ಪುಸ್ತಕ ಪರಿಚಯ: ಸರ್ಕಾರ, ಅರಣ್ಯ ಇಲಾಖೆ ಅಂದ್ರೆ ಬೈಸಿಕೊಳ್ಳೋಕಷ್ಟೇ ಇರೋದಲ್ಲ; ಪೆದ್ದನ್ನನ ಇಕಾಲಜಿ ಮತ್ತು ಪರಿಸರ ಲೇಖನಗಳು
Feb 04, 2024 04:23 PM IST
ಪೆದ್ದನ್ನನ ಇಕಾಲಜಿ ಪುಸ್ತಕದ ಮುಖಪುಟ (ಎಡಚಿತ್ರ). ಸಾಹಿತಿ ಎಚ್.ಎ.ಪುರುಷೋತ್ತಮ ರಾವ್ (ಬಲಚಿತ್ರ)
- Peddannana Ecology: ನೀವು ಅಂದುಕೊಂಡಿರುವ ಕಾಡಷ್ಟೇ ಕಾಡಲ್ಲ, ಕಾಡಿನಲ್ಲಿ ಅಗಾಧ ವೈವಿಧ್ಯವಿದೆ. ಈ ಮಾತು ಮನಗಾಣಲು ಸಾಹಿತಿ ಎಚ್.ಎ.ಪುರುಷೋತ್ತಮ ರಾವ್ ಅವರ ಹೊಸ ಪುಸ್ತಕ "ಪೆದ್ದನ್ನನ ಇಕಾಲಜಿ ಮತ್ತು ಪರಿಸರ ಲೇಖನಗಳು" ಓದಬೇಕು. ಕೋಲಾರ ಮತ್ತು ಶೃಂಗೇರಿ ಭಾಗದ ಪರಿಸರ, ಗ್ರಾಮೀಣ ಬದುಕಿಗೆ ಈ ಲೇಖನಗಳು ಕನ್ನಡಿ ಹಿಡಿಯುತ್ತವೆ.
Book Review: ಜನರು ಇಷ್ಟಪಡದ, ತಲೆನೋವು ಎಂದುಕೊಳ್ಳುವ ಇಲಾಖೆಗಳಲ್ಲಿ ಅರಣ್ಯ ಇಲಾಖೆ ಮುಂಚೂಣಿಯಲ್ಲಿಯೇ ಇರುತ್ತದೆ. ನಗರ ಪ್ರದೇಶದಲ್ಲಿ ಈ ಇಲಾಖೆಯ ಅಸ್ತಿತ್ವವೇ ಬಹುತೇಕರಿಗೆ ಗೊತ್ತಿರುವುದಿಲ್ಲ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಹಾಗಲ್ಲ. "ಎಲ್ಲದಕ್ಕೂ ಇವರದ್ದೊಂದು ತಕರಾರು" ಎಂದು ಜನಸಾಮಾನ್ಯರಿಂದ ಜನಪ್ರತಿನಿಧಿಗಳವರೆಗೂ ಎಲ್ಲರೂ ಅರಣ್ಯ ಇಲಾಖೆಯ ಬಗ್ಗೆ ಹರಿಹಾಯುವವರೇ ಆಗಿರುತ್ತಾರೆ. ಕೆಲ ಸಿಬ್ಬಂದಿ, ಅಧಿಕಾರಿಗಳ ವರ್ತನೆಯೂ ಹಾಗೆಯೇ ಇರುತ್ತದೆ ಎನ್ನುವುದು ನಿಜ. ಆದರೆ ಅರಣ್ಯ ಇಲಾಖೆಯು ಜನರ ಪರವಾಗಿ, ಜನರ ಒಳಿತಿಗಾಗಿ ಕೆಲಸ ಮಾಡಿದ ಉದಾಹರಣೆಗಳೇ ಇಲ್ಲವೇ? ಕರ್ನಾಟಕದಲ್ಲಿ ಅರಣ್ಯದ ಉಳಿವಿಗೆ, ಪರಿಸರ ಸಂರಕ್ಷಣೆಗೆ ಈ ಇಲಾಖೆಯ ಕೊಡುಗೆ ಏನು? ಅಸಲಿಗೆ ಅರಣ್ಯ ಇಲಾಖೆ ಎನ್ನುವುದೇ ಇಲ್ಲದಿದ್ದರೆ ನಾಡು ಹೇಗಿರುತ್ತಿತ್ತು? ಇಂಥ ಹಲವು ಪ್ರಶ್ನೆಗಳಿಗೆ ಎಚ್.ಎ.ಪುರುಷೋತ್ತಮ ರಾವ್ ಅವರ "ಪೆದ್ದನ್ನನ ಇಕಾಲಜಿ ಮತ್ತು ಪರಿಸರ ಲೇಖನಗಳು' ಪುಸ್ತಕ ಸಶಕ್ತ ಉತ್ತರ ಕೊಡುತ್ತದೆ. ಉತ್ತರ ಅಂದರೆ ಹೊಗಳಿಕೆಯಷ್ಟೇ ಅಲ್ಲ; ಇಲಾಖೆಯ ಕಾರ್ಯವೈಖರಿ ಕುರಿತು ವಿಮರ್ಶೆ, ಟೀಕೆಗಳೂ ಇವೆ ಅನ್ನಿ.
ಬಾಯಾರಿದ ನಾಡು ಕೋಲಾರದ ಜೊತೆಗೆ ಜಲ ಸಮೃದ್ಧಿಯ ಶೃಂಗೇರಿಯ ಪರಿಸರ ಮತ್ತು ಬದುಕನ್ನು ಈ ಪ್ರಬಂಧಗಳು ಅಕ್ಷರ ರೂಪದಲ್ಲಿ ಹಿಡಿದಿಟ್ಟಿವೆ. ಲೇಖಕರು ಈ ಪುಸ್ತಕಕ್ಕೆ ಹೆಸರಿಡುವಾಗ "ಲೇಖನಗಳು" ಎಂದು ತುಸು ಗಾಂಭೀರ್ಯ ತಂದುಕೊಡುವ ಪ್ರಯತ್ನ ಮಾಡಿದ್ದಾರಾದರೂ, ಬಹುತೇಕ ಲೇಖನಗಳು ಲೇಖಕರ ಸ್ವಭಾವದಂತೆಯೇ ಹಾಸ್ಯದ ಲೇಪ ಪಡೆದು "ಪ್ರಬಂಧ"ಗಳ ಸ್ವರೂಪದಲ್ಲಿ ಜೀವ ತುಂಬಿಕೊಂಡಿವೆ. ಒಟ್ಟು 20 ಲೇಖನಗಳ (ಪ್ರಬಂಧಗಳ) ಸಂಕಲನ ಇದು. ಹಿರಿಯ ಪತ್ರಕರ್ತ ನಾಗೇಶ ಹೆಗಡೆ ಅವರ ಮುನ್ನುಡಿ "ಕುರುಚಲು ಕಾಡಿನಲ್ಲಿ ಪರಿಸರ ಮೇಲೋಗರ" ಮತ್ತು ಹಿರಿಯ ಸಾಹಿತಿ ಸ ರಘುನಾಥ ಅವರ ಹಿನ್ನುಡಿ "ಪರಿಸರದ ಅನುಭವದ ಭಾವರಾಗಗಳು" ಈ ಪುಸ್ತಕದ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿವೆ.
ಅರಣ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ನಿವೃತ್ತರಾಗಿರುವ ಪುರುಷೋತ್ತಮ ರಾವ್ ಅವರು ಸ್ವಭಾವತಃ ಪರಿಸರ ಪ್ರಿಯರು. ವಿಜ್ಞಾನ ಬರಹ ಅವರ ನೆಚ್ಚಿನ ಹವ್ಯಾಸ. ಇದರ ಜೊತೆಗೆ ಅವರ ಬದುಕಿನ ಭಾಗವೇ ಆಗಿರುವ ಹಳ್ಳಿಗಳ ತಿರುಗಾಟ, ಗುಡ್ಡ-ಕಾಡುಗಳ ಅಲೆದಾಟ, ಓದು, ತಜ್ಞರ ಒಡನಾಟ... ಎಲ್ಲವೂ ಈ ಬರಹಗಳಿಗೆ ಜೀವಂತಿಕೆ ಕೊಟ್ಟಿವೆ. ಕರಡಿ, ನಾಯಿ, ಹಾವು, ಜೇನುನೊಣ, ಬೆಕ್ಕು, ಬಾವಲಿ, ಮುಳ್ಳುಹಂದಿ ಸೇರಿದಂತೆ ಪ್ರಕೃತಿಯಲ್ಲಿರುವ ಎಷ್ಟೋ ಪ್ರಾಣಿಗಳ ಬದುಕು-ಸ್ವಭಾವಗಳ ಪರಿಚಯವನ್ನೂ ಇಲ್ಲಿನ ಬರಹಗಳು ಮಾಡಿಸುತ್ತವೆ.
ಲೇ, ಮುಳ್ಳುಹಂದಿ ಕಣೋ ಅದು
ಹಲವು ಸಾಲುಗಳು ಜೀವಂತವಾಗಿ ಪಡಿಮೂಡಿವೆ. "ಬೆಟ್ಟಬಿಟ್ಟಿಳಿಯುತ್ತಾ" ಪ್ರಬಂಧದಲ್ಲಿ ಬರುವ ಅಂಡಿನ ಕೆಳಗೆ ಕಲ್ಲಿಟ್ಟುಕೊಂಡು ಬಂಡೆಯಿಂದ ಜಾರುವ ಪ್ರಸಂಗ, ಮುಳ್ಳುಹಂದಿ ಎದುರಾಗುವ ಪ್ರಸಂಗಗಳನ್ನು ಉದಾಹರಣೆಯಾಗಿ ಕೊಡಬಹುದು. ಮುಳ್ಳುಹಂದಿ ಮುಖಾಮುಖಿಯ ಬಗ್ಗೆ ಲೇಖಕರು ತನ್ನ ಗೈಡ್ ಸೀನಪ್ಪನಿಗೆ ವಿವರಿಸಿದಾಗ ಆತ, "“ಲೇ ಅದು ಮುಳ್ಳುಹಂದಿ ಕಣೋ. ಅದರ ಮುಳ್ಳುಗಳೇನಾದರೂ ನಿನಗೆ ಚುಕ್ಕಿಕೊಂಡಿದ್ದರೆ ನಿನ್ನ ಕಥೆ ಇಲ್ಲೇ ಮುಗಿದು ಹೋಗುತ್ತಿತ್ತು” ಎಂದು ಎಚ್ಚರಿಸುತ್ತಾನೆ. ಈ ಪ್ರಬಂಧವು ಇಷ್ಟಕ್ಕೇ ಸೀಮಿತವಾಗುವುದಿಲ್ಲ. ಮುಳ್ಳುಹಂದಿಗಳ ಪಾರಿಸರಿಕ ಮಹತ್ವ, ಜೀವನಕ್ರಮದ ಇಣುಕುನೋಟವನ್ನೂ ನೀಡುತ್ತದೆ.
ವಿಷದ ಗಾಳಿಗೆ ಕಂಗಾಲಾದ ಕೆಜಿಎಫ್
ಕೆಜಿಎಫ್ ನಗರ ವಾಸಿಗಳ ಇಂದಿನ ಬದುಕಿನ ಕಷ್ಟಗಳಿಗೆ ಕನ್ನಡಿ ಹಿಡಿಯುವ ಬರಹ "ನೆಲದಾಳದ ಚಿನ್ನ ಮೇಲೆಕ್ಕೆ; ಅತಂತ್ರರ ಬದುಕು ತಳಕ್ಕೆ". ಗಾಢ ವಿಷಾದ ತುಂಬಿರುವ ಈ ಬರಹದಲ್ಲಿ ಕೆಜಿಎಫ್‌ನ ಸಯನೈಡ್ ಗುಡ್ಡಗಳ ಅಪಾಯದೊಂದಿಗೆ ಪರಿಹಾರದ ಪ್ರಯತ್ನವೊಂದು ಯಶಸ್ವಿಯಾದ ಖುಷಿಯೂ ಇದೆ. ಆದರೆ ಅಷ್ಟೇ ಸಾಲದೆಂಬ ಕಾಳಜಿಯ ಎಚ್ಚರಿಕೆಯನ್ನೂ ಕೊಡುತ್ತದೆ.
ಮಕ್ಕಳ ಕ್ರಿಕೆಟ್ ಆಟದೊಂದಿಗೆ ಈ ಪ್ರಬಂಧ ಆರಂಭವಾಗುತ್ತದೆ. "ನೆಟ್ಟ ವಿಕೆಟ್‌ಗಳು ತುಸು ಹೊತ್ತಿಗೆ ಯಾರೂ ತಳ್ಳದಿದ್ದರೂ ತಾವಾಗಿಯೇ ಉರುಳಿಬೀಳುತ್ತಿದ್ದವು. ಎಸೆದ ಚೆಂಡು ಕೂಡ ಸ್ವಲ್ಪ ಹೊತ್ತಿನಲ್ಲೇ ನೆಲದ ಮೇಲೆ ಸರಾಗವಾಗಿ ಉರುಳದೆ ಅಲ್ಲಲ್ಲಿ ನಿಂತುಬಿಡುತ್ತಿತ್ತು. ಇದು ಉಸುಕಿನ ದಿಬ್ಬವೂ ಅಲ್ಲ; ಮರಳುಗಾಡೂ ಅಲ್ಲ. ಆದರೂ ಈ ಮಣ್ಣು ವಿಕೆಟ್‌ಗಳನ್ನು ಹತ್ತಿಪ್ಪತ್ತು ನಿಮಿಷಗಳ ಅವಧಿಗೂ ಭದ್ರವಾಗಿ ಹಿಡಿದಿಡಲಾಗದಷ್ಟು ಅಸಮರ್ಥವಾಗಿತ್ತು. ಗಾಳಿ ಬೀಸಿತೆನ್ನಿ, ಇಡೀ ಆಟದ ಬಯಲು ಧೂಳಿನಿಂದ ತುಂಬಿ ಅದು ಅಡಗುವವರೆಗೂ ಆಟ ಬಂದ್ ಆಗುತ್ತಿತ್ತು. ಇದಕ್ಕೆಲ್ಲಾ ಕಾರಣವಾಗಿದ್ದು ಆ ಪಕ್ಕದ ಗುಡ್ಡ. ಅಲ್ಲಿಂದ ಗಾಳಿಯಲ್ಲಿ ತೇಲಿ ಬಂದ ದೂಳು. ಇದು ಮಣ್ಣಿನ ಮೇಲೆ ಭದ್ರವಾಗಿ ಕೂತು ಮಕ್ಕಳ ಆಟದ ನಿಯಮವನ್ನೇ ಬದಲಾಯಿಸುತ್ತಿತ್ತು. ಆದರೆ ದೂಳು ಆ ಮಕ್ಕಳ ಭವಿಷ್ಯದ ಮೇಲೂ ಮಾರಕ ಪ್ರಭಾವ ಬೀರುತ್ತಿತ್ತು ಎಂಬುದು ಅವರಿಗೆ ಗೊತ್ತಿರಲಿಲ್ಲ" ಎನ್ನುವ ಸಾಲುಗಳು ಕೆಜಿಎಫ್ ತಲುಪಿರುವ ಭೀಕರ ಪರಿಸ್ಥಿತಿಯನ್ನು ಸಶಕ್ತವಾಗಿ ವಿವರಿಸುತ್ತದೆ. ಚಿನ್ನದ ಗಣಿಯು ಹೇಗೆ ನಗರದ ಏಳ್ಗೆಗೆ ಕಾರಣವಾಯಿತೋ, ಆಗ ಚಿನ್ನ ಮೊಗೆದುಕೊಟ್ಟ ದೂಳು ಈಗ ನಗರದಲ್ಲಿರುವವರ ಶ್ವಾಸಕೋಶಗಳಿಗೆ ಧಕ್ಕೆ ತರುತ್ತಿರುವುದನ್ನು ಚಿತ್ರಿಸುತ್ತದೆ.
ಈ ಪ್ರಬಂಧ ಓದಿದರೆ, ಯಶ್ ಅಭಿನಯದ "ಕೆಜಿಎಫ್" ನೋಡಿ ನಗರದ ಬಗ್ಗೆ ಬೇರೆಯೇ ಭಾವನೆ ಕಟ್ಟಿಕೊಂಡಿದ್ದ ಓದುಗರು ತುಸು ಗಾಬರಿಯಾಗುವುದಂತೂ ನಿಜ. ಸರ್ಕಾರ, ಅರಣ್ಯ ಇಲಾಖೆ, ಸಹೃದಯ ಉದ್ಯಮಿ, ಪರಿಸರ ಹೋರಾಟಗಾರರು ಪರಸ್ಪರ ಜೊತೆಗೂಡಿ ಕೆಲಸ ಮಾಡಿದರೆ ಹೇಗೆ ಅದ್ಭುತ ಪರಿಣಾಮಗಳನ್ನು ಸಾಧಿಸಬಹುದು ಎನ್ನುವುದಕ್ಕೂ ಇದೇ ಪ್ರಬಂಧ ಉದಾಹರಣೆಯಾಗುತ್ತದೆ. ಪರಿಸರ ಪ್ರೇಮಿ (ದಿವಂಗತ) ಕೆ.ಎನ್.ತ್ಯಾಗರಾಜು, ಉದ್ಯಮಿ ನೀಲ್ ಜೋಸೆಫ್, (ಅಂದಿನ) ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸರಾವ್, ಜಿಲ್ಲಾಧಿಕಾರಿ ತ್ರಿಲೋಕ್ ಚಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ, ಸೆಷನ್ಸ್ ನ್ಯಾಯಾಧೀಶ ಜಗದೀಶ್ವರನ್ ಅವರ ಹೆಸರುಗಳು ಸಯನೈಡ್ ಗುಡ್ಡಗಳನ್ನು ಆವರಿಸಿಕೊಂಡ ಹಸಿರಿನ ಕಾರಣಕ್ಕೆ ಮನದಲ್ಲಿ ನೆಲೆ ನಿಲ್ಲುತ್ತವೆ.
ಕೊನೆಯ ಲೇಖನ “ಕಡೆಯುಸಿರಿನ ತನಕ ಪರಿಸರ ನಿಷ್ಠೆ ಮೆರೆದ ತ್ಯಾಗರಾಜು” ಒಬ್ಬ ಪರಿಸರ ಪ್ರೇಮಿಯ ಬದುಕನ್ನು ಪರಿಚಯಿಸುತ್ತದೆ. ಇಂಥವರು ಊರಿಗೊಬ್ಬರು ಇರಬೇಕು ಎನಿಸುತ್ತದೆ.
ಕೋಲಾರ ಜಿಲ್ಲೆಯ ಮತ್ತೊಂದು ಮುಖದ ಪರಿಚಯ
ಕೋಲಾರದ ಅಂತರಗಂಗೆ ಬೆಟ್ಟದ ಬಗ್ಗೆ ಇರುವ "ಕಡೆಗೂ ಹಸಿರಾದ ಕಲ್ಲುಗುಡ್ಡ" ಮತ್ತು "ಬೆಂಕಿಗೆ ಅಂತರಗಂಗೆಯಾದರೇನು; ಅಮೆಜಾನಾದರೇನು" ಪ್ರಬಂಧಗಳು ಸಹ ಬಯಲುಸೀಮೆಯ ಅರಣ್ಯ ಇಲಾಖೆ ಸಿಬ್ಬಂದಿಯ ಕಷ್ಟಕಾರ್ಪಣ್ಯಗಳೊಂದಿಗೆ ಅವರ ಬದ್ಧತೆಯ ಸೇವೆಯನ್ನು ಪರಿಚಯಿಸುತ್ತದೆ.
ಕೋಲಾರ ಜಿಲ್ಲೆ ಎಂದರೆ ಬರಗಾಲ, ಬೆಲೆ ಕುಸಿತದಿಂದ ಕಂಗಾಲಾದ ರೈತರು, ಹಾಲಿನ ಕ್ರಾಂತಿ ಮಾಡಿದ ಜಿಲ್ಲೆ ಎಂದಷ್ಟೇ ತಿಳಿದವರೇ ಮತ್ತೊಂದು ಮಗ್ಗುಲನ್ನು ಈ ಪುಸ್ತಕ ದರ್ಶನ ಮಾಡಿಸುತ್ತದೆ. ಬಯಲುಸೀಮೆಯ ಕಾಡು, ವನ್ಯಜೀವಿಗಳು, ಕಾಡುಪ್ರಾಣಿಗಳ ಸ್ವಭಾವ, ಪರಿಸರದೊಂದಿಗೆ ಹೊಂದಿಕೊಂಡು ಬದುಕುವ ಸಾಮಾನ್ಯ ಜನರ ಸಹಬಾಳ್ವೆಯ ಮನಃಸ್ಥಿತಿ, ಪರಿಸರದ ಮಹತ್ವದ ಬಗ್ಗೆ ವೈಶಿಷ್ಟ್ಯಪೂರ್ಣ ಇಣುಕುನೋಟ ಇಲ್ಲಿದೆ. ಕರ್ನಾಟಕದ ಪರಿಸರದ ಬಗ್ಗೆ ತಿಳಿಯಲು ಬಯಸುವವರು, ಕೋಲಾರ ಜಿಲ್ಲೆಯ ಆಂತರ್ಯ ಅರಿಯುವ ಆಸೆಯಿರುವವರು ಓದಲೇಬೇಕಾದ ಪುಸ್ತಕ ಇದು. ಸಹಜ ಭಾಷೆ, ಸರಳ ಪದಗಳು ಮತ್ತು ಆಕರ್ಷಕ ನಿರೂಪಣೆಯೂ ಗಮನ ಸೆಳೆಯುತ್ತವೆ. ಪಿ ಚಂದ್ರಪ್ರಕಾಶ್ ಅವರ ಆಕರ್ಷಕ ಚಿತ್ರಗಳು ಪುಸ್ತಕ ಮೌಲ್ಯವನ್ನು ಹೆಚ್ಚಿಸಿವೆ.
(ಬರಹ: ಡಿ.ಎಂ.ಘನಶ್ಯಾಮ)
ಪುಸ್ತಕದ ವಿವರ
ಪುಸ್ತಕದ ಹೆಸರು: ಪೆದ್ದನ್ನನ ಇಕಾಲಜಿ ಮತ್ತು ಇತರ ಪರಿಸರ ಲೇಖನಗಳು, ಲೇಖಕ: ಎಚ್.ಎ.ಪುರುಷೋತ್ತಮ ರಾವ್, ಪುಟಗಳು: 180, ಬೆಲೆ: 200 ರೂಪಾಯಿ, ಪ್ರಕಾಶಕರು: ನಿವೇದಿತಾ ಪ್ರಕಾಶನ, ನಂ 3437, 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತ್ರಿ ನಗರ, ಬನಶಂಕರಿ 2ನೇ ಹಂತ, ಬೆಂಗಳೂರು 560 070, ಮೊಬೈಲ್: 94487 33323.
ಲೇಖಕರು ಪ್ರಕಾಶಕರ ಗಮನಕ್ಕೆ: ಪರಿಚಯಕ್ಕಾಗಿ ಪುಸ್ತಕಗಳನ್ನು ಕಳಿಸುವಂತಿದ್ದರೆ ನಮ್ಮನ್ನು ಸಂಪರ್ಕಿಸಿ. ಇಮೇಲ್: ht.kannada@htdigital.in, ವಾಟ್ಸಾಪ್: 95991 30861