ಯೂಟ್ಯೂಬ್‌ನಿಂದ ಹಣ ಗಳಿಸುವುದು ಹೇಗೆ; ಮಾನಿಟೈಸೇಷನ್ ಹಂತಗಳೇನು? ನಿಮ್ಮ ಚಾನಲ್ ಸಂಪಾದನೆ ಹೆಚ್ಚಿಸಲು ಇಲ್ಲಿವೆ ಅಗತ್ಯ ಸಲಹೆ
ಹೆಚ್ಚು ಹಣ ಸಂಪಾದಿಸಬೇಕೆಂಬುದು ಹಲವರ ಕನಸು. ಯೂಟ್ಯೂಬ್ ಚಾನೆಲ್ ಮೂಲಕ ಹಣ ಗಳಿಕೆ ಸಾಧ್ಯ ಎಂಬುದು ವರ್ಷಗಳ ಹಿಂದೆಯೇ ಹಲವರು ಕಂಡುಕೊಂಡಿದ್ದಾರೆ. ಯೂಟ್ಯೂಬ್ ಮಾನಿಟೈಸೇಷನ್ ಆಗಬೇಕೆಂದರೆ ಅದಕ್ಕೆ ಕೆಲವೊಂದು ನಿಯಮಗಳಿವೆ. ಅವುಗಳ ಬಗ್ಗೆ ತಿಳಿಯಿರಿ.

ಈಗೀಗ ಕಂಟೆಂಟ್ ಕ್ರಿಯೇಟರ್‌ಗಳು ಆಧುನಿಕ ತಂತ್ರಜ್ಞಾನ ಹಾಗೂ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ದೊಡ್ಡ ಪ್ರಮಾಣದಲ್ಲಿ ಸಂಪಾದನೆ ಹಾದಿ ಕಂಡುಕೊಂಡಿದ್ದಾರೆ. ಕಂಟೆಂಟ್ ಕ್ರೀಯೇಷನ್ ಅನ್ನು ವೃತ್ತಿಯಾಗಿಟ್ಟುಕೊಂಡು, ತಮ್ಮದೇ ಆದ ವಿಧಾನದಲ್ಲಿ ಹಣ ಗಳಿಕೆ ಹಾದಿ ಕಂಡುಕೊಂಡು ಯಶಸ್ಸು ಪಡೆದವರು ಹಲವರು. ಅದರಲ್ಲೂ ಯೂಟ್ಯೂಬ್ (YouTube) ಮೂಲಕ ವಿವಿಧ ಬಗೆಯ ಕಂಟೆಂಟ್‌ಗಳನ್ನು ಜನರಿಗೆ ಕೊಟ್ಟು ದೊಡ್ಡ ಮೊತ್ತದಲ್ಲಿ ಹಣ ಸಂಪಾದಿಸುವ ಕಂಟೆಂಟ್ ಕ್ರೀಯೇಟರ್ಸ್ ನಮ್ಮ ನಡುವೆ ಇದ್ದಾರೆ. ಆದಾಯ ಗಳಿಸಲು ಇದು ಒಂದು ಲಾಭದಾಯಕ ವೇದಿಕೆಯಾಗಿದೆ.
ಈಗಾಗಲೇ ವರ್ಷಗಳ ಹಿಂದೆಯೇ ಯೂಟ್ಯೂಬ್ ಚಾನೆಲ್ ನಡೆಸಿ ಈಗ ಸಾವಿರ, ಲಕ್ಷದಂತೆ ಹಣ ಸಂಪಾದಿಸುವವರಿದ್ದಾರೆ. ನಿಮಗೂ ಯೂಟ್ಯೂಬ್ ಮೂಲಕ ಬೇಗನೆ ಹಣ ಸಂಪಾದನೆ ಮಾಡುವ ಬಯಕೆ ಇರಬಹುದು. ಹಾಗಿದ್ದರೆ, ಯೂಟ್ಯೂಬ್‌ನಲ್ಲಿ ಹಣ ಗಳಿಸಲು (monetize) ಏನು ಮಾಡಬೇಕು? ಹಣಗಳಿಸಲು ಇರುವ ಹಂತಗಳೇನು? ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಮ್‌ಗೆ ಸೇರಲು ಅರ್ಹತೆಯ ಮಾನದಂಡಗಳೇನು ಎಂಬುದನ್ನು ನೋಡೋಣ.
ಯೂಟ್ಯೂಬ್ ಮಾನಿಟೈಸೇಷನ್ ಅಥವಾ ಹಣಗಳಿಸುವಿಕೆ ಎಂದರೇನು?
ಯೂಟ್ಯೂಬ್‌ನಲ್ಲೊ ಚಾನೆಲ್ ಆರಂಭಿಸಿ ವಿಡಿಯೋ ಅಪ್ಲೋಡ್ ಮಾಡತೊಡಗಿದ ತಕ್ಷಣ ಹಣ ಗಳಿಕೆಸಲು ಸಾಧ್ಯವಿಲ್ಲ. ಯೂಟ್ಯೂಬ್ ಸಂಸ್ಥೆಯು ಆಯಾ ಚಾನೆಲ್‌ನ ಕಂಟೆಂಟ್ ರಚನೆಕಾರರು ಜಾಹೀರಾತುಗಳು, ಚಾನಲ್ ಸದಸ್ಯತ್ವವನ್ನು ಪರಿಶೀಲಿಸಿ ಹಣ ಗಳಿಸಲು ಅನುಮತಿಸುತ್ತದೆ. ಈ ಮಾನಿಟೈಸ್ ವೈಶಿಷ್ಟ್ಯಗಳನ್ನು ಅನ್‌ಲಾಕ್ ಮಾಡಲು ಮೊದಲಿಗೆ ನೀವು ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಮ್‌ಗೆ(YPP) ಸೇರುವ ಅಗತ್ಯವಿರುತ್ತದೆ.
ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಮ್ ಅರ್ಹತಾ ಮಾನದಂಡಗಳು
- ಯೂಟ್ಯೂಬ್ ಚಾನಲ್‌ನಲ್ಲಿ ಹಣ ಸಂಪಾದನೆ ಮಾಡಬೇಕೆಂದರೆ, ಮೊದಲು ನೀವು ಯೂಟ್ಯೂಬ್ ರೂಪಿಸಿರುವ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು. ಅವುಗಳ ವಿವರ ಹೀಗಿದೆ.
- ಎಲ್ಲಾ ಮಾನಿಟೈಸೇಷನ್ ನೀತಿಗಳನ್ನು ಅನುಸರಿಸಿ: ಚಾನೆಲ್ ಹೊಂದಿರುವ ಎಲ್ಲರೂ ಯೂಟ್ಯೂಬ್‌ನ ಎಲ್ಲಾ ಪಾಲಿಸಿಗಳು ಮತ್ತು ಮಾರ್ಗಸೂಚಿಗಳಿಗೆ ಬದ್ಧವಾಗಿರುವುದು ಕಡ್ಡಾಯ.
- ಕಳೆದ 12 ತಿಂಗಳು (ಅಥವಾ ಒಂದು ವರ್ಷ) ಅವಧಿಯಲ್ಲಿ 4,000ಕ್ಕೂ ಹೆಚ್ಚು ಗಂಟೆಗಳ ಕಾಲ ಮಾನ್ಯವಾದ ಸಾರ್ವಜನಿಕ ವೀಕ್ಷಣೆ ಸಮಯವನ್ನು ಹೊಂದಿರಬೇಕು.
- 1,000 ಕ್ಕಿಂತ ಹೆಚ್ಚು ಚಂದಾದಾರರನ್ನು ಹೊಂದಿರಬೇಕು. ಅಂದರೆ ನಿಮ್ಮ ಚಾನಲ್ ಕನಿಷ್ಠ 1,000ಕ್ಕೂ ಹೆಚ್ಚು ಸಬ್ಸ್‌ಕ್ರೈಬರ್ ಹೊಂದಿರಬೇಕು.
- ಯೂಟ್ಯೂಬ್‌ಗೆ AdSense ಖಾತೆ ಲಿಂಕ್ ಮಾಡಬೇಕು. ಪೇಮೆಂಟ್ ಹಣ ಸ್ವೀಕರಿಸಲು ನಿಮ್ಮ ಚಾನಲ್‌ಗೆ ಖಾತೆಯನ್ನು ಲಿಂಕ್ ಮಾಡಿರಬೇಕು.
- ಈ ಎಲ್ಲಾ ಮಾನದಂಡಗಳನ್ನು ಪೂರೈಸಿದ ಮೇಲೆ ಮಾನಿಟೈಸೇಷನ್‌ಗೆ ಅಪ್ಲೈ ಮಾಡಬಹುದು.
ಹಣಗಳಿಕೆ ಅಥವಾ ಮಾನಿಟೈಸೇಷನ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?
ಹಂತ 1: ಟು ಸ್ಟೆಪ್ ವೆರಿಫಿಕೇಶನ್ ಸಕ್ರಿಯಗೊಳಿಸಿ. ಅಂದರೆ ನಿಮ್ಮ ಗೂಗಲ್ ಖಾತೆಯು 2 ಹಂತದ ಪರಿಶೀಲನೆಯನ್ನು ಸಕ್ರಿಯಗೊಳಿಸಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದು ನಿಮ್ಮ ಖಾತೆಯನ್ನು ರಕ್ಷಿಸುವ ಸಲುವಾಗಿ ಇರುವ ಈ ಸುರಕ್ಷತಾ ಕ್ರಮ.
ಹಂತ 2: ಯೂಟ್ಯೂಬ್‌ಗೆ ಸೈನ್ ಇನ್ ಮಾಡಿ, ಮಾನಿಟೈಸೇಷನ್ ಆಗಬೇಕಿರುವ ನಿಮ್ಮ ಯೂಟ್ಯೂಬ್ ಖಾತೆಗೆ ಲಾಗ್ ಇನ್ ಆಗಿ.
ಹಂತ 3: ಮೇಲಿನ ಬಲ ಮೂಲೆಯಲ್ಲಿ, ಅಂದರೆ ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿ. ಅಲ್ಲಿ 'YouTube Studio' ( ಯೂಟ್ಯೂಬ್ ಸ್ಟುಡಿಯೋ) ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 4: ಮಾನಿಟೈಸೇಷನ್‌ಗೆ ನ್ಯಾವಿಗೇಟ್ ಮಾಡಿ. ಎಡಗೈ ಸೈಡ್‌ಬಾರ್‌ನಲ್ಲಿ, 'ಮಾನಿಟೈಸೇಷನ್' ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಆಗ ಮಾನಿಟೈಸೇಷನ್ ಓವರ್‌ವ್ಯೂ ಪೇಜ್ ಓಪನ್ ಆಗುತ್ತದೆ.
ಹಂತ 5: ಪಾರ್ಟ್‌ನರ್ ಪ್ರೋಗ್ರಾಮ್ ನಿಯಮಗಳನ್ನು ಪರಿಶೀಲಿಸಿ. ಸ್ಟಾರ್ಟ್ ಮೇಲೆ ಕ್ಲಿಕ್ ಮಾಡಿ ಅಲ್ಲಿರುವ ನಿಯಮಗಳನ್ನು ಓದಿ. ನಿಮಗೆ ಅದು ಎಲ್ಲಾ ಒಪ್ಪಿಗೆಯಾದರೆ, ಆಕ್ಸೆಪ್ಟ್ ಮೇಲೆ ಕ್ಲಿಕ್ ಮಾಡಿ.
ಹಂತ 6: Google AdSenseಗೆ ಸೈನ್ ಅಪ್ ಮಾಡಿ. ನೀವು ಈಗಾಗಲೇ AdSense ಖಾತೆ ಹೊಂದಿಲ್ಲದಿದ್ದರೆ, ನೀವು ಕ್ರಿಯೇಟ್ ಮಾಡಬೇಕಾಗುತ್ತದೆ. ಅಲ್ಲದೆ ಅದನ್ನು ನಿಮ್ಮ ಯೂಟ್ಯೂಬ್ ಚಾನಲ್‌ಗೆ ಲಿಂಕ್ ಮಾಡಬೇಕಾಗುತ್ತದೆ. ಈ ಪ್ರಕ್ರಿಯೆ ಆರಂಭಿಸಲು ‘Google AdSense ಸೈನ್ ಅಪ್’ ಕಾರ್ಡ್‌ನಲ್ಲಿ ಸ್ಟಾರ್ಟ್ ಮೇಲೆ ಕ್ಲಿಕ್ ಮಾಡಿ.
ಹಂತ 7: ಮಾನಿಟೈಸೇಷನ್ ಆದ್ಯತೆಗಳನ್ನು ಸೆಟ್ ಮಾಡಿ. 'Set monetization preferences'ನಲ್ಲಿ ಸ್ಟಾರ್ಟ್ ಮೇಲೆ ಕ್ಲಿಕ್ ಮಾಡಿ. ಇಲ್ಲಿ, ನಿಮ್ಮ ಚಾನಲ್‌ನಲ್ಲಿ ನೀವು ಪ್ಲೇ ಆಗಲು ಬಯಸುವ ಜಾಹೀರಾತು ಪ್ರಕಾರಗಳನ್ನು ಆಯ್ಕೆ ಮಾಡಬಹುದು.
ಹಂತ 8: ಪರಿಶೀಲನೆಗಾಗಿ ಕಾಯಿರಿ
ಈ ಮೇಲಿನ ಹಂತಗಳನ್ನು ಪೂರ್ಣಗೊಳಿಸಿದ ನಂತರ, ನಿಮ್ಮ ಚಾನಲ್ ಯೂಟ್ಯೂಬ್‌ನ ಎಲ್ಲಾ ನೀತಿಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಅದನ್ನು ಸಂಸ್ಥೆ ಪರಿಶೀಲಿಸುತ್ತದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಕೆಲವು ದಿನಗಳಿಂದ ಹಿಡಿದು ವಾರಗಳೇ ಬೇಕಾಗಬಹುದು. ಒಮ್ಮೆ ಪೂರಣಗೊಂಡ ಬಳಿಕ ನಿಮಗೆ ಇಮೇಲ್ ಬರುತ್ತದೆ.
ಯೂಟ್ಯೂಬ್‌ನಲ್ಲಿ ಗಣ ಗಳಿಕೆ ಹೆಚ್ಚಿಸುವುದು ಹೇಗೆ
- ಉತ್ತಮ ಗುಣಮಟ್ಟದ ಕಂಟೆಂಟ್ ನೀವೇ ರಚಿಸಿ. ವೈರಲ್‌ಗಿಂತ ಒರಿಜಿನಲ್ ಕಂಟೆಂಟ್ ಅಪ್ಲೋಡ್ ಮಾಡಿ.
- ಜನರು ನಿಮ್ಮ ವಿಡಿಯೋ ಹುಡುಕಲು ಸುಲಭವಾಗುವಂತೆ ಸೂಕ್ತ ಶೀರ್ಷಿಕೆ, ವಿವರಣೆ ಮತ್ತು ಟ್ಯಾಗ್‌ಗಳಲ್ಲಿ ಸೂಕ್ತ ಕೀವರ್ಡ್‌ಗಳನ್ನು ಹಾಕಿ.
- ಪ್ರೇಕ್ಷಕರೊಂದಿಗೆ ಸಂಪರ್ಕದಲ್ಲಿರಿ. ನೋಡುಗರ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸುವ ಮೂಲಕ ನಿರಂತರ ಎಂಗೇಜ್ ಆಗಿರಿ.
- ನಿಮ್ಮ ಕಂಟೆಂಟ್ ವಿಧಕ್ಕೆ ಅನುಗುಣವಾಗಿ ಸೂಕ್ತ ಸಮಯದಲ್ಲಿ ಕಂಟೆಂಟ್ ಅಪ್ಲೋಡ್ ಮಾಡಿ.
- ನಿಮ್ಮ ವಿಡಿಯೋಗಳು ಯೂಟ್ಯೂಬ್ ನೀತಿಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಿ.
- ಯೂಟ್ಯೂಬ್ ಅನಾಲಿಟಿಕ್ಸ್ ಬಳಸಿ. ಗೂಗಲ್ ಅನಾಲಿಟಿಕ್ಸ್‌ನಂತೆಯೇ ಯೂಟ್ಯೂಬ್ ಅನಾಲಿಟಿಕ್ಸ್ ಮೇಲೆಯೂ ಕಣ್ಣಿಟ್ಟಿರಿ. ಅದಕ್ಕೆ ಅನುಗುಣವಾಗಿ ನಿಮ್ಮ ಕಂಟೆಂಟ್ ತಂತ್ರಗಳನ್ನು ರೂಪಿಸಿ.
ಇದನ್ನೂ ಓದಿ | ಟ್ರಕ್ ಓಡಿಸುತ್ತಲೇ ಯೂಟ್ಯೂಬ್ ಆರಂಭಿಸಿದ ಚಾಲಕ, 10 ಲಕ್ಷಕ್ಕೂ ಅಧಿಕ ಸಂಪಾದನೆ; ಇದರ ಮುಂದೆ ಸಂಬಳ ಜುಜುಬಿ
