Closing Bell: ಸತತ 5ನೇ ಅವಧಿಗೆ ಏರಿಕೆ ಕಂಡ ನಿಫ್ಟಿ 50; ಐಟಿಸಿ, ಹಿಂದೂಸ್ತಾನ್ ಯೂನಿಲಿವರ್, ಟಿಸಿಎಸ್ ಷೇರುಗಳಿಗೆ ಬಂಪರ್
ಭಾರತೀಯ ಷೇರು ಮಾರುಕಟ್ಟೆ ಸತತ ಎರಡನೇ ದಿನ ಹಸಿರು ಬಣ್ಣದೊಂದಿಗೆ ವಹಿವಾಟು ಮುಗಿಸಿದೆ. ಭಾರತೀಯ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ನಿಫ್ಟಿ 50ಯು ಇಂದು ಸತತ ಐದನೇ ಸೆಷನ್‌ಗೆ ಏರಿಕೆಯೊಂದಿಗೆ ದಿನವನ್ನು ಮುಗಿಸಿದೆ. ಇಂದು ಲಾಭ ಪಡೆದ ಷೇರುಗಳ ವಿವರ ಇಲ್ಲಿದೆ.
ಬೆಂಗಳೂರು: ಕಳೆದ ದಿನ(ಆಗಸ್ಟ್ 20) ದ ಅಂತ್ಯಕ್ಕೆ ಹಸಿರು ಬಣ್ಣದಲ್ಲಿ ವಹಿವಾಟು ಮುಗಿಸಿದ್ದ ಭಾರತೀಯ ಷೇರು ಮಾರುಕಟ್ಟೆ, ಆಗಸ್ಟ್ 21ರ ಬುಧವಾರವೂ ಏರುಗತಿಯಲ್ಲಿ ದಿನದ ವಹಿವಾಟು ಕೊನೆಗೊಳಿಸಿದೆ. ಸತತ ಐದನೇ ಸೆಷನ್‌ನಲ್ಲಿ ಏರಿಕೆ ದಿಕ್ಕಿನಲ್ಲೇ ಇರುವ ಮಾರುಕಟ್ಟೆ ಸಂವೇದಿ ಸೂಚ್ಯಂಕ ನಿಫ್ಟಿ 50ಯು 71 ಪಾಯಿಂಟ್ (ಶೇ 0.29) ಏರಿಕೆ ಕಂಡು 24,770.20ರಲ್ಲಿ ವಹಿವಾಟು ಮುಗಿಸಿದೆ. ಅತ್ತ ಸೆನ್ಸೆಕ್ಸ್ 102 ಪಾಯಿಂಟ್ (0.13) ಏರಿಕೆ ಕಂಡು 80,905.30ರಲ್ಲಿ ಬಂದು ನಿಂತಿದೆ.
ಐಟಿಸಿ, ಹಿಂದೂಸ್ತಾನ್ ಯೂನಿಲಿವರ್, ಟೈಟಾನ್ ಮತ್ತು ಟಿಸಿಎಸ್ ಸೇರಿದಂತೆ ದಿಗ್ಗಜ ಎಫ್ಎಂಸಿಜಿ ಮತ್ತು ಐಟಿ ಕಂಪನಿಗಳ ಷೇರುಗಳು ಭಾರಿ ಲಾಭ ಗಳಿಸುವುದರೊಂದಿಗೆ, ಭಾರತೀಯ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ನಿಫ್ಟಿ 50 ಸತತ ಐದನೇ ಅವಧಿಗೆ ಏರಿಕೆ ಕಂಡಿತು. ಇದು ಹೂಡಿಕೆದಾರರಲ್ಲಿ ಸಂತಸ ಹೆಚ್ಚಿಸಿದೆ.
ಇಂದು ನಿಫ್ಟಿಯಲ್ಲಿ ದಿವಿಸ್ ಲ್ಯಾಬ್ಸ್, ಟೈಟಾನ್ ಕಂಪನಿ, ಎಸ್‌ಬಿಐ ಲೈಫ್ ಇನ್ಶುರೆನ್ಸ್, ಎಚ್‌ಡಿಎಫ್‌ಸಿ ಲೈಫ್ ಮತ್ತು ಸಿಪ್ಲಾ ಶೇರುಗಳು ಭಾರಿ ಲಾಭ ಪಡೆದವು. ಇದೇ ವೇಳೆ ಟೆಕ್ ಮಹೀಂದ್ರ, ಅಲ್ಟ್ರಾಟೆಕ್ ಸಿಮೆಂಟ್, ಟಾಟಾ ಸ್ಟೀಲ್, ಪವರ್ ಗ್ರಿಡ್ ಕಾರ್ಪ್ ಮತ್ತು ಒಎನ್‌ಜಿಸಿ ನಷ್ಟ ಅನುಭವಿಸಿದವು.
ವಲಯವಾರು ಲಾಭ - ನಷ್ಟ ಹೇಗಿದೆ?
ವಲಯವಾರು ಮಾರುಕಟ್ಟೆ ಸ್ಥಿತಿಗತಿ ನೋಡುವುದಾದರೆ, ರಿಯಾಲ್ಟಿ ಸೂಚ್ಯಂಕ ಶೇ 1ರಷ್ಟು ಕುಸಿದಿದೆ. ಬ್ಯಾಂಕ್ ಸೂಚ್ಯಂಕ ಶೇ 0.3ರಷ್ಟು ಕಡಿಮೆಯಾಗಿದೆ. ಅತ್ತ ಎಫ್‌ಎಂಸಿಜಿ, ಹೆಲ್ತ್‌ಕೇರ್, ಮೆಟಲ್, ಟೆಲಿಕಾಂ ಮತ್ತು ಮೀಡಿಯಾ 0.5ನಿಂದ ಶೇ 1ರಷ್ಟು ಏರಿಕೆಯಾಗಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕವು ಶೇ 0.4ರಷ್ಟು ಏರಿಕೆ ಕಂಡರೆ, ಸ್ಮಾಲ್‌ಕ್ಯಾಪ್ ಸೂಚ್ಯಂಕವು ಸುಮಾರು ಶೇ 1 ರಷ್ಟು ಮೇಲುಗತಿ ಸಾಧಿಸಿದೆ.
ಯುಎಸ್ ಫೆಡರಲ್ ರಿಸರ್ವ್ ಸಿಸ್ಟಮ್ ಅಧ್ಯಕ್ಷ ಜೆರೋಮ್ ಪೊವೆಲ್ ಅವರು ಸೆಪ್ಟೆಂಬರ್‌ನಲ್ಲಿ ಆರಂಭವಾಗುವ ಬಹುನಿರೀಕ್ಷಿತ ದರ ಕಡಿತದ ಪಥದ ಬಗ್ಗೆ ಸುಳಿವು ನೀಡಲಿದ್ದಾರೆ. ಫೆಡರಲ್ ರಿಸರ್ವ್ ಸಿಸ್ಟಮ್ ಯುನೈಟೆಡ್ ಸ್ಟೇಟ್ಸ್‌ನ ಕೇಂದ್ರ ಬ್ಯಾಂಕಿಂಗ್ ವ್ಯವಸ್ಥೆಯಾಗಿದ್ದು, ಇದು ಜಾಗತಿಕ ಮಾರುಕಟ್ಟೆ ಮೇಲೂ ಪ್ರಭಾವ ಬೀರುತ್ತದೆ. ಈ ವರ್ಷ, ವಾರ್ಷಿಕ ಸಮ್ಮೇಳನವಾಗಿರುವ ಫೆಡರಲ್ ರಿಸರ್ವ್‌ನ ಜಾಕ್ಸನ್ ಹೋಲ್ ಎಕನಾಮಿಕ್ ಸಿಂಪೋಸಿಯಂ ಆಗಸ್ಟ್ 22ರಿಂದ 24ರವರೆಗೆ ನಡೆಯಲಿದೆ. ಶುಕ್ರವಾರ ನಡೆಯಲಿರುವ ಸಮ್ಮೇಳನದಲ್ಲಿ ಪೊವೆಲ್ ಮಾತನಾಡುವ ನಿರೀಕ್ಷೆಯಿದೆ. ಈ ನಡುವೆ ಭಾರತೀಯ ಮಾರುಕಟ್ಟೆಯು ಹಸಿರು ಬಣ್ಣದಲ್ಲಿ ವಹಿವಾಟು ಮುಗಿಸಿವೆ.
ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | Gold Rate Today: ವಾರದ ಬಳಿಕ ಅಲ್ಪ ಇಳಿಕೆ ಕಂಡ ಬಂಗಾರ ಬೆಲೆ; ಆಭರಣ ಖರೀದಿಗೆ ಸುದಿನ, ಏರುಗತಿಯಲ್ಲಿ ಬೆಳ್ಳಿ ದರ