ಆರೋಗ್ಯ, ಸುರಕ್ಷಿತ ಶೌಚಾಲಯ ಮಕ್ಕಳ ಅಗತ್ಯವಷ್ಟೇ ಅಲ್ಲ, ಹಕ್ಕು ಕೂಡ ಹೌದು; ನಂದಿನಿ ಟೀಚರ್ ಅಂಕಣ
Dec 17, 2024 10:25 AM IST
ನಂದಿನ ಟೀಚರ್ ಅಂಕಣ
- ಶಾಲೆಗಳು ತಮ್ಮ ಶಾಲೆಯ ಆವರಣದಲ್ಲಿ ಪ್ರತ್ಯೇಕವಾಗಿ ಬಾಲಕ ಹಾಗೂ ಬಾಲಕಿಯರಿಗೆ ಉತ್ತಮ ಶೌಚಾಲಯಗಳನ್ನು ನಿರ್ಮಿಸುವ ಜೊತೆಗೆ ಅವುಗಳ ಶುಚಿತ್ವದ ಬಗ್ಗೆಯೂ ಅರಿವು ಮೂಡಿಸಬೇಕು. ಶಾಲೆಗಳು ಈ ವಿಷಯದ ಕುರಿತಾದ ಜಾಗೃತಿ ಕಾರ್ಯಕ್ರಮಗಳನ್ನು ಸಮಾಜದೊಳಿತಿಗಾಗಿ ಹಮ್ಮಿಕೊಂಡರೆ, ಸಮಾಜದತ್ತ ತನ್ನ ಕರ್ತವ್ಯ ಪ್ರಜ್ಞೆಯನ್ನು ಪರಿಚಯಿಸದಂತಾಗುವುದು ಅಲ್ಲವೇ?
Nandini Teacher Column: ರಾಜ್ಯದ ಉತ್ತರ ಭಾಗದೊಂದು ಬರ್ಹಿದೆಸೆ ಮುಕ್ತ ಜಿಲ್ಲೆ. ಆ ಜಿಲ್ಲೆಯಲ್ಲಿ ಸಾಗಿತ್ತು ನಮ್ಮ ಪ್ರವಾಸ. ಸೂರ್ಯನಿನ್ನೂ ಆಗಷ್ಟೇ ತನ್ನ ಬರುವಿಕೆಯನ್ನು ಸಾರುತ್ತಲಿದ್ದ. ನಾವಿದ್ದ ವಾಹನ ಮುಂದೆ ಸಾಗುತ್ತಿದ್ದಂತೆ ರಸ್ತೆಯ ಬದಿಗಳಿಲ್ಲಿದ್ದ ಪೊದೆಗಳಲ್ಲಿ ಅಲ್ಲಲ್ಲಿ ಕುಳಿತ ಜನರು ಕಾಣುತ್ತಿದ್ದರು. ಅವರು ಏಕೆ ಅಲ್ಲಿ ಕುಳಿತಿದ್ದಾರೆಂದು ನಮಗೆ ವಿವರಣೆ ಬೇಕಿಲ್ಲ. ಆದರೆ, ಈ ಜಿಲ್ಲೆ ಬರ್ಹಿದೆಸೆ ಮುಕ್ತ ಜಿಲ್ಲೆಯೆಂದು ಘೋಷಣೆಯಾದರೂ ಜನರು ಅದನ್ನು ಪಾಲಿಸುತ್ತಿಲ್ಲವೇಕೆ ಎನ್ನುವ ಪ್ರಶ್ನೆ ನಮ್ಮಲ್ಲಿ ಮೂಡುವುದು ಸ್ವಾಭಾವಿಕ ಅಲ್ಲವೇ? ದೊರೆತ ಉತ್ತರ ವಾಸ್ತವದ ದರ್ಶನ ಮಾಡಿಸಿತ್ತು. ಶೌಚಾಲಯಗಳಿವೆಯಾದರೂ ಅವು ಉಪಯೋಗಿಸುವ ಸ್ಥಿತಿಯಲ್ಲಿಲ್ಲ. ಕೆಲವು ಮನೆಗಳಲ್ಲಿ ಮನೆಯೊಳಗಿರುವ ಶೌಚಾಲಯ ಬಳಸಲು ಆಚರಣೆ ಅಡ್ಡ ಬಂದರೆ, ಇನ್ನು ಕೆಲವು ಮನೆಗಳಲ್ಲಿ ಚಿಕ್ಕ ಮಕ್ಕಳು- ಪುರುಷರು ಹೊರಗೆ ಹೋಗಲಿ ಎನ್ನುವ ಒಪ್ಪಂದ. ಇನ್ನು ಕೊಳಚೆ ಪ್ರದೇಶಗಳಲ್ಲಿ ಅಥವಾ ಗ್ರಾಮಗಳಲ್ಲಿ ಸರ್ಕಾರ ನಿರ್ಮಿಸಿ ಕೊಟ್ಟ ಈ ಚಿಕ್ಕ ಕೊಠಡಿಯಲ್ಲಿ ತಮ್ಮ ಬೆಲೆಬಾಳುವ ವಸ್ತುಗಳನ್ನಿಡಲು ಸುರಕ್ಷಿತವಾಗಿಡಲು ಒಂದು ಸುರಕ್ಷಿತ ಕೋಣೆಯಾಗಿ ಬಳಸುವವರಿನ್ನೆಷ್ಟೋ. ಪರವಾಗಿಲ್ಲ ಮಗು ಎಂದು ಹೊರಗಡೆ ಶೌಚಕ್ಕೆ ಅನುವು ಮಾಡಿಕೊಡುವ ಹಿಂದೆಯೇ ಅದೆಷ್ಟು ಗಂಭೀರ ಸಮಸ್ಯೆಗಳಿಗೆ ನಾವು ನಾಂದಿ ಹಾಡಿದಂತಾಯ್ತು ಯೋಚಿಸಿ. ಬೀದಿ ನಾಯಿಗಳ, ಹಂದಿಗಳ ಹಾವಳಿ, ಹರಡಬಹುದಾದ ಸೋಂಕು, ನದಿಯ ದಡವಾದರೆ ಕಲುಷಿತವಾಗುವ ನೀರು, ಪರಿಸರ... ಲೆಕ್ಕವಿಲ್ಲದಷ್ಟು ಸಮಸ್ಯೆಗಳ ಸರಮಾಲೆ.
ಟಾಯ್ಲೆಟ್ ಟ್ರೇನಿಂಗ್ ಏಕೆ ಬೇಕು?
ಅಂದ ಹಾಗೆ ಈ ಅಂಕಣವಿರುವುದು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲು ಶೌಚಾಲಯ ವ್ಯವಸ್ಥೆ ಕುರಿತು ಇಲ್ಲೇನು ಮಾತು ಎಂದೆನ್ನಿಸುತ್ತಿದೆಯೇ? ಹೌದಲ್ಲ ನಾವು ಮಾತನಾಡಲು ಮಕ್ಕಳಿಗೆ ತಿಳವಳಿಕೆ ನೀಡಲು ಸಂಕೋಚಿಸುವ ಹಲವು ವಿಷಯಗಳಲ್ಲಿ ಶೌಚಾಲಯವೂ ಒಂದು. ಇತ್ತೀಚಿನ ದಿನಗಳಲ್ಲಿ ಶಾಲೆಗಳಲ್ಲಿ ಪಾಲಕರನ್ನು ಶಾಲೆಯ ದಾಖಲಾತಿಗೆ ಮುನ್ನ ಕೇಳುವ ಮೊದಲ ಪ್ರಶ್ನೆ ‘ನಿಮ್ಮ ಮಗುವಿಗೆ ಟಾಯ್ಲೆಟ್ ಟ್ರೇನಿಂಗ್ ಮಾಡಿಸಿದ್ದೀರಾ?‘ ಎಂದು. ಶಿಕ್ಷಣಕ್ಕಾಗಿ ಮೀಸಲಿಟ್ಟಿರುವ ಈ ಅಂಕಣದ ಮೂಲಕ ನಾವು ಕೇಳುವುದು ಪಾಲಕರೇ ನಿಮಗೆ ‘ಶೌಚಾಲಯ ಶುಚಿತ್ವದ ಕುರಿತು ನಿಮಗೆ ಅರಿವಿದೆಯೇ‘ ಎಂದು. ಕಾರಣ ನದಿ ಹರಿವಿನ ದಡದಲ್ಲಿ ಕೂರಲು ಒಂದಿಂಚೂ ಬಿಡದಂತೆ ಪಿಕ್‌ನಿಕ್‌ಗಾಗಿ ಬoದು ಮಗುವಿನ ಡೈಪರ್ ಅಲ್ಲಿಯೇ ಬಿಸಾಡಿ ಬರುವವರಲ್ಲವೇ ನಾವು. ಎಲ್ಲೆಂದರಲ್ಲಿ ಮೂತ್ರ ವಿರ್ಸಜಿಸುವುದು ನಮ್ಮ ಹಕ್ಕು ಎನ್ನುವ ಪ್ರವೃತ್ತಿಯವರೇ ಹೆಚ್ಚಿರುವಾಗ ಶೌಚಾಲಯ ಸ್ವಚ್ಛತೆಯನ್ನು ಶಿಕ್ಷಣದಲ್ಲಿ ಸೇರಿಸಿದರೆ ದಾರಿ ತಪ್ಪಿದ ಹಾಗಲ್ಲ ಎನ್ನುವುದು ಸರಿಯಾದ ಭಾವನೆ.
ಹಾಸ್ಯ ಭಾಷಣಕಾರ ಪ್ರಾಣೇಶ್ ತಮ್ಮ ಭಾಷಣದಲ್ಲಿ ಹೇಳುವಂತೆ ಭಾರತದಲ್ಲಿ ಸಾರ್ವಜನಿಕ ಶೌಚಾಲಯಗಳೆಲ್ಲಿವೆ ಎನ್ನುವುದನ್ನು ಒಂದು ಕಿ.ಮೀ ದೂರದಿಂದಲೇ ಅಲ್ಲಿಂದ ಹೊರಬರುವ ರ್ದುವಾಸನೆಯಿಂದ ತಿಳಿಯಬಹುದು. ಮನೆಯ ಶೌಚಾಲಯದ ಶುಚಿತ್ವಕ್ಕೇ ಗಮನ ಕೊಡದ ನಾವು ಇನ್ನು ಸಾರ್ವಜನಿಕ ಶೌಚಾಲಯಗಳ ಶುಚಿತ್ವದತ್ತ ಗಮನ ನೀಡುವ ಮನೋಭಾವದವರೇ ಹೇಳಿ? ನವೆಂಬರ್ ತಿಂಗಳಲ್ಲಿ ಮಕ್ಕಳ ದಿನಾಚರಣೆ ಹಾಗೂ ಇನ್ನಿತರ ಅದೆಷ್ಟೋ ದಿನಗಳನ್ನು ನಾವಾಚರಿಸಿದೆವು. ನವೆಂಬರ್ 19 ಎಂದೊಡನೆ ನಮಗೆ ನೆನಪಿಗೆ ಬರುವುದು ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಯವರ ನೆನಪು. ಆದರೆ ಆ ದಿನವನ್ನು ವಿಶ್ವದ ಎಲ್ಲ ರಾಷ್ಟ್ರಗಳೂ ಸೇರಿ ‘ವಿಶ್ವ ಶೌಚಾಲಯದಿನ‘ ವೆಂದು ಆಚರಿಸುವ ಬಗ್ಗೆ ನಮ್ಮ ಗಮನವಿದೆಯೇ?
ಶೌಚಾಲಯ ಬಳಕೆಯ ಮಹತ್ವ
ಶೌಚಾಲಯ ದೇಹದ ಹೊಲಸನ್ನು ಹೊರ ಹಾಕುವ ಸ್ಥಳವದು ಅದಕ್ಕೇಕೆ ಇಷ್ಟೊoದು ಮಹತ್ವ! ಒಂದು ಮನೆ ಅಥವಾ ಶಾಲೆ ಮಕ್ಕಳ ಹಾಗೂ ಇನ್ನಿತರ ಸದಸ್ಯರ ಆರೋಗ್ಯದತ್ತ ಯಾವ ಭಾವನೆ ತಳೆದಿದೆ ಎoದು ನಮಗೆ ತಿಳಿಯಬೇಕಾದರೆ ನಾವು ಮನೆಯ ಅಥವಾ ಶಾಲೆಯ ಶೌಚಾಲಯವನ್ನು ಹೊಕ್ಕು ಬರಬೇಕು. ದೇಶದ ಆರೋಗ್ಯ, ಸಂಸ್ಕೃತಿ ಉತ್ತಮಗೊಳ್ಳಬೇಕಾದರೆ ನಾವು ಬಳಸುವ ಶೌಚಾಲಯ ವ್ಯವಸ್ಥೆ ಆರೋಗ್ಯವಾಗಿರಬೇಕು. ಸಂಬಂಧಪಟ್ಟ ಮಂತ್ರಾಲಯದ ಸುತ್ತೋಲೆಯ ಪ್ರಕಾರ ಆರೋಗ್ಯಕರ ಶೌಚಾಲಯದಲ್ಲಿ ನೀರು, ವಿದ್ಯುತ್, ಸುಭದ್ರವಾದ ಬಾಗಿಲು, ನೀರು ಸುಲಭವಾಗಿ ಹರಿದು ಹೋಗುವ ಒಳ ಚರಂಡಿ ವ್ಯವಸ್ಥೆಯಲ್ಲಿ ಶೌಚಾಲಯದ ತ್ಯಾಜ್ಯವನ್ನು ಯಾವುದೇ ಪ್ರಾಣಿ ತಿನ್ನದಿರುವ ಅಥವಾ ಮಾನವ ತುಳಿಯದಿರುವ ಸ್ಥಳಗಳನ್ನು ಸೇರಿ, ಕೊಳಚೆ ನೀರಿನ ಶುದ್ಧೀಕರಣ ಘಟಕಗಳ ಮೂಲಕ ನೀರಿನ ಪುನರ್ ಬಳಕೆಯಾಗುವ ವ್ಯವಸ್ಥೆಯಾಗಬೇಕು. ಶೌಚಾಲಯ ಸದಾ ಒಣಗಿರುವ ಹಾಗಿಡಲು ಶುದ್ಧಗಾಳಿಯ ವ್ಯವಸ್ಥೆಯೂ ಬೇಕು. ಇದರಿoದ ಶುಚಿತ್ವವಿಲ್ಲದ ಶೌಚಾಲಯಗಳಿಂದ ಉoಟಾಗಬಹುದಾದ ಸಾಮಾನ್ಯ ಆರೋಗ್ಯ ಸಮಸ್ಯೆಗಳಾದ ವಾಂತಿ, ಭೇದಿ, ಮಲೇರಿಯಾ, ಟೇಪ್ ಅಥವಾ ರಿಂಗ್‌ವರ್ಮ್‌ನಿಂದಾಗಬಹುದಾದ ಸಾಂಕ್ರಾಮಿಕ ಕಾಯಿಲೆಗಳು ಹರಡುವುದನ್ನು ತಪ್ಪಿಸಬಹುದು. ಮಕ್ಕಳಿಗೆ ಅದರಲ್ಲೂ ಹೆಣ್ಣುಮಕ್ಕಳಲ್ಲಿ ಸುಲಭವಾಗಿ ಹಬ್ಬುವ ‘ಯುರಿನರಿ ಟ್ರ್ಯಾಕ್‘ ಸೊಂಕಿಗೆ ಮೂಲ ಕಾರಣ ಶೌಚಾಲಯವನ್ನು ಹೇಗೆ ಬಳಸಬೇಕೆoದು ನಾವು ಮಕ್ಕಳಿಗೆ ಹೇಳಿಕೊಡದೇ ಇರುವುದೇ ಆಗಿದೆ. ಶೌಚಾಲಯದ ಬಳಕೆಯ ಅದರಲ್ಲೂ ಪಾಶ್ಚ್ಯಾತ್ಯ ಕಮೋಡ್‌ಗಳ ಸರಿಯಾಗಿ ಬಳಸುವ ರೀತಿ, ಪ್ರತಿಬಾರಿ ಶೌಚಾಲಯ ಉಪಯೋಗಿಸಿದ ನಂತರ ಸಾಕಷ್ಟು ನೀರು ಹಾಕುವುದು, ನಾವು ಕಲಿಸಬೇಕಿದೆ. ಶೌಚದ ನಂತರ ಕಾಲು ತೊಳೆದು ಬರುವ ರೂಢಿಯನ್ನು ಅನುಸರಿಸುವವರೇ ಬಹಳ, ಕಾಲು ತೊಳೆಯುವುದಕ್ಕಿಂತ ಮುಖ್ಯ ಕೈ ತೊಳೆದು ಹೊರ ಬರುವುದು ಮುಖ್ಯ.
ಭಾರತದಲ್ಲಿ ಶೌಚಾಲಯಗಳು ಬಳಕೆಯಲ್ಲಿರುವ ಮೊಬೈಲ್‌ಗಳ ಸಂಖ್ಯೆಗಿಂತ ಕಡಿಮೆಯೆಂದು ವಿಶ್ವಸಂಸ್ಥೆಯ ವರದಿಯೊಂದು ಹೇಳಿತ್ತು. 1999ರ ನಂತರ ಭಾರತದಲ್ಲಿ ಹಮ್ಮಿಕೊಂಡ ‘ನಿಮ೯ಲ ಭಾರತ ಅಭಿಯಾನ‘ ಮತ್ತು ಇದೀಗ ‘ಸ್ವಚ್ಚ ಭಾರತ ಅಭಿಯಾನ‘ದಡಿ ಕೇವಲ ನಗರಗಳಲ್ಲಿ ಮಾತ್ರವಲ್ಲದೇ ಗ್ರಾಮಗಳಲ್ಲಿಯೂ ಶೌಚಾಲಯಗಳ ನಿರ್ಮಾಣ ಭರದಿಂದ ಸಾಗಿದೆ. ಶಾಲೆಗಳಲ್ಲಿ ಮಕ್ಕಳ ಆರೋಗ್ಯ ಗಮನಿಸಿ ವಿಶ್ವಸಂಸ್ಥೆ ಸ್ವಚ್ಛ ನೀರು, ನೈರ್ಮಲ್ಯ ಮತ್ತು ಸ್ವಚ್ಛತೆ ಆಧಾರಿತ ವಾಶ್ (WASH) ಕಾರ್ಯಕ್ರಮದಡಿ ಶಾಲೆಗಳಲ್ಲಿ ಸ್ವಚ್ಛ ಮತ್ತು ಆರೋಗ್ಯಕರ ಶೌಚಾಲಯ ನಿರ್ಮಾಣದತ್ತ ಒತ್ತು ನೀಡಿದೆ. ಮಕ್ಕಳಲ್ಲಿ ಸೋಂಕು ಹರಡುವುದು ಸುಲಭವಾದ್ದರಿಂದ ಈ ಎಚ್ಚರಿಕೆಯನ್ನು ವಹಿಸುವುದು ಅನಿವಾರ್ಯವಾಗಬೇಕಿದೆ. ಶಾಲೆಗಳು ತಮ್ಮ ಶಾಲೆಯ ಆವರಣದಲ್ಲಿ ಉತ್ತಮ ಶೌಚಾಲಯಗಳನ್ನು ಪ್ರತ್ಯೇಕವಾಗಿ ಬಾಲಕ ಹಾಗೂ ಬಾಲಕಿಯರಿಗೆ ನಿರ್ಮಿಸುವ ಜೊತೆಗೆ ಅವುಗಳ ಶುಚಿತ್ವದ ಬಗ್ಗೆಯೂ ಅರಿವು ಮೂಡಿಸಬೇಕು. ಶಾಲೆಗಳು ಈ ವಿಷಯ ಕುರಿತಾದ ಜಾಗೃತಿ ಕಾರ್ಯಕ್ರಮಗಳನ್ನು ಸಮಾಜದೊಳಿತಿಗಾಗಿ ಹಮ್ಮಿಕೊಂಡರೆ, ಸಮಾಜದತ್ತ ತನ್ನ ಕರ್ತವ್ಯ ಪ್ರಜ್ಞೆಯನ್ನು ಶಾಲೆ ಪರಿಚಯಿಸದಂತಾಗುವುದು ಅಲ್ಲವೇ?
ನೆನಪಿರಲಿ ಬರ್ಹಿದೆಸೆ ಮುಕ್ತ ದೇಶವಾಗುವುದು ಅಷ್ಟು ಸುಲಭವಲ್ಲ. ಭಾರತ ಸರ್ಕಾರ 2014 ರಿಂದ ಸ್ವಚ್ಛ ಭಾರತ್ ಅಭಿಯಾನ್ ಯೋಜನೆಯಡಿ ವಿಶೇಷವಾಗಿ ಮಹಿಳೆ ಮತ್ತು ಮಕ್ಕಳ ಆರೋಗ್ಯವನ್ನು ಮುಂದಿಟ್ಟುಕೊಂಡು ಶೌಚಾಲಯಗಳ ನಿರ್ಮಾಣಕ್ಕೆ ಒತ್ತಾಸೆ ನೀಡಿದೆ. ಭಾರತ ಅಭಿವೃದ್ಧಿ ರಾಷ್ಟ್ರಗಳಲ್ಲಿ ಒಂದಾಗಬೇಕಾದರೆ 2030ರ ವೇಳೆಗೆ ಬರ್ಹಿದೆಸೆ ಮುಕ್ತ ದೇಶವಾಗಿ ಬರಬೇಕಾದ ಅವಶ್ಯಕತೆಯಿದೆ. ಆರೋಗ್ಯ ಹಾಗೂ ಸ್ವಚ್ಛ ಶೌಚಾಲಯಗಳು ಕೇವಲ ನಮ್ಮ ಅಗತ್ಯವಲ್ಲ, ಮಾನವನ ಹಕ್ಕು ಕೂಡ.
ಪ್ರೊ ನಂದಿನಿ ಲಕ್ಷ್ಮೀಕಾಂತ ಪರಿಚಯ
ಪ್ರೊ ನ೦ದಿನಿ ಲಕ್ಷ್ಮೀಕಾ೦ತ ಅವರು ವೃತ್ತಿಯಿ೦ದ ಮಾಧ್ಯಮ ಅಧ್ಯಾಪಕರು. ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸ೦ಸ್ಥೆಗಳ ವಿವಿಧ ಹುದ್ದೆಗಳಲ್ಲಿ ಎರಡು ದಶಕ್ಕಕ್ಕೂ ಮೀರಿ ಸೇವೆ ಸಲ್ಲಿಸಿದ್ದಾರೆ. 2022 ರಲ್ಲಿ ಮಣಿಪಾಲ ವಿಶ್ವವಿದ್ಯಾಲಯದಿ೦ದ ಐಚ್ಛಿಕ ಸೇವಾ ನಿವೃತ್ತಿಯನ್ನು ಪಡೆದುಕೊ೦ಡ ನ೦ತರ ಸಮಾಜ ಸೇವೆ ಹಾಗೂ ಅಧ್ಯಯನಕ್ಕೆ ತಮ್ಮ ಬಹುಪಾಲು ಸಮಯವನ್ನು ಮೀಸಲಿರಿಸಿದ್ದಾರೆ. ಅನುಭವಿ ಅಧ್ಯಾಪಕ ವೃತ್ತಿಯ ಜೊತೆಗೆ ಮಾಧ್ಯಮ ಸ೦ಶೋಧಕರಾಗಿಯೂ ಗುರುತಿಸಲ್ಷಟ್ಟ ಪ್ರೊ ನ೦ದಿನಿ ಪ್ರತಿಷ್ಠಿತ ಸ೦ಶೋಧನಾ ಸ೦ಸ್ಥೆ ICMR ಹಿರಿಯ ಸ೦ಶೋಧಕರಿಗೆ ಕೊಡಮಾಡುವ ಸ೦ಶೋಧನಾ ಅನುದಾನವನ್ನು ಎರಡು ಬಾರಿ ಪಡೆದಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆರೋಗ್ಯ ಸ೦ವಹನ ಅದರಲ್ಲೂ ವಿಶೇಷವಾಗಿ ಮಹಿಳೆಯ ಮತ್ತು ಕಿಶೋರಾವಸ್ಥೆಯ ಆರೋಗ್ಯ ಕುರಿತ ಸ೦ವಹನ ಅವರ ಆಸತ್ತಿ ಕ್ಷೇತ್ರ. ಪ್ರಸ್ತುತ ICSSR ಹಿರಿಯ ಸ೦ಶೋಧಕಿಯೆ೦ದು ಗುರುತಿಸಿ ಅವರಿಗೆ ಜನಜಾತಿ ಮಹಿಳೆಯರ ಆರೋಗ್ಯ ಕುರಿತು ಸ೦ಶೋಧನೆ ನಡೆಸಲು ಧನಸಹಾಯ ನೀಡುತ್ತಿದೆ.
ಜಮ೯ನಿ, ಹಾಗೂ ಅಮೇರಿಕಾ ದೇಶದ ವಿವಿಧ ವಿಶ್ವವಿದ್ಯಾಲಯಗಳಿಗೆ ಆಹ್ವಾನದ ಮೇರೆಗೆ ಭೇಟಿ ನೀಡಿ ಉಪನ್ಯಾಸಗಳನ್ನು ನೀಡಿರುವ ಪ್ರೊ ನ೦ದಿನಿ ಲಕ್ಷ್ಮೀಕಾ೦ತ, ಹಲವಾರು ಸ೦ಶೋಧನಾ ಗ್ರ೦ಥಗಳನ್ನು ಪ್ರಕಟಿಸಿದ್ದಾರೆ. Environmental Education ಅವರ ಇತ್ತೀಚಿನ ಪುಸ್ತಕ. ರಾಜ್ಯದ ವಿವಿಧ ಮಾಧ್ಯಮಗಳಲ್ಲಿ ಸ್ವತ೦ತ್ರ ಪತ್ರಕರ್ತೆಯಾಗಿ ಲೇಖನಗಳನ್ನು ಬರೆದಿದ್ದಾರೆ, ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಆಸಕ್ತಿಯನ್ನು ಹೊ೦ದಿರುವ ಅವರು ಬದಲಾಗುತ್ತಿರುವ ಇ೦ದಿನ ಸಮಾಜದಲ್ಲಿ ಶಿಕ್ಷಣ ಹೇಗಿರಬೇಕು ಎನ್ನುವ ಬಗ್ಗೆ ತಮ್ಮ ಅನಿಸಿಕೆಗಳನ್ನು ‘ನಂದಿನಿ ಟೀಚರ್‘ ಅಂಕಣದ ಮೂಲಕ ನಮ್ಮೊ೦ದಿಗೆ ಹ೦ಚಿಕೊಳ್ಳಲಿದ್ದಾರೆ.