Laughing Gull: ಮನುಷ್ಯರಂತೆ ನಗುವ ಲಾಫಿಂಗ್ ಗುಲ್ ಹಕ್ಕಿ ಭಾರತಕ್ಕೆ ಮೊದಲ ಭೇಟಿ; ಕಾಸರಗೋಡು ಕಡಲ ತೀರದಲ್ಲಿ ಪತ್ತೆ
ಕನ್ನಡ ಸುದ್ದಿ  /  ಜೀವನಶೈಲಿ  /  Laughing Gull: ಮನುಷ್ಯರಂತೆ ನಗುವ ಲಾಫಿಂಗ್ ಗುಲ್ ಹಕ್ಕಿ ಭಾರತಕ್ಕೆ ಮೊದಲ ಭೇಟಿ; ಕಾಸರಗೋಡು ಕಡಲ ತೀರದಲ್ಲಿ ಪತ್ತೆ

Laughing Gull: ಮನುಷ್ಯರಂತೆ ನಗುವ ಲಾಫಿಂಗ್ ಗುಲ್ ಹಕ್ಕಿ ಭಾರತಕ್ಕೆ ಮೊದಲ ಭೇಟಿ; ಕಾಸರಗೋಡು ಕಡಲ ತೀರದಲ್ಲಿ ಪತ್ತೆ

Laughing Gull: ಮನುಷ್ಯರಂತೆ ನಗುವ ಲಾಫಿಂಗ್‌ ಗುಲ್‌ ಹಕ್ಕಿ ಮೊದಲ ಬಾರಿಗೆ ಭಾರತದಲ್ಲಿ ಕಾಣಿಸಿಕೊಂಡಿದೆ. ಕಾಸರಗೋಡು ಕಡಲತೀರದಲ್ಲಿ ಹಕ್ಕಿ ಕಾಣಿಸಿಕೊಂಡಿದ್ದು ಇಂಡಿಯನ್ ಬರ್ಡ್ಸ್ ಜರ್ನಲ್ ನ ಸಂಪಾದಕೀಯ ಮಂಡಳಿ ಇದನ್ನು ಖಚಿತಪಡಿಸಿದೆ. (ವರದಿ: ಹರೀಶ ಮಾಂಬಾಡಿ, ಮಂಗಳೂರು)

ಕಾಸರಗೋಡು ಕಡಲತೀರದಲ್ಲಿ ಪತ್ತೆಯಾದ ಲಾಫಿಂಗ್‌ ಗುಲ್‌ ಹಕ್ಕಿ
ಕಾಸರಗೋಡು ಕಡಲತೀರದಲ್ಲಿ ಪತ್ತೆಯಾದ ಲಾಫಿಂಗ್‌ ಗುಲ್‌ ಹಕ್ಕಿ

ಮಂಗಳೂರು: ಅಮೆರಿಕದ ವಲಸೆ ಹಕ್ಕಿ ಲಾಫಿಕ್ ಗುಲ್, ಭಾರತಕ್ಕೆ ಮೊದಲ ಭೇಟಿ ನೀಡಿದೆ. ಅದೂ ಕಾಸರಗೋಡಿನ ಕಡಲ ತೀರಕ್ಕೆ. ಕಾಸರಗೋಡು ಸಮೀಪ ಚಿತ್ತಾರಿ ಎಂಬಲ್ಲಿ ಕಡಲತೀರದಲ್ಲಿ ಈ ಹಕ್ಕಿಯನ್ನು ಸ್ಥಳೀಯರು ಪತ್ತೆ ಹಚ್ಚಿದ್ದಾರೆ. ಇದು ಉತ್ತರ ಅಮೆರಿಕದಿಂದ ಹತ್ತು ಸಾವಿರ ಕಿಲೋಮೀಟರ್‌ ದೂರ ಕ್ರಮಿಸಿದ್ದು ವಿಶೇಷ.

ಪಕ್ಷಿಗಳ ಕುರಿತು ವೈಜ್ಞಾನಿಕ ಮಾಹಿತಿಯನ್ನು ಸಂಗ್ರಹಿಸುವ ಆಪ್‌ನಲ್ಲಿ ಮಾಹಿತಿ ಬಹಿರಂಗ

ಪಕ್ಷಿಗಳ ಕುರಿತು ವೈಜ್ಞಾನಿಕ ಮಾಹಿತಿಯನ್ನು ಸಂಗ್ರಹಿಸುವ ಆಪ್ ಒಂದರಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ. ಇಂಡಿಯನ್ ಬರ್ಡ್ಸ್ ಜರ್ನಲ್ ನ ಸಂಪಾದಕೀಯ ಮಂಡಳಿ ಇದನ್ನು ಖಚಿತಪಡಿಸಿದೆ. ಸಿ. ಶ್ರೀಕಾಂತ್ ಎಂಬ ಶಾಲಾ ಶಿಕ್ಷಕರೋರ್ವರು ಈ ಹಕ್ಕಿಯನ್ನು ಕಂಡು ಅದರ ಚಿತ್ರ ಸೆರೆ ಹಿಡಿದಿದ್ದಾರೆ. ಅವರು ಇಂಡಿಯನ್ ಬರ್ಡ್ಸ್ ಜರ್ನಲ್‌ಗೆ ಮಾಹಿತಿ ನೀಡಿದ್ದಾರೆ.

ಜೆ. ಪ್ರವೀಣ್ ಅವರು ಇಂಡಿಯನ್ ಬರ್ಡ್ಸ್ ಜರ್ನಲ್ ಆಫ್ ಸೌತ್ ಏಷ್ಯನ್ ಆರ್ನಿಥೋಲೊಜಿಯ ಮುಖ್ಯ ಸಂಪಾದಕರಾಗಿದ್ದು, ಅವರಿಗೆ ಶ್ರೀಕಾಂತ್ ಅವರು ಈ ವಿಚಾರವನ್ನು ತಿಳಿಸಿದ್ದಾರೆ. ಹಕ್ಕಿಗಳ ತಜ್ಞರಾದ ಜಿ.ಜಿನು, ಜಾನ್ ಗಾರೆಟ್, ಏಯ್ಡೆಂಟ್ ಕಿಲೆ, ಹಂಸ್ ಲಾರ್ಸನ್ ಅವರು ಇದು ಲಾಫಿಂಗ್ ಗುಲ್ ಎಂದು ಖಚಿತಪಡಿಸಿದ್ದಾರೆ. ಶ್ರೀಕಾಂತ್ ಅವರು ಹಕ್ಕಿಗಳ ವಿಷಯದಲ್ಲಿ ಪರಿಣತರೂ ಆಗಿದ್ದು, ಕಳೆದ 20 ವರ್ಷಗಳಿಂದ ಹವ್ಯಾಸಿಯಾಗಿ ಈ ಕೆಲಸ ಮಾಡುತ್ತಿದ್ದಾರೆ.

ಭಾರತದಲ್ಲೀಗ 1367 ಹಕ್ಕಿಗಳ ಪ್ರಬೇಧ

ಲಾಫಿಂಗ್‌ ಗುಲ್‌ ಹಕ್ಕಿ ಕಾಣಿಸಿಕೊಂಡ ಬಳಿಕ ಭಾರತದಲ್ಲಿ ಕಂಡು ಬಂದ ಹಕ್ಕಿಗಳ ಪ್ರಬೇಧಗಳ ಸಂಖ್ಯೆ 1367ಕ್ಕೆ ಏರಿಕೆಯಾಗಿದೆ. ಕಾಸರಗೋಡು ಜಿಲ್ಲೆಯೊಂದರಲ್ಲೇ 400 ಪ್ರಬೇಧಗಳನ್ನು ಪತ್ತೆ ಹಚ್ಚಲಾಗಿದ್ದು, ಇಡೀ ಕೇರಳ ರಾಜ್ಯದಲ್ಲಿ 554 ಪ್ರಬೇಧಗಳು ಕಂಡುಬಂದಿವೆ. ಕಾಸರಗೋಡು ಜಿಲ್ಲೆಯ ಕಡಲತೀರದ ಭಾಗ ಹಕ್ಕಿಗಳ ವಲಸೆಗೆ ಸುರಕ್ಷಿತವಾದ ಜಾಗವಾಗಿ ಮಾರ್ಪಟ್ಟಿದೆ. ಹಕ್ಕಿಗಳನ್ನು ಗಮನಿಸುವವರು, ಅಧ್ಯಯನ ಮಾಡುವವರು ಈ ಪ್ರದೇಶಕ್ಕೆ ಆಗಾಗ್ಗೆ ಭೇಟಿ ನೀಡುತ್ತಿರುತ್ತಾರೆ. ಕಳೆದ ವರ್ಷ ಇದೇ ಜಾಗದಲ್ಲಿ ಈಜಿಮ್ಟಿಯನ್ ವಲ್ಚರ್ ಕಂಡುಬಂದಿತ್ತು.

ಏನಿದು ಲಾಫಿಂಗ್ ಗುಲ್?

ಮಾನವನ ನಗುವನ್ನು ಅನುಕರಿಸುವ ವಿಶಿಷ್ಟವಾಗಿ ನಗುವಿನ ರೀತಿಯ ಕೂಗಿನ ಮೂಲಕ ಗುರುತಿಸಲ್ಪಡುವ ಹಕ್ಕಿ ಇದು. ಹೆಚ್ಚಾಗಿ ಕಡಲ ತೀರದಲ್ಲಿ ಕಂಡುಬರುತ್ತದೆ. ಉತ್ತರ ಅಮೆರಿಕ, ಕೆರಿಬಿಯನ್, ಉತ್ತರ, ದಕ್ಷಿಣ ಅಮೆರಿಕದ ಅಟ್ಲಾಂಟಿಕ್ ಕರಾವಳಿಯಲ್ಲಿ ಹೆಚ್ಚಾಗಿ ಕಾಣ ಸಿಗುತ್ತದೆ. ಉದ್ದ ರೆಕ್ಕೆ, ಕಾಲುಗಳನ್ನು ಹೊಂದಿರುವ ಇವುಗಳು ಹಾರುವುದು ಹಾಗೂ ನಡೆಯುವುದನ್ನು ನೋಡುವುದೇ ಸುಂದರ.

ವರದಿ: ಹರೀಶ ಮಾಂಬಾಡಿ, ಮಂಗಳೂರು

Whats_app_banner