ತೆರಿಗೆ ಉಳಿಸುವ ಎಫ್‌ಡಿಗಳು; ಈ ಬ್ಯಾಂಕ್‌ಗಳಲ್ಲಿ 5 ವರ್ಷದ ಅವಧಿ ಠೇವಣಿಗೆ ಶೇ 7 ಬಡ್ಡಿ ಸಿಗುತ್ತೆ, 10,000 ರೂ ಇಟ್ಟರೆ ಕೈಗೆ ಬರೋದೆಷ್ಟು
Oct 04, 2024 06:00 PM IST
ತೆರಿಗೆ ಉಳಿಸುವ ಎಫ್‌ಡಿಗಳು; ಈ ಬ್ಯಾಂಕ್‌ಗಳಲ್ಲಿ 5 ವರ್ಷದ ಅವಧಿ ಠೇವಣಿಗೆ ಶೇ 7 ಬಡ್ಡಿ ಸಿಗುತ್ತೆ
ತೆರಿಗೆ ಉಳಿಸುವ ಎಫ್‌ಡಿ ಅಥವಾ ತೆರಿಗೆ ಉಳಿತಾಯದ ಅವಧಿ ಠೇವಣಿಗಳನ್ನು ಗಮನಿಸುವುದಾದರೆ ಗರಿಷ್ಠ ಬಡ್ಡಿದರದ ಕಡೆಗೆ ಗ್ರಾಹಕರು ಒಲವು ತೋರುವುದು ಸಹಜ. ಇಲ್ಲಿ ಶೇಕಡ 7ಕ್ಕಿಂತ ಹೆಚ್ಚು ಬಡ್ಡಿದರ ಒದಗಿಸುವ ಎಫ್‌ಡಿಗಳ ವಿವರ ನೀಡಲಾಗಿದೆ. ಹೂಡಿಕೆ ಮೊತ್ತ ಎಷ್ಟು ಬೆಳೆದಿರುತ್ತೆ ಎಂಬ ಲೆಕ್ಕಾಚಾರವನ್ನೂ ಇಲ್ಲಿ ಕೊಡಲಾಗಿದೆ.
ನವದೆಹಲಿ: ತೆರಿಗೆ ವಿನಾಯಿತಿ ಪಡೆಯುವ ದೃಷ್ಟಿಯಿಂದ ಹೂಡಿಕೆ/ ಉಳಿತಾಯ ಮಾಡುವುದಾದರೆ ಆರ್ಥಿಕ ವರ್ಷದ ಕೊನೆಯ ತನಕ ಕಾಯವುದು ಸರಿಯಲ್ಲ. ಹೊಸ ಆರ್ಥಿಕ ವರ್ಷ ಶುರುವಾದ ಕೂಡಲೇ ಹಣಕಾಸು ಯೋಜನೆ ಮಾಡಿಕೊಂಡು ಅನುಷ್ಠಾನಗೊಳಿಸಬೇಕು ಎಂದೇ ಹಣಕಾಸು ಯೋಜಕರು ಅಥವಾ ಫೈನಾನ್ಶಿಯಲ್ ಪ್ಲಾನರ್ಸ್ ಸಲಹೆ ನೀಡುತ್ತಾರೆ. ಇದನ್ನು ನೀವು ಗಮನಿಸಿರಬಹುದು. ಇನ್ನು ತೆರಿಗೆ ಉಳಿತಾಯದ ಯೋಜನೆಗಳನ್ನು ಗಮನಿಸುವಾಗ ನಿಮ್ಮ ಮುಂದೆ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್), ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ), ಈಕ್ವಿಟಿ ಲಿಂಕ್ಡ್ ಸ್ಕೀಮ್ (ಇಎಲ್‌ಎಸ್‌ಎಸ್)ನಲ್ಲಿ ಎಸ್‌ಐಪಿ, ನೌಕರರ ಭವಿಷ್ಯ ನಿಧಿ (ಇಪಿಎಫ್), ತೆರಿಗೆ ಉಳಿತಾಯದ ನಿಶ್ಚಿತ ಠೇವಣಿಗಳು ಮತ್ತು ಜೀವ ವಿಮಾ ಪ್ರೀಮಿಯಂ ಸಹಜವಾಗಿಯೆ ಗಮನಸೆಳೆಯುತ್ತವೆ. ನೀವು ಮೊದಲ ಹಂತದ ತೆರಿಗೆ ವ್ಯಾಪ್ತಿಯಲ್ಲಿರುವವರಾದರೆ ಮತ್ತು ಕಡಿಮೆ ರಿಸ್ಕ್ ತೆಗೆದುಕೊಳ್ಳಲು ಬಯಸುವವರಾದರೆ ತೆರಿಗೆ ಉಳಿಸುವ ಎಫ್‌ಡಿಗಳನ್ನು ಆಯ್ದುಕೊಳ್ಳಬಹುದು. ಅಂತಹ ಎಫ್‌ಡಿಗಳ ಅವಲೋಕನ ಮಾಡೋಣ.
ತೆರಿಗೆ ಉಳಿತಾಯದ ನಿಶ್ಚಿತ ಠೇವಣಿಗಳು
ತೆರಿಗೆ ಉಳಿತಾಯದ ನಿಶ್ಚಿತ ಠೇವಣಿಗಳನ್ನು ಆಯ್ಕೆ ಮಾಡುವಾಗ ಗಮನಿಸಬೇಕಾದ ಕೆಲವು ಅಂಶಗಳಿವೆ. ಈ ಠೇವಣಿಗಳನ್ನು 5 ವರ್ಷ ತನಕ ಮುಟ್ಟುವಂತಿಲ್ಲ. ಅಂದರೆ ಹಿಂಪಡೆಯುವಂತಿಲ್ಲ. ಈ ಅವಧಿಯು ಲಾಕಿನ್ ಪಿರಿಯಡ್ ಎಂದು ಕರೆಯಿಸಿಕೊಳ್ಳುತ್ತದೆ. ಅಷ್ಟೂ ಮೊತ್ತ ಅಲ್ಲಿದ್ದರೂ ನಿಮಗೆ ಬೇಕಾದಾಗ ಬಳಕೆಗೆ ಸಿಗದು ಎಂಬುದನ್ನು ನೆನಪಿಟ್ಟುಕೊಳ್ಳಿ.
ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80 ಸಿ ಪ್ರಕಾರ ತೆರಿಗೆ ಉಳಿಸುವ ಸ್ಥಿರ ಠೇವಣಿಗಳು (ಎಫ್‌ಡಿಗಳು) 1.5 ಲಕ್ಷ ರೂಪಾಯಿವರೆಗಿನ ಠೇವಣಿಗೆ ತೆರಿಗೆ ವಿನಾಯಿತಿ ಒದಗಿಸುತ್ತವೆ. ತೆರಿಗೆ ಉಳಿಸುವ ಎಫ್‌ಡಿಯಲ್ಲಿ ವರ್ಷಕ್ಕೆ 1.5 ಲಕ್ಷ ರೂಪಾಯಿ ಗರಿಷ್ಠ ಹೂಡಿಕೆ ಮಾಡಲು ಅವಕಾಶವಿದೆ. ಈ ಠೇವಣಿಗೆ ಐದು ವರ್ಷಗಳ ಕಡ್ಡಾಯ ಲಾಕ್-ಇನ್ ಅವಧಿಯೂ ಇದೆ.
ಈ ಬ್ಯಾಂಕ್‌ಗಳಲ್ಲಿ 5 ವರ್ಷದ ಅವಧಿ ಠೇವಣಿಗೆ ಶೇ 7 ಕ್ಕಿಂತ ಹೆಚ್ಚು ಬಡ್ಡಿ ಸಿಗುತ್ತೆ
ಅವಧಿ ಠೇವಣಿ ವಿಶೇಷವಾಗಿ ತೆರಿಗೆ ಉಳಿತಾಯದ ಅವಧಿ ಠೇವಣಿ ಇರಿಸುವಾಗ ಬಡ್ಡಿದರವನ್ನು ಗಮನಿಸುವುದಾದರೆ ಶೇಕಡ 7ಕ್ಕಿಂತ ಹೆಚ್ಚು ಬಡ್ಡಿದರ ನೀಡುವ ಐದು ಬ್ಯಾಂಕುಗಳ ವಿವರ ಹೀಗಿದೆ.
ಇದಲ್ಲದೆ, ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್, ಬಂಧನ್ ಬ್ಯಾಂಕ್‌ಗಳು ತೆರಿಗೆ ಉಳಿಸುವ ಎಫ್‌ಡಿಗಳಿಗೆ 7% ಬಡ್ಡಿಯನ್ನು ನೀಡುತ್ತಿವೆ. ನೀವು 5 ವರ್ಷಗಳವರೆಗೆ ಈ ದರದಲ್ಲಿ ತೆರಿಗೆ ಉಳಿಸುವ ಎಫ್‌ಡಿಯಲ್ಲಿ 1.5 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ, ಅದು ಅನುಗುಣವಾದ ಅವಧಿಯಲ್ಲಿ 2.12 ಲಕ್ಷಕ್ಕೆ ಬೆಳೆಯುತ್ತದೆ. ಅದೇ ರೀತಿ, ಕೆನರಾ ಬ್ಯಾಂಕ್ ತೆರಿಗೆ ಉಳಿತಾಯ ಎಫ್‌ಡಿ ಮೇಲೆ 6.70% ಬಡ್ಡಿಯನ್ನು ನೀಡುತ್ತಿದೆ. ಈ ದರದಲ್ಲಿ, ನೀವು 1.5 ಲಕ್ಷ ರೂಪಾಯಿಗಳನ್ನು 5 ವರ್ಷಗಳವರೆಗೆ ಹೂಡಿಕೆ ಮಾಡಬಹುದಾದರೆ, ತೆರಿಗೆ ಉಳಿಸುವ ಎಫ್‌ಡಿಯಲ್ಲಿ 2.09 ಲಕ್ಷ ರೂಪಾಯಿ ಆಗುತ್ತದೆ.
ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ತೆರಿಗೆ ಉಳಿತಾಯ ಅವಧಿ ಠೇವಣಿಯ ಮೇಲೆ 6.5% ಬಡ್ಡಿದರ ನೀಡುತ್ತಿದ್ದು, ಈ ದರದಲ್ಲಿ, 5 ವರ್ಷದ ನಂತರ 1.5 ಲಕ್ಷ ರೂಪಾಯಿ 2.07 ಲಕ್ಷ ರೂಪಾಯಿ ಆಗಿರಲಿದೆ. ಇದೇ ರೀತಿ ಇಂಡಿಯನ್ ಬ್ಯಾಂಕ್ ಬಡ್ಡಿ ದರವು 6.25 ಶೇಕಡ ಇದ್ದು, 1.5 ಲಕ್ಷ ರೂಪಾಯಿ ಠೇವಣಿ ಮೌಲ್ಯ 2.05 ಲಕ್ಷ ರೂಪಾಯಿ ಆಗುತ್ತದೆ.