರ ಚರ್ಮಕ್ಕೂ ವರ್ಗಾಯಿಸಬಹುದು. ಆದ್ದರಿಂದ, ನೀವು ಮೇಕಪ್ ಮಾಡಲು ಪಾರ್ಲರ್‌ಗೆ ಹೋದಾಗ, ಬ್ರಷ್‌ಗಳನ್ನು ಸ್ವಚ್ಛಗೊಳಿಸಬೇಕು ಅಥವಾ ಬದಲಾಯಿಸಬೇಕು ಎಂದು ಖಡಾ ಖಂಡಿತವಾಗಿ ಹೇಳಿ.

ಮೆನಿಕ್ಯೂರ್, ಪೆಡಿಕ್ಯೂರ್ ವಿಚಾರದಲ್ಲಿ ಈ ತಪ್ಪು

ಬಹುತೇಕ ಮಹಿಳೆಯರು ಮೆನಿಕ್ಯೂರ್ ಅಥವಾ ಪೆಡಿಕ್ಯೂರ್‌ಗಾಗಿ ಪಾರ್ಲರ್ ಗೆ ಹೋದಾಗ ನೀರು, ನೀರಿನ ಟಬ್ ಅಥವಾ ಅದಕ್ಕೆ ಬಳಸುವ ಇತರ ಉತ್ಪನ್ನಗಳ ಸ್ವಚ್ಛತೆಯ ಬಗ್ಗೆ ಗಮನ ಹರಿಸುವುದಿಲ್ಲ. ಇದರಿಂದ ಚರ್ಮದ ಅಲರ್ಜಿಯಂತಹ ಸಮಸ್ಯೆಗಳು ಎದುರಾಗಬಹುದು. ಆದ್ದರಿಂದ, ನೀವು ಮೆನಿಕ್ಯೂರ್ ಅಥವಾ ಪಾದೋಪಚಾರಕ್ಕಾಗಿ ಪಾರ್ಲರ್‌ಗೆ ಹೋದಾಗ, ಇದಕ್ಕಾಗಿ ಬಳಸುವ ನೀರು ಸಂಪೂರ್ಣವಾಗಿ ಶುದ್ಧವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಟಬ್ ಸ್ವಚ್ಛವಾಗಿರಬೇಕು, ಬ್ರಷ್ ಸ್ವಚ್ಛವಾಗಿರಬೇಕು ಅಥವಾ ಹೊಸದಾಗಿರಬೇಕು ಎಂಬುದನ್ನೂ ಗಮನಿಸಿ.

ಥ್ರೆಡ್ ಮಾಡುವಾಗ ಮತ್ತು ಫೇಶಿಯಲ್ ಮಾಡುವಾಗಲೂ ಕಾಳಜಿ ವಹಿಸಿ

ಥ್ರೆಡ್ ಅಥವಾ ಫೇಶಿಯಲ್ ಮಾಡುವಾಗ ಪಾರ್ಲರ್‌ನವರು ಕೈಯಿಂದ ಮುಖ ಮುಟ್ಟುತ್ತಾರೆ. ಆದರೆ ಅವರು ಕೈಯನ್ನು ಎಷ್ಟು ಸ್ವಚ್ಛವಾಗಿಟ್ಟುಕೊಂಡಿದ್ದಾರೆ ಎಂಬುದರ ಬಗ್ಗೆ ನಾವು ಗಮನ ಹರಿಸುವುದಿಲ್ಲ. ಕೊಳಕು ಕೈಯಿಂದ ಫೇಶಿಯಲ್ ಮಾಡುವುದು ಕೂಡ ತ್ವಚೆಯ ಅಂದ ಹಾಳಾಗಲು ಕಾರಣವಾಗಬಹುದು. ಹಾಗಾಗಿ ತಪ್ಪದೇ ಕೈ ತೊಳೆದುಕೊಳ್ಳುವಂತೆ ಹೇಳಬೇಕು.

ಈ ವಿಚಾರಗಳು ನಮಗೆ ಬಹಳ ಸರಳ ಎನ್ನಿಸಬಹುದು. ಆದರೆ ಇದರಲ್ಲಿ ಕೊಂಚ ಎಡವಿದರೂ ತೊಂದರೆ ಆಗುವುದು ಖಚಿತ. ಚರ್ಮ ಬಹಳ ಸೂಕ್ಷ್ಮವಾಗಿರುವ ಕಾರಣ ಈ ವಿಚಾರಗಳನ್ನ ಎಂದಿಗೂ ಕಡೆಗಣಿಸದಿರಿ.

Whats_app_banner