logo
ಕನ್ನಡ ಸುದ್ದಿ  /  ಜೀವನಶೈಲಿ  /  ಗೃಹಸಾಲ ಪ್ರಿಪೇಮೆಂಟ್‌ ಮಾಡುವುದು ಸರಿಯಾದ ಆಯ್ಕೆಯೇ; ಅಂತಿಮ ನಿರ್ಧಾರಕ್ಕೂ ಮುನ್ನ ಈ ಲೆಕ್ಕಾಚಾರದ ಮೇಲೆ ಕಣ್ಣಾಡಿಸಿ

ಗೃಹಸಾಲ ಪ್ರಿಪೇಮೆಂಟ್‌ ಮಾಡುವುದು ಸರಿಯಾದ ಆಯ್ಕೆಯೇ; ಅಂತಿಮ ನಿರ್ಧಾರಕ್ಕೂ ಮುನ್ನ ಈ ಲೆಕ್ಕಾಚಾರದ ಮೇಲೆ ಕಣ್ಣಾಡಿಸಿ

Jayaraj HT Kannada

Aug 21, 2024 09:20 PM IST

google News

ಗೃಹಸಾಲ ಪ್ರಿಪೇಮೆಂಟ್‌ ಮಾಡುವುದು ಸರಿಯಾದ ಆಯ್ಕೆಯೇ; ಈ ಲೆಕ್ಕಾಚಾರದ ಮೇಲೆ ಕಣ್ಣಾಡಿಸಿ

    • ಹೋಮ್ ಲೋನ್ ಮರುಪಾವತಿ ವಿಷಯ ಬಂದಾಗ, ಪೂರ್ವಪಾವತಿ ಮಾಡುವುದರಿಂದ ಲಾಭವಿದೆಯಾ ಅಥವಾ ನಷ್ಟವಾಗುತ್ತಾ ಎಂಬುದು ಹಲವರ ಗೊಂದಲ. ಪ್ರಿಪೇಮೆಂಟ್‌ ಮಾಡುವ ಮೂಲಕ ಒಟ್ಟು ಬಡ್ಡಿ ಮತ್ತು ಸಾಲದ ಅವಧಿ ಕಡಿಮೆಯಾಗುವುದು ಸತ್ಯ. ಮುಂಚಿತವಾಗಿ ರಿಪೇಮೆಂಟ್‌ ಮಾಡಿದಂತೆಲ್ಲಾ ನಿಮ್ಮ ಉಳಿತಾಯ ಹೆಚ್ಚಾಗುತ್ತದೆ.
ಗೃಹಸಾಲ ಪ್ರಿಪೇಮೆಂಟ್‌ ಮಾಡುವುದು ಸರಿಯಾದ ಆಯ್ಕೆಯೇ; ಈ ಲೆಕ್ಕಾಚಾರದ ಮೇಲೆ ಕಣ್ಣಾಡಿಸಿ
ಗೃಹಸಾಲ ಪ್ರಿಪೇಮೆಂಟ್‌ ಮಾಡುವುದು ಸರಿಯಾದ ಆಯ್ಕೆಯೇ; ಈ ಲೆಕ್ಕಾಚಾರದ ಮೇಲೆ ಕಣ್ಣಾಡಿಸಿ

ಕನಸಿನ ಮನೆ ಕಟ್ಟಲು ಗೃಹಸಾಲ ಮಾಡುವವರು ಹಲವರು. ಒಮ್ಮೆ ಮಾಡಿದ ಸಾಲವನ್ನು ಬೇಗನೆ ತೀರಿಸಿ ಸಾಲಮುಕ್ತರಾಗಿಬಿಡಬೇಕು ಎನ್ನುವ ಆಸೆ ಹೆಚ್ಚಿನವರಿಗೆ ಇರುತ್ತದೆ. ಈ ಹೋಮ್ ಲೋನ್ ಅನ್ನು ನಿಗದಿತ ಅವಧಿಗೂ ಮುನ್ನ ಪಾವತಿ ಮಾಡುವುದು (ಪೂರ್ವಪಾವತಿ ಅಥವಾ ಪ್ರಿಪೇಮೆಂಟ್)‌ ಸೂಕ್ಷ್ಮ ವಿಷಯ. ಬಹುತೇಕರು ಬೇಗನೆ ಸಾಲ ಮುಕ್ತರಾಗಲು ಬಯಸುತ್ತಾರೆ. ಹೀಗಾಗಿ ಪ್ರಿಪೇಮೆಂಟ್‌ ನಿರ್ಧಾರಕ್ಕೆ ಬರುತ್ತಾರೆ. ಆದರೆ ತೆರಿಗೆ ಪ್ರಯೋಜನ (ಹಳೆಯ ತೆರಿಗೆ ವಿಧಾನ) ದೃಷ್ಟಿಯಿಂದ ಗೃಹ ಸಾಲಗಳನ್ನು ಪ್ರಿಪೇಮೆಂಟ್‌ ಮಾಡದಿರಲು ಕೂಡಾ ಹಲವು ನಿರ್ಧರಿಸಬಹುದು. ಅದಿರಲಿ. ನೀವೇನಾದರೂ ದೊಡ್ಡ ಮೊತ್ತದ ಗೃಹ ಸಾಲವನ್ನು ಹೊಂದಿದ್ದು, ಅದರ ಹೊರೆಯನ್ನು ನೀವು ಅನುಭವಿಸಿದರೆ, ನಿಮ್ಮ ಸಾಲವನ್ನು ಪೂರ್ವಪಾವತಿ ಮಾಡುವ ಆಲೋಚನೆ ನಿಮ್ಮ ಮನಸ್ಸಿಗೆ ಬರಬಹುದು.

ಕೆಲವೊಂದು ಸಮಯಗಳಲ್ಲಿ ಸಾಲ ಪೂರ್ವಪಾವತಿ ಮಾಡುವುದು ನಿಮ್ಮ ಹೋಮ್ ಲೋನ್ ಮೇಲೆ ವಿಭಿನ್ನ ಪರಿಣಾಮ ಬೀರುತ್ತದೆ. ಇದು ದೊಡ್ಡ ಮೊತ್ತದ ಉಳಿತಾಯಕ್ಕೂ ಕಾರಣವಾಗಬಹುದು. ಅದು ಹೇಗೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಉದಾಹರಣೆ ಗಮನಿಸಿ.

ನೀವು 50 ಲಕ್ಷ ರೂ ಗೃಹ ಸಾಲವನ್ನು 25 ವರ್ಷಗಳ ಅವಧಿಗೆ 8.5 ಶೇ ಬಡ್ಡಿದರದಲ್ಲಿ ತೆಗೆದುಕೊಳ್ಳುತ್ತೀರಿ ಎಂದು ಅಂದಾಜಿಸೋಣ. ನಿಮ್ಮ ಮಾಸಿಕ ಇಎಂಐ 40,261 ರೂ ಆಗಿರುತ್ತದೆ. 25 ವರ್ಷಗಳ ಅವಧಿಯಲ್ಲಿ (ಯಾವುದೇ ಪೂರ್ವಪಾವತಿಗಳಿಲ್ಲದೆ ನಿಯಮಿತ ಇಎಂಐ ಎಂದು ಊಹಿಸಿಕೊಳ್ಳಿ), ನೀವು ಮೂಲ 50 ಲಕ್ಷ ರೂಪಾಯಿ ಅಸಲಿನ ಜೊತೆಗೆ ಹೆಚ್ಚುವರಿಯಾಗಿ 70ರಿಂದ 71 ಲಕ್ಷ ರೂಪಾಯಿವರೆಗೆ ಬಡ್ಡಿಯನ್ನು ಮರುಪಾವತಿಸಬೇಕಾಗುತ್ತದೆ. ಅಂದರೆ ಅಸಲಿಗಿಂತ ಬಡ್ಡಿಯೇ ಹೆಚ್ಚಾಗುತ್ತದೆ.

ಅಸಲು-ಬಡ್ಡಿಯ ಈ ಲೆಕ್ಕಾಚಾರ ನಿಮಗೆ ತಿಳಿದಿರಲಿ

ಮಾಸಿಕ ಇಎಂಐಗಳನ್ನು ಎರಡು ಭಾಗಗಳಾಗಿ ರಚಿಸಲಾಗಿದೆ. ಅದುವೇ ಅಸಲು ಮತ್ತು ಬಡ್ಡಿ. ಸಾಲದ ಅವಧಿಯುದ್ದಕ್ಕೂ ಈ ಎರಡರ ಅನುಪಾತವು ಬದಲಾಗುತ್ತದೆ. ಅಂದರೆ ಹೆಚ್ಚು ಹಣ ಬಡ್ಡಿಗೆ ಹೋಗುತ್ತದೆ. ಸಾಲದ ಆರಂಭಿಕ ವರ್ಷಗಳಲ್ಲಿ, ಮಾಸಿಕ ಇಎಂಐನ ಬಹುಭಾಗವು ಬಡ್ಡಿಗೆ ಹೋಗುತ್ತದೆ. ತೀರಾ ಸಣ್ಣ ಪಾಲು ಮಾತ್ರ ಅಸಲು ಮರುಪಾವತಿಗೆ ಹೋಗುತ್ತದೆ. ಆದರೆ ಪ್ರತಿ ವರ್ಷ (ಅಥವಾ ತಿಂಗಳು) ಕಳೆದಂತೆ, ಇಎಂಐನಲ್ಲಿ ಅಸಲಿನ ಪಾಲು ಹೆಚ್ಚುತ್ತಲೇ ಇರುತ್ತದೆ ಮತ್ತು ಬಡ್ಡಿಯ ಅಂಶ ಕಡಿಮೆಯಾಗುತ್ತಾ ಬರುತ್ತದೆ. ಈ ಆಸಕ್ತಿಯ ರಚನೆಯಡಿಯಲ್ಲಿ ನೀವು ಎಷ್ಟು ಮುಂಚಿತವಾಗಿ ಪೂರ್ವಪಾವತಿ ಮಾಡುತ್ತೀರೋ, ನಿಮ್ಮ ಸಾಲದ ಮೊತ್ತ ಅಷ್ಟು ಕಡಿಮೆಯಾಗುತ್ತದೆ.

ಉದಾಹರಣೆಗೆ; 50 ಲಕ್ಷ ರೂ ಗೃಹ ಸಾಲದ ಮೇಲೆ, ನೀವು 5 ಲಕ್ಷ ರೂ ಮೊತ್ತವನ್ನು ಏಕಕಾಲಕ್ಕೆ ಪೂರ್ವಪಾವತಿ ಮಾಡಲು ನಿರ್ಧರಿಸಿದಿರಿ ಎಂದಿಟ್ಟುಕೊಳ್ಳೋಣ. ಅದು ನಿಮ್ಮ ಒಟ್ಟು ಬಡ್ಡಿ ಹೊರೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನೋಡೋಣ.

ರೀಪೇಮೆಂಟ್‌ ಮಾಡದಿದ್ದರೆ ಏನಾಗುತ್ತದೆ?

  • ನೀವು ಯಾವುದೇ ಪೂರ್ವಪಾವತಿ ಮಾಡದಿದ್ದರೆ, ಪಾವತಿಸಬೇಕಾಗುವ ಒಟ್ಟು ಬಡ್ಡಿ 70ರಿಂದ 71 ಲಕ್ಷ ರೂ ಆಗುತ್ತದೆ. ಸಾಲದ ಅವಧಿಯು ಮೂಲ 25 ವರ್ಷಗಳಂತೆ ಹಾಗೆಯೇ ಇರುತ್ತದೆ. ಇಲ್ಲಿಬದಲಾವಣೆ ಆಗುವುದಿಲ್ಲ.
  • ಒಂದು ವೇಳೆ ನೀವು 2ನೇ ವರ್ಷದ ಆರಂಭದಲ್ಲಿ 5 ಲಕ್ಷ ರೂ ಪೂರ್ವಪಾವತಿ ಮಾಡಿದರೆ, ಪಾವತಿಸಬೇಕಾದ ಒಟ್ಟು ಬಡ್ಡಿ 46ರಿಂದ 47 ಲಕ್ಷ ರೂ.ಗೆ ಇಳಿಯುತ್ತದೆ. ಇದು 24-25 ಲಕ್ಷ ರೂಪಾಯಿವರೆಗೆ ದೊಡ್ಡ ಮೊತ್ತದ ಉಳಿತಾಯಕ್ಕೆ ನೆರವಾಗುತ್ತದೆ. ಸಾಲದ ಅವಧಿ ಕೂಡಾ 6 ವರ್ಷಗಳವರೆಗೆ ಕಡಿಮೆಯಾಗುತ್ತದೆ.
  • 5ನೇ ವರ್ಷದ ಆರಂಭದಲ್ಲಿ 5 ಲಕ್ಷ ರೂ ಪೂರ್ವಪಾವತಿ ಮಾಡಿದರೆ, ಪಾವತಿಸುವ ಒಟ್ಟು ಬಡ್ಡಿ 52-53 ಲಕ್ಷ ರೂಪಾಯಿಗೆ ಇಳಿಯುತ್ತದೆ. ಇದರಿಂದ 18-19 ಲಕ್ಷ ರೂಪಾಯಿ ಉಳಿತಾಯವಾಗಲಿದೆ. ಸಾಲದ ಅವಧಿ ಕೂಡಾ ಸುಮಾರು 4 ವರ್ಷಗಳಷ್ಟು ಕಡಿಮೆಯಾಗುತ್ತದೆ.
  • 10ನೇ ವರ್ಷದ ಆರಂಭದಲ್ಲಿ 5 ಲಕ್ಷ ರೂ. ಪ್ರಿಪೇಮೆಂಟ್‌ ಮಾಡಿದರೆ, ಪಾವತಿಸಿದ ಒಟ್ಟು ಬಡ್ಡಿ 59ರಿಂದ 60 ಲಕ್ಷ ರೂಪಾಯಿಗೆ ಇಳಿಯುತ್ತದೆ. ಇದು 11ರಿಂದ 12 ಲಕ್ಷ ರೂಪಾಯಿವರೆಗೆ ಉಳಿತಾಯಕ್ಕೆ ಕಾರಣವಾಗಲಿದೆ. ಇದೇ ವೇಳೆ ಸಾಲದ ಅವಧಿಯೂ ಸುಮಾರು 3 ವರ್ಷಗಳಷ್ಟು ಕಡಿಮೆಯಾಗುತ್ತದೆ.

ವೈಯಕ್ತಿಕ ಹಣಕಾಸು ಕುರಿತ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ | Closing Bell: ಸತತ 5ನೇ ಅವಧಿಗೆ ಏರಿಕೆ ಕಂಡ ನಿಫ್ಟಿ 50; ಐಟಿಸಿ, ಹಿಂದೂಸ್ತಾನ್ ಯೂನಿಲಿವರ್, ಟಿಸಿಎಸ್ ಷೇರುಗಳಿಗೆ ಬಂಪರ್

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ