ಛೇ, ಇದೆಂಥ ಎಂಡಿಂಗ್ ಮಧು; ಕನಸೇ ಕಾಡುಮಲ್ಲಿಗೆ ಓದಿದ ಎಷ್ಟೋ ಮಂದಿಯ ಉದ್ಗಾರವಿದು -ಪುಸ್ತಕ ಪರಿಚಯ
Kanase Kadumallige: ಗಟ್ಟಿ ಕಥೆಯೊಂದಿಗೆ ಶಿರಾ ಸೀಮೆಯ ದೇಸಿ ಭಾಷೆಯ ಸೊಗಡನ್ನು ಹಿಡಿದಿಡುವ ಕಾದಂಬರಿ 'ಕನಸೇ ಕಾಡುಮಲ್ಲಿಗೆ'. ಹರೆಯದ ಮನಸ್ಸುಗಳ ಒಳಮಾತುಗಳಿಗೆ ಕನ್ನಡಿ ಹಿಡಿಯುತ್ತಲೇ ಈ ಕೃತಿಯು ಓದುಗರನ್ನು ಆವರಿಸಿಕೊಳ್ಳುತ್ತದೆ. ಓದುವಾಗ ಜೀವ ತಳೆದ ಪಾತ್ರಗಳು ಕಣ್ಮರೆಯಾದಾಗ ತಡವರಿಸುವಂತಾಗುತ್ತದೆ. ಅದು ಮಧು ಅವರ ಕಥನ ಕಲೆಯ ಶಕ್ತಿ.
Book Review: "ಅಂತೂ ಇಂತೂ ಇಂದ್ರಾಗಾಂಧಿಯವರು ಮಹಾತ್ಮಗಾಂಧಿಯವರು ನಮ್ಮೂರಿಗೂ ಬಂದಂಗಾಯ್ತು. ಬಂದು ಕ್ರಿಯಾಕರ್ಮಗಳಲ್ಲಿ ಭಾಗಿಯಾಗಿ ಕಣ್ಣೀರಿಟ್ಟು ನಮ್ದನ್ನು ಮನೆಗೆ ಕರ್ಕೊಂಡೋದ್ರು ಎಂಬಲ್ಲಿಗೇ..." -ಇದು 'ಕನಸೇ ಕಾಡುಮಲ್ಲಿಗೆ' ಕಾದಂಬರಿಯ ಕೊನೆಯಿಂದ ಎರಡನೇ ಪ್ಯಾರಾ. ಅದೇ 'ಲಾಸ್ಟ್ ಬಟ್ ಒನ್' ಅಂತಾರಲ್ಲ ಅಂಥ ಪ್ಯಾರಾ. ಈ ಪ್ಯಾರಾ ಮುಗಿದ ತಕ್ಷಣ ಬರೋದು ಕಾದಂಬರಿಯ ಕೊನೆಯ ವಾಕ್ಯ, ಅದೊಂಥರಾ ಲೇಖಕ ಓದುಗರ ಹೃದಯಕ್ಕೇ ಇಳಿದು ಕೊಟ್ಟ ಪಂಚ್. ಅದನ್ನೇ ತುಸು ಸಾವರಿಸಿಕೊಂಡು ಪಂಚ್ ಲೈನ್ ಅಂದುಕೊಳ್ಳೋಣ.
ಕೊನೆಯ ಸಾಲು ಏನೆಂದು ನೀವೇ ಓದಿದಾಗ ಮಾತ್ರ "ಛೇ, ಇದೆಂಥ ಎಂಡಿಂಗ್ ಮಧು" ಅಂತ ಅಷ್ಟೊಂದು ಜನರಿಗೆ ಏಕೆ ಅನ್ನಿಸಿತು ಎನ್ನುವುದು ಅರ್ಥವಾಗುತ್ತೆ. ಅದರ ಜೊತೆಜೊತೆಗೆ ಇಡೀ ಕಾದಂಬರಿಯನ್ನು ಹಿಡಿದಿಟ್ಟಿರುವ ಕಥೆಯ ಬಂಧದ ಬಗ್ಗೆಯೂ ಮೆಚ್ಚುಗೆಯಾಗುತ್ತೆ. ಅಂದಹಾಗೆ ಒಂದು ವಿಷ್ಯ ಗೊತ್ತಿರ್ಲಿ, ಲೇಖನದ ಆರಂಭದಲ್ಲಿರುವ, ಈ ಕಾದಂಬರಿಯಲ್ಲಿರುವ ಇಂದಿರಾ ಗಾಂಧಿ ಮತ್ತು ಮಹಾತ್ಮಾ ಗಾಂಧಿ ಯಾರು ಅಂತ ಗೊತ್ತಾದ್ರೆ ಹೊಟ್ಟೆಹುಣ್ಣಾಗುವಷ್ಟು ನಗ್ತೀರಿ ಮತ್ತೆ.
“ನಾನು ಸಣ್ಣೋನಿದ್ದಾಗ ಲವ್ ಮಾಡಿದ್ದೆ ಅಂದ್ರೆ ನಿಮಗೆಲ್ಲ ಅಶ್ಚರ್ಯವಾಗಬಹುದು. ನಂಗೆ ಆ ಇಮೇಜೇ ಸೂಟ್ ಆಗ್ತಿರಲಿಲ್ಲ, ಈಗ್ಲು ಇಲ್ಲ ಬಿಡಿ. ಅದೇನಾಯ್ತಂದ್ರೆ-” "ಕನಸೇ ಕಾಡುಮಲ್ಲಿಗೆ" ಆರಂಭವಾಗುವುದು ಹೀಗೆ. ಜವಾಹರ್ ನವೋದಯ ವಸತಿ ಶಾಲೆಯಲ್ಲಿ ಓದುವ "ಹಾರ್ಮೋನಿಯಂ" (ಹಾರ್ಮೋನ್) ಏರುಪೇರಾಗುವ ವಯಸ್ಸಿನ ಹುಡುಗ-ಹುಡುಗಿಯರನ್ನು ಕೇಂದ್ರವಾಗಿರಿಸಿಕೊಂಡ ಕಥೆ ಇದು. ಕಾದಂಬರಿಗೆ ನಾಯಕ, ನಾಯಕಿ ಇದ್ದಾರೆ. ಅವರ ಬದುಕಿನ ರೀತಿಯೊಂದಿಗೆ ಹುಚ್ಚು ಮನಸ್ಸಿನ ಒಳಹೊರಗನ್ನು ಬಿಚ್ಚಿಡುವ ಪ್ರಯತ್ನದಲ್ಲಿ ದೊಡ್ಡವರಿಗೆ ಅರ್ಥವೇ ಆಗದ ಹರೆಯದ ಎಷ್ಟೋ ಮನಸ್ಸುಗಳು ತೆರೆದುಕೊಳ್ಳುತ್ತವೆ.
ಭಾಷೆಯ ಸೊಗಸು
ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಗ್ರಾಮೀಣ ಪರಿಸರದ ಭಾಷೆ ಈ ಕಾದಂಬರಿಯಲ್ಲಿ ಎದ್ದು ಕಾಣುವ ಅಂಶ. ಗಟ್ಟಿ ಕಥೆಯ ಜೊತೆಗೆ ಭಾಷೆಯ ಸೊಗಸಿನ ಕಾರಣಕ್ಕೂ ಓದುಗರ ಮೆಚ್ಚುಗೆಗೆ ಪಾತ್ರವಾದ ಕೃತಿ ಇದು. “ಮಾರ್ ಮಾರ್ನಿಂಗ್ ಬೇಗನೇ ಎಚ್ರ ಆಯ್ತು. ಆದ್ರೆ ಬೆಳ್ ಬೆಳಿಗೆ ಬೀಳೋ ಕಜ್ಜಾಯ ಸುಡ್ತಿರ್ತವೆ ಅಂತೇಳಿ ಚೂರು ತಣ್ಗಾಗ್ಲಿ ಅಂತ ಅಂಗೇ ಗುಬ್ರಾಕ್ಕೊಂಡು ಮಲ್ಕಂಡಿದ್ದೆ.” ಈ ಥರದ ಎಷ್ಟೋ ಸಾಲುಗಳು ಇಲ್ಲಿವೆ. ಇಂಗ್ಲಿಷ್, ಕನ್ನಡ, ದೇಸಿ, ಗ್ರಾಂಥಿಕ, ಹಳ್ಳಿ ಭಾಷೆ, ಅಶ್ಲೀಲ... ಇತ್ಯಾದಿ ಇತ್ಯಾದಿಯಾಗಿ ಹಣೆಪಟ್ಟಿ ಕಟ್ಟಲು ಆಗದ ಜೀವಂತ ಕನ್ನಡದಲ್ಲಿ ಕಥೆ ಮುನ್ನಡೆಯುತ್ತದೆ.
ಸ್ಯಾಂಪಲ್‌ಗೆ ಅಂತ ಒಂದು ಪ್ರಸಂಗದ ಪರಿಚಯ ಮಾಡಿಕೊಡ್ತೀನಿ. ಇವು ಕಾದಂಬರಿಯಲ್ಲಿ ಬಳಸಿರುವ ಯಥಾವತ್ತು ಪದಗಳೇ ಆದರೂ ಒಂದಿಷ್ಟು ಸಾಲುಗಳನ್ನು ಕೈಬಿಡಲಾಗಿದೆ. ಪ್ರಸಂಗ ಹೀಗಿದೆ ನೋಡಿ. ಇಷ್ಟದ ಹುಡುಗನ್ನ ನೋಡೋಕೆ ಹುಡುಗಿ ಬರ್ತಾಳೆ. ಬಂದವಳು ಗೋಡೆಯ ಕಡೆ ತಿರಿಕ್ಕಂಡು ಏನೋ ಬರೀತಾಳೆ. ಈ ಸಂದರ್ಭದಲ್ಲಿ ನಾಯಕನ ತಲ್ಲಣವನ್ನು ಕಾದಂಬರಿಕಾರ ಹಿಡಿದಿಡುವುದು ಹೀಗೆ...
"ಗೋಡೆ ಹತ್ರ ಹೋದೆ. ಹುಡುಕಿದೆ. ಅಲ್ಲೊಂದ್ಕಡೆ ತೆಳುವಾಗಿ ರೌಂಡ್ ಹಾಕಿತ್ತು. ಸರ್ಕಲೊಳಗೆ ಮುಟ್ ನೋಡಿದೆ. ಲೆಮನ್ ಗ್ರೀನ್ ಪೇಯಿಂಟಿನ ತೆಳು ಚಕ್ಕೆ ನೆಂದಿತ್ತು.
ತುಟಿಯಾಕಾರದಲ್ಲಿ.
ಟೇಕ್ ಎ ಡೀಪ್ ಬ್ರೀತ್.
ನಿಮಗೆ ಅರ್ಥ ಆಗತ್ತ ನಾ ಏನ್ ಹೇಳ್ತಿದಿನಿ ಅಂತ?
ನಿಮಗೆ ಅರ್ಥ ಆಗತ್ತ ಆಗ ನಂಗೆ ಹೆಂಗೆ ಅನಿಸ್ತಿತ್ತು ಅಂತ.
ಅರ್ಥ ಆಗತ್ತ ಅದನ್ನ ಹೇಳಕ್ಕೆ ಕನ್ನಡ ಕೈಕೊಡ್ತಿದೆ ಅಂತ.
ನಾ ನಿಧಾನಕ್ಕೆ ಗೋಡೆಗೆ ಬೆನ್ನು ಸವುರ್ತಾ ಕುಸಿದು ಕೂತೆ. ಎಲ್ರೂ ಊಟಕ್ಕೆ ಹೋಗೋವರೆಗೂ ಕಾದೆ. ಗೋಡೆ ಕಡೆ ತಿರುಗಿ, ಸರ್ಕಲೊಳಗೆ ತುಟಿಯೊತ್ತಿದೆ.
ನಿಮಗೊತ್ತ ಮೊದಲ ಸಲ ಕಿಸ್ ಅನುಭೂತಿ ಹೆಂಗಿರ್ತದೆ ಅಂತ. ಅದು ಏಕ್ದಂ ನೆತ್ತಿಗೇರ್ತದೆ".
ಶಿರಾ ಸೀಮೆ ರೈತರ ಬದುಕು
ಬರೀ ಇಷ್ಟಕ್ಕೇ ಸೀಮಿತವಾಗಿದ್ದರೆ ಈ ಕಾದಂಬರಿಗೆ ಹತ್ತರಲ್ಲಿ ಹನ್ನೊಂದನೆಯದ್ದಾಗಿ, ಒಂದಿಷ್ಟು ಪ್ರೇಮಿಗಳ ಭಾವನೆಗಳಿಗೆ ಅಕ್ಷರವಾಗುವ ಉದ್ದೇಶಕ್ಕಷ್ಟೇ ಸೀಮಿತವಾಗಿಬಿಡುತ್ತಿತ್ತು. ಆದರೆ ಇದರ ಜೊತೆಜೊತೆಗೆ ಶಿರಾ ಸೀಮೆಯ ರೈತರ ಕಷ್ಟಕ್ಕೆ, ಕಣ್ಣೀರಿಗೆ, ಹರಿದ ರಕ್ತಕ್ಕೂ ಇದರಲ್ಲಿನ ಅಕ್ಷರಗಳು ಜೀವ ಕೊಟ್ಟಿವೆ. ಹೀಗಾಗಿಯೇ "ಕನಸೇ ಕಾಡುಮಲ್ಲಿಗೆ" ಎತ್ತರದ ಕೃತಿ ಎನ್ನಿಸುವುದು.
ರೈತರ ಮನೆಯ ಬಗ್ಗೆ ಹೇಳುವಾಗ ಬರುವ ಸಾಲುಗಳನ್ನು ಒಮ್ಮೆ ನೋಡಿ. "… ವಯಸಿನ ಹುಡುಗರಿಗೆ ಮಳೆ ಬಂದ್ರೆ ಇಷ್ಟ, ಮಳೆ ನಿಂತ್ರೆ ಕಷ್ಟ. ಮಳೆ ನಿಂತ್ರ ಮಗ ಡಿಗ್ರೀನೆ ಮಾಡಿರಲಿ ಡಾಕ್ಟರೇ ಓದಿರ್ ಲಿ, ಬಗ್ಗಿಸ್ತಾರೆ. ಮಗ ಬಿಡಿ, ಪ್ರಧಾನಿ ಬಂದ್ರೂ ಅಷ್ಟೇ, ತಿಕಾ ಮುಚ್ಕಂಡು ಬಗ್ಗಪ ಅಂತಾರೆ. ಬೇಸಿಕಲಿ ಟಚ್ ಮಿ ನಾಟ್ ಜನರನ್ನ ಅವರು ರಂಜಿಸಲ್ಲ ನೋಡೋವರೆಗೂ ನೋಡಿ ರೈಟೇಳು ಅಂದ್ಬಿಡ್ತಾರೆ. ಅಪ್ಪಿ ತಪ್ಪಿ ಕೆಮರಾ ಇಡ್ಕೊಂಡು ಫೋಟೋಶೂಟಿಗಂತ ಆ ಕಡೆ ತಲೆ ಹಾಕೀರ ಜೋಕೆ".
ಒಂದೊಳ್ಳೆ ಲವ್‌ಸ್ಟೋರಿ, ರೈತರ ಬದುಕು, ಎಪಿಎಂಸಿ ಅವ್ಯವಹಾರಗಳು... ಹೀಗೆ ಕಣ್ಣರಳಿಸಿ ಜಗತ್ತು ನೋಡುತ್ತಾ ಇನ್ನೂ ಏನೇನೋ ಇದೆ, ಬದುಕು ಸಾಕಷ್ಟು ಇದೆ ಎಂದು ಒಲಿದ ಜೀವಗಳು ಖುಷಿಪಡುವಾಗಲೇ ಏನೇನೋ ಘಟಿಸಿ ಥಿಯೇಟರ್‌ನಲ್ಲಿ ಲೈಟ್ ಆನ್ ಆದಂತೆ ಆಗಿಬಿಡುತ್ತೆ. ಹೀಗಂದ್ರೆ ಗೊತ್ತಾಯ್ತಲ್ಲ, ಇನ್ನೂ ಸಿನಿಮಾ ಇದೆ ಅಂದ್ಕೊಳ್ತಾ ಇದ್ದ ಪ್ರೇಕ್ಷಕ ಸಾವರಿಸಿಕೊಳ್ಳುವ ಮೊದಲೇ ಸಿನಿಮಾ ಮುಗಿದುಹೋಗಿರತ್ತೆ. ಈ ಕಾದಂಬರಿಯೂ ಹೀಗೆಯೇ. ನಿಜ ಅಂದ್ರೆ, ಒಂದೊಳ್ಳೇ ಸಾಹಿತ್ಯ ಓದಿದ ಮೇಲೆ ಹೀಗೆಯೇ ಅನ್ನಿಸಬೇಕು ಅಲ್ವಾ? ಅದು ಬೆಳೆಯಬೇಕಾದ್ದು ನಮ್ಮ ಮನಸ್ಸುಗಳಲ್ಲಿ. "ಕನಸೇ ಕಾಡುಮಲ್ಲಿಗೆ" ಓದುಗರ ಮನಸ್ಸಿಗೂ ಕನಸುಗಳನ್ನು ದಾಟಿಸುವಲ್ಲಿ ಯಶಸ್ವಿಯಾಗಿದೆ.
ನೀವೂ ಈ ಪುಸ್ತಕ ಓದಿ, ಖಂಡಿತ ಹೈಸ್ಕೋಲ್ ಕಾಲಕ್ಕೆ ಜಾರ್ತೀರಿ. ನಿಮ್ಮವರಿಗೂ ಓದಿಸಿ, ಅವರೂ ನೆನಪುಗಳಲ್ಲಿ ಮುಳುಗೇಳ್ತಾರೆ. ಹಾಗಂತ ಎಲ್ಲೆಂದರಲ್ಲಿ ಓದುವಾಗ ಸಿಕ್ಕಾಪಟ್ಟೆ ನಗು ಬಂದು, ಸುತ್ತಮುತ್ತ ಇದ್ದವರು ನಿಮ್ಮನ್ನು ಒಂಥರಾ ನೋಡುವ ಅಪಾಯವೂ ಇದೆ ಎನ್ನುವುದು ಮರೆಯದಿರಿ. ಕೊನೆಕೊನೆಯ ಪುಟಗಳಲ್ಲಿ ಕಣ್ಣೀರು ಹರಿದರೆ ಅದು ಆನಂದಭಾಷ್ಪ ಅಲ್ಲ, ನಿಮ್ಮೊಳಗಿದ್ದ ಪ್ರೇಮಿಯ ಮಿಡಿತ ಎಂದುಕೊಳ್ಳಿ. ಹ್ಯಾಪಿ ರೀಡಿಂಗು.
(ಬರಹ: ಡಿ.ಎಂ.ಘನಶ್ಯಾಮ)
ಪುಸ್ತಕದ ವಿವರ
ಪುಸ್ತಕದ ಹೆಸರು: ಕನಸೇ ಕಾಡುಮಲ್ಲಿಗೆ, ಲೇಖಕ: ಮಧುಸೂದನ ವೈ.ಎನ್. , ಪುಟಗಳು: 256, ಬೆಲೆ: 300 ರೂಪಾಯಿ, ಪ್ರಕಾಶಕರು: ನೆಲಮುಗಿಲು ಪ್ರಕಾಶನ, ಬೆಂಗಳೂರು, ಸಂಪರ್ಕ ಸಂಖ್ಯೆ: 96207 96770.
ಲೇಖಕರು ಪ್ರಕಾಶಕರ ಗಮನಕ್ಕೆ: ಪರಿಚಯಕ್ಕಾಗಿ ಪುಸ್ತಕಗಳನ್ನು ಕಳಿಸುವಂತಿದ್ದರೆ ನಮ್ಮನ್ನು ಸಂಪರ್ಕಿಸಿ. ಇಮೇಲ್: ht.kannada@htdigital.in, ವಾಟ್ಸಾಪ್: 95991 30861
---
ವೈ.ಎನ್.ಮಧುಸೂದನ ಅವರ ಇತರ ಬರಹಗಳು
ಸಾಹಿತ್ಯ ಸಮ್ಮೇಳನಗಳಿಗೆ ಬೇರೊಂದು ಭಾಷೆಯ ಲೇಖಕರನ್ನೂ ಆಹ್ವಾನಿಸಿ, ಪುಸ್ತಕ ಮಾರುವವರಿಗೆ ಶುಲ್ಕ ಬೇಡ
ವಿಭಾಗ