logo
ಕನ್ನಡ ಸುದ್ದಿ  /  ಜೀವನಶೈಲಿ  /  ಸೂರ್ಯನ ನೇರಳಾತೀತ ಕಿರಣಗಳಿಂದ ಪಾರಾಗಲು ಸನ್​ಸ್ಕ್ರೀನ್​ ಮಾತ್ರ ಸಾಲಲ್ಲ: ತ್ವಚೆಯ ಆರೋಗ್ಯಕ್ಕಾಗಿ ಈ ಕ್ರಮಗಳನ್ನು ತಪ್ಪದೇ ಪಾಲಿಸಿ

ಸೂರ್ಯನ ನೇರಳಾತೀತ ಕಿರಣಗಳಿಂದ ಪಾರಾಗಲು ಸನ್​ಸ್ಕ್ರೀನ್​ ಮಾತ್ರ ಸಾಲಲ್ಲ: ತ್ವಚೆಯ ಆರೋಗ್ಯಕ್ಕಾಗಿ ಈ ಕ್ರಮಗಳನ್ನು ತಪ್ಪದೇ ಪಾಲಿಸಿ

Reshma HT Kannada

May 22, 2024 04:00 PM IST

google News

ಸೂರ್ಯನ ನೇರಳಾತೀತ ಕಿರಣಗಳಿಂದ ಪಾರಾಗಲು ಸನ್​ಸ್ಕ್ರೀನ್​ ಮಾತ್ರ ಸಾಲಲ್ಲ: ತ್ವಚೆಯ ಆರೋಗ್ಯಕ್ಕಾಗಿ ಈ ಕ್ರಮಗಳನ್ನು ತಪ್ಪದೇ ಪಾಲಿಸಿ

    • ಸೂರ್ಯನ ನೇರಳಾತೀತ ಕಿರಣಗಳು (ಯುವಿ ಕಿರಣಗಳು) ಚರ್ಮಕ್ಕೆ ಹಾನಿಯುಂಟು ಮಾಡುತ್ತದೆ ಎನ್ನುವುದು ತಿಳಿದಿರುವ ವಿಚಾರ. ಸೂರ್ಯನ ಕಿರಣಗಳ ಹಾನಿಯಿಂದ ತಪ್ಪಿಸಿಕೊಳ್ಳಲು ಸನ್‌ಸ್ಕ್ರೀನ್‌ ಮಾತ್ರ ಸಾಲುವುದಿಲ್ಲ. ಚರ್ಮವನ್ನು ರಕ್ಷಿಸಿಕೊಳ್ಳಲು ಬೇರೆ ಏನೆಲ್ಲಾ ಕ್ರಮಗಳನ್ನು ಪಾಲಿಸಬೇಕು ನೋಡಿ. 
ಸೂರ್ಯನ ನೇರಳಾತೀತ ಕಿರಣಗಳಿಂದ ಪಾರಾಗಲು ಸನ್​ಸ್ಕ್ರೀನ್​ ಮಾತ್ರ ಸಾಲಲ್ಲ: ತ್ವಚೆಯ ಆರೋಗ್ಯಕ್ಕಾಗಿ ಈ ಕ್ರಮಗಳನ್ನು ತಪ್ಪದೇ ಪಾಲಿಸಿ
ಸೂರ್ಯನ ನೇರಳಾತೀತ ಕಿರಣಗಳಿಂದ ಪಾರಾಗಲು ಸನ್​ಸ್ಕ್ರೀನ್​ ಮಾತ್ರ ಸಾಲಲ್ಲ: ತ್ವಚೆಯ ಆರೋಗ್ಯಕ್ಕಾಗಿ ಈ ಕ್ರಮಗಳನ್ನು ತಪ್ಪದೇ ಪಾಲಿಸಿ

ಬೇಸಿಗೆಕಾಲ ಮಾತ್ರವಲ್ಲ, ಯಾವುದೇ ಕಾಲವಾಗಿರಲಿ ಮನೆಯಿಂದ ಹೊರಗೆ ತೆರಳಬೇಕು ಎಂದಾಗೆಲ್ಲ ಚರ್ಮದ ಕಾಂತಿಯನ್ನು ಕಾಪಾಡಿಕೊಳ್ಳಲು ಹಾಗೂ ಸೂರ್ಯನ ನೇರಳಾತೀತ ಕಿರಣಗಳಿಂದ ನಮ್ಮ ತ್ವಚೆಯನ್ನು ರಕ್ಷಿಸಿಕೊಳ್ಳಲು ಸನ್‌ಸ್ಕ್ರೀನ್‌ ಬಳಕೆ ಮಾಡುವುದು ಅನಿವಾರ್ಯ. ಸೂರ್ಯನ ನೇರಳಾತೀತ ಕಿರಣಗಳ ಪರಿಣಾಮದಿಂದ ಚರ್ಮ ಸುಕ್ಕುಗಟ್ಟುವುದು, ಚರ್ಮದ ಕೋಶಗಳಿಗೆ ಹಾನಿಯಾಗುವುದು ಮಾತ್ರವಲ್ಲದೇ ಮಾರಕ ಕ್ಯಾನ್ಸರ್‌ಗೂ ಕಾರಣವಾಗಬಹುದು. ನೇರಳಾತೀತ ಕಿರಣಗಳು ವಿಟಮಿನ್ ಡಿ ಮೂಲವಾಗಿದ್ದರೂ ಸಹ ದೀರ್ಘಕಾಲದವರೆಗೆ ಚರ್ಮವನ್ನು ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ತೀವ್ರ ಹಾನಿ ಸಂಭವಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಮನೆಯಿಂದ ಹೊರಗೆ ಕಾಲಿಡುವ ಮುನ್ನ ತ್ವಚೆಗೆ ಸೂಕ್ತ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯ. ಆದರೆ ಮನೆಯೊಳಗೆ ಇದ್ದ ಮಾತ್ರಕ್ಕೆ ನಿಮ್ಮ ತ್ವಚೆಯು ಸೂರ್ಯನ ಕಿರಣಗಳಿಂದ ರಕ್ಷಿಸಲ್ಪಟ್ಟಿದೆ ಎಂದು ಅರ್ಥೈಸಿಕೊಳ್ಳುವಂತಿಲ್ಲ. ಏಕೆಂದರೆ ಈ ಕಿರಣಗಳು ನಿಮ್ಮ ಮನೆಯ ಕಿಟಕಿ ಬಾಗಿಲುಗಳ ಮೂಲಕ ಒಳಗೆ ಪ್ರವೇಶಿಸಿರುತ್ತವೆ. ಹೀಗಾಗಿ ನಮ್ಮ ಚರ್ಮವನ್ನು ಎಲ್ಲಾ ಸಮಯದಲ್ಲಿಯೂ ರಕ್ಷಿಸಿಕೊಳ್ಳಲು ಇರುವ ವಿವಿಧ ಮಾರ್ಗಗಳ ಬಗ್ಗೆ ತಿಳಿದುಕೊಳ್ಳೋಣ.

ಅತಿನೇರಳೆ ಕಿರಣಗಳಿಂದ ಚರ್ಮವನ್ನು ಹೀಗೆ ರಕ್ಷಿಸಿ

ಸನ್‌ಸ್ಕ್ರೀನ್‌ ಬಳಸಲು ಮರೆಯದಿರಿ: ನಿಮ್ಮ ದೇಹದ ಯಾವೆಲ್ಲ ಭಾಗಗಳು ಸೂರ್ಯನ ಕಿರಣಗಳನ್ನು ನೇರವಾಗಿ ಒಡ್ಡಿಕೊಳ್ಳುತ್ತದೆ ಗಮನಿಸಿ. ಆ ಎಲ್ಲಾ ಭಾಗಗಳಿಗೆ ಸನ್‌ಸ್ಕ್ರೀನ್‌ ಹಚ್ಚಲು ಮರೆಯಬೇಡಿ. ನಿಮ್ಮ ಚರ್ಮವನ್ನು ರಕ್ಷಿಸಿಕೊಳ್ಳಲು ಇರುವುದು ಇದೊಂದೇ ಮಾರ್ಗ ಎಂಬಂತೆ ಕಟ್ಟುನಿಟ್ಟಾಗಿ ನೀವು ಸನ್‌ಸ್ಕ್ರೀನ್‌ಗಳನ್ನು ಬಳಕೆ ಮಾಡಬೇಕು.

ನೀರು ಕುಡಿಯಿರಿ: ದೇಹದ ಒಟ್ಟಾರೆ ಆರೋಗ್ಯ ಕಾಪಾಡಿಕೊಳ್ಳಲು ನೀರು ಕುಡಿಯುವುದು ಉತ್ತಮ ಅಭ್ಯಾಸ. ಆ ಕಾರಣಕ್ಕೆ ಪ್ರತಿದಿನ ಸೂಕ್ತ ಪ್ರಮಾಣದ ನೀರು ಕುಡಿಯುವವರ ಚರ್ಮವು ಕೂಡ ಸೂರ್ಯನ ಬೆಳಕಿನ ನಡುವೆಯೂ ಕಾಂತಿಯನ್ನು ಕಾಪಾಡಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತದೆ.

ಸನ್‌ಗ್ಲಾಸ್‌ ಧರಿಸಲು ಮರೆಯದಿರಿ: ಕೇವಲ ಫೋಟೋಗಳಿಗೆ ಪೋಸ್ ಕೊಡಲು ಮಾತ್ರವಲ್ಲ, ಸನ್‌ಗ್ಲಾಸ್‌ಗಳು ಸೂರ್ಯನ ಕಿರಣಗಳಿಂದ ನಿಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡುವ ಕಾರ್ಯವನ್ನೂ ಮಾಡುತ್ತವೆ. ಹೀಗಾಗಿ ಮನೆಯಿಂದ ಹೊರಹೋಗುವಾಗ ಸನ್‌ಗ್ಲಾಸ್‌ಗಳನ್ನು ಧರಿಸುವುದು ಒಳ್ಳೆಯದು.

ಸೂಕ್ತವಾದ ಉಡುಪು ಧರಿಸಿ: ನಿಮ್ಮ ಚರ್ಮವನ್ನು ರಕ್ಷಿಸಲು ಸೂಕ್ತವಾದ ಬಟ್ಟೆಗಳನ್ನು ಧರಿಸುವ ಬಗ್ಗೆ ಯೋಚಿಸಿ. ಯುವಿ ಕಿರಣಗಳಿಂದ ನಿಮ್ಮನ್ನು ರಕ್ಷಿಸುವ ಬಟ್ಟೆಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳಿ. ಉದ್ದನೆಯ ತೋಳಿನ ಶರ್ಟ್‌ಗಳು, ಉದ್ದವಾದ ಪ್ಯಾಂಟ್‌ಗಳನ್ನು ಧರಿಸಿ. ಬಿಗಿಯಾದ ಉಡುಪುಗಳನ್ನು ಧರಿಸಬೇಡಿ. ಮುಖವನ್ನು ರಕ್ಷಿಸಲು ಟೋಪಿ ಬಳಸಿ.

ಯುವಿ ಇಂಡೆಕ್ಸ್‌ ಅನ್ನು ಟ್ರ್ಯಾಕ್ ಮಾಡಿ: ಯುವಿ ಕಿರಣಗಳಿಂದ ನಿಮ್ಮ ಕಣ್ಣು ಹಾಗೂ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಮುನ್ನ ಯುವಿ ಸೂಚ್ಯಂಕ ಮಟ್ಟವನ್ನು ಪರಿಶೀಲಿಸುವುದು ಒಳಿತು. ಯುವಿ ಸೂಚ್ಯಂಕವನ್ನು ಟ್ರ್ಯಾಕ್ ಮಾಡಿ ಹಾಗೂ ಯಾವ ಸಮಯದಲ್ಲಿ ಯುವಿ ಸೂಚ್ಯಂಕ ಕಡಿಮೆ ಪ್ರಮಾಣದಲ್ಲಿ ಇರುತ್ತದೆಯೋ ಆಗ ಮನೆಯಿಂದ ಹೊರ ಹೋಗಿ ಮಾಡಬಹುದಾದ ಕೆಲಸಗಳಿಗೆ ಆದ್ಯತೆ ನೀಡಿ.

ಸಮತೋಲಿತ ಆಹಾರ ಸೇವನೆ: ಆಂಟಿಆಕ್ಸಿಡಂಟ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಇರುವ, ಜೀವಸತ್ವಗಳು ಹಾಗೂ ಖನಿಜಗಳು ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು ನಿಮ್ಮ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆಂಟಿಆಕ್ಸಿಡಂಟ್‌ಗಳಿಂದ ಸಮೃದ್ಧವಾಗಿರುವ ಆಹಾರಗಳು ಸೆಲ್ಯೂಲಾರ್ ಹಾನಿಯಿಂದ ನಿಮ್ಮನ್ನು ಕಾಪಾಡುತ್ತದೆ ಮಾತ್ರವಲ್ಲದೇ ನಿಮ್ಮ ಒಟ್ಟಾರೆ ಆರೋಗ್ಯವನ್ನೂ ಸುಧಾರಿಸುತ್ತದೆ.

ಈ ಎಲ್ಲಾ ಕ್ರಮಗಳು ಸೂರ್ಯನ ಅತಿ ನೇರಳೆ ಕಿರಣಗಳಿಂದ ಚರ್ಮಕ್ಕೆ ಆಗುವ ಹಾನಿಯನ್ನು ತಡೆಯುತ್ತದೆ. ಮಳೆಗಾಲ, ಚಳಿಗಾಲ, ಬೇಸಿಗೆಕಾಲ ಯಾವುದೇ ಕಾಲವಿರಲಿ ನಿಮ್ಮ ತ್ವಚೆಯ ಕಾಂತಿ ಹೆಚ್ಚಲು ಈ ಕ್ರಮಗಳನ್ನು ಪಾಲಿಸುವುದು ಅಗತ್ಯ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ