Beauty Tips- ತ್ವಚೆ ಕಾಂತಿ ಕಳೆದುಕೊಂಡಿದೆ ಎಂದು ಚಿಂತಿಸದಿರಿ: ಟ್ಯಾನ್, ಡೆಡ್‍ಸ್ಕಿನ್ ದೂರ ಮಾಡಲು ಬಳಸಿ ಟೊಮೆಟೊ
Sep 10, 2024 10:50 AM IST
ತ್ವಚೆಯನ್ನು ಕಾಂತಿಯುತವಾಗಿ ಹೊಳೆಯುವಂತೆ ಮಾಡುವ ಟೊಮೆಟೊ ಆಧಾರಿತ ಮನೆಮದ್ದುಗಳು ಇಲ್ಲಿವೆ:
ಟೊಮೆಟೋ ಕೇವಲ ಅಡುಗೆ ಮನೆಯಲ್ಲಿ ಸಾಂಬಾರ್ ಮಾಡುವುದಕ್ಕಷ್ಟೇ ಸೀಮಿತವಲ್ಲ. ತ್ವಚೆಯ ಹೊಳಪಿಗೂ ಇವು ಅದ್ಭುತಗಳನ್ನು ಮಾಡಬಹುದು. ಆಂಟಿಆಕ್ಸಿಡೆಂಟ್, ವಿಟಮಿನ್‌ಗಳು ಮತ್ತು ನೈಸರ್ಗಿಕ ಆಮ್ಲಗಳಿಂದ ಸಮೃದ್ಧವಾಗಿರುವ ಟೊಮೆಟೊ, ತ್ವಚೆಯ ಟ್ಯಾನಿಂಗ್, ಡೆಡ್‍ಸ್ಕಿನ್ ದೂರಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ಬಳಸುವುದು ಹೇಗೆ ಎಂಬುದು ಇಲ್ಲಿದೆ.
ಬಹುತೇಕ ಎಲ್ಲಾ ಹೆಣ್ಮಕ್ಕಳಿಗೆ ತಮ್ಮ ತ್ವಚೆಯ ಬಗ್ಗೆ ಕಾಳಜಿ ಇದ್ದೇ ಇರುತ್ತೆ. ದಿನನಿತ್ಯ ಕನ್ನಡಿಯಲ್ಲಿ ಮುಖನೋಡಿಕೊಳ್ಳುವ ಹೆಂಗಳೆಯರು, ಅಯ್ಯೋ.. ತನ್ನ ಮುಖ ಟ್ಯಾನ್ ಆಗಿದೆ, ಕಾಂತಿ ಕಳೆದುಕೊಂಡಿದೆ, ಕಲೆಗಳಿದ್ದಾವೆ ಎಂಬಿತ್ಯಾದಿ ಕೊರಗುತ್ತಾರೆ. ಇದಕ್ಕಾಗಿ ಕೆಲವರು ಬ್ಯೂಟಿಪಾರ್ಲರ್ ಗಳ ಮೊರೆ ಹೋಗುತ್ತಾರೆ. ಬ್ಯೂಟಿಪಾರ್ಲರ್ ಗಳಿಗೆ ದುಡ್ಡು ಸುರಿಯುವ ಬದಲು ಮನೆಯಲ್ಲೇ ಇರುವ ಪದಾರ್ಥದಿಂದ ತ್ವಚೆಯ ಕಾಂತಿಯ ಹೊಳಪನ್ನು ಹೆಚ್ಚಿಸಬಹುದು. ತ್ವಚೆಯು ಟ್ಯಾನ್ ಆಗಿದ್ದರೆ, ಡೆಡ್‍ಸ್ಕಿನ್ ಉಂಟಾಗಿದ್ದರೆ ಇದಕ್ಕಾಗಿ ಟೊಮೆಟೊವನ್ನು ಬಳಸಿ ಪರಿಹಾರ ಪಡೆಯಬಹುದು.
ಲೈಕೋಪೀನ್‍ನಿಂದ ಸಮೃದ್ಧವಾಗಿರುವ ಟೊಮೆಟೊ ಅನೇಕ ಚರ್ಮದ ಸಮಸ್ಯೆಗಳಿಗೆ ಬಹಳ ಪರಿಣಾಮಕಾರಿಯಾಗಿದೆ. ಪ್ರತಿದಿನ ಟೊಮೆಟೊಗಳನ್ನು ಬಳಸುವುದರಿಂದ ಚರ್ಮದಿಂದ ಕಪ್ಪು ಕಲೆಗಳನ್ನು ತೆಗೆದುಹಾಕಬಹುದು. ತ್ವಚೆ ಟ್ಯಾನ್‍ಗೆ ಒಳಗಾಗಿದ್ದರೆ, ಕಾಂತಿಯುತವಾಗಿ ಹೊಳೆಯುವಂತೆ ಮಾಡಬಹುದು. ಇದು ಚರ್ಮವನ್ನು ಬಿಗಿಗೊಳಿಸಲು ಸಹಾಯ ಮಾಡುವ ರಂಧ್ರಗಳನ್ನು ಕುಗ್ಗಿಸುವ ಗುಣಲಕ್ಷಣಗಳನ್ನು ಸಹ ಹೊಂದಿದೆ. ತ್ವಚೆಯ ಟ್ಯಾನ್ ಮತ್ತು ಡೆಡ್ ಸ್ಕಿನ್ ತೆಗೆದುಹಾಕಲು ಹಾಗೂ ತ್ವಚೆಯನ್ನು ಕಾಂತಿಯುತವಾಗಿ ಹೊಳೆಯುವಂತೆ ಮಾಡುವ ಟೊಮೆಟೊ ಆಧಾರಿತ ಮನೆಮದ್ದುಗಳು ಇಲ್ಲಿವೆ:
ತ್ವಚೆಯ ಕಾಂತಿಗಾಗಿ ಟೊಮೆಟೊವನ್ನು ಹೀಗೆ ಬಳಸಿ
ಟೊಮೆಟೊ ಮತ್ತು ಕಾಫಿ ಸ್ಕ್ರಬ್: ಡೆಡ್ ಸ್ಕಿನ್ ಹೋಗಲಾಡಿಸಲು ಟೊಮೆಟೊ ಸ್ಕ್ರಬ್ ಮಾಡಿ. ಒಂದು ಟೊಮೆಟೊವನ್ನು ಅರ್ಧದಷ್ಟು ಕತ್ತರಿಸಿ. ಅದಕ್ಕೆ ಅರ್ಧ ಚಮಚ ಕಾಫಿ ಮತ್ತು ಅರ್ಧ ಚಮಚ ಸಕ್ಕರೆ ಹಾಕಿ. ಈ ಟೊಮೆಟೊವನ್ನು ತ್ವಚೆಯ ಮೇಲೆ 10 ನಿಮಿಷಗಳ ಕಾಲ ನಿಧಾನವಾಗಿ ಉಜ್ಜಿಕೊಳ್ಳಿ. ಇದು ಡೆಡ್ ಸ್ಕಿನ್ ಅನ್ನು ಕಡಿಮೆ ಮಾಡುವುದಲ್ಲದೆ ಟ್ಯಾನಿಂಗ್ ಮತ್ತು ಕಪ್ಪು ಕಲೆಗಳನ್ನು ಕಡಿಮೆ ಮಾಡುತ್ತದೆ. ನಿಗದಿತ ಸಮಯದ ನಂತರ ಮುಖ ತೊಳೆಯಿರಿ.
ಟೊಮೆಟೊ ಮತ್ತು ಅಲೋವೆರಾ ಜೆಲ್: ಅರ್ಧ ಟೊಮೆಟೊಗೆ ಒಂದು ಚಮಚ ಅಲೋವೆರಾ ಜೆಲ್ ಅನ್ನು ಹಾಕಿ ನಿಧಾನವಾಗಿ ತ್ವಚೆಯನ್ನು ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ತ್ವಚೆಯು ತ್ವರಿತ ತಂಪು ಪಡೆಯುತ್ತದೆ. ಮುಖವನ್ನು ಸಂಪೂರ್ಣವಾಗಿ ಮಸಾಜ್ ಮಾಡಿ. ಇದು ನಿಮ್ಮ ಚರ್ಮಕ್ಕೆ ಹೈಡ್ರೇಟೆಡ್ ಆಗಿರಿಸುವಲ್ಲಿ ಸಹಕಾರಿಯಾಗಿದೆ.
ಟೊಮೆಟೊ ಮತ್ತು ಅರಿಶಿನ: ತ್ವಚೆಯ ಕಾಂತಿಗಾಗಿ ಅರ್ಧ ಟೀ ಚಮಚ ಅರಿಶಿನವನ್ನು ಅರ್ಧ ಟೊಮೆಟೊಗೆ ಮಿಶ್ರಣ ಮಾಡಿ. ಟೊಮೆಟೊವನ್ನು ಅರಿಶಿನದೊಂದಿಗೆ ತ್ವಚೆಯ ಮೇಲೆ ನಿಧಾನವಾಗಿ ಮಸಾಜ್ ಮಾಡಿ. 10 ನಿಮಿಷಗಳ ನಂತರ ನಿಮ್ಮ ಮುಖವನ್ನು ತೊಳೆಯಿರಿ. ಕೆಲವು ವಾರಗಳ ಕಾಲ ಈ ದಿನಚರಿಯನ್ನು ಪುನರಾವರ್ತಿಸುವುದರಿಂದ ಮುಖದಿಂದ ಕಲೆ, ಟ್ಯಾನಿಂಗ್ ಮತ್ತು ಡೆಡ್ ಸ್ಕಿನ್ ಅನ್ನು ತೆಗೆದುಹಾಕುವಲ್ಲಿ ಸಹಕಾರಿಯಾಗಿದೆ.
ಕೇವಲ ರಸಂ ತಯಾರಿಸಿ ಅನ್ನದೊಂದಿಗೆ ಸವಿಯೋದಕ್ಕೆ ಮಾತ್ರವಲ್ಲ, ತ್ವಚೆಯ ಕಾಳಜಿಗೂ ಟೊಮೆಟೊ ಉತ್ತಮ ಪರಿಹಾರವಾಗಿದೆ. ತ್ವಚೆಯನ್ನು ಆರೋಗ್ಯಕರವಾಗಿಸಲು ಮತ್ತು ಡೆಡ್ ಸ್ಕಿನ್ ತೆಗೆದುಹಾಕಲು ಟೊಮೆಟೊ ಅದ್ಭುತ ಪರಿಹಾರ ಎಂದರೆ ತಪ್ಪಿಲ್ಲ. ಇಷ್ಟು ಮಾತ್ರವಲ್ಲ, ತ್ವಚೆಯಲ್ಲಿನ ಕಂದು ಬಣ್ಣ ತೆಗೆದುಹಾಕುವುದರಿಂದ ಹಿಡಿದು ಎಣ್ಣೆಯುಕ್ತ ಚರ್ಮ ಮತ್ತು ಮೊಡವಗೆಳ ವಿರುದ್ಧ ಹೋರಾಡುವಲ್ಲೂ ಟೊಮೆಟೊ ಸಹಕಾರಿಯಾಗಿದೆ. ಅಲ್ಲದೆ ತ್ವಚೆಯಲ್ಲಿನ ಬ್ಲ್ಯಾಕ್‌ಹೆಡ್‌ಗಳು ಮತ್ತು ವೈಟ್‌ಹೆಡ್‌ಗಳ ಸಮಸ್ಯೆಯನ್ನು ಕೂಡ ಆದಷ್ಟು ಕಡಿಮೆ ಮಾಡುತ್ತದೆ.
ವಿಭಾಗ